ಓದಿನ ಸುಖ - ವಿಜ್ಞಾನಿಯ ಬದುಕಿನ ಮೂರು ಆಯಾಮಗಳ ಅನುಭವ ಕಥನ "ತ್ರಿಮುಖಿ"



ಪುಸ್ತಕದ ಹೆಸರು: ತ್ರಿಮುಖಿ

ಲೇಖಕರು: ಸಿ. ಆರ್. ಸತ್ಯ


           ಶ್ರೀವತ್ಸ ಜೋಶಿಯವರು ತಮ್ಮ ಅಂಕಣದಲ್ಲಿ 'ತ್ರಿಮುಖಿ' ಪುಸ್ತಕದ ಬಗ್ಗೆ ಬರೆದಿದ್ದರು. ಅದನ್ನು ಓದಿ ಪುಸ್ತಕವನ್ನು ಓದಬೇಕೆಂದಿದ್ದೆ. ಪುಸ್ತಕ ಖರೀದಿಸಲು ನವಕರ್ನಾಟಕ ಮಳಿಗೆಗೆ ಹೋಗಿದ್ದಾಗ ಪುಸ್ತಕವನ್ನು ಕಂಡು ಖರೀದಿಸಿದ್ದೆ.

            ಲೇಖಕರು ಹೇಳುವಂತೆ ಪುಸ್ತಕವು ಆತ್ಮಕಥೆಯಲ್ಲ. ಅವರ ಜೀವನಾನುಭವವನ್ನು ಮೂರು ವಿಭಾಗವಾಗಿ ವಿಂಗಡಿಸಿ ಈ ಪುಸ್ತಕವನ್ನು ಬರೆದಿದ್ದಾರೆ. ಮೊದಲನೆಯದಾಗಿ ವಿಜ್ಞಾನಿಯಾಗಿ ತಿರುವನಂತಪುರದಲ್ಲಿ ಕೆಲಸ ಮಾಡುತ್ತಾ ಹೊರನಾಡು ಕನ್ನಡಿಗನಾಗಿ ಗಳಿಸಿದ ಅನುಭವಗಳು, ಎರಡನೆಯದಾಗಿ ಪ್ರವಾಸಿಗನಾಗಿ ಹಾಗೂ ವೃತ್ತಿ ಸಂಬಂಧವಾಗಿ ವಿದೇಶಗಳಿಗೆ ಹೋದಾಗ ಉಂಟಾದ ಅನುಭವಗಳು, ಮೂರನೆಯದಾಗಿ ಮರಳಿ ಬೆಂಗಳೂರಿಗೆ ಬಂದಾಗ ವೃತ್ತಿ ಸಂಬಂಧವಾಗಿ ವಿವಿಧ ವ್ಯಕ್ತಿಗಳೊಂದಿಗೆ ಒಡನಾಡಿದ ಅನುಭವಗಳು ಹೀಗೆ ಮೂರು ವಿಭಾಗಗಳಲ್ಲಿ ಸಿ.ಆರ್.ಸತ್ಯ ಅವರು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

