ಬಾಲಿ ಪ್ರವಾಸ ಕಥನ
ಪ್ರವಾಸಿ ಪ್ರಪಂಚ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
ಬಾಲಿಯಲ್ಲಿ ನಡೆದಾಡುತ್ತಿದ್ದರೆ ಹಿಂದೂ ರಾಷ್ಟ್ರದ ಊರೊಂದರಲ್ಲಿ ಓಡಾಡುತ್ತಿರುವ ಅನುಭವವಾಗುತ್ತದೆ. ಇದು ಮನೆಯೋ ದೇವಸ್ಥಾನವೋ ಎಂಬ ಭೇದವೇ ಇಲ್ಲದಂತೆ ಕಟ್ಟಡಗಳು ಕಾಣುತ್ತವೆ. ಅಲ್ಲಲ್ಲಿ ಇರುವ ಪುರಾತನ ದ್ವಾರಗಳು ನಾವು ಯಾವುದೋ ನಾಟಕದ ಸೆಟ್ ನಲ್ಲಿರುವಂತೆ ಭಾಸವಾಗುತ್ತದೆ. ನಮ್ಮ ಡ್ರೈವರ್ ಹೇಳಿದಂತೆ, ಅಲ್ಲಿಯವರು ಮುಖ್ಯವಾಗಿ ಪೂಜಿಸುವುದು ಗಣೇಶ, ಸರಸ್ವತಿ ಹಾಗೂ ಪಾರ್ವತಿಯರನ್ನು. ಗಲ್ಲಿಗಲ್ಲಿಗಳಲ್ಲೂ ಗಣೇಶನ ಮೂರ್ತಿಗಳನ್ನು ಕಾಣಬಹುದು. ಸಾಂಸ್ಕೃತಿಕವಾಗಿ ರಾಮಾಯಣವನ್ನು ನೃತ್ಯದಲ್ಲಿ, ವಿಗ್ರಹಗಳಲ್ಲಿ ಅಳವಡಿಸಿಕೊಂಡಿದ್ದಾರೆ ಆದರೆ ರಾಮ ಕೃಷ್ಣರಿಗೆ ಪೂಜೆ ಇಲ್ಲವಂತೆ. ರಸ್ತೆ ಮಧ್ಯದ ಸರ್ಕಲ್ ಗಳಲ್ಲಿ ಮಹಾಭಾರತದ, ರಾಮಾಯಣದ ಪಾತ್ರಗಳ ವಿಗ್ರಹಗಳು, ದೇವರದ್ದೇ ವಿಗ್ರಹಗಳು ಅಂತ ಏನಿಲ್ಲ, ರಾಕ್ಷಸರ ಹಾಗೂ ಋಷಿಗಳ ಪ್ರತಿಮೆಗಳೂ ಸಹ ಇದ್ದವು.
ಅಲ್ಲಿಯ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ತುಂಬಾ ಸಾಮ್ಯತೆಗಳಿವೆ. ಸನಾತನ ಧರ್ಮವು ಮೂಲತಃ ಪ್ರಕೃತಿಯನ್ನು ಆರಾಧಿಸುವ ಧರ್ಮ. ಹಾಗಾಗಿ ನಮ್ಮ ಹೆಚ್ಚಿನ ದೇವಾಲಯಗಳು ಪ್ರಕೃತಿಯ ಮಧ್ಯದಲ್ಲಿ ಅಂದರೆ ಒಂದೋ ಬೆಟ್ಟದ ಮೇಲೆ ಇಲ್ಲವೇ ನದಿ ತೀರದಲ್ಲಿವೆ. ಇಲ್ಲಿಯೂ ಸಹ ಹೆಚ್ಚಿನ ದೇವಾಲಯಗಳು ಸಮುದ್ರ ದಂಡೆಯಲ್ಲಿ ಹಾಗೂ ಬೆಟ್ಟದ ಮೇಲೆ ಇವೆ. ಇನ್ನು ನಮ್ಮ ದಕ್ಷಿಣ ಕನ್ನಡದಲ್ಲಿರುವಂತೆ ಒಂದು ಕುಟುಂಬಕ್ಕೆ ಸಂಬಂಧಿಸಿದಂತೆ ಹಾಗೂ ಊರಿಗೆ ಸಂಬಂಧಿಸಿದಂತೆ ದೇವಾಲಯಗಳಿವೆಯಂತೆ. ನಮ್ಮೂರಿನಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಉತ್ಸವ ಮೂರ್ತಿ ಊರೊಳಗೆ ಹೋಗಿ ಕಟ್ಟೆ ಪೂಜೆ ನಡೆಸಲು ಅನುಕೂಲವಾಗುವಂತಹ ಕಟ್ಟೆಗಳು ಇರುವಂತೆ ಬಾಲಿಯ ಹಳ್ಳಿಗಳಲ್ಲಿ ಸಹ ಕಟ್ಟೆಗಳಿದ್ದವು. ದೇವಸ್ಥಾನಗಳಲ್ಲಿ ಅವರು ತಮ್ಮ ಸಂಪ್ರದಾಯ ಬದ್ಧವಾದ ದಿರಿಸುಗಳನ್ನು ಅಂದರೆ ಗಂಡಸರು ಪಂಚೆ,ಷರ್ಟ್ ಧರಿಸಿದರೆ, ಹೆಂಗಸರು ಪಂಚೆಯಂತಹ ಬಟ್ಟೆಯ ಮೇಲೆ ಟಾಪ್ ಧರಿಸಿ ತಲೆಯ ಮೇಲೆ ತೆಂಗಿನ ಗರಿಯ ಬುಟ್ಟಿಯಲ್ಲಿ ಹೂವು, ಧೂಪದ ಕಡ್ಡಿ ಮುಂತಾದ ದ್ರವ್ಯಗಳನ್ನು ಕೊಂಡೊಯ್ಯುತ್ತಾರೆ. ದೇವಾಲಯಕ್ಕೆ ಹೋದ ಹೆಂಗಸರು ಹಣೆಯಲ್ಲಿ ಅಕ್ಷತೆಯಂತಹದ್ದನ್ನು ಬೊಟ್ಟಿನಂತೆ ಧರಿಸುತ್ತಾರೆ. ಗಂಡಸರು ದೇವರ ಪ್ರಸಾದವಾಗಿ ಹೂವನ್ನು ಕಿವಿಯಲ್ಲಿ ಧರಿಸುತ್ತಾರೆ. ನಾವು ಹೋದ ಕೆಲವು ದೇವಾಲಯಗಳಲ್ಲಿ ಕಟ್ಟುನಿಟ್ಟಾಗಿ ವಸ್ತ್ರ ಸಂಹಿತೆಯನ್ನು