ಹೀಂಗೊಂದು ದೋಸೆ ಪುರಾಣ
"ಅಮ್ಮಾ... ನಾಳೆ ಕಾಪಿಗೆಂತ?" ಹೀಂಗಿಪ್ಪ ಒಂದು ಪ್ರಶ್ನೆಯ ಆನುದೆ ಎನ್ನ ತಮ್ಮಂದೇ ದಿನಾ ಕೇಳಿಯೊಂಡು ಇತ್ತಿದ್ದೆಯ. ಅದು ಹೊತ್ತೋಪಗಳೊ ಅಲ್ಲಾ ಕಸ್ತಲಪ್ಪಗಳೊ ಕೇಳಿಯೊಂಡು ಇದ್ದದು ಹೇಳಿ ನಿಂಗ ಗ್ರೇಷಿರೆ ತಪ್ಪು. ಉದಿಯಪ್ಪಾಗಣ ಕಾಪಿ ಕುಡಿವಾಗಳೆ ಎಂಗೊಗೆ ಮರುದಿನದ ಕಾಪಿಯ ಚಿಂತೆ. "ಹೋ ಎಂತರ ನಿಂಗಳದ್ದು ರಗಳೆ? ಇನ್ನು ಎನ್ನದೇ ಇಂದ್ರಾಣ ಕಾಪಿ ಕುಡುದು ಆಯಿದಿಲ್ಲೆ. ನಿಂಗಳದ್ದು ಆಗಳೆ ನಾಳಂಗೆ ಕಾಪಿಗೆಂತ ಹೇಳಿ ಸುರುವಾತ ಜಗಳ" ಹೇಳಿ ಅಮ್ಮನ ಸ್ವರ ಕೇಳಿದ್ದೇ ತಡ ಎಂಗ ಗಪ್ ಚುಪ್. ಅದು ರಜ್ಜ ಹೊತ್ತಷ್ಟೆ ಹೇಳಿ ಅಮ್ಮಂಗು ಗೊಂತಿದ್ದು ಹಾಂಗಾಗಿ ನಾಳಂಗೆ ಕಾಪಿಗೆಂತ ಮಾಡುದು ಹೇಳಿ ಅಮ್ಮನ ತಲೆಬೆಶಿ. ಇದು ಸಾಮಾನ್ಯವಾಗಿ ಎಲ್ಲರ ಮನೆ ಮನೆ ಕಥೆ.
ಸಾಮಾನ್ಯವಾಗಿ ಹವೀಕರ ಮನೇಲಿ ಕಾಪಿಗೆಂತಾ ಹೇಳಿ ಕೇಳೆಕ್ಕು ಹೇಳಿಯೇ ಇಲ್ಲೆ. ಹೆಚ್ಚಿನವರ ಮನೇಲಿದೆ ದೋಸೆಯೇ. ಹಾಂಗೆಯೇ ಎಂಗಳ ಮನೆಲಿದೆ ಯಾವಾಗಳೂ ದೋಸೆಯೇ. ದೋಸೆಗೆ ಕಡವಲೆ ಮುನ್ನಾಣ ದಿನವೇ ಅಕ್ಕಿಯ ಬೊದುಲ್ಲೆ ಹಾಕೆಕ್ಕು. ಹಾಂಗಾಗಿ ಹೊತ್ತೋಪಗದ ಒಳ ನಾಳಂಗೆ ಕಾಪಿಗೆಂತ ಹೇಳಿ ಮೊದಲೇ ನಿರ್ಧರಿಸಿ ಆಯೆಕ್ಕು. ಅಕ್ಕಿ ಮಾತ್ರ ಬೊದುಲ್ಲೆ ಹಾಕಿ ಆ ಹಿಟ್ಟಿನ ನೀರು ಮಾಡಿ ಎರದರೆ ರುಚಿರುಚಿಯಾದ ತೆಳ್ಳವು ಸಿದ್ಧ. ಅದರೊಟ್ಟಿಂಗೆ ಬೆಲ್ಲ ಕಾಯಿಸುಳಿಯೋ, ಬಾಳೆ ಹಣ್ಣು ರಸಾಯನವೋ ಇದ್ದರೆ ಸ್ವರ್ಗ ಸುಖ. ಕಾವಲಿಗೆಯ ಸುತ್ತ ಬೆಳಿಯ ಚಿತ್ತಾರ. ಅದರ ಉದ್ದುವ ಕೆಲಸ ಮಾತ್ರ ತಲೆಬೆಶಿ. ಅಕ್ಕಿಯೊಟ್ಟಿಂಗೆ ಉದ್ದು ಬೊದುಲುಲೆ ಹಾಕಿ ಕಡದರೆ ಉದ್ದಿನ ದೋಸೆ. ಅದರೊಟ್ಟಿಂಗೆ ಬಟಾಟೆ ಬಾಜಿ ಇದ್ದರೆ ಒಂದು ದೋಸೆ ಜಾಸ್ತಿಯೇ ಹೊಟ್ಟೆ ಒಳ ಹೋಕು. ಇನ್ನು ತೋಟಲ್ಲಿ ಇಪ್ಪ ಬಾಳೆಗೊನೆಯ ನವಿಲು ತಿಂದತ್ತು ಹೇಳಿಯೋ, ಮಂಗ ಮಡುಗ ಹೇಳಿಯೋ ಕೊಯಿದು ತಂದದರ ಅಕ್ಕಿಯೊಟ್ಟಿಂಗೆ ಸೇರ್ಸಿ ಕಡದರೆ ಬಾಳೆಕಾಯಿ ದೋಸೆ. ಇಡೀ ಗೊನೆ ಹಣ್ಣಾಗಿ ಎಂತ ಮಾಡುದಪ್ಪ ಹೇಳುವ ತಲೆಬೆಶಿಯೇ ಬೇಡ. ಅದರದ್ದು ತುಪ್ಪ ಹಾಕಿ ದೋಸೆ ಮಾಡಿ ಸೀವು ದೋಸೆ ತಿಂಬಲಕ್ಕು. ಇನ್ನು ಎಲ್ಲಿಯಾರು ನಮ್ಮ ಕಣ್ಣು ತಪ್ಪಿಸಿ ಮಂಗ ಬಂದು ಸುಮಾರು ಬೊಂಡ ಎಳದು ಹಾಕಿತ್ತು ಹೇಳಿ ಆದರೆ ಮರುದಿನ ಅಮ್ಮ ಬೊಂಡ ದೋಸೆ ಮಾಡುಗು ಹೇಳುದು ಮನೆಯ ಎಲ್ಲಾ ಸದಸ್ಯರಿಂಗು ಗೊಂತಿಪ್ಪ ಸತ್ಯ. ಇನ್ನು ಸೆಕೆ ತಡೆಯದ್ದೆ ತಿಂಬಲೆ ಹೇಳಿ ಪೇಟೆಂದ ಬಚ್ಚಂಗಾಯಿ ತಂದರೆ ಮರುದಿನ ಅದರ ಓಡಿನ ದೋಸೆ ಖಾಯಂ. ಹಲಸಿನ ಕಾಯಿ ದೋಸೆ, ಹಲಸಿನ ಹಣ್ಣಿನ ದೋಸೆ ಆಯಾ ಸಮಯಲ್ಲಿ ತಿಂದು ಬೊಡಿಗು. ಹೀಂಗಿಪ್ಪ ದೋಸೆಗಳ ವರ್ಷದ 365 ದಿನವೂ ಮಾಡುಗು ಅಮ್ಮ. ಹಾಂಗಾಗಿ ಆನು ಯಾವಾಗಳೂ ಅಮ್ಮಂಗೆ "ಅಮ್ಮ, ನಿನಗೆ 365 ದಿನಕ್ಕೆ 365 ಬಗೆಯ ದೋಸೆಗಳು ಹೇಳುವ ವಿಷಯಲ್ಲಿ PhD ಮಾಡ್ಲಕ್ಕು" ಹೇಳಿ ತಮಾಷೆ ಮಾಡಿಯೊಂಡು ಇತ್ತಿದ್ದೆ. ಹಿಂಗೆ ಎಲ್ಲಾ ದೋಸೆಗಕ್ಕು ಅಕ್ಕಿಯೇ ಮೂಲ. ಅಕ್ಕಿ ಒಂದು ರೀತೀಲಿ ಸರ್ವಾಂತರ್ಯಾಮಿ ಭಗವಂತನ ಹಾಂಗೆ. ಎಲ್ಲಾ ತರದ ದೋಸೆಗಕ್ಕು ಮೂಲ ಕಾರಣ. ಈ ದೋಸೆಲಿಪ್ಪ ಅಕ್ಕಿಯ ನೋಡಿಯೇ 'ಎಲ್ಲರೊಳಗೊಂದಾಗು ಮಂಕುತಿಮ್ಮ' ಹೇಳಿ ಡಿ.ವಿ.ಜಿ ಹೇಳಿಕ್ಕು ಹೇಳಿ ಎನಗೊಂದು ಸಂಶಯ.
