ದೇವತೆಗಳ ದ್ವೀಪದಲ್ಲಿ ಭಾಗ -3
ದೇವತೆಗಳ ದ್ವೀಪದಲ್ಲಿ ಭಾಗ - 2
ನಮ್ಮ ಪ್ರವಾಸದ ಕೊನೆಯ ಮೂರು ದಿನಗಳು ಬಾಲಿಯ ಉಲುವಾಟುವಿನಲ್ಲಿದ್ದುದರಿಂದ, ಅಲ್ಲಿ ಹೋಟೇಲ್ ಅನ್ನು ಮುಂಚಿತವಾಗಿ ಕಾಯ್ದಿರಿಸಿದ್ದೆವು. ಹಾಗಾಗಿ ಪ್ರವಾಸದ ಎರಡನೆಯ ದಿನ ಉಬುಡುವಿನಿಂದ ಉಲುವಾಟಿಗೆ ಹೋಗುವ ದಾರಿಯಲ್ಲಿ ಸಿಗುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ನಮ್ಮ ಉದ್ದೇಶವಾಗಿತ್ತು. ಬೆಳಗಿನ ಉಪಹಾರವನ್ನು ಮುಗಿಸಿ ಉಬುಡುವಿನಲ್ಲಿ ನಾವು ಉಳಿದುಕೊಂಡಿದ್ದ 'ತಮನ್ ಹರುಮ್(ಸುಗಂಧ ಭರಿತ ಉದ್ಯಾನವನ ಎಂಬ ಅರ್ಥವಂತೆ)' ಹೋಟೇಲ್ ನಿಂದ ಚೆಕ್ ಔಟ್ ಮಾಡಿ ಕಾರಿನಲ್ಲಿ ಹೊರಟೆವು. ನಾವು ಮೊದಲು ಹೋಗಿದ್ದು 'ಪುರ ತಮನ್ ಆಯುನ್' ಎಂಬ ದೇವಸ್ಥಾನಕ್ಕೆ. ಈ ದೇವಾಲಯವು ಸುಮಾರು ಹತ್ತು ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ಹರಡಿದೆ. ದೇವಾಲಯದಲ್ಲಿ 3 ಭಾಗಗಳಿವೆ. ನಿಸ್ತ ಮಂಡಲ(outer courtyard)(ಹೊರ ಅಂಗಣ), ಮಧ್ಯ ಮಂಡಲ (middle courtyard)(ಮಧ್ಯ ಅಂಗಣ), ಉತ್ತಮ ಮಂಡಲ (main holy courtyard)(ಪವಿತ್ರ ಪ್ರಾಂಗಣ) ಎಂದು. ಪವಿತ್ರ ಪ್ರಾಂಗಣದೊಳಗೆ ವಿದೇಶಿಯರಿಗೆ ಪ್ರವೇಶ ನಿಷಿದ್ಧ. ಈ ದೇವಾಲಯವನ್ನು 1627 ರಲ್ಲಿ ಪ್ರಸಿದ್ಧ ಮೆನ್ಗ್ವಿ ರಾಜ ವಂಶಸ್ಥರು ತಮ್ಮ ಪೂರ್ವಜರ ಆರಾಧನೆಗಾಗಿ ಕಟ್ಟಿಸಿದರಂತೆ. ಪುರ ತಮನ್ ಆಯುನ್ ಎಂದರೆ "ನೀರಿನಲ್ಲಿರುವ ಉದ್ಯಾನ ದೇವಾಲಯ" ಎಂದು ಅರ್ಥ. ಹೆಸರೇ ಹೇಳುವಂತೆ ಈ ದೇವಾಲಯದ ಸುತ್ತಲೂ ತಾವರೆಗಳಿಂದ ಆವೃತವಾದ ಕೊಳವಿದ್ದು ಹಾಗೂ ದೇವಾಲಯದ ಕೊನೆಯ ಪವಿತ್ರ ಪ್ರಾಂಗಣದ ಸುತ್ತ ಮತ್ತೊಂದು ಕೊಳವಿದೆ ಹಾಗೂ ದೇವಾಲಯವು ಮಾವು, ಚಂಪಕ, ಪುನ್ನಾಗದಂತಹ ದೊಡ್ಡ ಮರಗಳಿಂದ ಆವೃತವಾಗಿದೆ. ಮಧ್ಯ ಹಾಗೂ ಹೊರ ಪ್ರಾಂಗಣದ ನೆಲದ ಮೇಲೆ ಹುಲ್ಲುಹಾಸು ಇರುವುದರಿಂದ ಕುಳಿತುಕೊಳ್ಳಲು ಆರಾಮದಾಯಕವಾಗಿತ್ತು.
