ರೈಲಲ್ಲ ಇದು ಮಂಚ!!
ಮಗಳಿಗೆ ಎರಡೂವರೆ ವರ್ಷವಾದಾಗ, ಮಗಳನ್ನು ಕರೆದಕೊಂಡು ದೂರ ಎಲ್ಲೂ ಪ್ರವಾಸ ಹೋಗದ ನಾವು ಕೇರಳದ ಅಲೆಪ್ಪಿ ಹಾಗೂ ಮುನ್ನಾರ್ ಗೆ ಹೋಗಬೇಕೆಂದು ನಿರ್ಧರಿಸಿದೆವು. ನಾವು ಹೇಳಿದ್ದೆಲ್ಲವನ್ನು ಮಗಳು ಅರ್ಥ ಮಾಡಿಕೊಳ್ಳುತ್ತಿದ್ದರಿಂದ ವಾರದ ಮುಂಚೆಯೇ ರೈಲಿನಲ್ಲಿ ಹೋಗುವುದು ಎಂದು ನಮ್ಮ ಪ್ರವಾಸದ ಬಗ್ಗೆ ಅವಳಿಗೆ ಅರ್ಥವಾಗುವಂತೆ ವಿವರಿಸಿದ್ದೆ. ಅವಳೂ ಕೂಡ ರೈಲಿನಲ್ಲಿ ಹೋಗಲು ಉತ್ಸಾಹದಿಂದಲೇ ಇದ್ದಳು.
ಹೋಗುವ ದಿನ ಬಂದೇ ಬಿಟ್ಟಿತು. ಬ್ಯಾಗ್ ಪ್ಯಾಕಿಂಗ್
ಆದಿಯಾಗಿ ಎಲ್ಲಾ ತಯಾರಿಯೂ ಮುಗಿದಿತ್ತು. ಸಮಯಕ್ಕೆ ಸರಿಯಾಗಿ ರೈಲ್ವೇ ಸ್ಟೇಷನ್ ತಲುಪಿದೆವು. ಆದರೆ
ನಮ್ಮ ರೈಲು ಮಾತ್ರ ಒಂದೂವರೆ ಘಂಟೆ ತಡವಾಗಿ ಬರುವುದೆಂದು ತಿಳಿಯಿತು. ನಮ್ಮ ದೊಡ್ಡ ಬ್ಯಾಗ್ ಗಳ ಜೊತೆ,
ಅಲ್ಲಿ ಇಲ್ಲಿ ಓಡುವ ಮಗಳನ್ನು ಸಂಭಾಳಿಸುವುದೇ ನಮಗೆ ಬಹು ದೊಡ್ಡ ಕೆಲಸವಾಯಿತು. ಬೇರೆ ಕಡೆಗೆ ಹೋಗುವ
ಮತ್ತು ಬರುವ ರೈಲುಗಳನ್ನು ತೋರಿಸುತ್ತಾ ಸಮಯವನ್ನು ಕಳೆದೆವು. ಬೇರೆ ರೈಲು ತೋರಿಸಿ ನಾವೂ ಕೂಡ ಅದರಲ್ಲಿ
ಹೋಗೋಣ ಎಂದು ಹೇಳಲು ಶುರುಮಾಡಿದಳು. ಅಂತೂ ನಮ್ಮ ರೈಲು ಎರಡು ಘಂಟೆ ತಡವಾಗಿ ಬಂತು. ನಮ್ಮ ಭೋಗಿಯನ್ನು
ಹಾಗೂ ಸೀಟ್ ಹುಡುಕಿ ಬ್ಯಾಗ್ ಗಳನ್ನು ಇಟ್ಟೆವೋ ಇಲ್ಲವೋ ಮಗಳು 'ಇದು ರೈಲಲ್ಲಾ ಮಂಚ' ಎಂದು ಒಂದೇ ಸಮನೆ
ಅಳಲು ಶುರುಮಾಡಿದಳು. ರಾತ್ರಿಯ ರೈಲು ಪ್ರಯಾಣವಾದ್ದರಿಂದ ರೈಲಿನಲ್ಲಿದ್ದವರೆಲ್ಲಾ ನಿದ್ದೆಯಲ್ಲಿದ್ದರು.
ಮಗಳ ಅಳುವನ್ನು ಕೇಳಿ ಎಲ್ಲರೂ ನಮ್ಮನ್ನೇ ನೋಡಲು ಶುರುಮಾಡಿದರು. ನಮಗೆ ಕಸಿವಿಸಿಯಾಗತೊಡಗಿತು. ಏನೇ
ಸಮಾಧಾನ ಮಾಡಿದರೂ ಇವಳ ಅಳು ನಿಲ್ಲುತ್ತಿಲ್ಲ. 'ಇಲ್ಲಿ ಬೇಡ. ಮನೆಗೆ ಹೋಗೋಣ' ಎಂದು ಮತ್ತೊಮ್ಮೆ ದೊಡ್ಡ
ಧ್ವನಿಯಲ್ಲಿ ಅಳು. ಇವಳು ಯಾಕೆ ಹೀಗೆ ಅಳುತ್ತಿದ್ದಾಳೆ ಎಂದು ನಾನು ಯೋಚಿಸತೊಡಗಿದೆ. ಮತ್ತೆ ನೋಡಿದರೆ
ಆಗಿದ್ದಿಷ್ಟೆ. ಒಮ್ಮೆ ಸಿಟಿ ಸೆಂಟರ್ ಗೆ ಕರೆದುಕೊಂಡು ಹೋಗಿದ್ದಾಗ ಮಕ್ಕಳ ಆಟದ ರೈಲಿನಲ್ಲಿ ಕೂರಿಸಿಕೊಂಡು
ಹೋಗಿದ್ದೆ. ಅವಳು ರೈಲು ಅಂದರೆ ಹಾಗೆಯೇ ಇರುತ್ತದೆ ಎಂದು ತಿಳಿದುಕೊಂಡು ಬಿಟ್ಟಿದ್ದಳು. ಮತ್ತೆ ಯಾವತ್ತೂ
ನಿಜವಾದ ರೈಲನ್ನು ನೋಡಿರಲಿಲ್ಲ. ಅವಳ ಪುಸ್ತಕದ ಚಿತ್ರಗಳಲ್ಲಿ ಹಾಗೂ ಕಾರ್ಟೂನ್ ಗಳಲ್ಲಿ ನೋಡಿದ್ದಷ್ಟೆ.
