ಮುಗಿಲು ಬೆಳ್ಮುಗಿಲು ನಮ್ಮ ಈ ಮಗಳು
ಪಾದರಕ್ಷೆ ಪ್ರಿಯೆ ಈ ಪೋರಿ
ಮಗಳಿಗೆ ಸುಮಾರು ಒಂದು ವರ್ಷವಾದಾಗ ನಾವು ಅವಳಿಗೆ
ಚಪ್ಪಲಿಯನ್ನು ತೆಗೆದುಕೊಟ್ಟೆವು. ಅದು ಅವಳ ಬಹುಪ್ರಿಯವಾದ ವಸ್ತುವಾಯಿತು. ಅಂಗಳದಲ್ಲಿ ಓಡಾಡಲು ಹಾಕಿದ
ಚಪ್ಪಲಿಯೇ ಮನೆಯ ಅಡುಗೆ ಕೋಣೆಯಲ್ಲೂ, ದೇವರ ಕೋಣೆಯಲ್ಲೂ ಹಾಕಿ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ
ಖುಷಿಯಿಂದ ನಡೆಯತೊಡಗಿದಳು. ಯಾರದೇ ಮನೆಗೆ ಹೋಗಲಿ ಅವಳು ಮೊದಲು ನೋಡುತ್ತಿದ್ದದ್ದು ಅಲ್ಲಿದ್ದ ಚಪ್ಪಲಿಗಳ
ಸಾಲುಗಳನ್ನು. ಯಾವುದೇ ಸಮಾರಂಭಗಳಿಗೆ ಹೋದಾಗ ಅಪರಿಚಿತರನ್ನು ನೋಡಿ ಅತ್ತಾಗ ಅವಳನ್ನು ಸಮಾಧಾನಿಸಲು
ನೆರವಾಗುತ್ತಿದ್ದದ್ದು ಚಪ್ಪಲಿಗಳ ರಾಶಿಯೇ. ಇವತ್ತಿಗೂ ಮಗಳನ್ನು ಮಾಲ್ ಗಳಿಗೆ ಕರೆದುಕೊಂಡು ಹೋದರೆ
ಅವಳ ಕಣ್ಣು ಬೀಳುವುದು ಚಪ್ಪಲಿ ಅಂಗಡಿಯ ಮೇಲೆ. ಅಲ್ಲಿಗೆ ಹೋದರೆ ಸುಲಭದಲ್ಲಿ ಹೊರಬರುವವಳಲ್ಲ. ಹಾಗಾಗಿ
ನಾವು ಚಪ್ಪಲಿಗಳಿರುವ ಅಂಗಡಿಗಳನ್ನು ಆದಷ್ಟು ಅವಳ ಕಣ್ಣು ತಪ್ಪಿಸಿ ದಾಟಿ ಬಿಡುತ್ತೇವೆ. ಬಟ್ಟೆ ಖರೀದಿಗೆಂದು
ಅಂಗಡಿಗೆ ಹೋದಾಗ ಅಳತೆ ಸರಿಯಿದೆಯೇ ಎಂದು ಪರೀಕ್ಷಿಸಲು ಹಾಕಿದ ಎಲ್ಲಾ ಬಟ್ಟೆಗಳು ಬೇಕು ಎಂದು ಹೇಳುವವಳು,
ಚಪ್ಪಲಿ ಅಂಗಡಿಯಲ್ಲಿ ಮಾತ್ರ ತನಗೆ ಬೇಕಾದ್ದನ್ನು ತಾನೇ ಆರಿಸುತ್ತಾಳೆ. ಅವಳು ಆರಿಸಿದ ಚಪ್ಪಲಿ ಚೆನ್ನಾಗಿಲ್ಲವೆಂದು
ನಾವು ಆಕ್ಷೇಪಿಸಿದರೆ ಅವಳು "ನನಗಿದೇ ಬೇಕು. ನನಗೆ ಇದು ಇಷ್ಟ" ಎಂದು ನಮ್ಮ ಮಾತನ್ನು
ತಲೆಗೇ ಹಾಕಿಕೊಳ್ಳುವುದಿಲ್ಲ.