ದಿನಾಗಳೂ ದೋಸೆ ತಿಂದು ಬೊಡುದವಕ್ಕೆ ಮನೆಗೆ ಆರಾರು ನೆಂಟ್ರು ಬಕ್ಕು ಹೇಳಿ ಆದರೆ ಖುಷಿ. ಮರುದಿನ ಕಾಪಿಗೆ ಅಮ್ಮ ಇಡ್ಲಿ ಮಾಡುಗು ಹೇಳಿ ಮಕ್ಕಗೆಲ್ಲ ಗೊಂತಿದ್ದು. "ಅಮ್ಮಾ , ದಿನಾ ದೋಸೆ ತಿಂದು ಬೊಡುದತ್ತು ಬೇರೆಂತಾರು ಮಾಡು" ಹೇಳುವ ಡಿಮ್ಯಾಂಡ್ ಮಕ್ಕಳ ಬಾಯಿಲಿ ಬಂತು ಹೇಳಿ ಆದರೆ ಹೇಂಗೆ ಇವರ ಬಾಯಿ ಮುಚ್ಚುಸುದು ಹೇಳಿದೆ ಅಮ್ಮಂಗೆ ಗೊಂತಿದ್ದು. "ಹಾಂಗಾರೆ ನಿಂಗೊಗೆ ಸಜ್ಜಿಗೆ ಅವಲಕ್ಕಿ ಮಾಡ್ತೆ" ಹೇಳಿ ಹಗ್ಗದ ಹಾವು ಬಿಟ್ಟರೆ ಎಲ್ಲರೂ ಒಂದೇ ಉಸಿರಿಲಿ "ಅಯ್ಯೋ, ಕಾಂಕ್ರೀಟಾ?! ಬೇಡಪ್ಪ ಬೇಡ" ಹೇಳಿ ಬಾಯಿ ಮುಚ್ಚಿ ಅಮ್ಮ ಮಾಡಿದ ದೋಸೆಯ ತಿಂದಿಕ್ಕಿ ಹೋಕು. ಬರೀ ದೋಸೆ ಮಾತ್ರವೇ ನಿಂಗೊಗೆ ತಿಂದು ಗೊಂತಿಪ್ಪದಾ ಹೇಳಿ ಕೇಳಡಿ ಮತ್ತೆ. ಸೇಮಿಗೆ, ರಸಾಯನ, ಕಾಯಿಹಾಲು ಎಲ್ಲಾ ಮಕ್ಕೊಗೆ ರಜೆ ಇಪ್ಪ ದಿನವೇ ಆಯೆಕ್ಕಷ್ಟೇ. ಎಂತಕೆ ಹೇಳಿರೆ ಅದರ ಒತ್ತುಲೆ ಒಬ್ಬ ಗಟ್ಟಿ ಜನವೇ ಬೇಕು. ಸೇಮಿಗೆ ಒತ್ತುಲೆ ಮಕ್ಕಳಲ್ಲಿ ಜಗಳ ಅಪ್ಪದು ಸಾಮಾನ್ಯ. ಅಪರೂಪಕ್ಕೆ ಉಪ್ಪಿಲಿ ಹಾಕಿದ ಸೊಳೆ ರೊಟ್ಟಿ, ಉಬ್ಬು ರೊಟ್ಟಿ ಬಸಳೆ ಬೆಂದಿ, ಚಪಾತಿ ಇಂತದ್ದೆಲ್ಲ ಮಾಡುಗು. ಇನ್ನು ಈಗಾಣವು ತಿಂಬ ರೈಸ್ ಐಟಮ್ ಗಳ ಅಂತೂ ಒಂದು ದಿನವೂ ಉದಿಯಪ್ಪಗ ತಿಂದು ಗೊಂತಿರ. ಮನೇಲಿ ಹಿರಿಯವು ಇದ್ದವು ಹೇಳಿ ಆದರೆ ಅವು "ಇದೂ ಒಂದು ತಿಂಡಿಯ? ಎಂಗೊಗೆ ಇದೆಲ್ಲಾ ಜೀರ್ಣ ಬಾರ. ದೋಸೆಯೇ ಅಕ್ಕಪ್ಪ" ಹೇಳಿ ಹೇಳುಗು. ಒಟ್ಟಿಂಗೆ ಆಳುಗಕ್ಕು ಉದಿಯಪ್ಪಾಣ ಚಾ ಕಾಪಿ ಆಯೆಕ್ಕಾದ ಕಾರಣ ಅವು ಈ ರೈಸ್ ಐಟಮ್ ಗಳ ಮೂಸಿಯು ನೋಡ. ಹಾಂಗಾಗಿ ಎಂಗಳಲ್ಲಿ ಯಾವಗಳೂ ದೋಸೆಯೆ.