ಅನುಸರಿಸುತ್ತಿದ್ದರು. ಹಾಗಾಗಿ ಯಾವುದೇ ವ್ಯಕ್ತಿ ಹೆಂಗಸರಾಗಲೀ, ಗಂಡಸರಾಗಲೀ ಮೊಣಕಾಲಿನಿಂದ ಕೆಳಗೆ ಕಾಣುವಂತಹ ಬಟ್ಟೆಯನ್ನು ಧರಿಸಿದ್ದರೆ ಅಂತಹವರಿಗೆ ದೇವಾಲಯದವರೇ ಪಂಚೆಯಂತಹ ಬಟ್ಟೆ 'ಸಾರಂಗ್ ' ಅನ್ನು ಧರಿಸಲು ಕೊಡುತ್ತಿದ್ದರು. ಹೆಚ್ಚಿನ ಅಂಗಡಿ, ರೆಸ್ಟೋರೆಂಟ್ ಗಳ ಮುಂದೆ ಸಣ್ಣ ತೆಂಗಿನ ಗರಿಯ ಬುಟ್ಟಿಯಲ್ಲಿ ಹೂವು, ಧೂಪದ ಕಡ್ಡಿಯ ಜೊತೆಗೆ ಬಿಸ್ಕೆಟ್ ಹಾಗೂ ಚಾಕಲೇಟ್ ಅನ್ನು ಕೂಡ ಇಡುತ್ತಿದ್ದರು. ದೇವಾಲಯಗಳ ದೇವರ ವಿಗ್ರಹದ ಮುಂದೆ ನೈವೇದ್ಯಕ್ಕಾಗಿ ಸಹ ಚಾಕಲೇಟ್, ಬಿಸ್ಕೆಟ್ ಇಟ್ಟಿರುವುದನ್ನು ಕಂಡು ಆಶ್ಚರ್ಯ ಪಟ್ಟೆವು. ಇನ್ನೊಂದು ಆಶ್ಚರ್ಯದ ವಿಷಯವೆಂದರೆ ದೇವಾಲಯದೊಳಗೂ ಚಪ್ಪಲಿಯನ್ನು ಹಾಕಬಹುದು. ನಾವು ವಾಪಾಸು ಬರುವ ದಿನ ರಸ್ತೆಯಲ್ಲಿ ಬೈಕ್ ರ್ಯಾಲಿ ಹೋಗುತ್ತಿತ್ತು. ಇದೇನೆಂದು ಡ್ರೈವರ್ ಅನ್ನು ಕೇಳಿದಾಗ ದೇವಾಲಯದ ಜಾತ್ರೆಯಂತಹ ಸಂದರ್ಭದಲ್ಲಿ ಪುಷ್ಕರಿಣಿಯ ಪವಿತ್ರ ಜಲವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಎಂದು ಹೇಳಿದರು. ಹೆಚ್ಚಿನ ಕಟ್ಟಡಗಳ, ರೆಸ್ಟೋರೆಂಟ್ ಗಳ, ಅಂಗಡಿಗಳ ಹೆಸರುಗಳು ಹಿಂದೂ ಹೆಸರುಗಳು. ನಿರ್ಮಲ, ಗಣೇಶ, ಕಲ್ಪತರು ಮುಂತಾದ ಸಂಸ್ಕೃತ ಹೆಸರುಗಳು. ಹೀಗೆ ಬಾಲೀ ಜೀವನದಲ್ಲಿ ನಮ್ಮ ಹಿಂದೂ ಸಂಸ್ಕೃತಿ ಬಹಳಷ್ಟು ಮಿಳಿತವಾಗಿದೆ.
**ಪುರ ತಮನ್ ಆಯುನ್**
ನಾವು ಮೊದಲು ಹೋಗಿದ್ದು 'ಪುರ ತಮನ್ ಆಯುನ್' ಎಂಬ ದೇವಸ್ಥಾನಕ್ಕೆ. ಈ ದೇವಾಲಯವು ಸುಮಾರು ಹತ್ತು ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ಹರಡಿದೆ. ದೇವಾಲಯದಲ್ಲಿ 3 ಭಾಗಗಳಿವೆ. ನಿಸ್ತ ಮಂಡಲ(outer courtyard)(ಹೊರ ಅಂಗಣ), ಮಧ್ಯ ಮಂಡಲ (middle courtyard)(ಮಧ್ಯ ಅಂಗಣ), ಉತ್ತಮ ಮಂಡಲ (main holy courtyard)(ಪವಿತ್ರ ಪ್ರಾಂಗಣ) ಎಂದು. ಪವಿತ್ರ ಪ್ರಾಂಗಣದೊಳಗೆ ವಿದೇಶಿಯರಿಗೆ ಪ್ರವೇಶ ನಿಷಿದ್ಧ. ಈ ದೇವಾಲಯವನ್ನು 1627 ರಲ್ಲಿ ಪ್ರಸಿದ್ಧ ಮೆನ್ಗ್ವಿ ರಾಜ ವಂಶಸ್ಥರು ತಮ್ಮ ಪೂರ್ವಜರ ಆರಾಧನೆಗಾಗಿ ಕಟ್ಟಿಸಿದರಂತೆ. ಪುರ ತಮನ್ ಆಯುನ್ ಎಂದರೆ "ನೀರಿನಲ್ಲಿರುವ ಉದ್ಯಾನ ದೇವಾಲಯ" ಎಂದು ಅರ್ಥ. ಹೆಸರೇ ಹೇಳುವಂತೆ ಈ ದೇವಾಲಯದ ಸುತ್ತಲೂ ತಾವರೆಗಳಿಂದ ಆವೃತವಾದ ಕೊಳವಿದ್ದು ಹಾಗೂ ದೇವಾಲಯದ ಕೊನೆಯ ಪವಿತ್ರ ಪ್ರಾಂಗಣದ ಸುತ್ತ ಮತ್ತೊಂದು ಕೊಳವಿದೆ ಹಾಗೂ ದೇವಾಲಯವು ಮಾವು, ಚಂಪಕ, ಪುನ್ನಾಗದಂತಹ ದೊಡ್ಡ ಮರಗಳಿಂದ ಆವೃತವಾಗಿದೆ. ಮಧ್ಯ ಹಾಗೂ ಹೊರ ಪ್ರಾಂಗಣದ ನೆಲದ ಮೇಲೆ ಹುಲ್ಲುಹಾಸು ಇರುವುದರಿಂದ ಕುಳಿತುಕೊಳ್ಳಲು ಆರಾಮದಾಯಕವಾಗಿತ್ತು.