 ಸಿ.ಆರ್.ಸತ್ಯ ಎಂದರೆ ಯಾರು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ಇವರನ್ನು ಒಬ್ಬ ವಿಜ್ಞಾನಿ ಎಂದಷ್ಟೇ ಪರಿಚಯಿಸಿದರೆ ಬಹಳ ನೀರಸವೆನಿಸಬಹುದು. ಹಾಗಾಗಿ, ಬಹಳ ಪ್ರಸಿದ್ಧ ಛಾಯಾಚಿತ್ರವಾದ ರಾಕೆಟ್ ಮೂತಿ (ನೋಸ್ ಕೋನ್) ಯನ್ನು ಸೈಕಲ್ ಮೇಲೆ ಹೊತ್ತೊಯ್ಯುತ್ತಿರುವವರಲ್ಲಿ ಒಬ್ಬರು ಎಂದು ಹೇಳಿದರೆ ಎಲ್ಲರಿಗೂ ಬೇಗನೆ ಗೊತ್ತಾಗಿಬಿಡಬಹುದು. ( ಈ ಛಾಯಾಚಿತ್ರವನ್ನು ತೆಗೆದ ಹಿನ್ನಲೆಯನ್ನು ಸಹ ಬಹಳ ಸ್ವಾರಸ್ಯಕರವಾಗಿ ಲೇಖಕರು ಪುಸ್ತಕದಲ್ಲಿ ವಿವರಿಸಿದ್ದಾರೆ.) ಇಷ್ಟೇ ಅಲ್ಲದೇ ಇನ್ನೊಂದು ಮಾತನ್ನು ಹೇಳಿದರೆ ಲೇಖಕರ ಪರಿಚಯ ಸಂಪೂರ್ಣವೆನಿಸುತ್ತದೆ. ಅದೇನೆಂದರೆ ನಾವೆಲ್ಲರೂ ಕೇಳಿ ಬಹಳ ಇಷ್ಟಪಟ್ಟ "ಆಚೆಮನೆಯ ಸಬ್ಬಮ್ಮನಿಗೆ ಇವತ್ತು ಏಕಾದಶಿ ಉಪ್ವಾಸ" ಹಾಡನ್ನು ಬರೆದವರು ಇವರು ಎಂದರೆ ಬಹುಬೇಗ ಎಲ್ಲರಿಗೂ ತಿಳಿಯಬಹುದು.

             ಸಾಮಾನ್ಯವಾಗಿ, ವಿಜ್ಞಾನಿಯೆಂದರೆ ಸದಾ ಅನ್ವೇಷಣೆಯಲ್ಲಿ ತೊಡಗಿ ಬೇರೆ ಯಾವುದರಲ್ಲೂ ಅಷ್ಟೊಂದು ತೊಡಗಿಸಿಕೊಳ್ಳುವವರಲ್ಲ ಎಂಬ ಭಾವನೆ ನಮ್ಮಲ್ಲಿರುತ್ತದೆ. ಆದರೆ ಸತ್ಯ ಅವರು ಈ ಮಾತಿಗೆ ಅಪವಾದ. ಅವರು ತಮ್ಮ ವೃತ್ತಿಯಷ್ಟೇ ಪ್ರವೃತ್ತಿಗೂ ಮಹತ್ವವನ್ನು ಕೊಟ್ಟು ಸಾಹಿತಿಯಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಲ್ಲದೇ, ಇತರ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

            ಪುಸ್ತಕದ ಮೊದಲ ಭಾಗದಲ್ಲಿ , ತುಂಬಾದಲ್ಲಿ ಒಬ್ಬ ರಾಕೆಟ್ ಎಂಜಿನಿಯರ್ ಆಗಿ ಅಬ್ದುಲ್ ಕಲಾಂ ಅವರೊಂದಿಗಿನ ಒಡನಾಟ, ಭಾರತೀಯ ವಾಯುಪಡೆಯ ಗುಪ್ತ ಯೋಜನೆಯೊಂದರ ಪಾತ್ರ ವಹಿಸಿ ವಿಮಾನ ಬಲವೃದ್ಧಿಗೆ ರಾಕೆಟ್ ಅನ್ನು ಬಳಸಿದ ಕುತೂಹಲಕಾರಿ ಘಟನೆಯ ವಿವರಣೆ, ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ವಿಕ್ರಂ ಸಾರಾಭಾಯಿ ಅವರೊಂದಿಗಿನ ಒಡನಾಟ ಹೀಗೆ ಎಲ್ಲವನ್ನು ವಿಶದವಾಗಿ ವಿವರಿಸಿದ್ದಾರೆ.