ಹೀಂಗೆ ವರ್ಷ ಪೂರ್ತಿ ದೋಸೆ ತಿಂದು ಬೆಳೆದ ಹವ್ಯಕ ಕೂಸುದೆ ವರ್ಷದ 365 ದಿನವೂ ದೋಸೆ ತಿಂದು ಬೊಡುದ ಹವ್ಯಕ ಮಾಣಿಗುದೆ ಮದುವೆ ಆದರೆ ಅವರ ಉದಿಯಪ್ಪಾಣ ತಿಂಡಿ ಎಂತ ಆದಿಕ್ಕು? ಸಂಶಯವೇ ಬೇಡ. ಒಂದು ದಿನವೂ ದೋಸೆ ಮಾಡವು. ಎಂಗಳ ಕಥೆಯೂ ಇದಕ್ಕಿಂತ ಬೇರೆ ಇತ್ತಿಲ್ಲೆ. ದಿನಾ ಬೇರೆ ಬೇರೆ ರೈಸ್ ಐಟಮ್ ಗಳ ಮಾಡಿ ತಿಂದುಗೊಂಡು ಇತ್ತಿದ್ದೆಯ. ಆದರೂ ಅಮ್ಮಂಗೆ ಸಮಾಧಾನ ಇಲ್ಲೆ. "ಪೇಟೆಂದ ತಂದ ಹೊಡಿಗಳ ಬೆರ್ಸಿ ಎಂತ ಮಾಡುದು? ಅದರಲ್ಲಿ ಹೊಟ್ಟೆ ತುಂಬ. ದೋಸೆ ಎರದು ತಿನ್ನು." ಹೇಳುದು ಅಮ್ಮನ ಒತ್ತಾಯ. ಅಂತೂ ಒಂದು ದಿನ ದೋಸೆ ಮಾಡುವ ಹೇಳಿ ಕಂಡತ್ತು. ಹಾಂಗಾಗಿ ಮುನ್ನಾಣ ದಿನವೇ ಅಕ್ಕಿಯನ್ನು, ಉದ್ದನ್ನು ಬೊದುಲ್ಲೆ ಹಾಕಿದೆ. ಎರಡನ್ನೂ ಬೇರೆ ಬೇರೆ ಆಗಿ ಮಿಕ್ಸಿಲಿ ಕಡದು ಕೂಡಿದೆ. ಮರುದಿನ ಇಬ್ರಿಂಗೂ ಕೆಲಸಕ್ಕೆ ಹೋಪಲಿದ್ದರಿಂದ ಬೇಗ ಎದ್ದು ಕೊದಿಲಿಂಗೆ ಕಡದು, ಚಟ್ನಿ ಕಡವಲೆ ಹೇಳಿ ಮಿಕ್ಸಿ ಆನ್ ಮಾಡಿಯಪ್ಪಗ ಮಿಕ್ಸಿ ಎನಗಿನ್ನು ಎಡಿಯ ಹೇಳಿ ಮುಷ್ಕರ ಹೂಡಿತ್ತು. ಮತ್ತೆಂತ ಮಾಡುದು ಹೇಳಿ ಅದರ ಅಲ್ಲಿಯೇ ಬಿಟ್ಟಿಕ್ಕಿ ದೋಸೆ ಎರವಲೆ ಸುರು ಮಾಡಿದೆ. ಸುರುವಾಣ ದೋಸೆ 'ನಾ ನಿನ್ನ ಬಿಡಲಾರೆ' ಹೇಳಿ ಕಾವಲಿಗೆಗೆ ಅಂಟಿಯೊಂಡು ಕೂದತ್ತು. ಮತ್ತಾಣ ದೋಸೆ ಹೇಂಗಾರು