ಇಲ್ಲಿ ದೇವಾಲಯ ಮಾತ್ರವಲ್ಲದೇ ಇಲ್ಲಿಯ ಇತಿಹಾಸದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಒಂದು ಸಣ್ಣ ಥಿಯೇಟರ್, ರಾಜವಂಶಸ್ಥರ ಬಗ್ಗೆ ಹಾಗೂ ಅಲ್ಲಿನ ಸಾಂಸ್ಕೃತಿಕ ಆಚರಣೆಗಳ ಬಗ್ಗೆ ಫೋಟೋ ಸಹಿತ ವಿವರಣೆಗಳಿದ್ದ ಸಣ್ಣ ಗ್ಯಾಲರಿಯಿದ್ದು ಎಲ್ಲವೂ ಮಾಹಿತಿಯುಕ್ತವಾಗಿತ್ತು. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ ತುಳುನಾಡಿನ ಜಾನಪದ ಆಟವಾದ ಕೋಳಿ ಅಂಕ ಅಥವಾ ಕೋಳಿ ಕಟ್ಟದ ಯಥಾವತ್ ಪ್ರತಿಕೃತಿಯನ್ನು ವಿಶಾಲವಾದ ಜಾಗದಲ್ಲಿ ನಿರ್ಮಿಸಿದ್ದು, ಇದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಾಧ್ಯವಾಗಲಿಲ್ಲ. ಸಮುದ್ರ ಮಥನದ ಸಂದರ್ಭದಲ್ಲಿ ಬಂದ ಸಂಪತ್ತಿನ ಅಧಿದೇವತೆಯಾದ ಶ್ರೀದೇವಿ ಪ್ರತಿಮೆಯು ಸಹ ಇತ್ತು.
**ತನಹ ಲಾಟ್ ಹಾಗೂ ಬುಟು ಬೊಲೊಂಗ್' ದೇವಾಲಯ**
ಪ್ರವೇಶ ದ್ವಾರದಿಂದಲೇ ಕಾಣುವ ಭೋರ್ಗರೆಯುವ ಶುದ್ಧ ನೀಲ ಸಮುದ್ರವನ್ನು ನೋಡಿದಾಗ ಹೋಗಲೇಬೇಕೆಂಬ ತುಡಿತ. ಆದರೆ ನೆತ್ತಿಯ ಮೇಲೆ ಸುಡುತ್ತಿರುವ ಸೂರ್ಯ. ಸಾಯಂಕಾಲದವರೆಗೂ ಸಮಯವಿದ್ದುದರಿಂದ ದೇವಾಲಯದ ಮುಂದಿದ್ದ ಮಂಟಪದಲ್ಲಿ ಕುಳಿತು ಸೂರ್ಯನ ತಾಪ ಕಡಿಮೆಯಾದ ಮೇಲೆ ದೇವಾಲಯದ ಕಡೆಗೆ ಹೆಜ್ಜೆ ಹಾಕಿದೆವು. ಶುದ್ಧ ನೀಲ ಸಮುದ್ರದ ಮಧ್ಯದಲ್ಲಿದ್ದ ದೇವಾಲಯವನ್ನು ನೋಡಿದ ಕೂಡಲೇ ವಾವ್!! ಎಂಬ ಉದ್ಗಾರ ಬಾರದೇ ಇರದು. ಅಷ್ಟು ಅದ್ಭುತವಾಗಿತ್ತು ಆ ಸ್ಥಳ. ಒಮ್ಮೆ ದಟ್ಟ ನೀಲವಾಗಿದ್ದ ಆಗಸ ಕ್ಷಣಾರ್ಧಲ್ಲೇ ಕಪ್ಪು ಮೋಡಗಳಿಂದ ಆವೃತವಾಗಿ ಆಕಾಶ ನೀಲಿಯಿದ್ದುದ್ದೇ ಸುಳ್ಳೆಂಬಂತೆ ಕ್ಷಣಕ್ಕೊಮ್ಮೆ ತನ್ನ ಬಣ್ಣವನ್ನು ಬದಲಾಯಿಸುತ್ತಿತ್ತು. ನೀಲ ತೆರೆಗಳು ದೇವಾಲಯದ ಕಲ್ಲಿನ ಭಿತ್ತಿಗೆ ಬಡಿದು ಬಡಿದು ಸುಸ್ತಾಗಿ ಹಿಂದೆ ಹೋಗುತ್ತಿದ್ದವು. ಕಣ್ಣು ಹಾಯಿಸಿದಷ್ಟೂ ದೂರ ಶುದ್ಧ ನೀಲ ಜಲ, ನೀಲ ಗಗನಕ್ಕೆ ಪೈಪೋಟಿಯನ್ನು ನೀಡುತ್ತಿತ್ತು.