              ತಮ್ಮ ವೃತ್ತಿಯ ಜೊತೆಗೇ ಪ್ರವೃತ್ತಿಗೂ ಸಹ ಅಷ್ಟೇ ಮಹತ್ವವನ್ನು ಕೊಟ್ಟಿದ್ದು ಸತ್ಯ ಅವರ ವಿಶೇಷತೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ವೃತ್ತಿ ಜೀವನದಲ್ಲಿ ಎತ್ತರಕ್ಕೇರಿದಾಗ ತನ್ನ ಪ್ರವೃತ್ತಿ ಹಾಗೂ ಹವ್ಯಾಸಗಳಿಗೆ ತಿಲಾಂಜಲಿ ಇಡುವುದು ಸಹಜ. ಆದರೆ ಸತ್ಯ ಅವರು ಈ ವಿಷಯದಲ್ಲಿ ಉಳಿದವರಿಗಿಂತ ವಿಭಿನ್ನ. ಅವರು ಕೇರಳದಲ್ಲಿ ವೃತ್ತಿ ಸಂಬಂಧವಾಗಿ ಇದ್ದರೂ ಕರ್ನಾಟಕ ಅಸೋಸಿಯೇಷನ್ ಅನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾಗ ಕೇರಳದ ಭಾಷೆ ಹಾಗೂ ಸಂಸ್ಕೃತಿಯೊಡನೆ ಕನ್ನಡಿಗರು ಒಳಗೊಳ್ಳುವುದರ ಬಗ್ಗೆ, ವಿವಿಧ ಕನ್ನಡ ಕೃತಿಗಳ ಮಲಯಾಳಂ ಅನುವಾದ ಹಾಗೂ ಮಲಯಾಳಂ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಹೀಗೆ ಕನ್ನಡ ಸಾಹಿತ್ಯಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಇನ್ನು ಮಲಯಾಳಿಗರಾರೂ ಮಾಡದ ಕೆಲಸವನ್ನು ಕನ್ನಡಿಗರಾಗಿ, ಕಲ್ಲಿನಲ್ಲಿ ನಿರ್ಮಿಸಿದ ಅನಂತಶಯನ ದೇವಸ್ಥಾನದ ಇತಿಹಾಸದ ಬಗ್ಗೆ, ಅಲ್ಲಿಯ ಕಲ್ಲುಗಳ ಬಗ್ಗೆ ಸಂಶೋಧನೆಯನ್ನು ನಡೆಸಿ ಅದರ ಬಗ್ಗೆ ಪುಸ್ತಕವನ್ನು ರಚಿಸಿದ್ದು ಸತ್ಯ ಅವರ ಸಂಶೋಧನಾ ಮನೋಧರ್ಮಕ್ಕೆ ಸಾಕ್ಷಿ.

              ಇನ್ನು ಎರಡನೆ ಭಾಗದಲ್ಲಿ ಒಬ್ಬ ಪ್ರವಾಸಿಗನಾಗಿ ಹಾಗೂ ವೃತ್ತಿ ಸಂಬಂಧವಾಗಿ ವಿವಿಧ ದೇಶಗಳಿಗೆ ಭೇಟಿಕೊಟ್ಟಾಗ ಅನುಭವಿಸಿದ ಮೋಜಿನ ಪ್ರಸಂಗಗಳು ಹಾಗೂ ಘಟನೆಗಳನ್ನು ಆ ದೇಶಗಳ ವಿಶೇಷತೆಯೊಂದಿಗೆ ವಿವರಿಸಿದ್ದಾರೆ.