ಮೇಲೆ ಬಂತು. ಅಂತೂ ಮೂರು ದೋಸೆ ಎರದು ಆನು ತಿಂದಿಕ್ಕಿ, ಮತ್ತೆ ನಾಕು ದೋಸೆ ಗೆಂಡoಗೆ ಹೇಳಿ ಎರದು ಹಾಟ್ ಬಾಕ್ಸ್ ಲಿ ಹಾಕಿಕ್ಕಿ ಆನು ಕೆಲಸಕ್ಕೆ ಹೋದೆ. ದೋಸೆ ಗೆಂಡoಗೆ ಇಷ್ಟ ಆತ ಹೇಳುವ ಕೂತೂಹಲ. ಹಾಂಗಾಗಿ ಫೋನ್ ಮಾಡಿ ವಿಚಾರ್ಸಿದೆ. "ಬ್ಯುಸಿ ಇದ್ದೆ" ಹೇಳುವ ಉತ್ತರ ಆ ಹೊಡೆಂದ ಬಂತು. ಅವುಗಳೇ ದೋಸೆ ಕರಂಚಿದ ವಾಸನೆ ಮೂಗಿಗೆ ಬಡುದ ಹಾಂಗೆ ಆತು. ಆದರೂ ತಲೆಬೆಶಿ ಮಾಡಿದ್ದಿಲ್ಲೆ ಆನು. ಅಂದ್ರಾಣ ಕೆಲಸ ಮುಗುಶಿಕ್ಕಿ ಮನೆಗೆ ಬಂದು ಹಾಟ್ ಬಾಕ್ಸ್ ನೋಡ್ತೆ, ಎಂತಾ ಆಶ್ಚರ್ಯ!! ಎನ್ನ ಕಣ್ಣಿನ ಆನೆ ನಂಬಿದ್ದಿಲ್ಲೆ. ಹಾಟ್ ಬಾಕ್ಸ್ ಪೂರಾ ಖಾಲಿ. ಹೊತ್ತೋಪಗಾಣ ಕಾಪಿ ಕುಡುದು ಕಸವಿನ ಡಸ್ಟ್ ಬಿನ್ ಗೆ ಹಾಕುಲೆ ನೋಡ್ತೆ, ನಾಕು ದೋಸೆದೆ ಡಸ್ಟ್ ಬಿನ್ ಲಿ ಇದ್ದು!! ಬೇಜಾರಾತು. ಗೆಂಡ ಮನೆಗೆ ಬಂದ ಕೂಡ್ಲೆ ವಿಚಾರ್ಸಿದೆ. ಮತ್ತೆ ಗೊಂತಾದ ವಿಷಯ ಎಂತ ಹೇಳಿರೆ ಆನು ಮಿಕ್ಸಿಲಿ ಕಡದ ಕಾರಣ ಅಕ್ಕಿ ಸಣ್ಣ ಆಗದ್ದೆ ತರಿ ತರಿಯಾಗಿ ದೋಸೆಯ ಮೇಲೆ ನಿಂದು, ದೋಸೆ ಒಣಕ್ಕಟೆ ಆಗಿ ಎನ್ನ ಗೆಂಡoಗೆ ತಿಂಬಲೆ ಎಡಿಗಾಗದ್ದೆ ಕಸದ ಬುಟ್ಟಿ ಸೇರಿತ್ತು. 365 ದಿನಕ್ಕೆ 365 ಬಗೆಯ ದೋಸೆ ಮಾಡುವ ಅಮ್ಮನ ಮಗಳ ಮೊದಲ ದೋಸೆಯೇ ಫ್ಲಾಪ್ ಶೋ ಆತು.
Comments
Post a Comment