ಫೋಟೋಶೂಟ್ ಎಂಬ ಸಂಭ್ರಮ
ಮಗಳಿಗೆ ಒಂದು ವರ್ಷವಾದಾಗ ಅವಳ ಫೋಟೋಶೂಟ್ ಮಾಡಿಸಬೇಕೆಂದು
ನಿರ್ಧರಿಸಿ ನನ್ನ ಫೋಟೋಗ್ರಾಫರ್ ಸ್ನೇಹಿತನ ಬಳಿ ಹೇಳಿದ್ದೆ. ಅವನು ಬೆಳಿಗ್ಗೆ ೭ ಗಂಟೆಗೆ ಸಿದ್ಧವಾಗಿರಲು
ಹೇಳಿದ್ದ. ಇದನ್ನು ಕೇಳಿ ನನಗೆ ಚಿಂತೆಯಾಗತೊಡಗಿತು. ಏಕೆಂದರೆ ಮಗಳು ಎಳುತ್ತಿದ್ದುದ್ದೇ ೯ ಗಂಟೆಗೆ
ಇನ್ನು ೭ ಗಂಟೆಗೆ ಹೇಗೆ ಸಿದ್ಧವಾಗುವುದು? ಆದರೆ ನನಗೇ ಆಶ್ಚರ್ಯವಾಗುವಂತೆ ಅವಳು ಆ ದಿನ ಬೇಗ ಎದ್ದು
ಯಾವುದೇ ಕಿರಿಕಿರಿ ಮಾಡದೇ, ವಿವಿಧ ಬಟ್ಟೆಗಳನ್ನು ಧರಿಸಿ ಫೋಟೋಕ್ಕೆ ಪೋಸ್ ನೀಡಿದಳು. ಮರುದಿನ, ಇನ್ನೂ
ಒಳಗೆ ಇಡದ ಹೊಸ ಬಟ್ಟೆಗಳನ್ನು ತೋರಿಸಿ "ಇವತ್ತೂ ಇದನ್ನು ಹಾಕಿಸು" ಎಂಬಂತೆ ಅವಳದೇ ಭಾಷೆಯಲ್ಲಿ
ಹೇಳತೊಡಗಿದಳು. ಹೀಗೆ ಚಿಕ್ಕವಳಾದರೂ ಫೊಟೋ ತೆಗೆದುಕೊಳ್ಳುವುದು ಅವಳಿಗೆ ಖುಷಿಯನ್ನು ನೀಡುತ್ತಿತ್ತು.
ಅಪರಿಚಿತರ ಮುಖದಲ್ಲೂ ನಗುವನ್ನು ಅರಳಿಸಬಲ್ಲಳು
ಊರಿನಿಂದ ಮಂಗಳೂರಿಗೆ ಬಂದ ನಂತರ ನಮಗಿಬ್ಬರಿಗೂ
ಸಮಯವನ್ನು ಕಳೆಯುವುದೇ ಸಮಸ್ಯೆಯಾಯಿತು. ಊರಲ್ಲಾದರೆ ವಿಶಾಲವಾದ ಮನೆ, ಅಂಗಳ, ತೋಟ ಎಂದು ಸುತ್ತಬಹುದು.