            ಮೂರನೇ ಭಾಗದಲ್ಲಿ ಮರಳಿ ತವರೂರಾದ ಬೆಂಗಳೂರಿಗೆ ಬಂದು ನೆಲೆಸಿ ವೃತ್ತಿ ಹಾಗೂ ಪ್ರವೃತ್ತಿ ಸಂಬಂಧವಾಗಿ ನಡೆಸಿದ ಅನೇಕ ವ್ಯಕ್ತಿಗಳ ಜೊತೆಗಿನ ಒಡನಾಟ ಹಾಗೂ ಬಾಂಧವ್ಯವನ್ನು ದಾಖಲಿಸಿದ್ದಾರೆ. ಹಿರಿಯ ಉದ್ಯಮಿಗಳಾದ ರತನ್ ಟಾಟಾ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯನವರೊಂದಿಗಿನ ಒಡನಾಟವನ್ನು ದಾಖಲಿಸಿದ್ದಾರೆ. ಬೆಂಗಳೂರಿಗೆ ಬಂದು ನೆಲೆಸಿದ ಹೊಸತರಲ್ಲಿ ಯಾರೂ ಮಾಡದ, ಸರಕಾರದ ಹಿರಿಯ ಅಧಿಕಾರಿಗಳು, ಹಿರಿಯ ಉದ್ಯಮಿಗಳು ಇಲ್ಲದಿದ್ದರೂ ಸಹ ಒಂದು ಟ್ರಸ್ಟ್ ಅನ್ನು ಸ್ಥಾಪಿಸಿ ತಮ್ಮ ಮನೆ ಹತ್ತಿರದ ಸಮಾರು 100 ಎಕರೆಯಷ್ಟು ವಿಸ್ತಾರವಾದ, ಪರಿಸರ ಮಾಲಿನ್ಯದಿಂದ ನಶಿಸುತ್ತಿದ್ದ ಹೆಬ್ಬಾಳ ಕೆರೆಯನ್ನು ಸತತ ಏಳು ವರ್ಷಗಳ ಕಾಲ ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿದ್ದು ಹಾಗೂ ವೈಜ್ಞಾನಿಕ, ತಾಂತ್ರಿಕ ಸಿದ್ಧಾಂತಗಳನ್ನು ವಿದ್ಯಾರ್ಥಿಗಳಿಗೆ ತಾವು ತಯಾರಿಸಿದ ಮಾಡಲ್ ಗಳ ಪ್ರಾತ್ಯಕ್ಷಿಕೆಯ ಮೂಲಕ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿವರಿಸಿದ್ದು ಸತ್ಯ ಅವರ ಸಾಮಾಜಿಕ ಕಾರ್ಯಕ್ಕೆ ಉತ್ತಮ ನಿದರ್ಶನವಾಗಿದೆ.

            ಕೊನೆಯಲ್ಲಿ, ಜೀವನದಲ್ಲಿ ಇಷ್ಟೆಲ್ಲಾ ಸಾಧಿಸಿದ್ದರೂ ತಾವು ನಡೆದು ಬಂದ ಹಾದಿಯನ್ನು, ತಮ್ಮ ಹಿರಿಯ ತಲೆಮಾರಿನವರು ಮಾಡಿದ ಕೆಲಸಗಳನ್ನು ಮರಯದೆ ಅದನ್ನು ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದ ತಮ್ಮ ಮುಂದಿನ ತಲೆಮಾರಿಗೆ ಇ ಪುಸ್ತಕದ ಮೂಲಕ ದಾಖಲಿಸಿದ್ದು ಸತ್ಯ ಅವರು ಮಾಡಿದ ಅತ್ಯಂತ ಮಹತ್ವಪೂರ್ಣ ಕೆಲಸವಾಗಿದೆ.

             ಹೀಗೆ ಲೇಖಕರು ತಮ್ಮ ಅನುಭವಗಳ ಮೂಲಕವೇ ಹಲವಾರು ವಿಷಯಗಳನ್ನು ದಾಖಲಿಸಿದ ಈ ಪುಸ್ತಕವು ನಮ್ಮ ಜ್ಞಾನವನ್ನು ಹೆಚ್ಚಿಸುವುದಲ್ಲದೇ ಉತ್ತಮ ಓದು ನಮ್ಮದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"