ಓದಿನ ಸುಖ "ಹ್ಹೋ ..... ಏನು?"

ಪುಸ್ತಕದ ಹೆಸರು : ಹ್ಹೋ .... ಏನು ? 
ಲೇಖಕರು: ಅನಿತಾ ನರೇಶ್ ಮಂಚಿ 
  
            ಮನೆ ಹತ್ತಿರದ ಲೈಬ್ರೆರಿಯಲ್ಲಿ ಕಾರ್ಡ್ ಮಾಡಿಸಿಕೊಂಡ ಮೇಲೆ ಪುಸ್ತಕಗಳನ್ನು ಕೊಳ್ಳಲು ಹೋದಾಗ ಈ ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕ ಅನ್ನಿಸಿತು. ಅಲ್ಲದೇ ಲೇಖಕಿಯ ಹಲವು ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿದ್ದರಿಂದ ಬರೆಯುವ ಶೈಲಿ ಕೂಡ ಪರಿಚಿತವಾಗಿದ್ದರಿಂದ ಧೈರ್ಯವಾಗಿ ಪುಸ್ತಕವನ್ನು ಕೊಂಡೆ. 
            
           ಈ ಪುಸ್ತಕವನ್ನು ನಗೆ ಬರಹಗಳ ಗುಚ್ಛ ಎಂದೇ ಹೇಳಬಹುದು. ಸಣ್ಣ ಸಣ್ಣ ಬರಹಗಳಲ್ಲಿ ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳುತ್ತಾ, ಅನಾವಶ್ಯಕವಾಗಿ ಯಾವುದನ್ನೂ ಎಳೆಯದೆ ಸುಲಭವಾಗಿ, ಸರಳವಾಗಿ ಬರೆಯುವ ಶೈಲಿ ತುಂಬಾ ಇಷ್ಟವಾಯಿತು. ದಿನನಿತ್ಯದ ಆಗುಹೋಗುಗಳನ್ನೇ ಹಾಸ್ಯದ ಲೇಪನದಲ್ಲಿ ಬರೆದಿದ್ದಾರೆ ಲೇಖಕಿ. ಒಂದು ವಾಕ್ಯ ಹಾಸ್ಯದಿಂದ ಕೂಡಿದ್ದರೆ ಅದರ ಮುಂದಿನ ವಾಕ್ಯ ಜೀವನದ ಸತ್ಯವನ್ನು ಹೇಳಿ ನಕ್ಕವರ ಮನದಲ್ಲೊಮ್ಮೆ ಆಲೋಚನಾ ತರಂಗ ಏಳುವಂತೆ ಮಾಡುತ್ತಾರೆ. ಉದಾಹರಣೆಗೆ ನಿದ್ರೆಯ ಬಗ್ಗೆ ಹಾಸ್ಯವಾಗಿ ಬರೆಯುತ್ತಾ ತಟ್ಟನೆ "ಚಿಂತೆಗಳೆಲ್ಲಾ ಮುಕ್ತವಾಗುವುದು ನಿದ್ದೆಯಲ್ಲೇ ಕೊನೆಗೊಮ್ಮೆ ಚಿರ ನಿದ್ರೆಯಲ್ಲೇ" ಎಂದು ಜೀವನದ ಸತ್ಯ ದರ್ಶನ ಮಾಡಿ ಬಿಡುತ್ತಾರೆ.

              'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಎಂಬ ಬರಹದಲ್ಲಿ ಇಲಿಯನ್ನು ಹಿಡಿಯಲು ತಂದ ಬೆಕ್ಕಿನ ಪರದಾಟವನ್ನು ಹಾಸ್ಯವಾಗಿ ಹೇಳುತ್ತಾ, ಕೊನೆಗೆ ಕ್ಯಾಟ್ ಫುಡ್ ನ ಮೂಲಕ, ಆಹಾರವನ್ನು ಅರಸಿ ತಿನ್ನುವ ಮೂಲ ಗುಣವನ್ನೇ ಮರೆಯುವಂತೆ ಮಾಡುವ ಕಂಪೆನಿಗಳೂ, ಅವುಗಳನ್ನು ನಂಬಿ ತಮ್ಮ ಸಹಜ ಆಹಾರವನ್ನು ಮರೆಯುತ್ತಿರುವ ಬೆಕ್ಕಿನಂತೆ ನಾವು ಸಹ ನಮ್ಮ ಸಾಂಪ್ರದಯಿಕ, ಪೌಷ್ಠಿಕ ಆಹಾರ ಕ್ರಮಗಳನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ ಬೆಕ್ಕಿನಿಂದ ಪಾಠ ಕಲಿಯಬೇಕಾದ ಅನಿವಾರ್ಯತೆ ಇದೆ ಎಂದು ಅನಿಸಿತು.