ಆದರೆ ಇಲ್ಲಿ? ನಾಲ್ಕು ಗೋಡೆಗಳ ಮಧ್ಯೆ ಇಡೀ ದಿನ ಇದ್ದು ಬೇಸರ ಬರುತ್ತಿತ್ತು. ಹಾಗಾಗಿ ನಾವಿಬ್ಬರೂ
ಸಾಯಂಕಾಲದ ಹೊತ್ತಿನಲ್ಲಿ ವಾಕಿಂಗ್ ಹೋಗಲು ಆರಂಭಿಸಿದೆವು. ಸಾಮಾನ್ಯವಾಗಿ ನಾವು ಬಡಾವಣೆಯಿರುವ ಜಾಗದಲ್ಲೇ
ವಾಕಿಂಗ್ ಮಾಡುತ್ತಿದ್ದೆವು. ಆದರೆ ಅಂದು ಕಾರ್, ಬಸ್ಸು, ಲಾರಿ ನೋಡಬೇಕೆಂದು ಮಗಳು ಹೇಳಿದ್ದರಿಂದ
ಮೈನ್ ರೋಡ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಹೀಗೆ ನಡೆಯುತ್ತಿದ್ದಾಗ ನಮ್ಮ ಎದುರಿನಿಂದ ಸುಮಾರು
55 ವರ್ಷ ವಯಸ್ಸಿನ ಹಿರಿಯ ವ್ಯಕ್ತಿಯೊಬ್ಬರು ಬಂದರು. ಮಗಳಿಗೆ ಏನನ್ನಿಸಿತೋ ಏನೋ ಒಂದು ಕ್ಷಣ ನನ್ನ
ಕೈಯನ್ನು ಹಿಡಿದು ನಿಲ್ಲಿಸಿ ಅವರನ್ನೇ ನೋಡುತ್ತಾ ನಕ್ಕಳು. ಅವರಿಗಂತೂ ತುಂಬಾ ಖುಷಿಯಾಯಿತು. ಅವರೂ
ಸಹ ಕ್ಷಣ ನಿಂತು ಅಪರಿಚಿತ ಮಗು ಎಂಬುದನ್ನೂ ಸಹ ಮರೆತು ಮಗಳ ಕೆನ್ನೆಗೆ ಮುತ್ತಿಟ್ಟು ಮುಂದೆ ಸಾಗಿದರು.
ಅವರಿಗೆ ಬಹಳ ಸಂತಸವಾಯಿತೆಂದು ಅವರ ಮುಖಭಾವವೇ ಹೇಳುತ್ತಿತ್ತು. ಹೀಗೆ ಮಗಳು ಅಪರಿಚಿತ ವ್ಯಕ್ತಿಯ ಅಂದಿನ
ಪುಟ್ಟ ಸಂತೋಷಕ್ಕೆ ಕಾರಣಳಾಗಿದ್ದಳು.
ಸೈಕಲ್ ಬೇಕು ಚಾಕಲೇಟ್ ಬೇಡ
ಒಮ್ಮೆ ಅಮ್ಮನ ಮನೆಗೆ ಹೋಗಿದ್ದಾಗ, ಮನೆಯ ಮೂಲೆಯಲ್ಲಿದ್ದ
ನನ್ನ ತಮ್ಮನ ಹಳೇ ಸೈಕಲ್ ಮಗಳ ಕಣ್ಣಿಗೆ ಬಿತ್ತು. ಅವಳ ಕಣ್ಣಿಗೆ ಬಿದ್ದ ಮೇಲೆ ಕೇಳಬೇಕೇ ಅದರ ಮೇಲೆ
ಹತ್ತಿದಳು. ಅದು ಕೂರಲಷ್ಟೇ ಯೋಗ್ಯವಾಗಿತ್ತು, ಚಾಲನೆಗಲ್ಲ. ಹಾಗಾಗಿ ನಾನು ಆ ಸೈಕಲ್ ಅನ್ನು ಅಲ್ಲೇ
ಬಿಟ್ಟು ಬಂದಿದ್ದೆ. ಮಗಳಿಗೆ ಸುಮಾರು ಎರಡು ವರ್ಷವಾದಾಗ ಒಂದು ರಾತ್ರಿ ಅಜ್ಜಿಯ ಮೊಬೈಲ್ ನಲ್ಲಿದ್ದ,
ಸೈಕಲ್ ನಲ್ಲಿ ಕೂತಿದ್ದ ಅವಳ ಫೊಟೋವನ್ನು ನೋಡಿ ಅವಳದ್ದು ಒಂದೇ ಹಠ "ನನಗೆ ಸೈಕಲ್ ಬೇಕು".
ಅಂತೂ ಸಮಾಧಾನ ಮಾಡಿ ನಿದ್ದೆ ಮಾಡಿ ಮಲಗಿಸಿದ್ದಾಯಿತು. ಮರುದಿನ ಪುನಃ ಸೈಕಲ್ ಬೇಕು ಎಂಬ ಒತ್ತಾಯ.