ಈ ದೇವಾಲಯವು ಸಮುದ್ರ ದಡದ ಮೇಲೆ, ಅಲೆಗಳು ಸತತವಾಗಿ ಕಲ್ಲುಗಳಿಗೆ ಬಡಿದು ಉಂಟಾದ ಕೊರೆತದಿಂದ ನಿರ್ಮಿತವಾಗಿದೆ. ದೇವಾಲಯದ ಮೊದಲ ಆವರಣವು ನೆಲದ ಮೇಲೆ ಇದ್ದು, ಎರಡನೆಯ ಆವರಣಕ್ಕೆ ಸುಮಾರು 50 ಮೀಟರ್ ನಷ್ಟು ಅಂತರವನ್ನು ಸಮುದ್ರದಲ್ಲಿ ನಡೆದು ಹೋಗಬೇಕಾಗಿತ್ತು. ಅಲ್ಲಿಯೂ ಸಹ ಪೂಜೆ ನಡೆಯುತ್ತಿತ್ತು. ಕೆಲವು ಸ್ಥಳೀಯರು ಪ್ರವಾಸಿಗರನ್ನು ಅಲ್ಲಿಗೆ ದಾಟಿಸಲು ಸಹಕರಿಸುತ್ತಿದ್ದರು. ದೇವಾಲಯದ ಬಲ ಭಾಗದಲ್ಲಿ ತೆರೆಗಳು ಸತತವಾಗಿ ಬಡಿದು ಕಲ್ಲುಗಳಲ್ಲಿ ಸೇತುವೆಯಂತಹ ರಚನೆ ಉಂಟಾಗಿವೆ. ಎಷ್ಟು ನೋಡಿದರೂ ದಣಿಯದ, ಬಹಳ ಸಮಯವನ್ನು ಅಲ್ಲಿ ಕಳೆದಿದ್ದರೂ ಸಹ ಅಲ್ಲಿಂದ ಎದ್ದು ಹೋಗಲು ಮನಸ್ಸೇ ಬಾರದಷ್ಟು ಅದ್ಭುತವಾಗಿತ್ತು 'ತನಹ ಲಾಟ್ ಹಾಗೂ ಬುಟು ಬೊಲೊಂಗ್' ದೇವಾಲಯ.
**ಉಬುಡು ಅರಮನೆ ಮತ್ತು ಸರಸ್ವತಿ ದೇವಸ್ಥಾನ**
ಉಬುಡು ಅರಮನೆಗೆ ನಾವು ಹೋದ ದಿನ ಜಾತ್ರೆಯೋ, ಹಬ್ಬವೋ ಇದ್ದುದರಿಂದ ಎಲ್ಲಾ ಕಡೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಕೆಲವು ಕಡೆ ತೆಂಗಿನ ಗರಿಗಳನ್ನು ನೇಯ್ದು, ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಅಲ್ಲಿಂದ ಅಂದಾಜು 300m ಅಂತರದಲ್ಲಿದ್ದ ಸರಸ್ವತಿ ದೇವಸ್ಥಾನಕ್ಕೆ ಹೋದೆವು. ದೇವಾಲಯದ ಮಧ್ಯ ಭಾಗದಲ್ಲಿ ತಾವರೆ ಕೊಳವಿದ್ದು , ಸುತ್ತಲೂ ದೇವಾಲಯದ ಪ್ರಾಕಾರವಿದ್ದು ವಿವಿಧ ಪ್ರತಿಮೆಗಳಿಂದ ಆವೃತವಾಗಿದೆ. ನಾವು ಹೋದ ಬಾಲಿಯ ಎಲ್ಲಾ ದೇವಾಲಯಗಳಲ್ಲೂ ಒಳಗಿನ ಆವರಣಕ್ಕೆ ಬಾಲಿಯ ಸ್ಥಳೀಯರನ್ನು ಬಿಟ್ಟು ಉಳಿದವರಿಗೆ ಪ್ರವೇಶವಿರಲಿಲ್ಲ. ಈ ದೇವಸ್ಥಾನಕ್ಕೆ ಬಂದವರೆಲ್ಲರೂ ಅವರು ಕೊಟ್ಟ ಒಂದು ಬಟ್ಟೆಯನ್ನು ಧರಿಸಿಕೊಳ್ಳಬೇಕಿತ್ತು. ದೇವಾಲಯದ ಎದುರಿದ್ದ ತಾವರೆ ಕೊಳ ಅತ್ಯಂತ ಆಕರ್ಷಣೀಯವಾಗಿತ್ತು. ದೇವಾಲಯದ ಪ್ರಾಕಾರದ ಸುತ್ತಲೂ ಕುಳಿತುಕೊಳ್ಳಲು ಉತ್ತಮವಾದ ಆಸನದ ವ್ಯವಸ್ಥೆ ಮತ್ತು ಪೋಟೋ ತೆಗೆದುಕೊಳ್ಳಲು ಬೇಕಾದಂತಹ ಸಿಂಹಾಸನದಂತಹ ಕುರ್ಚಿಗಳು, ಒಟ್ಟಿನಲ್ಲಿ ಪ್ರವಾಸಿಗರು ಖುಷಿಯಿಂದ ಸಮಯ ಕಳೆಯಲು ಬೇಕಾದ ವ್ಯವಸ್ಥೆಗಳಿದ್ದವು.
