ಓದಿನ ಸುಖ "ಗೂಡಿನಿಂದ ಬಾನಿಗೆ"
ಪುಸ್ತಕದ ಹೆಸರು: ಗೂಡಿನಿಂದ ಬಾನಿಗೆ
ಲೇಖಕರು: ಹೇಮಾ ಹಟ್ಟಂಗಡಿ
ಆಶಿಶ್ ಸೇನ್
ಅನುವಾದಕರು: ಸಂಯುಕ್ತಾ ಪುಲಿಗಲ್
ಸಾಮಾನ್ಯವಾಗಿ ಉದ್ಯಮವೆಂದರೆ ಪುರುಷ ಪ್ರಾಬಲ್ಯವಿರುವ ಕ್ಷೇತ್ರ ಎಂಬುದು ನಮ್ಮೆಲ್ಲರ ಅನಿಸಿಕೆ. ವಿದ್ಯಾಭ್ಯಾಸ ಗಳಿಸಿದ ಮಹಿಳೆ ಇಂದು ಎಲ್ಲಾ ರಂಗದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದರೂ ಉದ್ಯಮಪತಿಗಳಾಗುವುದು, ಒಂದು ಕಂಪೆನಿಯ CEO ಆಗುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲೂ 90ರ ದಶಕದಲ್ಲಿ, ಪುರುಷ ಪ್ರಾಬಲ್ಯವಿರುವ ವಿದ್ಯುತ್ ಉದ್ದಿಮೆಯಲ್ಲಿ ಯಶ ಗಳಿಸುವುದಂತೂ ಸಾಹಸವೇ ಸರಿ. ಅಂತಹ ಒಬ್ಬ ಉದ್ಯಮಿ, ಸಾಧಕಿ ಮಹಿಳೆಯು ಬೆಳೆದು ಬಂದ ಪಥದ ಕಥನವೇ 'ಗೂಡಿನಿಂದ ಬಾನಿಗೆ' ಪುಸ್ತಕ. ಇದು Lift off ಎಂಬ ತಾಂತ್ರಿಕ ಉದ್ಯಮಶೀಲತೆಯ ಕುರಿತಾದ ಪುಸ್ತಕದ ಅನುವಾದ.
1988ರಲ್ಲಿ ಹೇಮಾ ಹಟ್ಟಂಗಡಿಯವರ ಮಾವನವರಾದ(ಗಂಡನ ತಂದೆ) ವಸಂತ್ ರಾವ್ ಅವರು 'ಎನರ್ಕಾನ್ ಸಿಸ್ಟಮ್ಸ್ ' ಅನ್ನು ಸ್ಥಾಪಿಸಿದರು. ವಿದ್ಯುಚ್ಛಕ್ತಿ ನಿರ್ವಹಣಾ ಮಾಪನ ಮತ್ತು ತಂತ್ರಾಂಶವು ಈ ಸಂಸ್ಥೆಯ ಉತ್ಪನ್ನವಾಗಿತ್ತು. ಅವರು ಒಬ್ಬ ಪ್ರತಿಭಾವಂತ ತಂತ್ರಜ್ಞಾನಿ, ಸಂಶೋಧಕರಾಗಿದ್ದರು. ಒಬ್ಬ ದೂರದೃಷ್ಟಿಯುಳ್ಳ ತಾಂತ್ರಿಕ ಆಡಳಿತಗಾರರಾಗಿದ್ದರು. ವಸಂತ್ ರಾವ್, ತಮ್ಮ ಐವತ್ತೆರಡನೇ ವಯಸ್ಸಿನವರೆಗೂ ಅಂಚೆ ಮತ್ತು ತಂತಿ ಇಲಾಖೆಯ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದರು. ಐವತ್ತೆರಡರಲ್ಲಿ ತಮ್ಮ ಸುರಕ್ಷಿತ ವೇತನ ಮತ್ತು ಸವಲತ್ತುಗಳನ್ನು ತೊರೆದು ಅಕಾಲಿಕ ನಿವೃತ್ತಿ ಪಡೆದು ಉದ್ಯಮಿಯಾಗಬೇಕೆಂದು ನಿರ್ಧರಿಸಿ ಕಂಪೆನಿಯನ್ನು ಸ್ಥಾಪಿಸಿದರು. ತಮ್ಮ ನಿವೃತ್ತಿಯ ಮೊತ್ತದ ಉಳಿತಾಯವನ್ನು ಹೂಡಿ ತಮ್ಮ ಹಿರಿಯ ಮಗ ಅಶೋಕ್ ಮತ್ತು ಕಿರಿಮಗ ಆನಂದರೊಡಗೂಡಿ ಉದ್ಯಮವನ್ನು ಪ್ರಾರಂಭಿಸಿದರು. ಅದು ವಿದ್ಯುತ್ ಪ್ರವಾಹ ಸ್ಥಿರಗೊಳಿಸುವ ಡಿಜಿಟಲ್ ಉತ್ಪನ್ನಗಳನ್ನು (voltage stabilizer) ತಯಾರಿಸುವ ಉದ್ಯಮವಾಗಿತ್ತು. ವೋಲ್ಟೇಜ್ ಸ್ಟೆಬಿಲೈಸರ್‌ನಿಂದ ಮೊದಲಾದ ಉದ್ಯಮವು ವಿದ್ಯುಚ್ಛಕ್ತಿ ನಿಯಂತ್ರಕ ಕೇಂದ್ರವಾದ ಕಾರ್ಖಾನೆಯಾಗಿ ಬೆಳೆಯಿತು. ಸ್ಫೋಟಿಸುತ್ತಿರುವ ಭಾರತದ ಜನಸಂಖ್ಯೆ ಮತ್ತು ಕೈಗಾರಿಕೆಗಳ ವೇಗದ ಬೆಳವಣಿಗೆಯ ಕಾರಣದಿಂದ ವಿದ್ಯುಚ್ಛಕ್ತಿ ನಿಯಂತ್ರಕ ಉತ್ಪನ್ನಗಳ ಬೇಡಿಕೆ ಈಗಿರುವ ಸರಬರಾಜಿನ ದುಪ್ಪಟ್ಟಾಗುತ್ತದೆ ಎಂದು ವಸಂತ್ ರಾವ್ ಮುಂದಾಲೋಚಿಸಿದ್ದರು. ಹೇಮಾ ಅವರು ಕಲ್ಕತ್ತಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಿಂದ ವ್ಯಾಪಾರೋದ್ಯಮದಲ್ಲಿ ಎಂಬಿಎ ಪಡೆದಿದ್ದರು. ಮುಂದೆ ಹೇಮಾ ಅವರ ಪತಿ ಅಶೋಕ್ ಉತ್ಪನ್ನಗಳ ಸಂಶೋಧನೆ, ತಯಾರಿಕೆಯ ಬಗ್ಗೆ ಗಮನ ಕೊಡುತ್ತಾ CTO ಆದರೆ, ಹೇಮಾ ಅವರು CEO ಆಗಿ ತಮ್ಮ ದೂರದೃಷ್ಟಿ, ಬದ್ಧತೆ ಹಾಗೂ ಸತತ ಪರಿಶ್ರಮದಿಂದ
ಉದ್ಯಮವನ್ನು ಯಶಸ್ಸಿನತ್ತ ಕೊಂಡೊಯ್ದರು. ಹೀಗೆ ವಿದ್ಯುಚ್ಛಕ್ತಿ ಮಾಪನಗಳ ಸಂಸ್ಥೆಯಿಂದ ವಿದ್ಯುಚ್ಛಕ್ತಿ ದಕ್ಷತೆಯ ಪರಿಣಿತನಾಗುವತ್ತ ಕನ್ಸರ್ವ್ ಬೆಳೆದ ಕಥೆಯೇ 'ಗೂಡಿನಿಂದ ಬಾನಿಗೆ' ಪುಸ್ತಕ.