          'ಭಜನೆ' ಎನ್ನುವ ಬರಹದಲ್ಲಿ ರಾಗ, ತಾಳ, ಸಾಹಿತ್ಯದ ಜ್ಞಾನವಿಲ್ಲದೇ ಮುಗ್ಧ ಮನಸ್ಸಿನಿಂದ ಹಾಡುತ್ತಿದ್ದ ಮಕ್ಕಳ ಹಾಗೂ ಹೆಂಗಸರ ಹಾಡುಗಾರಿಕೆಯ ಬಗ್ಗೆ ಹೇಳುತ್ತಾ ಹಾಡುವ ಕ್ರಿಯೆಯಲ್ಲಿ ಎಲ್ಲೂ ಸ್ಪರ್ಧಾತ್ಮಕ ಮನೋಭಾವವಿಲ್ಲದೇ ಅವರಿಗೇ ತಿಳಿಯದಂತೆ ಭಾವನಾತ್ಮಕವಾಗಿ ಏರ್ಪಟ್ಟ ಸಂಬಂಧದ ಬಗ್ಗೆ ಹೇಳುತ್ತಾ, ಭಜನೆ ಯಾವ ರೀತಿ ಎಲ್ಲರನ್ನೂ ನಿತ್ಯ ಬೆಸೆಯುವ ಪ್ರೀತಿಯ ದಾರವಾಗಿತ್ತು ಎಂದು ಹೇಳಿದ್ದಾರೆ. ಆದರೆ ಇಂದು ಮನಃಶಾಂತಿಯನ್ನು, ಹಣ ಕೊಟ್ಟು ಪಡೆದುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಾ ಬದುಕು ಸಾಗಿಸುತ್ತಿದ್ದೇವೆ. ಸಮಯವಿಲ್ಲವೆಂಬ ಸಿದ್ಧ ನೆಪವನ್ನೊಡ್ಡಿ ಹಳತನ್ನು ಕೊಳೆಯಂತೆ ದೂರ ಸರಿಸಿ ಆಧುನಿಕತೆಯ ಕಸವನ್ನೆಲ್ಲ ನಮ್ಮ ಮುಡಿಗೇರಿಸಿಕೊಳ್ಳುವ ನಾವು, ಬದಲಾಗುವುದು ಯಾವಾಗ ಎಂಬ ಪ್ರಶ್ನೆಯನ್ನು ನಮ್ಮ ಮನದಲ್ಲೂ ಮೂಡುವಂತೆ ಮಾಡುವಲ್ಲಿ ಲೇಖಕಿಯು ಯಶಸ್ವಿಯಾಗುತ್ತಾರೆ.

                 'ಮೊದಲು ಮಾನವನಾಗು' ಎಂಬ ಬರಹದಲ್ಲಿ, ಎಲ್ಲಾ ಮಕ್ಕಳಂತೆ ಲೇಖಕಿಯ ಮಗನು ಸುತ್ತಮುತ್ತಲಿನವರನ್ನು ನೋಡುತ್ತಾ ತಾನು ಬಸ್ ಕಂಡೆಕ್ಟರ್ ಆಗುತ್ತೇನೆ, ಡ್ರೈವರ್ ಆಗುತ್ತೇನೆ..... ಹೀಗೆ ದಿನಕ್ಕೊಮ್ಮೆ ತಾನೇನಾಗಬೇಕೆಂದು ಪಟ್ಟಿ ಬದಲಾಯಿಸುತ್ತಿದ್ದ. ಒಮ್ಮೆ ಬೈಕ್ ನಲ್ಲಿ ಹೋಗುವಾಗ ತನ್ನ ಕಣ್ಣಮುಂದೆಯೇ ನಡೆದ ಪುಟ್ಟ ಅಪಘಾತದಲ್ಲಿ ಗಾಯಗೊಂಡವರಿಗೆ ರಕ್ತ ಕೊಟ್ಟು ಸಹಾಯ ಮಾಡಿದ್ದನ್ನು ಹೇಳುತ್ತಾ "ಏನಾದರೂ ಆಗು, ಮೊದಲು ಮಾನವನಾಗು" ಎಂದು ಹೇಳಿದ್ದಾರೆ.