ಹೊರ ಪ್ರಾಂಗಣದ ಪ್ರವೇಶ ದ್ವಾರದಲ್ಲಿ
ಇಲ್ಲಿ ದೇವಾಲಯ ಮಾತ್ರವಲ್ಲದೇ ಇಲ್ಲಿಯ ಇತಿಹಾಸದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಒಂದು ಸಣ್ಣ ಥಿಯೇಟರ್, ರಾಜವಂಶಸ್ಥರ ಬಗ್ಗೆ ಹಾಗೂ ಅಲ್ಲಿನ ಸಾಂಸ್ಕೃತಿಕ ಆಚರಣೆಗಳ ಬಗ್ಗೆ ಫೋಟೋ ಸಹಿತ ವಿವರಣೆಗಳಿದ್ದ ಸಣ್ಣ ಗ್ಯಾಲರಿಯಿದ್ದು ಎಲ್ಲವೂ ಮಾಹಿತಿಯುಕ್ತವಾಗಿತ್ತು. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ ತುಳುನಾಡಿನ ಜಾನಪದ ಆಟವಾದ ಕೋಳಿ ಅಂಕ ಅಥವಾ ಕೋಳಿ ಕಟ್ಟದ ಯಥಾವತ್ ಪ್ರತಿಕೃತಿಯನ್ನು ವಿಶಾಲವಾದ ಜಾಗದಲ್ಲಿ ನಿರ್ಮಿಸಿದ್ದು, ಇದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಾಧ್ಯವಾಗಲಿಲ್ಲ.
ಇಷ್ಟು ವಿಸ್ತಾರವಾದ ದೇವಾಲಯವನ್ನು ನೋಡುವುದರಲ್ಲಿ ಮಧ್ಯಾಹ್ನವಾಗಿತ್ತು. ದಾರಿಯ ಮಧ್ಯೆ ಸಿಕ್ಕಿದ ಭಾರತೀಯ ರೆಸ್ಟೋರೆಂಟ್ ನಲ್ಲಿ ಊಟವನ್ನು ಮಾಡಿ
ಪ್ರವೇಶದ್ವಾರ
ದೇವಾಲಯದ ಎದುರಿದ್ದ ಮಂಟಪ
ದೇವಾಲಯದ ಮುಂದಿದ್ದ ದ್ವಾರ
ತೆರೆಗಳು ಸತತವಾಗಿ ಬಡಿದು ಕಲ್ಲುಗಳಲ್ಲಿ ಉಂಟಾದ ಸೇತುವೆಯಂತಹ ರಚನೆ
ಸಮುದ್ರದ ಮೇಲಿರುವ ದೇವಾಲಯದ ಎರಡನೆಯ ಆವರಣ
ಸಾಯಂಕಾಲದ ದೃಶ್ಯ ಕಾವ್ಯ
'ತನಹ ಲಾಟ್ ಹಾಗೂ ಬುಟು ಬೊಲೊಂಗ್' ದೇವಸ್ಥಾನಕ್ಕೆ ಹೋದೆವು.