**ಬಾಲಿ ಜೋಕಾಲಿ**
ಬಾಲಿ ಬೀಚ್ ಗಳಿಗೆ ಹೇಗೆ ಪ್ರಸಿದ್ಧವೋ ಹಾಗೆಯೇ ಜೋಕಾಲಿಗೂ ಪ್ರಸಿದ್ಧ. ನಮ್ಮಲ್ಲಿ ವಿವಿಧ ಚಟುವಟಿಕೆಗಳಿಂದ ಕೂಡಿರುವ ರೆಸಾರ್ಟ್ ಗಳು ಇರುವಂತೆ ಇಲ್ಲೂ ಸಹ ಬೇರೆ ಬೇರೆ ಜನರ ಒಡೆತನದ ಜಾಗಗಳಲ್ಲಿ , ಭತ್ತದ ಗದ್ದೆಗಳಲ್ಲಿ ವಿವಿಧ ಚಟುವಟಿಕೆಗಳಿಂದ ಹಾಗೂ ಸಾಹಸ ಕ್ರೀಡೆಗಳಿಂದ ಕೂಡಿದ ಸ್ಥಳಗಳಿರುತ್ತವೆ. ನಾವು ಮೊದಲೇ ನಮ್ಮ ಡ್ರೈವರ್ ಬಳಿ ನಮಗೆ ಜೋಕಾಲಿ ಮಾತ್ರ ಇರುವಂತಹ ಸ್ಥಳಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದೆವು. ಅದರಂತೆಯೇ ಅವರು ವಿವಿಧ ಬಗೆಯ ಜೋಕಾಲಿಗಳಿರುವ ಒಂದು ಜಾಗಕ್ಕೆ ಕರೆದುಕೊಂಡು ಹೋದರು. ಬಾಲಿಯ ಬೇರೆ ಎಲ್ಲಾ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿಯ ಪ್ರವೇಶ ದರ ಸ್ವಲ್ಪ ದುಬಾರಿಯೇ. ಅಲ್ಲದೇ ಆರೋಗ್ಯ ಸಮಸ್ಯೆಗಳಿರುವವರಿಗೆ, ವಯಸ್ಸಾದವರಿಗೆ, ಮಕ್ಕಳಿಗೆ ಜೋಕಾಲಿಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ. ಬಾಲಿಗೆ ಹೋಗಬೇಕೆಂದು ನಿರ್ಧರಿಸಿದ ದಿನದಿಂದಲೂ ಬಾಲಿ ಜೋಕಾಲಿಯಲ್ಲಿ ಕೂರುವುದು ನನ್ನ ಕನಸಾಗಿತ್ತು. ಕೆಳಗೆ ತೊರೆ, ತಲೆ ಎತ್ತಿದರೆ ನೀಲ ಆಗಸದಲ್ಲಿ ಮಳೆ ಸುರಿಸಲು ಸಿದ್ಧವಾಗಿರುವ ಮೋಡಗಳು, ನಡುವೆ ಮರದಿಂದ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಜೀಕಿದಾಗ.... ವಾಹ್!!! ಎಂತಹ ಸುಂದರ ಅನುಭವ!! ಇನ್ನೇನು ಮೋಡಗಳನ್ನು ಮುಟ್ಟಿ ಬಿಟ್ಟೆನೋ ಎಂಬ ಭಾವನೆ ಮೂಡಿದ್ದು ಸುಳ್ಳಲ್ಲ. ಅಲ್ಲಿದ್ದ ವಿವಿಧ ಬಗೆಯ ಜೋಕಾಲಿಯಲ್ಲಿ ಕುಳಿತು ಪ್ರಕೃತಿ ಮಧ್ಯೆ ಕಳೆದಿದ್ದು ಬದುಕಿನ ಸುಂದರ ಅನುಭವಗಳಲ್ಲೊಂದು.
**ಗೋವಾ ಗಝ**
'ಗೋವಾ ಗಝ' ವು ಗುಹಾಂತರ ದೇವಾಲಯವಾಗಿದ್ದು ಪ್ರಕೃತಿಯ ಮಧ್ಯದಲ್ಲಿದೆ. ಅಲ್ಲಿಗೆ ಹೋಗುವ ದಾರಿ ಥೇಟ್ ನಮ್ಮ ಮಲೆನಾಡಿನಲ್ಲಿ ಸಾಗುವ ದಾರಿಯಂತೆಯೇ ಇತ್ತು. ಸುತ್ತಲೂ ಹಸಿರು ಮರಗಳ ಸಾಲಿನ ನಡುವೆ ಅಲ್ಲಲ್ಲಿ ತಿರುವಿನಿಂದ ಕೂಡಿದ ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಪ್ರಕೃತಿಯ ಮಧ್ಯದಲ್ಲಿ ಗುಹೆಯೊಳಗೆ ಈ ದೇವಾಲಯವಿದೆ. ಸುಮಾರು ಐವತ್ತು ಮೆಟ್ಟಿಲುಗಳನ್ನು ಇಳಿದು ಸಾಗಿದಾಗ ಕೆತ್ತನೆಯಿಂದ ಕೂಡಿದ ಗುಹೆಯಿದೆ. ಇದು ಗಣೇಶನ ದೇವಸ್ಥಾನ. ಗುಹೆಯ ಒಳಗಡೆ ಗಣೇಶನ ವಿಗ್ರದ ಜೊತೆಗೆ ಶಿವಲಿಂಗ ಇತ್ತು. ಅಲ್ಲದೇ ಪೂಜೆ ಮಾಡಿದ ಕುರುಹಾಗಿ ಹೂಗಳು, ನೈವೇದ್ಯಕ್ಕಾಗಿ ಇಟ್ಟ ಚಾಕಲೇಟ್, ಬಿಸ್ಕತ್ ಗಳಿದ್ದವು. ದೇವಾಲಯದ ಹೊರಗಡೆ ತುಂಬಾ ಹಳೆಯ ಮರ ಹಾಗೂ ಪುಷ್ಕರಿಣಿ ಆಕರ್ಷಣೀಯವಾಗಿತ್ತು.
ನಾವು ನೋಡಿದ ಇಷ್ಟು ಪ್ರೇಕ್ಷಣೀಯ ಸ್ಥಳಗಳು ಸಹ ಉಬುಡುವಿನ ಆಸು ಪಾಸಿನಲ್ಲಿ ಇದ್ದವು. ಉಬುಡುವನ್ನು ನಮ್ಮ ಮಲೆನಾಡು ಅಥವಾ ಅರೆ ಮಲೆನಾಡಿಗೆ ಹೋಲಿಸಿದರೆ, ಉಲುವಾಟುವನ್ನು ಕರಾವಳಿಗೆ ಹೋಲಿಸಬಹುದು. ಉಬುಡು ಹಸಿರು ಕಾಡುಗಳಿಂದ ಹಾಗೂ ಹೆಚ್ಚು ಹಳ್ಳಿಗಳಿಂದ ಕೂಡಿದ್ದು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೆ, ಉಲುವಾಟು ಕಡಲತೀರವನ್ನು ಹೊಂದಿದ್ದು ನಗರ ಪ್ರದೇಶವಾಗಿದೆ. ಹಾಗಾಗಿ ಉಬುಡುವಿಗೆ ಹೋಲಿಸಿದರೆ ಉಲುವಾಟು ಸ್ವಲ್ಪ ದುಬಾರಿ.
