ದೇವತೆಗಳ ದ್ವೀಪದಲ್ಲಿ ಭಾಗ -1
ವಿದೇಶ ಪ್ರವಾಸವೆನ್ನುವುದು ನಮ್ಮ ತಲೆಮಾರಿನ ಹೆಚ್ಚಿನವರ ಕನಸು. ನಮ್ಮ ನಾಳೆಗಳಿಗಾಗಿ ತಮ್ಮ ನಿನ್ನೆಗಳನ್ನು ತ್ಯಾಗ ಮಾಡಿದ ನಮ್ಮ ಪಾಲಕರಿಗೆ, ನಾವು ಕಾಣುತ್ತಿರುವ, ಬದಲಾಗುತ್ತಿರುವ ಜಗತ್ತನ್ನು ತೋರಿಸುವುದು ಸಹ ನಮ್ಮ ಕನಸಾಗಿತ್ತು. ಹೀಗಾಗಿ ನಾವು ನಮ್ಮ ಮೊದಲ ವಿದೇಶ ಪ್ರವಾಸವನ್ನು ಯೋಜಿಸಿದ್ದೆವು. ನೈಸರ್ಗಿಕವಾಗಿ ರಮಣೀಯವಾದ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ನಮ್ಮ ಬಜೆಟ್ ನ ಪರಿಮಿತಿಯಲ್ಲಿ ಬರುವ ದೇಶವನ್ನು ಪ್ರವಾಸಕ್ಕಾಗಿ ಆಯ್ದುಕೊಳ್ಳಲು ನಿರ್ಧರಿಸಿದಾಗ ನಮಗೆ ಇಂಡೋನೇಷಿಯಾದ ದ್ವೀಪ 'ಬಾಲಿ' ಒಳ್ಳೆಯ ಆಯ್ಕೆ ಎಂದು ಅನಿಸಿತು. ಹೀಗಾಗಿ ನಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಬಾಲಿಯನ್ನು ಆಯ್ದುಕೊಂಡೆವು. ಬಾಲಿಗೆ ಹೋಗಬೇಕೆಂದು ನಿರ್ಧರಿಸಿದ ಮೇಲೆ ಮೊಬೈಲ್ ತುಂಬಾ ಬಾಲಿಯ ವಿಷಯಗಳು!! ಯಾವುದೇ ಪ್ಯಾಕೇಜ್ ನ ಸಹಾಯವಿಲ್ಲದೇ ಕೇವಲ ಯೂಟ್ಯೂಬ್, ಚಾಟ್ ಜಿಪಿಟಿ ಹಾಗೂ wanderlog ಆಪ್ ಸಹಾಯದಿಂದ, ನಾವು ನೋಡಬೇಕಾದ ಸ್ಥಳಗಳ ಪಟ್ಟಿ ಹಾಗೂ ಉಳಿದುಕೊಳ್ಳುವ ಹೊಟೆಲ್ ಗಳ ಪಟ್ಟಿಯನ್ನು ತಯಾರಿಸಿದೆವು. ಇನ್ನುಳಿದಂತೆ ಪ್ರಯಾಣಿಸಬೇಕಾದ ವಿಮಾನಗಳ ಪಟ್ಟಿ, ಬ್ಯಾಗ್ ಪ್ಯಾಕಿಂಗ್ ಹೀಗೆ ಒಂದೊಂದೇ ಸಿದ್ಧತೆಗಳು ನಡೆದಂತೆ ಹೋಗುವ ಕಾತರವೂ ಸಹ ಹೆಚ್ಚಾಯಿತು. ಅಂತೂ ಹೊರಡುವ ದಿನ ಬಂದೇ ಬಿಟ್ಟಿತು!