ಪ್ರವೇಶ ದ್ವಾರದಿಂದಲೇ ಕಾಣುವ ಭೋರ್ಗರೆಯುವ ಶುದ್ಧ ನೀಲ ಸಮುದ್ರವನ್ನು ನೋಡಿದಾಗ ಹೋಗಲೇಬೇಕೆಂಬ ತುಡಿತ. ಆದರೆ ನೆತ್ತಿಯ ಮೇಲೆ ಸುಡುತ್ತಿರುವ ಸೂರ್ಯ. ಸಾಯಂಕಾಲದವರೆಗೂ ಸಮಯವಿದ್ದುದರಿಂದ ದೇವಾಲಯದ ಮುಂದಿದ್ದ ಮಂಟಪದಲ್ಲಿ ಕುಳಿತು ಸೂರ್ಯನ ತಾಪ ಕಡಿಮೆಯಾದ ಮೇಲೆ ದೇವಾಲಯದ ಕಡೆಗೆ ಹೆಜ್ಜೆ ಹಾಕಿದೆವು.
ಶುದ್ಧ ನೀಲ ಸಮುದ್ರದ ಮಧ್ಯದಲ್ಲಿದ್ದ ದೇವಾಲಯವನ್ನು ನೋಡಿದ ಕೂಡಲೇ ವಾವ್!! ಎಂಬ ಉದ್ಗಾರ ಬಾರದೇ ಇರದು. ಅಷ್ಟು ಅದ್ಭುತವಾಗಿತ್ತು ಆ ಸ್ಥಳ. ಒಮ್ಮೆ ದಟ್ಟ ನೀಲವಾಗಿದ್ದ ಆಗಸ ಕ್ಷಣಾರ್ಧಲ್ಲೇ ಕಪ್ಪು ಮೋಡಗಳಿಂದ ಆವೃತವಾಗಿ ಆಕಾಶ ನೀಲಿಯಿದ್ದುದ್ದೇ ಸುಳ್ಳೆಂಬಂತೆ ಕ್ಷಣಕ್ಕೊಮ್ಮೆ ತನ್ನ ಬಣ್ಣವನ್ನು ಬದಲಾಯಿಸುತ್ತಿತ್ತು. ನೀಲ ತೆರೆಗಳು ದೇವಾಲಯದ ಕಲ್ಲಿನ ಭಿತ್ತಿಗೆ ಬಡಿದು ಬಡಿದು ಸುಸ್ತಾಗಿ ಹಿಂದೆ ಹೋಗುತ್ತಿದ್ದವು. ಕಣ್ಣು ಹಾಯಿಸಿದಷ್ಟೂ ದೂರ ಶುದ್ಧ ನೀಲ ಜಲ, ನೀಲ ಗಗನಕ್ಕೆ ಪೈಪೋಟಿಯನ್ನು ನೀಡುತ್ತಿತ್ತು.
ಈ ದೇವಾಲಯವು ಸಮುದ್ರ ದಡದ ಮೇಲೆ, ಅಲೆಗಳು ಸತತವಾಗಿ ಕಲ್ಲುಗಳಿಗೆ ಬಡಿದು ಉಂಟಾದ ಕೊರೆತದಿಂದ ನಿರ್ಮಿತವಾಗಿದೆ. ದೇವಾಲಯದ ಮೊದಲ ಆವರಣವು ನೆಲದ ಮೇಲೆ ಇದ್ದು, ಎರಡನೆಯ ಆವರಣಕ್ಕೆ ಸುಮಾರು 50 ಮೀಟರ್ ನಷ್ಟು ಅಂತರವನ್ನು ಸಮುದ್ರದಲ್ಲಿ ನಡೆದು ಹೋಗಬೇಕಾಗಿತ್ತು. ಅಲ್ಲಿಯೂ ಸಹ ಪೂಜೆ ನಡೆಯುತ್ತಿತ್ತು. ಕೆಲವು ಸ್ಥಳೀಯರು ಪ್ರವಾಸಿಗರನ್ನು ಅಲ್ಲಿಗೆ ದಾಟಿಸಲು ಸಹಕರಿಸುತ್ತಿದ್ದರು. ದೇವಾಲಯದ ಬಲ ಭಾಗದಲ್ಲಿ ತೆರೆಗಳು ಸತತವಾಗಿ ಬಡಿದು ಕಲ್ಲುಗಳಲ್ಲಿ ಸೇತುವೆಯಂತಹ ರಚನೆ ಉಂಟಾಗಿವೆ. ಎಷ್ಟು ನೋಡಿದರೂ ದಣಿಯದ, ಬಹಳ ಸಮಯವನ್ನು ಅಲ್ಲಿ ಕಳೆದಿದ್ದರೂ ಸಹ ಅಲ್ಲಿಂದ ಎದ್ದು ಹೋಗಲು ಮನಸ್ಸೇ ಬಾರದಷ್ಟು ಅದ್ಭುತವಾಗಿತ್ತು 'ತನಹ ಲಾಟ್ ಹಾಗೂ ಬುಟು ಬೊಲೊಂಗ್' ದೇವಾಲಯ.