ಇವರ ಬಳಕೆದಾರರು ವಾಣಿಜ್ಯ ಮತ್ತು ಕೈಗಾರಿಕಾ ವಿದ್ಯುಚ್ಛಕ್ತಿ ಬಳಕೆದಾರರು. ಉದಾಹರಣೆಗೆ ವಾಣಿಜ್ಯ ಕಾಂಪ್ಲೆಕ್ಸ್ ಗಳು, ಶಾಪಿಂಗ್ ಮಾಲುಗಳು, ಸಿಮೆಂಟ್, ಕಾಗದ, ಬಟ್ಟೆ, ಉಕ್ಕಿನ ಫ್ಯಾಕ್ಟರಿಗಳು. ಬಳಕೆದಾರರಿಗೆ, ವಿತರಕರಿಗೆ ಹಾಗೂ ಉದ್ಯೋಗಿಗಳ ನಡುವೆ ಉತ್ತಮ ರೀತಿಯ ಸಂಬಂಧಗಳನ್ನು ಬೆಸೆದ ಬಗ್ಗೆ, ಮೀಟರ್ ತಯಾರಿಕೆಯ ಕಂಪೆನಿ ಎನ್ನುವುದರ ಜಾಗದಲ್ಲಿ ವಿದ್ಯುಚ್ಛಕ್ತಿಯ ಸಮಗ್ರ ಪರಿಹಾರ ರೂಪಿಸುವ ಸಂಸ್ಥೆ ಎನ್ನುವಂತೆ ಬ್ರಾಂಡ್ ಮಾಡಿಕೊಂಡದ್ದು ಹೇಗೆ ಎಂಬುದನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. 80 ರ ದಶಕದಲ್ಲಿ ಮನೆಯ ಮಹಡಿಯ ಮೇಲಿನ ಗ್ಯಾರೇಜಿನಂತಹ ಸ್ಥಳದಲ್ಲಿ ಕೈ ಎಣಿಕೆಯಷ್ಟು ಜನರು ಅಸೆಂಬ್ಲಿ ಮತ್ತು ಪರೀಕ್ಷೆ ಮಾಡುವಂತಹ ರೀತಿಯಲ್ಲಿ ಹುಟ್ಟಿದ ಸಂಸ್ಥೆ ಹೇಗೆ ಪ್ರಭಾವಿಯಾಗಿ ಬೆಳೆಯಿತು ಎಂಬುದನ್ನು ಓದಿದಾಗ ಹೇಮಾ ಹಾಗೂ ಅಶೋಕ್ ಅವರ ವ್ಯಕ್ತಿತ್ವದ ಪರಿಚಯ ನಮಗಾಗುತ್ತದೆ. ಭಾರತದಲ್ಲಿ ಭ್ರಷ್ಟಾಚಾರವಿಲ್ಲದೆ ವ್ಯಾಪಾರ ಮಾಡುವುದೊಂದೇ ಅಲ್ಲ, ಅದನ್ನು ಅತ್ಯುತ್ತಮವಾಗಿ ಒಳ್ಳೆಯ ಮಾರಾಟ ಮತ್ತು ಲಾಭದ ಜೊತೆ ಮಾಡಬಹುದು ಎನ್ನುವುದನ್ನು ಹೇಮಾ, ಅಶೋಕ್ ತೋರಿಸಿಕೊಟ್ಟಿದ್ದಾರೆ.
ವಿವಿಧ ಸ್ತರದ ಉದ್ಯೋಗಿಗಳ ಸಂದರ್ಶನದ ಸಾರಾಂಶವು ಸಂಸ್ಥೆಯ ಸಕಾರಾತ್ಮಕ ಗುಣಗಳನ್ನು ಹೇಳುತ್ತವೆ. ಬೇರೆ ಯಾವುದೇ ಕಂಪೆನಿಗಳಲ್ಲಿ ಇರದಿರುವ ಅವಕಾಶಗಳು ಹೇಗೆ ಕನ್ಸರ್ವ್ ನಲ್ಲಿ ಇದ್ದವು ಎಂಬುದನ್ನು ವಿವರಿಸಿದ್ದಾರೆ. ಕೇವಲ ಮೇಲಾಧಿಕಾರಿ, ಉದ್ಯೋಗಿ ಎಂಬ ಸಂಬಂಧವಲ್ಲದೇ ಹೇಗೆ ಕುಟುಂಬದ ಸದಸ್ಯರಂತೆ ಇದ್ದರು ಎಂಬುದನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ಅಲ್ಲದೇ ಎಷ್ಟೋ ಪುರುಷ ಉದ್ಯೋಗಿಗಳ ಸಂಗಾತಿಗಳು ಅತ್ಯುತ್ತಮ ಹಾಗೂ ಸೂಕ್ತ ಶಿಕ್ಷಣ ಪಡೆದು ಗೃಹಿಣಿಯರಾಗಿದ್ದಾಗ ಅವರನ್ನು ಹುರಿದುಂಬಿಸಿ ತಮ್ಮ ಕಂಪೆನಿಯಲ್ಲಿ ಅವರಿಗೆ ಸೂಕ್ತವಾದ ಉದ್ಯೋಗವನ್ನು ನೀಡಿ ಪ್ರೋತ್ಸಾಹಿಸಿದವರು ಹೇಮಾ ಅವರು. ಹೀಗೆ ದಂಪತಿಗಳಿಬ್ಬರೂ ಒಟ್ಟಿಗೇ ಒಂದೇ ಕಂಪೆನಿಯಲ್ಲಿ ದುಡಿಯುವುದನ್ನು ಪ್ರೋತ್ಸಾಹಿಸದ ಇತರ ಕಂಪೆನಿಗಳಿಗಿಂತ ಕನ್ಸರ್ವ್ ನ ಕೆಲಸದ ಸಂಸ್ಕೃತಿ ವಿಭಿನ್ನವಾಗಿತ್ತು ಹಾಗೂ ನಾಯಕನೆಂದರೆ ತಾನೊಬ್ಬನೇ ಬೆಳೆಯುವುದಿಲ್ಲ, ಬದಲಿಗೆ ತನ್ನ ಜೊತೆಗೆ ಇತರರನ್ನು ಬೆಳೆಸುವುದಾಗಿದೆ ಎಂಬ ಮಾತಿಗೆ ಹೇಮಾ ಅವರು ಉತ್ತಮ ಉದಾಹರಣೆಯಾಗಿದ್ದರು ಎಂಬುದು ಪುಸ್ತವನ್ನು ಓದಿದಾಗ ತಿಳಿಯುತ್ತದೆ.
ಇಷ್ಟೆಲ್ಲಾ ಯಶಸ್ಸು ಪಡೆದರೂ ಹೇಮಾ ಅವರಿಗೊಂದು ತಪ್ಪಿತಸ್ಥ ಭಾವನೆ ಕಾಡುತ್ತಿತ್ತು. ಅದು ಅಮ್ಮನಾಗಿ ತನ್ನ ಸ್ಥಾನಕ್ಕೆ ನ್ಯಾಯ ಒದಗಿಸಿದ್ದೇನೆಯೇ ಎಂಬುದು. ಮಕ್ಕಳು ಗೂಡು ಬಿಟ್ಟು ಹಾರುವ ಮುನ್ನ ತಾನು ಅವರೊಂದಿಗಿಷ್ಟು ಸಮಯವನ್ನು ಕಳೆಯಬೇಕೆಂದು ಬಯಸಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡುತ್ತಾರೆ.
ಮುಂದೆ 2009ರಲ್ಲಿ, ಕನ್ಸರ್ವ್ ಸಂಸ್ಥೆಯು ಷ್ನೇಡರ್ ಎಲೆಕ್ಟ್ರಿಕ್ ಜೊತೆಗೆ ವಿಲೀನಗೊಂಡಿತು. ತದನಂತರ ಹೇಮಾ ಹಟ್ಟಂಗಡಿ ಸಮಾಜ ಸೇವೆ, ಸಮುದಾಯಿಕ ಕೆಲಸಗಳತ್ತ ಗಮನ ಹರಿಸಿದರು. ಕನ್ಸರ್ವ್‌ನ ವ್ಯವಸ್ಥೆ, ಸಂಸ್ಥೆಯ ಕಾರ್ಯ ಚಟುವಟಿಕೆಗಳು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಪಠ್ಯದ ಭಾಗವಾಗಿತ್ತು. ಭಾರತದ ಸಂಸ್ಥೆಯೊಂದಕ್ಕೆ ಇದೊಂದು ಅಪರೂಪದ ಮನ್ನಣೆಯೇ ಸರಿ. ಗಟ್ಟಿಮನಸ್ಸು ಮತ್ತು ನಿರ್ಧಾರಗಳ ಒಂದು ಸ್ಫೂರ್ತಿದಾಯಕ ಕಥೆಯಾದ 'ಗೂಡಿನಿಂದ ಬಾನಿಗೆ' ಪುಸ್ತಕವು ಸ್ತ್ರೀ ಸಬಲೀಕರಣಕ್ಕೆ ಅತ್ಯುತ್ತಮ ಮಾದರಿಯಾಗಿದೆ.
Comments
Post a Comment