**ಉಲುವಾಟು ದೇವಾಲಯ**
ಇದು ಎತ್ತರದ ಕಲ್ಲಿನ ಮೇಲೆ ಸಮುದ್ರಕ್ಕೆ ಅಭಿಮುಖವಾಗಿದ್ದು, ಸುತ್ತಲೂ ಕಾಡಿನಿಂದ ಆವೃತವಾಗಿದ್ದು ಶಿವನನ್ನು ಆರಾಧಿಸುವ ದೇವಾಲಯ. ಇಲ್ಲಿ ಮಂಗಗಳ ಕಾಟ ವಿಪರೀತ. ಹಾಗಾಗಿ ಎಷ್ಟು ಜಾಗ್ರತೆಯಿಂದಿದ್ದರೂ ಸಾಕಾಗುವುದಿಲ್ಲ. ನಮ್ಮ ಮೊಬೈಲ್, ಬ್ಯಾಗ್ ಹಾಗೂ ಕನ್ನಡಕದ ಬಗ್ಗೆ ಅತ್ಯಂತ ಎಚ್ಚರ ವಹಿಸಬೇಕಾಗುತ್ತದೆ. ಒಳಗೆ ಪ್ರವೇಶಿಸುತ್ತಿದ್ದಂತೆಯೇ ದಟ್ಟ ಮರಗಳಿಂದ ಕೂಡಿದ ಕಾಡು. ಕಾಡಿನಿಂದ ಕೆಳಗಿಳಿದು ಹೋದರೆ ಸಮುದ್ರ. ಸಮುದ್ರದ ತಟದಲ್ಲಿ ಬೆಟ್ಟ. ಬೆಟ್ಟದ ಮೆಟ್ಟಿಲುಗಳನ್ನು ಏರಿದರೆ ಈ ದೇವಾಲಯ. ಅಲ್ಲದೇ ಬಯಲು ರಂಗ ಮಂದಿರವೂ ಇದೆ. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
**ಪಾಂಡವ ಬೀಚ್**
ನಮ್ಮ ಮಂಗಳೂರಿನ ಬೀಚಿಗೂ ಇಲ್ಲಿಯ ಬೀಚಿಗೂ ಇರುವ ವ್ಯತ್ಯಾಸವೆಂದರೆ ನಮ್ಮಲ್ಲಿ ಕಡಲ ತೀರ ನೆಲಕ್ಕೆ ಸಮಾನಾಂತರವಾಗಿದ್ದರೆ, ಇಲ್ಲಿನ ಕಡಲ ತೀರವನ್ನು ನೋಡಲು ಕಡಿದಾದ ಕಲ್ಲಿನ ಬೆಟ್ಟದಲ್ಲಿ ಇಳಿದು ಇಲ್ಲವೇ ದಟ್ಟ ಕಾಡಿನ ನಡುವೆ ಸಾಗಬೇಕು. ಪಾಂಡವ ಬೀಚ್ ನಲ್ಲಿ ಸಹ ಕಲ್ಲಿನ ಬೆಟ್ಟವನ್ನು ಕಡಿದು ರಸ್ತೆಯನ್ನು ನಿರ್ಮಿಸಿ, ಬೆಟ್ಟದ ಗೋಡೆಯಲ್ಲಿ ಪಂಚ ಪಾಂಡವರ ಹಾಗೂ ಅವರ ತಾಯಿ ಕುಂತಿಯ ಎತ್ತರದ ಮೂರ್ತಿಯನ್ನು ಕೆತ್ತಿದ್ದಾರೆ. ಪಾಂಡವ ಬೀಚ್ ನಲ್ಲಿ ನೀರಿಗಿಳಿಯುವಷ್ಟು ದೂರ ನೈಸರ್ಗಿಕವಾಗಿಯೇ ಸಿಮೆಂಟ್ ಹಾಕಿದಂತೆ ಕಲ್ಲಿನ ಹಾಸು ಇದ್ದುದರಿಂದ ಸಮುದ್ರದ ತೆರೆ ಮರಳಿ ಹೋಗುವಾಗ ಕಾಲಿನ ಅಡಿಯಿರುವ ಮರಳು ಕುಸಿಯುವ ಭಯವಿಲ್ಲದೆ ನಿಂತು ಅಥವಾ ಕುಳಿತು ಆಡಬಹುದಾಗಿತ್ತು. ನಾವು ನೋಡಿದ ಉಳಿದ ಬೀಚ್ ಗಳಿಗೆ ಹೋಲಿಸಿದರೆ ಈ ಬೀಚ್ ನೀರಿನಲ್ಲಿ ಇಳಿದು ಆಟವಾಡಲು ಹೆಚ್ಚು ಆಳವಿಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಬಹಳ ಯೋಗ್ಯವಾಗಿತ್ತು. ಸ್ವಚ್ಛತೆಯ ದೃಷ್ಟಿಯಿಂದ ನೋಡಿದರೆ ನಾವು ನೋಡಿದ ಎಲ್ಲಾ ಬೀಚ್ ಗಳೂ ಸಹ ಅತ್ಯುತ್ತಮವಾಗಿದ್ದವು.
**ಗ್ರೀನ್ ಬೌಲ್ ಬೀಚ್**
ಕಾಡಿನ ಮಧ್ಯೆ ಸುಮಾರು 100 ಮೆಟ್ಟಿಲುಗಳನ್ನು ಇಳಿದರೆ ಈ ಬೀಚ್ ಅನ್ನು ತಲುಪಬಹುದು. ಕಡಲ ತೀರ ಹೆಚ್ಚು ಆಳವಾಗಿತ್ತು. ಅಲ್ಲದೇ ಇದು ಸರ್ಫ್ ಮಾಡಲು ಯೋಗ್ಯವಾದಂತಹ ಬೀಚ್. ಹಾಗಾಗಿ ಹೆಚ್ಚಿನ ಯುವಕರು ಇಲ್ಲಿ ಸರ್ಫ್ ಆಡುತ್ತಿದ್ದರು. ಕ್ಷಣಕ್ಕೊಮ್ಮೆ ರಕ್ಷಣೆಗಾಗಿ ಹೆಲಿಕಾಪ್ಟರ್ ಆಗಸದಲ್ಲಿ ಹಾರಾಡುತ್ತಲೇ ಇತ್ತು. ನಮ್ಮಂತಹವರು ನೀರಿನಲ್ಲಿ ಇಳಿದು ಆಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಅಲೆಗಳು ಸತತವಾಗಿ ಅಪ್ಪಳಿಸಿ ಕಲ್ಲುಗಳು ಗುಹೆಯಂತಹ ವಿನ್ಯಾಸದಲ್ಲಿದ್ದು ನೋಡಲು ಆಕರ್ಷಕವಾಗಿತ್ತು.
**ಮಲಸ್ತಿ ಬೀಚ್**
ಗ್ರೀನ್ ಬೌಲ್ ಬೀಚ್ ನಿಂದ ಮಲಸ್ತಿ ಬೀಚ್ ಗೆ ಹೆಚ್ಚು ಅಂತರವಿರಲಿಲ್ಲ. 'ಮಲಸ್ತಿ ಬೀಚ್' ಆ ದಿನದ ಕೊನೆಯ ಬೀಚ್ ಆದುದರಿಂದ ನೀರಿನಲ್ಲಿ ಆಡೋಣವೆಂದು ನಮ್ಮ ಬಟ್ಟೆಯನ್ನು ಬದಲಾಯಿಸಿ ಕಡಲ ತೀರಕ್ಕೆ ಬಂದಾಗ ತೀರದಲ್ಲೇ ಆಳವಾಗಿದ್ದು, ಅಪಾಯದ ಸೂಚನೆಯನ್ನು ತೋರಿಸುವ ಕೆಂಪು ಬಾವುಟ ತೀರದಲ್ಲೇ ಹಾರಾಡುತ್ತಿತ್ತು. ಹಾಗಾಗಿ ನೀರಿಗಿಳಿಯುವ ಸಾಹಸವನ್ನು ಮಾಡಲಿಲ್ಲ. ನೀರಿಗಿಳಿಯದಿದ್ದರೇನಂತೆ
ನಾವು ತಲುಪುವುದರೊಳಗೆ ಸೂರ್ಯಾಸ್ತವೂ ಆಗಿದ್ದರಿಂದ ಓಕುಳಿಯಾಡಿದಂತೆ ಕೆಂಪು ಬಣ್ಣದ ಚಿತ್ತಾರ ಬಾನಿನಲ್ಲಿ ಮೂಡಿತ್ತು. ಹಿತವಾದ ಗಾಳಿ, ಕಲಾವಿದನ ಪೇಂಟಿಂಗ್ ನಂತೆ ಭಾಸವಾದ ಬಾನು ಸುತ್ತಲಿನ ದೃಶ್ಯ ಮನಮೋಹಕವಾಗಿತ್ತು. ಸ್ವಲ್ಪ ದೂರದಲ್ಲಿ ಹಡಗುಗಿನಂತಹದ್ದೇನನ್ನೋ ನಿರ್ಮಾಣ ಮಾಡುತ್ತಿದ್ದರು. ಹಾಗಾಗಿ ಅದೇನೆಂದು ನೋಡೋಣವೆಂದು ಅತ್ತ ಹೋದೆವು. ಅಲ್ಲಿ ಹೆಲಿಪ್ಯಾಡ್ ಇದ್ದು, ಬಾನಿನಲ್ಲಿ ಹರಡಿದ ಕೆಂಬಣ್ಣ ಸಮುದ್ರದಲ್ಲಿ ಪ್ರತಿಫಲಿಸಿ ಅದ್ಭುತ ದೃಶ್ಯ ವೈಭವವನ್ನೇ ಕಟ್ಟಿಕೊಟ್ಟಿತು. ಹಾಗಾಗಿ ನಾವು ಸಾಧ್ಯವಾದಷ್ಟು ಫೋಟೋ ಹಾಗೂ ವೀಡಿಯೋಗಳನ್ನು ತೆಗೆದುಕೊಳ್ಳುತ್ತಾ, ಹೀಗೆ ಕಣ್ಣು ಹಾಯಿಸಿದಾಗ ವಿದೇಶೀ ಮಾಡೆಲ್ ಗಳು ಸಹ ಬೀಚ್ ನಲ್ಲಿ ತಮ್ಮ ಫೋಟೋಶೂಟ್ ನಡೆಸುತ್ತಿದ್ದರು.
ಕತ್ತಲಾವರಿಸುತ್ತಿದ್ದಂತೆಯೇ ಸುತ್ತಲಿದ್ದ ಹೋಟೇಲ್ ಹಾಗೂ ಪಬ್ ಗಳಲ್ಲಿ ಕಿವಿಗಡಚಿಕ್ಕುವ ಪಾಶ್ಚಾತ್ಯ ಸಂಗೀತ ಆರಂಭವಾಗಿ ವಿದೇಶಿಯರಿಂದ ತುಂಬತೊಡಗಿತು.
