ಓದಿನ ಸುಖ "Illustrated Ramayana"
ಪುಸ್ತಕದ ಹೆಸರು : Illustrated Ramayana
ಪ್ರಕಾಶನ : ಅಯೋಧ್ಯಾ ಪ್ರಕಾಶನ
ಮಗಳು ಟಿವಿಯಲ್ಲಿ 'ಲಿಟಲ್ ಕೃಷ್ಣ ' ಕಾರ್ಟೂನ್ ನೋಡಿ ಇಷ್ಟಪಟ್ಟಿದ್ದರಿಂದ ಇನ್ನು ರಾಮಾಯಣ ಕಥೆಯನ್ನು ಹೇಳಲು ಆರಂಭಿಸೋಣ ಎಂದು ಆಲೋಚಿಸುತ್ತಿದ್ದಾಗ ಈ ಮೊದಲೇ ಅವಳಿಗೋಸ್ಕರ ಒಂದು ರಾಮಾಯಣ ಪುಸ್ತಕವನ್ನು ತಂದಿದ್ದೆ. ಅದರ ಕಥೆಗಳನ್ನು ಓದಿ ಹೇಳುತ್ತಿದ್ದಾಗ ಅದು ಅವಳಿಗೆ ಅಷ್ಟೊಂದು ಆಕರ್ಷಣೀಯ ಎಂದು ಅನಿಸುತ್ತಿರಲಿಲ್ಲ. ಹಾಗಾಗಿ ಅರ್ಧದಲ್ಲೇ ಕಥೆ ಹೇಳುವುದನ್ನು ಕೈ ಬಿಟ್ಟಿದ್ದೆ. ಆಗ ನನಗೆ ಅಯೋಧ್ಯಾ ಪ್ರಕಾಶನದವರು ಹೊರತಂದ Illustrated Ramayana ಪುಸ್ತಕದ ಬಗ್ಗೆ ತಿಳಿದು ಪುಸ್ತಕವನ್ನು ತರಿಸಿಕೊಂಡು, ಅವರು ಈ ಪುಸ್ತಕದ ಬಗ್ಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಗೂ ಸಹ ನೊಂದಾಯಿಸಿದೆ.
ಒಮ್ಮೆ ಪುಸ್ತಕ ಕೈಗೆ ಬಂದಿದ್ದೇ ತಡ ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ ಅವಳಿಗೆ. ಕಥೆಯದ್ದೇ ಒಂದು ತೂಕವಾದರೆ ಪುಟ ತುಂಬಾ ಆವರಿಸಿದ ಚಿತ್ರಗಳದ್ದು ಇನ್ನೊಂದು ತೂಕ. ಕಥೆ ಮೂಲ ವಾಲ್ಮೀಕಿ ರಾಮಾಯಣಕ್ಕೆ ಹೆಚ್ಚು ನಿಷ್ಠವಾಗಿದೆ. ಚಿಕ್ಕ ಸುಂದರ ವಾಕ್ಯಗಳು ಮಕ್ಕಳಿಗೆ ಕಥೆಯನ್ನು ಅರ್ಥ ಮಾಡಿಸಲು ಸಹಾಯಕಾರಿಯಾಗಿದೆ. "ಕಾಡಲ್ಲಿ ರಾಕ್ಷಸರು ಇದ್ದಾರೆ ಎಂದು ತಿಳಿದಿದ್ದೂ ಸಹ ರಾಮ ಯಾಕೆ ಕಾಡಿಗೆ ಹೋಗಲು ಒಪ್ಪಿಕೊಂಡ?" "ಕೈಕೇಯಿ ಯಾಕೆ ರಾಮನನ್ನು ಕಾಡಿಗೆ ಕಳುಹಿಸಿದಳು?" ಮುಂತಾದ ಪ್ರಶ್ನೆಗಳನ್ನು ಕೇಳುತ್ತಾ ಮಗಳು ಈ ಪುಸ್ತಕವನ್ನು ಸುಮಾರು ಮೂರು ಬಾರಿ ನನ್ನ ಬಳಿ ಓದಿಸಿ ಕಥೆಯನ್ನು ಹೇಳಿಸಿಕೊಂಡಳು. ಅಲ್ಲದೇ ಇಷ್ಟು ದಿನ "ಕೃಷ್ಣ ನನ್ನ ಫೇವರಿಟ್" ಅನ್ನುತ್ತಿದ್ದವಳು "ನನಗೆ ರಾಮನೂ ಸಹ ಇಷ್ಟ. ನನಗೆ ರಾಮನಂತೆ ಡ್ರೆಸ್ ಮಾಡಬೇಕು" ಎಂದು ಪೀಡಿಸತೊಡಗಿದಳು. ಹೀಗೆ ಈ ಪುಸ್ತಕವನ್ನು ಓದಿದ ಮೇಲೆ ರಾಮನೂ ಸಹ ಇಷ್ಟವಾಗತೊಡಗಿದ.
ಯಾವುದಾದರೊಂದು ವಸ್ತು, ಅದು ಆಟದ ಸಮಾನೋ, ಪುಸ್ತಕವೋ ಇಷ್ಟವಾಯಿತೆಂದರೆ ಎಲ್ಲಿಗೇ ಹೋಗುವುದಿದ್ದರೂ ಅದನ್ನು ತೆಗೆದುಕೊಂಡು ಹೋಗುವುದು ನನ್ನ ಮಗಳ ಅಭ್ಯಾಸ. ಈ ಪುಸ್ತಕವನ್ನು ಓದುತ್ತಿರಬೇಕಾದರೆ ನಮ್ಮ ಕುಟುಂಬದ ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿತ್ತು. ಅಲ್ಲಿಗೂ ಈ ಪುಸ್ತಕವನ್ನು ಒಯ್ದಿದ್ದಳು. ಅಲ್ಲಿ ಸೇರಿದ್ದ ಹಲವು ಜನರು ಈ ಪುಸ್ತಕವನ್ನು ಕೈಗೆತ್ತಿಕೊಂಡಿದ್ದಲ್ಲದೆ ಪುಸ್ತಕ ಕೊಳ್ಳುವ ಬಗೆಯನ್ನು ವಿಚಾರಿಸಿದರು. ಹೀಗೆ ಮಕ್ಕಳಿಗಷ್ಟೇ ಅಲ್ಲದೇ ಹಿರಿಯರನ್ನೂ ಸಹ ಆಕರ್ಷಿಸಿತು ಈ ಪುಸ್ತಕ. ಪುಟ ತುಂಬಾ ಆವರಿಸಿದ ಚಿತ್ರಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಮಕ್ಕಳಿಗಷ್ಟೇ ಅಲ್ಲದೇ ಹಿರಿಯರನ್ನೂ ಸಹ ಆಕರ್ಷಿಸುವಂತೆ ಚಿತ್ರ ಬಿಡಿಸಿದ ನೀರ್ನಳ್ಳಿ ಗಣಪತಿ ಹೆಗಡೆ ಅವರು ಹಾಗೂ ಅಯೋಧ್ಯಾ ಪ್ರಕಾಶನದವರು ಅಭಿನಂದನಾರ್ಹರು.
Comments
Post a Comment