ಏಪ್ರಿಲ್ 13 ರ ರಾತ್ರಿ ರೈಲಿನಲ್ಲಿ ಮಂಗಳೂರಿನಿಂದ ನಮ್ಮ ಪಯಣ ಆರಂಭವಾಯಿತು. ಮರುದಿನ ಬೆಳಿಗ್ಗೆ ಬೆಂಗಳೂರನ್ನು ತಲುಪಿದೆವು. ಭಾನುವಾರ ರಾತ್ರಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದಾಗ ಆಗ ತಾನೇ ಕತ್ತಲು ಆವರಿಸುತ್ತಿತ್ತು. ಆದರೆ ವಿಮಾನ ನಿಲ್ದಾಣ ಬಂಗಾರದ ಬಣ್ಣದಲ್ಲಿ ಹೊಳೆಯುತ್ತಿತ್ತು. ಕಣ್ಮನ ಸೆಳೆಯುವಷ್ಟು ಮೋಹಕವಾಗಿತ್ತು. ಅಲ್ಲಿ - ಇಲ್ಲಿ ನಿಂತು ಫೋಟೋ ತೆಗೆಯಬೇಕೆಂಬ ಆಸೆಯಿದ್ದರೂ ಲಗೇಜ್ ಚೆಕಿಂಗ್ ನಂತಹ ಹಲವು ಕೆಲಸಗಳು ಇದ್ದುದರಿಂದ ಅದನ್ನೆಲ್ಲಾ ಮುಗಿಸಿ ವಿಮಾನವನ್ನು ಏರಿದಾಗ ರಾತ್ರಿ 12 ಗಂಟೆ! ಅತ್ತೆ ಹಾಗೂ ಮಗಳ ಮೊದಲ ವಿಮಾನ ಪ್ರಯಾಣವಾದ್ದರಿಂದ ಅವರಿಬ್ಬರೂ ತುಂಬ ಕಾತರದಿಂದಿದ್ದರು. ಮಗಳಂತೂ ಪ್ರತಿಯೊಂದು ನಿಮಿಷವನ್ನೂ ಸಹ ಖುಷಿಯಿಂದ ಅನುಭವಿಸುತ್ತಿದ್ದಳು. ವಿಮಾನದಲ್ಲಿ ಕುಳಿತ ತತ್ ಕ್ಷಣ ಮೇಲೆ ಹಾರುವ ತವಕ ಮಗಳಿಗೆ! ತಾನು ಕಿಟಕಿಯ ಬಳಿಯೇ ಕೂರುವುದೆಂದು ಖುಷಿಯಿಂದ ಕುಳಿತಳು. ನಮಗೆಲ್ಲರಿಗೂ ಒಂದೇ ಸಾಲಿನಲ್ಲಿ ಸೀಟ್ ಸಿಕ್ಕಿದ್ದು ಸಮಾಧಾನವಾಗಿತ್ತು. ಸುರಕ್ಷತಾ ಕ್ರಮಗಳಿರುವ ಪೇಪರ್ ಅನ್ನು ನೋಡಿ ನೋಡಿ ಸುಸ್ತಾಗಿ ಕೊನೆಗೆ ಅಪ್ಪನ ಬಳಿ ಎಲ್ಲಾ ಸೂಚನೆಗಳನ್ನು ಕೇಳಿ ತಿಳಿದುಕೊಂಡಳು. ನಾನಿನ್ನೂ ಸೀಟ್ ಬೆಲ್ಟ್ ಹೇಗೆ ಧರಿಸುವುದೆಂದು ಪರದಾಡುತ್ತಿದ್ದರೆ ಅವಳು ಸ್ವತಃ ತಾನೇ ಸೀಟ್ ಬೆಲ್ಟ್ ಧರಿಸಿ ವಿಮಾನ ಹಾರುವುದನ್ನೇ ಕಾಯುತ್ತಿದ್ದಳು. ಅಂತೂ ಎಲ್ಲಾ ಸಿದ್ಧತೆಗಳನ್ನು ನಡೆಸಿ ವಿಮಾನ ಮೇಲೆ ಹಾರುತ್ತಿದ್ದರೆ ಮಗಳು ನಿದ್ದೆಗೆ ಜಾರಿದಳು.
