ಓದಿನ ಸುಖ "ಪುರಸ್ಕಾರ"
ಪುಸ್ತಕದ ಹೆಸರು: ಪುರಸ್ಕಾರ
ಲೇಖಕರು: ಚಿತ್ರಲೇಖ
ಪುರಸ್ಕಾರವು ಎರಡು ಕಿರು ಕಾದಂಬರಿಗಳಾದ 'ಪುರಸ್ಕಾರ' ಹಾಗೂ 'ಪ್ರತೀಕಾರ' ಗಳ ಗುಚ್ಛ. ಎರಡು ಕಥೆಗಳಲ್ಲಿ ವಿಭಿನ್ನ ಕಾಲಮಾನಕ್ಕೆ ಸೇರಿದ ಇಬ್ಬರು ಹೆಣ್ಣು ಮಕ್ಕಳ ಜೀವನದ ಕಥೆಯನ್ನು ನಿರೂಪಿಸಿದ್ದಾರೆ ಲೇಖಕಿ.
ಹೆಣ್ಣು ಅಕ್ಷರಸ್ಥಳಾಗಿರಲಿ ಅಥವಾ ಅನಕ್ಷರಸ್ಥಳಾಗಿರಲಿ ಆಂತರ್ಯದಲ್ಲಿ ಅವಳು ಸ್ವಾಭಿಮಾನಿಯಾಗಿರುತ್ತಾಳೆ. ಅಂತಹ ಒಬ್ಬ ಅನಕ್ಷರಸ್ಥ ಸ್ವಾಭಿಮಾನೀ ಹೆಣ್ಣೊಬ್ಬಳ ಕಥೆಯೇ 'ಪುರಸ್ಕಾರ'.
ಈ ಕಥೆಯ ಪ್ರಮುಖ ಪಾತ್ರ ಸುಂದರಮ್ಮ. ಹುಟ್ಟಿದಾಗ ಸರಸ್ವತಿ ಎಂಬ ಹೆಸರನ್ನು ಹೊತ್ತ ಸುಂದರಮ್ಮ ಹತ್ತನೇ ವಯಸ್ಸಿಗೇ ಮದುವೆಯಾಗಿ ಗಂಡನ ಮನೆಯನ್ನು ಸೇರಿದಳು. ಮದುವೆಯಾಗಿದ್ದು ಹಳ್ಳಿಯಲ್ಲಿದ್ದ ವಿಜ್ಞಾನಿಯನ್ನು. ಸದಾ ಆಕಾಶ,ನಕ್ಷತ್ರ ಎಂದು ಅಧ್ಯಯನದಲ್ಲೇ ಮುಳುಗಿದ್ದ ಆದಿಕೇಶವನನ್ನು. ಅತ್ಯಂತ ವಿಕ್ಷಿಪ್ತವಾದ ಪಾತ್ರ ಆದಿಕೇಶವನದ್ದು. ಆತನದ್ದು ವಿಚಿತ್ರ ಸ್ವಭಾವ. ಹೆಂಡತಿಯ ಮೇಲೆ ಸ್ವಲ್ಪವೂ ಪ್ರೀತಿಯಿಲ್ಲ. ಪ್ರೀತಿಯಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಆತನಿಗೆ ತನ್ನ ಹೆಂಡತಿಯ ಮೇಲೆ ಕರುಣೆಯಿಲ್ಲ, ಜೊತೆಗೆ ಕುರೂಪಿಯಾಗಿದ್ದ, ಕಲಾವತಿಯಾಗಿದ್ದ ತನ್ನ ಹೆಂಡತಿಯು ರಚಿಸುತ್ತಿದ್ದ ರಂಗೋಲಿಯನ್ನಾಗಲೀ, ಹೂ ಮಾಲೆಯನ್ನಾಗಲೀ ಕೊನೆಗೆ ರುಚಿಕಟ್ಟಾದ ಅಡುಗೆಯನ್ನು ಹೊಗಳುವುದಾಗಲಿ ಇಲ್ಲವೇ ಅವುಗಳನ್ನೆಲ್ಲ ಸವಿಯುವ ವ್ಯವಧಾನವಿರಲಿಲ್ಲ. ಆದರೆ ಅವುಗಳನ್ನೆಲ್ಲ ಹಾಳುಗೆಡವುದೋ ಹೆಂಡತಿಯನ್ನು ಪ್ರತೀ ಮಾತಿಗೆ ಬೈಯ್ಯುವುದೋ ಮಾಡಿ ಸಾಕ್ಷಾತ್ ಮೃಗದಂತೆಯೇ ವರ್ತಿಸುತ್ತಿದ್ದ. ಮನುಷ್ಯತ್ವವೇನೆಂದು ಅರಿಯದ ವಿಜ್ಞಾನಿಯನ್ನು ಮದುವೆಯಾದ ದೌರ್ಭಾಗ್ಯ ಸುಂದರಿಯದು. ಅಂತಹ ಗಂಡನ ಹಾಗೂ ಅತ್ತೆಯ ಹಿಂಸೆಯನ್ನು ತಾಳಲಾರದೆ ಅಳುವುದೊಂದೆ ದಾರಿಯಾಗಿತ್ತು