              ಪ್ರಾಣಿಗಳ ನಿಸ್ವಾರ್ಥ ಪ್ರೀತಿಯ ಬಗ್ಗೆ, ಸಂಬಂಧಗಳನ್ನು ನಿಭಾಯಿಸುವ ಬಗ್ಗೆ 'ಬದುಕ ಕಲಿಸುವ ನೂರು ಗುರುಗಳು' ಎಂಬ ಬರಹದಲ್ಲಿ, 'ಪತ್ರ ಬರೆಯಲಾ...' ಬರಹದಲ್ಲಿ ಹಿಂದಿನ ಕಾಲದಲ್ಲಿ ಹೇಗೆ ಪತ್ರಗಳು ಸುಖ - ದುಃಖ ಗಳನ್ನು ಹಂಚುವ ಮಾಧ್ಯಮವಾಗಿದ್ದವು ಎಂದು ಹೇಳಿದ್ದಾರೆ.

            ಅಪರಿಚಿತರನ್ನು ಕಳ್ಳರೆಂದೇ ಭಾವಿಸಿ ಭಯದ ಬೆನ್ನೇರಿ ಪಡಿಪಾಟಲು ಪಟ್ಟು, ಆ ಅಪರಿಚಿತನು ಅಲ್ಲೇ ತನ್ನ ಅಂಗಡಿಯಲ್ಲಿ ನೆಟ್ಟ ಸುಂದರ ಹೂ ಗಿಡಗಳ ಬಣ್ಣ ಬಣ್ಣದ ಲೋಕವನ್ನು ಗಮನಿಸದ ತನ್ನ ಸಣ್ಣತನವನ್ನು ಹಾಸ್ಯದೊಂದಿಗೆ 'ಭಯದ ಬೆನ್ನೇರಿ ಬಂತು' ಎಂಬ ಬರಹದಲ್ಲಿ ಲೇಖಕಿ ವಿವರಿಸಿದ್ದಾರೆ.

             ' ಹ್ಹೋ ..... ಏನು? 'ಎಂಬ ಪುಸ್ತಕದ ಶೀರ್ಷಿಕೆಯ ಬರಹದಲ್ಲಿ ಕರಾವಳಿಯ ಸಂಪ್ರದಾಯವಾದ ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವಾಗ ಆತಿಥೇಯರು"ಏನು?" ಎಂದು ಕೇಳಿದಾಗ ಅತಿಥಿಗಳು "ಒಳ್ಳೆಯದು" ಎಂದು ಹೇಳುತ್ತಾರೆ. ಆದರೆ ಇದು ಗೊತ್ತಿಲ್ಲದೆ ಇರುವ ಅತಿಥಿಗಳು ಬಂದಾಗ ಅನುಭವಿಸಿದ ಮುಜುಗರದ ಪ್ರಸಂಗವನ್ನು ಈ ಲೇಖನದಲ್ಲಿ ಬರೆದಿದ್ದಾರೆ.

            'ಭಾಷಣದ ಗಮ್ಮತ್ತು' ಎಂಬ ಬರಹದಲ್ಲಿ ಲೇಖಕಿಯು ಕೇಳಿದ ಭೀಷಣವಾದ ಭಾಷಣವೊಂದನ್ನು ಬರೆದಿದ್ದಾರೆ. ಈ ಬರಹವಂತೂ ಹೊಟ್ಟೆ ಹುಣ್ಣಾಗುವಂತೆ ನಮ್ಮನ್ನು ನಗಿಸುತ್ತದೆ. 'ಹೋಳಿಗೆಯೂ, ಹಳೆ ಪೇಪರ್ರೂ' ಬರಹ ಮನೆಯ ಕಾರ್ಯಕ್ರಮಗಳಲ್ಲಿ ಹೋಳಿಗೆಯನ್ನು ಪೇಪರ್ ನಲ್ಲಿ ಕಟ್ಟಿ ನೆಂಟರಿಷ್ಟರಿಗೆ ಹಂಚುವಾಗ, ಹಳೆ ಪೇಪರ್ ಅನ್ನು ಓದುವಾಗ  ನಡೆಯುವ ಮೋಜಿನ ಪ್ರಸಂಗಗಳು ನವರಸಗಳ ದರ್ಶನ ಮಾಡಿಸುತ್ತದೆ.

            ಇಲ್ಲಿರುವ ಬರಹಗಳು ಅತ್ಯಂತ ಲವಲವಿಕೆಯಿಂದ ಕೂಡಿದ್ದು,ಒಮ್ಮೆ ಓದಿದಾಗ ನಮ್ಮ ಚಿಂತೆಯನ್ನು ದೂರ ಮಾಡಿ ಮುಖದಲ್ಲಿ ನಗುವನ್ನು ಮೂಡಿಸುವುದು ಸುಳ್ಳಲ್ಲ.

            

            

                 
            

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"