ನಾವೆಲ್ಲರೂ ನೀರಿನ ಬಳಿ ಕುಳಿತುಕೊಂಡು ಫೋಟೋ ತೆಗೆಯುತ್ತಿದ್ದರೆ ಇವಳು ಮಾತ್ರ ಈ ಸ್ಥಳವನ್ನು ಆಯ್ಕೆ ಮಾಡಿ ಅವಳೇ ಫೋಟೋಗೆ ಪೋಸ್ ಕೊಟ್ಟು ನಿಂತಳು.
ನಮ್ಮ ಪ್ರಯಾಣ 5 ಗಂಟೆಯಷ್ಟು ಕಾಲ ಆಕಾಶದಲ್ಲಿ ಸಾಗಿತು. ನಿಗದಿತ ಸಮಯಕ್ಕೆ ಮಲೇಷ್ಯಾದ ಕೌಲಾಲಾಂಪುರ ನಿಲ್ದಾಣವನ್ನು ತಲುಪಿದೆವು ಎಂದು ತಿಳಿಯುವಷ್ಟರಲ್ಲಿ ಪೈಲಟ್ "ವಿಮಾನ ನಿಲ್ದಾಣದಲ್ಲಿ ವಿಮಾನ ದಟ್ಟಣೆಯಿಂದಾಗಿ ಇಳಿಯಲು ಸಾಧ್ಯವಾಗುತ್ತಿಲ್ಲ" ಎಂದು ಘೋಷಿಸಿದರು. ಹಾಗಾಗಿ ಮತ್ತೆ ಅರ್ಧ ಗಂಟೆಗಳಷ್ಟು ಕಾಲ ಆಕಾಶದಲ್ಲಿ ಹಾರಾಡಿ ಕೌಲಾಲಂಪುರವನ್ನು ತಲುಪಿದಾಗ ಬೆಳಗಿನ ಸೂರ್ಯ ಆಗ ತಾನೇ ಉದಯಿಸುತ್ತಿದ್ದ. ಕೌಲಾಲಂಪುರದಿಂದ ಬಾಲಿಗೆ ಹೋಗುವ ವಿಮಾನ ವಿಳಂಬವಾದ ಕಾರಣ ನಮ್ಮ ಬಳಿ 4 ಗಂಟೆಗಳಷ್ಟು ಸಮಯವಿದ್ದರೂ ಸಹ, ಮಲೇಷ್ಯಾದ ವೀಸಾವಿಲ್ಲದ ಕಾರಣ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಸಾಧ್ಯವಿರಲಿಲ್ಲ. ನಂತರದ 3 ಗಂಟೆಯ ಪಯಣ ಬಾಲಿಯ ಕಡೆಗೆ. ನಮ್ಮ ಉತ್ಸಾಹ ಗರಿಗೆದರಿತ್ತು. ಮೋಡದ ಒಳಗೆ ವಿಮಾನದ ಪಯಣ, ಸುತ್ತಲೂ ಸಮುದ್ರದಿಂದ ಆವೃತವಾದ ಹಸಿರು ಸಿರಿಯ ಮಧ್ಯೆ ಪ್ರಯಾಣ ಮಾಡುತ್ತಾ, ಕಿಟಕಿಯಲ್ಲಿ ನೋಡುತ್ತಿದ್ದಾಗ "ಓಹ್! ಸಮುದ್ರದ ಮೇಲೆಯೇ ಹಾರಾಡುತ್ತಿದ್ದೇವೆ" ಎಂದು ಅಂದುಕೊಂಡಿದ್ದು ಸುಳ್ಳಾಗುವಂತೆ ಕ್ಷಣ ಅಂತರದಲ್ಲಿ ಬಾಲಿ ವಿಮಾನ ನಿಲ್ದಾಣದಲ್ಲಿ ಧಡಕ್ಕನೆ ಲ್ಯಾಂಡ್ ಆದಾಗ ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ತೆಗೆದು ಇಳಿಯಲು ಸಿದ್ಧರಾದೆವು.
