ದೇವತೆಗಳ ದ್ವೀಪದಲ್ಲಿ ಭಾಗ -3
ದೇವತೆಗಳ ದ್ವೀಪದಲ್ಲಿ ಭಾಗ - 2 ನಮ್ಮ ಪ್ರವಾಸದ ಕೊನೆಯ ಮೂರು ದಿನಗಳು ಬಾಲಿಯ ಉಲುವಾಟುವಿನಲ್ಲಿದ್ದುದರಿಂದ, ಅಲ್ಲಿ ಹೋಟೇಲ್ ಅನ್ನು ಮುಂಚಿತವಾಗಿ ಕಾಯ್ದಿರಿಸಿದ್ದೆವು. ಹಾಗಾಗಿ ಪ್ರವಾಸದ ಎರಡನೆಯ ದಿನ ಉಬುಡುವಿನಿಂದ ಉಲುವಾಟಿಗೆ ಹೋಗುವ ದಾರಿಯಲ್ಲಿ ಸಿಗುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ನಮ್ಮ ಉದ್ದೇಶವಾಗಿತ್ತು. ಬೆಳಗಿನ ಉಪಹಾರವನ್ನು ಮುಗಿಸಿ ಉಬುಡುವಿನಲ್ಲಿ ನಾವು ಉಳಿದುಕೊಂಡಿದ್ದ 'ತಮನ್ ಹರುಮ್(ಸುಗಂಧ ಭರಿತ ಉದ್ಯಾನವನ ಎಂಬ ಅರ್ಥವಂತೆ)' ಹೋಟೇಲ್ ನಿಂದ ಚೆಕ್ ಔಟ್ ಮಾಡಿ ಕಾರಿನಲ್ಲಿ ಹೊರಟೆವು. ನಾವು ಮೊದಲು ಹೋಗಿದ್ದು 'ಪುರ ತಮನ್ ಆಯುನ್' ಎಂಬ ದೇವಸ್ಥಾನಕ್ಕೆ. ಈ ದೇವಾಲಯವು ಸುಮಾರು ಹತ್ತು ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ಹರಡಿದೆ. ದೇವಾಲಯದಲ್ಲಿ 3 ಭಾಗಗಳಿವೆ. ನಿಸ್ತ ಮಂಡಲ(outer courtyard)(ಹೊರ ಅಂಗಣ), ಮಧ್ಯ ಮಂಡಲ (middle courtyard)(ಮಧ್ಯ ಅಂಗಣ), ಉತ್ತಮ ಮಂಡಲ (main holy courtyard)(ಪವಿತ್ರ ಪ್ರಾಂಗಣ) ಎಂದು. ಪವಿತ್ರ ಪ್ರಾಂಗಣದೊಳಗೆ ವಿದೇಶಿಯರಿಗೆ ಪ್ರವೇಶ ನಿಷಿದ್ಧ. ಈ ದೇವಾಲಯವನ್ನು 1627 ರಲ್ಲಿ ಪ್ರಸಿದ್ಧ ಮೆನ್ಗ್ವಿ ರಾಜ ವಂಶಸ್ಥರು ತಮ್ಮ ಪೂರ್ವಜರ ಆರಾಧನೆಗಾಗಿ ಕಟ್ಟಿಸಿದರಂತೆ. ಪುರ ತಮನ್ ಆಯುನ್ ಎಂದರೆ "ನೀರಿನಲ್ಲಿರುವ ಉದ್ಯಾನ ದೇವಾಲಯ" ಎಂದು ಅರ್ಥ...