ಬಾಲಿ ದ್ವೀಪವಾದ್ದರಿಂದ ವಿವಿಧ ಬೀಚ್ ಗಳು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೇವಾಲಯಗಳನ್ನು ನೋಡಬಹುದು. ಬಾಲಿ ಸಂಪೂರ್ಣವಾಗಿ ಪ್ರವಾಸೋದ್ಯಮದ ಮೇಲೆ ನಿಂತಿರುವುದರಿಂದ ಎಲ್ಲಾ ಕಡೆಯೂ ಪ್ರವೇಶ ಧನವಿರುತ್ತದೆ. ಬೀಚ್ ಗಳಲ್ಲಿಯೂ ಸಹ! ಬಾಲಿಯಲ್ಲಿ ಮಾಂಸಹಾರ ಅಗ್ಗ. ಸಸ್ಯಾಹಾರಕ್ಕೆ ಒಂದಕ್ಕೆ ಎರಡು ಪಟ್ಟು ಹೆಚ್ಚಿನ ಬೆಲೆ. ನಾವು ಸಸ್ಯಾಹಾರಿಗಳಾದ್ದರಿಂದ ಪ್ರತಿಬಾರಿ ಹೋಟೆಲ್ ನಲ್ಲಿ ಆರ್ಡರ್ ಮಾಡುವಾಗಲೂ '"No Chicken, no egg, no mashroom " ಎನ್ನುವುದನ್ನು ಮಂತ್ರದಂತೆ ಪಠಿಸುತ್ತಿದ್ದೆವು. ಇದನ್ನು ಕೇಳಿದೊಡನೆಯೇ ಭೂಮಿಯ ಮೇಲಿನ ವಿಚಿತ್ರವನ್ನು ನೋಡುತ್ತಿರುವಂತೆ ಅವರ ಹುಬ್ಬುಗಳು ಅವರಿಗಿಲ್ಲದೆಯೇ ಮೇಲೇರಿಬಿಡುತ್ತಿದ್ದವು. ಇಲ್ಲಿ ಬೇರೆ ಬೇರೆ ಪ್ರದೇಶಗಳನ್ನು ನೋಡಲು ಬಾಡಿಗೆಗೆ ಸ್ಕೂಟಿ ಹಾಗೂ ಬೈಕ್ ಗಳು ಸಿಗುತ್ತವೆ. ಅಲ್ಲದೇ ನಮ್ಮಲ್ಲಿ ಕಾರ್ ಬಾಡಿಗೆಗೆ ಕಿಲೊಮೀಟರ್ ಗೆ ತಕ್ಕಂತೆ ಇದ್ದರೆ ಇಲ್ಲಿ ಗಂಟೆಗಳ ಲೆಕ್ಕದಲ್ಲಿ ಸಿಗುತ್ತವೆ. ಹಾಗಾಗಿ ನಮ್ಮೂರಿಗೆ ಹೋಲಿಸಿದರೆ ಇಲ್ಲಿ ಪ್ರಯಾಣವು ಅಗ್ಗ. ನಮ್ಮ ಅನುಭವಕ್ಕೆ ಬಂದಂತೆ ಇಲ್ಲಿನ ಜನರು ಪ್ರಾಮಾಣಿಕರು. ನಮ್ಮ ಐದು ದಿನದ ಪ್ರವಾಸದಲ್ಲಿ ನಮ್ಮನ್ನೂ ಸೇರಿದಂತೆ ಹಲವು ವಿದೇಶಿಯರು ಹಣ ಪಾವತಿಸುವಾಗ ಗೊಂದಲಗೊಂಡು ಪರದಾಡುತ್ತಿದ್ದರು. ಅಲ್ಲಿ ಅವರಿಗೆ ನಮ್ಮನ್ನು ಮೋಸಗೊಳಿಸಲು ಅವಕಾಶವಿದ್ದರೂ ಸಹ ನಮಗೆ ಎಲ್ಲೂ ಮೋಸವಾಗಲಿಲ್ಲ. ನಮಗೆ ಸಿಕ್ಕಿದ ಡ್ರೈವರ್ ಗಳೆಲ್ಲರೂ ಪ್ರಾಮಾಣಿಕರಾಗಿದ್ದರು. ಒಮ್ಮೆಯಂತೂ ನನ್ನ ಗಂಡನಾ ಸಾಕ್ಸ್ ಕಾರಿನಲ್ಲೇ ಬಾಕಿಯಾಗಿತ್ತು. ಸ್ವಲ್ಪ ದೂರ ಹೋದ ಡ್ರೈವರ್ ಹಿಂತಿರುಗಿ ಬಂದು ಆ ಸಾಕ್ಸ್ ಅನ್ನು ನಮಗೆ ಮರಳಿಸಿದರು. ಅಲ್ಲದೇ ಅಲ್ಲಿನ ಜನ ತುಂಬಾ ಸರಳ ಸ್ವಭಾವದವರು. ನಮ್ಮನ್ನು ಸ್ವಾಗತಿಸುವಾಗ, ಧನ್ಯವಾದ ಹೇಳುವಾಗ ನಡು ಬಗ್ಗಿಸಿ ತಲೆ ಬಾಗಿ ನಮಸ್ಕರಿಸುತ್ತಿದ್ದರು.
ಆದರೆ ಕಿರಿಕಿರಿ ಉಂಟುಮಾಡಿದ್ದು ಅಲ್ಲಿನವರ ವಿಪರೀತ ಸಿಗರೇಟು ಸೇವನೆ. ಸಿಗರೇಟು ಸೇದದಿದ್ದರೆ ಕೈಕಾಲೇ ಆಡುವುದಿಲ್ಲವೇನೋ ಎಂಬಂತೆ ವಾಹನ ಚಲಾಯಿಸುವಾಗಲೂ ಸಿಗರೇಟ್, ರಸ್ತೆ ಕಾಮಗಾರಿ ನಡೆಸುತ್ತಿದ್ದಾಗಲೂ ಸಿಗರೇಟ್, ಮರದ ಕೆತ್ತನೆ ಕೆಲಸ ಮಾಡುವಾಗಲೂ ಸಿಗರೇಟ್ ಹೀಗೆ ಎಲ್ಲಾ ಕೆಲಸ ಮಾಡುವಾಗಲೂ, ಸಾರ್ವಜನಿಕ ಸ್ಥಳಗಳಲ್ಲಿಯೂ ಸಹ ಸಿಗರೇಟ್ ಸೇದುತ್ತಿದ್ದರು.
ಅಲ್ಲಿನ ಹೆಚ್ಚಿನ ಕಟ್ಟಡಗಳ ಹೊರ ರಚನೆ ದೇವಾಲಯದಂತೆ ಕಂಡು ಬರುತ್ತಿತ್ತು. ಇತ್ತೀಚಿಗೆ ನಿರ್ಮಾಣವಾಗುತ್ತಿದ್ದ ಹೊಸ ಕಟ್ಟಡಗಳು ಸಹ ಹಳೆ ವಿನ್ಯಾಸವನ್ನು ಹೊಂದಿದ್ದವು. ಹೀಗೆ ಹೊಸ ಚಿಗುರು, ಹಳೆ ಬೇರು ಎಂಬಂತೆ ಜನರು ತಮ್ಮತನವನ್ನು ಕಳೆದುಕೊಳ್ಳದೇ ಆಧುನಿಕತೆಗೆ ತೆರುಕೊಳ್ಳುತ್ತಿದ್ದರು. ಹೀಗೆ ಬಾಲಿಯ ಪ್ರವಾಸವು ಬಹುಕಾಲ ನೆನಪಿನಲ್ಲಿ ಉಳಿಯುಂತಾಯಿತು.
Comments
Post a Comment