ನಾವು ಅವಳಿಗೆ ಮರೆಯಬಹುದೆಂದು ಯೋಚಿಸಿದರೆ ಅವಳು ಮರೆತಿರಲಿಲ್ಲ. ಸತತ ಒಂದು ವಾರಗಳ ಬೇಡಿಕೆಯ ನಂತರ
ಅವಳಿಗೆ ಹೊಸ ಸೈಕಲ್ ಅನ್ನು ಖರೀದಿಸಿದೆವು. ಖುಷಿಯಿಂದ ಅಂಗಳದಲ್ಲಿ ಸೈಕಲ್ ನಲ್ಲಿ ಓಡಾಡಿದಳು.
ಸಾಮಾನ್ಯವಾಗಿ ಚಾಕಲೇಟ್ ಅನ್ನು ನಾವೇ ಖರೀದಿಸಿ ಅವಳಿಗೆ
ಕೊಡುವುದು ಅಪರೂಪವಾಗಿತ್ತು. ಕೊಟ್ಟರೂ ಹಲ್ಲು ಹಾಳಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿಯೇ ಕೊಡುತ್ತಿದ್ದವು.
ಒಮ್ಮೆ ಊರಿನಲ್ಲಿ ದಿನಸಿ ಸಾಮಾನುಗಳನ್ನು ಖರೀದಿಸುವಾಗ ಅಂಗಡಿಯವನಿಗೆ ನಮ್ಮನ್ನು ಸರಿಯಾಗಿ ಪರಿಚಯವಿರುವುದರಿಂದ
ಮಗಳಿಗೋಸ್ಕರ ಲಾಲಿಪಾಪ್ ಕೊಟ್ಟರು. ಅದನ್ನು ಅವಳ ಅಪ್ಪ ತಂದು ಅವಳಿಗೆ ಕೊಟ್ಟಿದ್ದೇ ತಡ "ಅಪ್ಪ
... ಚಾಕಲೇಟ್ ತಿಂದ್ರೆ ಹಲ್ಲು ಹಾಳಾಗುತ್ತದೆ ಎಂದು ಗೊತ್ತಿಲ್ವಾ. ನಾನು ತಿನ್ನೊಲ್ಲಾ" ಎಂದು
ಹೇಳಿದ್ದಲ್ಲದೇ ತಿನ್ನಲೇ ಇಲ್ಲ. ನಮಗೇ ಆಶ್ಚರ್ಯವಾಯಿತು. ಇದನ್ನು ಕಂಡು ನಾವು ಇನ್ನೊಮ್ಮೆ ಅದೇ ಅಂಗಡಿಗೆ
ಮಗಳನ್ನು ಕರೆದಕೊಂಡು ಹೋದೆವು. ಈ ಬಾರಿ ಸ್ವತಃ ಅಂಗಡಿಯವ ಮಗಳ ಕೈಗೇ ಚಾಕಲೇಟ್ ಕೊಟ್ಟರು. ಅವಳು ಅದನ್ನೂ
ತೆಗೆದುಕೊಳ್ಳಲಿಲ್ಲ. ಅಷ್ಟೇ ಅಲ್ಲದೇ ವಾಪಸು ಮನೆಗೆ ಬಂದ ನಂತರವೂ ಚಾಕಲೇಟ್ ಬೇಕು ಎಂದು ಹಠ ಮಾಡಲಿಲ್ಲ.
ಹೀಗೆ ಕೆಲವು ವಸ್ತುಗಳನ್ನು ಬೇಕೇ ಬೇಕು ಎಂದು ಹಠ ಹಿಡಿದರೆ ಕೆಲವೊಂದು ಕೈಗೆ ಕೊಟ್ಟರೂ ಬೇಕಿಲ್ಲ ಅವಳಿಗೆ.