ಸುಂದರಮ್ಮದು. ಹೀಗೆ ಅತೀ ಚಿಕ್ಕ ವಯಸ್ಸಿನಲ್ಲೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಘಾತವನ್ನು ಅನುಭವಿಸಿದ ಸುಂದರಮ್ಮ ಇಳಿವಯಸ್ಸಿನಲ್ಲಿ ಹುಚ್ಚಿಯಂತೆ ಆಡುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಅದೇ ಊರಿನಲ್ಲಿದ್ದ ತನ್ನ ತಾತನ ಮನೆಯಲ್ಲಿ ಬೇಸಿಗೆ ರಜೆಯನ್ನು ಕಳೆಯಲು ಬಂದ ಕಾಲೇಜ್ ವಿದ್ಯಾರ್ಥಿನಿಯಾದ ಸ್ನೇಹಾಳಿಗೆ ಸುಂದರಮ್ಮನ ಪರಿಚಯವಾಗುತ್ತದೆ. ಅವರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ ಅವರ ಆತ್ಮ ವೃತ್ತಾಂತವನ್ನು ಸುಂದರಮ್ಮನ ಬಾಯಿಯಲ್ಲಿ ಕೇಳಿ ತಿಳಿದುಕೊಳ್ಳುತ್ತಾಳೆ. ಅದರಂತೆ ಆದಿಕೇಶವಯ್ಯನವರು ಮಹಾನ್ ವಿಜ್ಞಾನಿಗಳೆಂದು, ಅವರು ತಮ್ಮ ವೈಜ್ಞಾನಿಕ ಸಂಶೋಧನೆಗಾಗಿ ಅಮೇರಿಕಾಕ್ಕೆ ತೆರಳಿ ಅಲ್ಲೇ ನಿಧನರಾಗಿರುತ್ತಾರೆ ಎಂದು ತಿಳಿಯುತ್ತಾಳೆ. ಇದನ್ನೆಲ್ಲ ತಿಳಿದ ಸ್ನೇಹ ತನ್ನ ಪ್ರಾಧ್ಯಾಪಕರಾದ ಪ್ರೊ||ಚೆನ್ನಕೇಶವಯ್ಯನವರ ಸಹಾಯದಿಂದ ಡಾ|| ಯೂಸುಫ್ ಅವರ ಜೊತೆಗೂಡಿ ಆದಿಕೇಶವಯ್ಯನವರ ಬರಹಗಳನ್ನು ಸಂಗ್ರಹಿಸುತ್ತಾಳೆ. ನಂತರ ಡಾ|| ಯೂಸುಫ್ ಅವರು ಬರಹ ಸಂಗ್ರಹಗಳನ್ನು ಆಮೂಲಾಗ್ರವಾಗಿ ಓದಿ ಅಪೂರ್ಣವಾದ ವೈಜ್ಞಾನಿಕ ಸಮಸ್ಯೆಗಳಿಗೆ ಉತ್ತರವನ್ನು ಕಂಡುಹಿಡಿಯುತ್ತಾರೆ. ಇದು ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಮುಖ ಸುದ್ದಿಯಾಗುತ್ತದೆ. ಹಾಗಾಗಿ ಅಮೆರಿಕಾದ ಯೂನಿವರ್ಸಿಟಿ ಹಾಗೂ ಭಾರತ ಸರ್ಕಾರ ಆದಿಕೇಶವಯ್ಯನವರ ಪತ್ನಿ ಸುಂದರಮ್ಮನವರಿಗೆ ಹಣವನ್ನು ಘೋಷಿಸಿತು. ಸುಂದರಮ್ಮನನ್ನು ಗೌರವಿಸಲು ಸಂತೋಷ ಕೂಟವನ್ನು ಏರ್ಪಡಿಸಿತು. ಆ ಸಂತೋಷ ಕೂಟದಲ್ಲಿ ಸುಂದರಮ್ಮನವರು ಹೇಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು? ತಮಗೆ ದೊರೆತ ಹಣವನ್ನು ಏನು ಮಾಡಿದರು? ಎಂಬುದನ್ನು ಪುಸ್ತಕವನ್ನು ಓದಿಯೇ ತಿಳಿಯಬೇಕು.
