ಓದಿನ ಸುಖ "ಹ್ಹೋ ..... ಏನು?"
ಪುಸ್ತಕದ ಹೆಸರು : ಹ್ಹೋ .... ಏನು ? ಲೇಖಕರು: ಅನಿತಾ ನರೇಶ್ ಮಂಚಿ ಮನೆ ಹತ್ತಿರದ ಲೈಬ್ರೆರಿಯಲ್ಲಿ ಕಾರ್ಡ್ ಮಾಡಿಸಿಕೊಂಡ ಮೇಲೆ ಪುಸ್ತಕಗಳನ್ನು ಕೊಳ್ಳಲು ಹೋದಾಗ ಈ ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕ ಅನ್ನಿಸಿತು. ಅಲ್ಲದೇ ಲೇಖಕಿಯ ಹಲವು ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿದ್ದರಿಂದ ಬರೆಯುವ ಶೈಲಿ ಕೂಡ ಪರಿಚಿತವಾಗಿದ್ದರಿಂದ ಧೈರ್ಯವಾಗಿ ಪುಸ್ತಕವನ್ನು ಕೊಂಡೆ. ಈ ಪುಸ್ತಕವನ್ನು ನಗೆ ಬರಹಗಳ ಗುಚ್ಛ ಎಂದೇ ಹೇಳಬಹುದು. ಸಣ್ಣ ಸಣ್ಣ ಬರಹಗಳಲ್ಲಿ ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳುತ್ತಾ, ಅನಾವಶ್ಯಕವಾಗಿ ಯಾವುದನ್ನೂ ಎಳೆಯದೆ ಸುಲಭವಾಗಿ, ಸರಳವಾಗಿ ಬರೆಯುವ ಶೈಲಿ ತುಂಬಾ ಇಷ್ಟವಾಯಿತು. ದಿನನಿತ್ಯದ ಆಗುಹೋಗುಗಳನ್ನೇ ಹಾಸ್ಯದ ಲೇಪನದಲ್ಲಿ ಬರೆದಿದ್ದಾರೆ ಲೇಖಕಿ. ಒಂದು ವಾಕ್ಯ ಹಾಸ್ಯದಿಂದ ಕೂಡಿದ್ದರೆ ಅದರ ಮುಂದಿನ ವಾಕ್ಯ ಜೀವನದ ಸತ್ಯವನ್ನು ಹೇಳಿ ನಕ್ಕವರ ಮನದಲ್ಲೊಮ್ಮೆ ಆಲೋಚನಾ ತರಂಗ ಏಳುವಂತೆ ಮಾಡುತ್ತಾರೆ. ಉದಾಹರಣೆಗೆ ನಿದ್ರೆಯ ಬಗ್ಗೆ ಹಾಸ್ಯವಾಗಿ ಬರೆಯುತ್ತಾ ತಟ್ಟನೆ "ಚಿಂತೆಗಳೆಲ್ಲಾ ಮುಕ್ತವಾಗುವುದು ನಿದ್ದೆಯಲ್ಲೇ ಕೊನೆಗೊಮ್ಮೆ ಚಿರ ನಿದ್ರೆಯಲ್ಲೇ" ಎಂದು ಜೀವನದ ಸತ್ಯ ದರ್ಶನ ಮಾಡಿ ಬಿಡುತ್ತಾರೆ. ...