ಮಗಳು ಮಾಡಿದ ಅವಾಂತರ
ಮಗಳ ಬಳಿ ಎಷ್ಟೇ ಆಟದ ವಸ್ತುಗಳಿದ್ದರೂ, ಅವಳಿಗೆ
ಯಾವಾಗಲೂ ನನ್ನ ಪರ್ಸನ್ನು ಹಿಡಿದು ಆಟವಾಡುವುದು ಅತ್ಯಂತ ಪ್ರಿಯವಾಗಿತ್ತು. ಹೀಗೆ ಆಟವಾಡುವಾಗ ನನ್ನ
ಪರ್ಸಿನಲ್ಲಿದ್ದ ಹಣವನ್ನು, ಡೆಬಿಟ್ ಕಾರ್ಡನ್ನು, ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಅನ್ನು ಅಲ್ಲಿ ಇಲ್ಲಿ
ಬೀಳಿಸಿ ಬಿಡುತ್ತಿದ್ದಳು. ಹಾಗಾಗಿ ನಾನು ಅವತ್ತು ಅವಳು ಪರ್ಸ್ ಕೇಳಿದಾಗ, ಪರ್ಸಿನಲ್ಲಿದ್ದ ಹಣವನ್ನು
ಹಾಗೂ ಪ್ರಮುಖ ದಾಖಲೆಗಳನ್ನು ತೆಗೆದಿರಿಸಿದ್ದೆ. ಅದೇ ದಿನ ಅತ್ತೆ ಮತ್ತು ನಾದಿನಿ ಮನೆಗೆ ಬಂದಿದ್ದರಿಂದ
ಒಟ್ಟಿಗೆ ಹೊರಗೆ ಹೋಗಲು ಆಟೋ ರಿಕ್ಷಾದಲ್ಲಿ ಹೊರಟೆವು. ನಾವು ಇಳಿಯುವ ಸ್ಥಳ ಬಂದಾಗ ಡ್ರೈವರ್ ಗೆ ಹಣ
ಕೊಡಲು ಪರ್ಸು ತೆಗೆಯುತ್ತೇನೆ ಪರ್ಸ್ ಖಾಲಿ. ಆದರೆ ನಾದಿನಿ ಹಣ ಕೊಟ್ಟಿದ್ದರಿಂದ ನಾನು ಬಚಾವಾದೆ.
ಅಮ್ಮ...ನಾನು ಅಪ್ಪನಷ್ಟು ದೊಡ್ಡವಳಾದೆ
ಈಗಂತೂ ಅವಳ ಆಸೆ ಆದಷ್ಟು ಬೇಗ ಅಪ್ಪನಷ್ಟು ದೊಡ್ಡವಳಾಗುವುದು. ಹಾಗಾಗಿ ಕಾರಲ್ಲಾಗಲಿ, ಕುರ್ಚಿಯಲ್ಲಾಗಲಿ ಕುಳಿತ ತಕ್ಷಣ ಕಾಲು ನೆಲವನ್ನು ಮುಟ್ಟಿತೇ? ತಲೆ ಎಲ್ಲಿಯವರೆಗೆ ತಾಗಿತು ಎಂದು ನೋಡುವುದೇ ಕೆಲಸ. ದೊಡ್ಡ ಕುರ್ಚಿಯಲ್ಲಿ ಕೂತರೆ ತನ್ನ ಕಾಲು ನೆಲವನ್ನು ತಾಗುವುದಿಲ್ಲವೆಂದು ತಿಳಿದಿದ್ದೇ ತಡ ಅವಳದ್ದೇ ಸಣ್ಣ ಸ್ಟೂಲ್ ನಲ್ಲಿ ಕುಳಿತು "ನನ್ನ ಕಾಲು ನೆಲವನ್ನು ತಾಕಿತು. ನಾನು ಅಪ್ಪನಷ್ಟು ದೊಡ್ಡವಳಾದೆ" ಎಂದು ಸಂಭ್ರಮಿಸುತ್ತಾಳೆ.
ಹೀಗೆ ಮಗಳೆಂಬ ಕೇಂದ್ರದ ಸುತ್ತ ಸುತ್ತುತ್ತಿರುವ ನಮ್ಮ ಪುಟ್ಟ ಪ್ರಪಂಚ ನಮಗೆ ದಿನಕ್ಕೊಂದು ಅನುಭವವನ್ನು ನೀಡಿದರೆ ಕೆಲವು ಅನುಭವಗಳು ಮಗಳೊಂದಿಗೆ ನಮ್ಮನ್ನು ಬೆಳೆಸುತ್ತಿವೆ.
Comments
Post a Comment