ಹಿಂದಿನ ಕಾದಂಬರಿಯಲ್ಲಿ ಸ್ವಾಭಿಮಾನಿ ಹೆಣ್ಣೊಬ್ಬಳ ಕಥೆಯನ್ನು ಹೇಳಿದರೆ, ಈ ಕಾದಂಬರಿ ಒಬ್ಬ ಅಸಹಾಯಕ ಹೆಣ್ಣು ಮಗಳು ತನಗಾದ ಅನ್ಯಾಯಕ್ಕೆ ಹೇಗೆ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಾಳೆ ಎಂಬುದಾಗಿದೆ. ಪ್ರಗತಿ ಅನಾಥ ಹುಡುಗಿ. ' ಮಹಿಳಾ ಮನೆ ' ಎಂಬ ಅನಾಥಾಲಯದದಲ್ಲಿದ್ದು ಕಾಲೇಜಿನಲ್ಲಿ ಓದುತ್ತಿದ್ದಳು. ಆಗರ್ಭ ಶ್ರೀಮಂತ ಮನೆತನದ ಸ್ಫುರದ್ರೂಪಿ ಯುವಕ ಪ್ರವೀಣ ಕುಮಾರ್ ನ ಪ್ರೀತಿಯ ಬಲೆಯಲ್ಲಿ ಬಿದ್ದು ಅಸಹಾಯಕತೆಯಿಂದ ಹೆಣವಾಗುತ್ತಾಳೆ. ತಾನು ಅಸಹಾಯಕಳು ಎಂದು ತಿಳಿದ ಪ್ರಗತಿ, ತನ್ನ ಕಾಲೇಜ್ ಮೇಟ್ ಪ್ರತೀಕ್ಷಾಳ ದೇಹದ ಮೂಲಕ ಹೇಗೆ ಪ್ರತೀಕಾರವನ್ನು ತೆಗೆದುಕೊಂಡಳು ಎನ್ನುವುದನ್ನು ಈ ಕಥೆಯ ಮೂಲಕ ವಿವರಿಸಿದ್ದಾರೆ ಲೇಖಕಿ.
ಹೀಗೆ ಎರಡು ವಿಭಿನ್ನ ಕಾಲಘಟ್ಟದ ಹೆಣ್ಣು ಮಕ್ಕಳ ಜೀವನದ ಕಥೆಯನ್ನು ಚಿತ್ರಲೇಖ ಮೇಡಂ ಅವರು ಈ ಎರಡು ಕಾದಬರಿಗಳಲ್ಲಿ ಚಿತ್ರಿಸಿದ್ದಾರೆ. ಸುಲಲಿತವಾದ ಶೈಲಿ, ಸುಲಭವಾಗಿ ಅರ್ಥವಾಗುವ ಭಾಷೆ ಹಾಗೂ ಮುಂದೇನು ಎಂಬ ಕುತೂಹಲ ದೊಂದಿಗೆ ಸಾಗುವ ಕಥೆಯು ಓದುಗರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
Comments
Post a Comment