ಇಲ್ಲಿಂದ ಮುಂದೆ ನಮ್ಮ ಪಯಣ ಸುಮಾರು 45 ನಿಮಿಷಗಳ ದಾರಿಯಾದ ಉಲುವಾಟು ಕಡೆಗೆ ಸಾಗಿತು. ಇನ್ನೇನು ನಾವು ಕಾಯ್ದಿರಿಸಿದ ಹೋಟೇಲ್ ಹತ್ತಿರದಲ್ಲೇ ಇದೆ ಎಂದು ತಿಳಿದಾಗ "ಹತ್ತಿರದಲ್ಲೇ ಭಾರತೀಯ ರೆಸ್ಟೋರೆಂಟ್ ಇದ್ದರೆ ಅಲ್ಲಿಯೇ ಏನಾದರೂ ತಿಂದುಕೊಂಡು ಹೋಗೋಣ. ಹೇಗೂ ಇನ್ನು ಮೂರು ದಿನ ನಾವು ಇಲ್ಲಿಯೇ ಇರುವುದರಿಂದ ಬೇರೆ ರೆಸ್ಟೋರೆಂಟ್ ಅನ್ನು ಹುಡುಕಿಕೊಂಡು ಹೋಗುತ್ತಾ ಸಮಯ ವ್ಯರ್ಥ ಮಾಡಬೇಕಿಲ್ಲ" ಎಂದು ಹೇಳುತ್ತಾ ನವೀನ್ ಗೂಗಲ್ ನಲ್ಲಿ ಹುಡುಕಿ "ಉತ್ಸವ್ ಎನ್ನುವ ಹೋಟೇಲ್ ಹತ್ತಿರದಲ್ಲೇ ಇದೆ ಎಂದು ಗೂಗಲ್ ತೋರಿಸುತ್ತಿದೆ" ಎಂದು ಹೇಳಿದ್ದೇ ತಡ ಹೊರಗಡೆ ನೋಡುತ್ತಿದ್ದ ನಾನು "ನೋಡಿ ನೋಡಿ ಇಲ್ಲೇ ಇದೆ. ಕಾರ್ ನಿಲ್ಲಿಸಿ" ಎಂದು ಹೇಳಿದೆ. ಎಲ್ಲರ ಹೊಟ್ಟೆಯೂ ತಾಳ ಹಾಕುತ್ತಿದ್ದರಿಂದ ಸಾಯಂಕಾಲದ ತಿಂಡಿಯನ್ನು ತಿಂದು ರಾತ್ರಿಯ ಊಟವನ್ನು ಪಾರ್ಸೆಲ್ ತೆಗೆದುಕೊಂಡು ನಾವು ಮುಂಚೆಯೇ ಕಾಯ್ದಿರಿಸಿದ್ದ 'ಲ ಗ್ರಾಂದೆ' ಹೋಟೇಲ್ ಗೆ ಹೋದೆವು. ಇಡೀ ದಿನ ಕಿಲೋಮೀಟರ್ ಗಟ್ಟಲೆ ನಡೆದಿದ್ದರಿಂದ ಸುಸ್ತಾಗಿ ದಿಂಬಿಗೆ ತಲೆಯಿಟ್ಟಿದ್ದೇ ತಡ ನಿದ್ದೆ ಆವರಿಸಿತು.
Comments
Post a Comment