ಬಾಲಿಯ ವಿಮಾನ ನಿಲ್ದಾಣದ ತುಂಬಾ ಬಾಲಿಯ ಸಂಸ್ಕೃತಿಯನ್ನು ಬಿಂಬಿಸುವ ಹಲವು ಪ್ರತಿಮೆಗಳು, ಬೆತ್ತದ ಹಾಗೂ ಮರದ ಕೆತ್ತನೆಗಳಿದ್ದು ಅತ್ಯಂತ ಆಕರ್ಷಕವಾಗಿತ್ತು. On arrival Visa ವನ್ನು, ನಮ್ಮ ಲಗೇಜ್ ಗಳನ್ನು ಪಡೆದು, ಕೆಲವು ಫಾರಂ ಗಳನ್ನು ಭರ್ತಿ ಮಾಡಿ, ಅವರು ಪ್ರವಾಸಿಗಳಿಗೆ ಸೂಚಿಸಿದ ಎಲ್ಲಾ ಸೂಚನೆಗಳನ್ನು, ನಿಯಮಗಳನ್ನು ಅನುಸರಿಸಿ, ಅಲ್ಲಿಯ ಸಿಮ್ ಕಾರ್ಡ್ ಅನ್ನು ಪಡೆದು, ತುರ್ತು ಅಗತ್ಯವಿದ್ದ ಹಣವನ್ನು ವಿನಿಮಯ ಮಾಡಿ, ವಿಮಾನ ನಿಲ್ದಾಣದಿಂದ ಹೊರ ಬಂದಾಗ ಸೂರ್ಯ ಪಶ್ಚಿಮದ ಕಡೆ ವಾಲಿದ್ದ. ನಮ್ಮ ಮುಖಗಳೂ ಸಹ ಸುಸ್ತಿನಿಂದ ಬಾಡಿ ಹೋಗಿತ್ತು. ಪೂರ್ವ ನಿರ್ಧಾರದಂತೆ ಬೆಳಿಗ್ಗೆ 10 ಗಂಟೆಗೆ ಬಾಲಿಯನ್ನು ತಲುಪಬೇಕಾದ ನಾವು ವಿಮಾನ ವಿಳಂಬವಾಗಿ ಬಾಲಿಯಲ್ಲಿ ಕಾಲೂರಿದ್ದು ಸಾಯಂಕಾಲ 4 ಗಂಟೆಗೆ!! ಅಂತೂ ಯಾವುದೇ ಸಮಸ್ಯೆಗಳು ಉಂಟಾಗದೇ ಸುರಕ್ಷಿತವಾಗಿ ತಲುಪಿದ್ದು ಎಲ್ಲರಿಗೂ ನಿರಾಳವಾಯಿತು.
ನಮ್ಮ ಮೊದಲ ದಿನದ ಪ್ರವಾಸ ಬಾಲಿಯ ಉಬುಡುವಿನಲ್ಲಿದ್ದ ಕಾರಣ ಅಲ್ಲಿ ಹೊಟೆಲ್ ಅನ್ನು ಮುಂಚಿತವಾಗಿ ಕಾಯ್ದಿರಿಸಿದ್ದೆವು. ಹಾಗಾಗಿ ವಿಮಾನ ನಿಲ್ದಾಣದಿಂದ ಉಬುಡುವಿನ ಕಡೆಗೆ ಸಾಗಿತು ನಮ್ಮ ಪಯಣ. ಬಾಲಿಯ ದೇವಾಸ್ಥಾನದ ಗೋಪುರದಂತಹ ರಚನೆಗಳಿರುವ ಮನೆಗಳ ಹಿಂದೆ ಸೂರ್ಯ ಅಸ್ತಮಿಸತೊಡಗಿದ್ದ. ಬಾಲಿ ನಮ್ಮ ಕಣ್ಣೆದುರಿಗೆ ಇಷ್ಟಿಷ್ಟೇ ತೆರೆದುಕೊಳ್ಳತೊಡಗಿತು.
Good article..interesting..keep it up
ReplyDelete