ಈಗ ನಿಜವಾದ ರೈಲು ಅವಳ ಕಲ್ಪನೆಯ ರೈಲಿನೊಂದಿಗೆ ತಾಳೆಯಾಗಲಿಲ್ಲ. ಹಾಗಾಗಿ ಅಳುತ್ತಿದ್ದಾಳೆ ಎಂದು ತಿಳಿಯಿತು.
ಅಷ್ಟು ಹೊತ್ತಿಗೆ ರೈಲು ಕೂಡ ಸೀಟಿಯನ್ನ ಊದುತ್ತಾ ಮುಂದೆ ಹೋಗತೊಡಗಿತು. ಆಗಲೇ ಅವಳ ಅಳು ನಿಂತಿದ್ದು.
ನಾವು ಸಮಾಧಾನದ ನಿಟ್ಟುಸಿರನ್ನು ಬಿಟ್ಟೆವು. ನಂತರ ಅವಳನ್ನು ನಿದ್ದೆ ಮಾಡಿಸುವುದೇ ಸವಾಲಿನ ಕೆಲಸವಾಯಿತು.
ಸುಮಾರು ಸಮಯದವರೆಗೆ ಕಿಟಕಿಯಿಂದ ಹೊರ ನೋಡುತ್ತಾ, ಪ್ರಶ್ನೆಗಳನ್ನು ಕೇಳುತ್ತಾ ತಡರಾತ್ರಿಯ ಹೊತ್ತಿನಲ್ಲಿ
ನಿದ್ದೆ ಮಾಡಿದಳು. ಹೀಗೆ ಮಗಳ ಮೊದಲ ರೈಲು ಪ್ರಯಾಣ ನಮಗೆ ಅವಿಸ್ಮರಣೀಯ ಅನುಭವವಾಯಿತು.
ಮರುದಿನ ಬೆಳಿಗ್ಗೆ ಎದ್ದು ಕೊಚ್ಚಿಯಲ್ಲಿ ಇಳಿದು ಒಂದು ಹೊಟೇಲ್ ನಲ್ಲಿ ಬೆಳಗ್ಗಿನ ತಿಂಡಿ ಸೇವಿಸಿದೆವು. ಮಗಳಿಗೆ ತಿಂಡಿ ತಿನ್ನಿಸಲು ಬಹಳ ಸಮಯ ಹಿಡಿಯುವುದರಿಂದ ಪಾರ್ಸೆಲ್ ತೆಗೆದುಕೊಂಡು ಕಾರ್ ನಲ್ಲೇ ತಿಂಡಿ ತಿನ್ನಿಸುತ್ತಾ, ಮಗಳಿಗೆ ಕಥೆಯನ್ನು ಹೇಳುತ್ತಾ, ಹಾಡನ್ನು ಹಾಡುತ್ತಾ ಅಲೆಪ್ಪಿಗೆ ಸಾಗಿದೆವು. ಮೊದಲೇ ಬುಕ್ ಮಾಡಿದ್ದ 'Lake Canopy' ರೆಸಾರ್ಟ್ ನ್ನು ತಲುಪಲು ಗೂಗಲ್ ಮ್ಯಾಪ್ ಹಾಕಿ ಸಂದಿ ಗೊಂದಿಯ ರಸ್ತೆಗಳಲ್ಲಿ ಸಾಗಿ ಇನ್ನೇನು ರೆಸಾರ್ಟ್ ನ್ನು ತಲುಪಿದೆವು ಎನ್ನುವಷ್ಟರಲ್ಲಿ ಮಗಳು ಕಾರ್ ನಲ್ಲೇ ಬಳಬಳನೆ ತಿಂದಿದ್ದೆಲ್ಲವನ್ನು ವಾಂತಿ ಮಾಡಿದಳು. ಇದು ಅನಿರೀಕ್ಷಿತವಾದ್ದರೂ ತಕ್ಷಣ ಸಾವರಿಸಿಕೊಂಡು, ಸ್ವಚ್ಛಗೊಳಿಸಿ ರೆಸಾರ್ಟ್ ನ್ನು ತಲುಪಿದೆವು. ಈ ಗಡಿಬಿಡಿಯಲ್ಲಿ ನನ್ನ ,ಬಲು ಪ್ರಿಯವಾದ ಜಾಕೆಟ್ ಕಾರ್ ನಲ್ಲೇ ಬಾಕಿಯಾಗಿ ಕೊಚ್ಚಿಯನ್ನು ತಲುಪಿತು😂
Comments
Post a Comment