ಮುಗಿಲು ಬೆಳ್ಮುಗಿಲು ನಮ್ಮ ಈ ಮಗಳು

         ಹೊರಗೆ ಧೋ ಎಂದು ಸುರಿಯುತ್ತಿರುವ ಎಂದೂ ಇರದಿದ್ದ ಮಳೆ. ಹೊಟ್ಟೆ ಒಳಗೆ ಅಸಾಧ್ಯವಾದ ನೋವು. ಆತಂಕಗೊಂಡ ನಮ್ಮ ಮುಖಗಳು. ಆಸ್ಪತ್ರೆಗೆ ದೌಡಾಯಿಸಿರುವ ನಾವು . ಹೌದು ನಿಮ್ಮ ಊಹೆ ಸರಿಯಾಗಿದೆ. ನಾವು ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಸ್ಪತ್ರೆಯನ್ನು ಸೇರಿದ್ದೆವು. ಡಾಕ್ಟರ್ ನನ್ನನ್ನು ಪರೀಕ್ಷಿಸಿ ಎಲ್ಲವೂ ಸರಿಯಿದೆ. ಸಹಜವಾಗಿ ಮಗು ಜನಿಸಬಹುದು ಎಂಬ ಭರವಸೆಯನ್ನು ನೀಡಿದರು. ನೋವು ಗಂಟೆಗೊಮ್ಮೆ ಹೆಚ್ಚಾಗುತ್ತಾ ಹೋಯಿತು. ಮತ್ತೊಮ್ಮೆ ಪರೀಕ್ಷಿಸಿದ ಡಾಕ್ಟರ್ ನೋವಿನ ತೀವ್ರತೆ ಅಷ್ಟೇನು ಹೆಚ್ಚಿಲ್ಲ. ಇವತ್ತು ಡೆಲಿವರಿ ಆಗಲಿಕ್ಕಿಲ್ಲ ಎಂದು ಹೇಳಿ ಆಗಲೇ ರಾತ್ರಿಯಾಗಿದ್ದರಿಂದ ತಮ್ಮ ಮನೆಗೆ ಹೋದರು. ಕ್ಷಣ ಕ್ಷಣಕ್ಕೂ ನೋವು ಹೆಚ್ಚುತ್ತಿದೆ. ಮಲಗಲು ಆಗುತ್ತಿಲ್ಲ, ಕೂರಲೂ ಆಗುತ್ತಿಲ್ಲ. ಆಸಾಧ್ಯವಾದ ನೋವು. ನಡುರಾತ್ರಿಯಲ್ಲಿ ಡಾಕ್ಟರ್ ಓಡಿ ಬಂದರು. ಅಂತೂ ಸತತ ನೋವಿನ ನಂತರ ಡಾಕ್ಟರ್ ನ ನಿರೀಕ್ಷೆಯನ್ನು ಸುಳ್ಳು ಮಾಡಿ ಅದೇ ದಿನ ಮಗಳು ಜಗತ್ತಿಗೆ ಕಾಲಿಟ್ಟಳು. ಸದಾ ಮನೆ,ಆಫೀಸ್, ತಿರುಗಾಟ ಎಂಬ ನಮ್ಮದೇ ಪ್ರಪಂಚದಲ್ಲಿದ್ದ ನಮಗೆ ಈಗಷ್ಟೇ ಜಗತ್ತಿಗೆ ಬಂದ ಪುಟ್ಟ ಮಗಳಿನ ಹೊಸ ಜಗತ್ತು ಇಷ್ಟಿಷ್ಟೇ ತೆರೆದುಕೊಳ್ಳತೊಡಗಿತು.


ಲಕ್ಷ್ಮಿ ಬಂದಳು
 
 ಮಗಳು ಹುಟ್ಟಿದ ಮರುದಿನ ಬೆಳಿಗ್ಗೆ ಬಂದ ಮಕ್ಕಳ ಡಾಕ್ಟರ್ ಅವಳನ್ನು ಎಲ್ಲಾ ಬಗೆಯಲ್ಲೂ ಪರೀಕ್ಷಿಸಿದರು. ನಂತರ "ಲಕ್ಷ್ಮಿ ಬಂದಿದ್ದಾಳೆ" ಎಂದರು. ನಮಗೆ ಏನೆಂದು ಅರ್ಥವಾಗಲಿಲ್ಲ. ಆಗ ಅವರು "ನಿನ್ನೆ ಈ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳೆಲ್ಲಾ ಗಂಡು ಮಕ್ಕಳು. ಇವಳೊಬ್ಬಳು ಹೆಣ್ಣು ಮಗು. ಅಲ್ಲದೇ ಶುಕ್ರವಾರ ಬೇರೆ ಹುಟ್ಟಿದ್ದಾಳೆ" ಎಂದು ವಿವರಿಸಿದರು. ಡಾಕ್ಟರ್ ಹೇಳಿದಂತೆ ಮಗಳು ನಮ್ಮ ಪಾಲಿಗೆ ಪುಟ್ಟು ಲಕ್ಷ್ಮಿಯೇ ಆದಳು.

ಅಪ್ಪನ ಮಗಳು

 ಮಗಳು ಚಿಕ್ಕ ಮಗುವಾಗಿದ್ದಾಗ ರಾತ್ರಿ ಎದ್ದು ಅಳುತ್ತಿದ್ದಳು. ರಾತ್ರಿಯ ಅಳುವಿನಲ್ಲೂ ಸಹ ನಮ್ಮಿಬ್ಬರ ಸ್ಪರ್ಶ ಮಾತ್ರದಿಂದಲೇ ಅವಳು ತನ್ನನ್ನು ಯಾರು ಎತ್ತಿಕೊಂಡಿದ್ದಾರೆ ಎಂಬುದನ್ನು ಗುರುತಿಸುತ್ತಿದ್ದಳು. ಎಲ್ಲಿಯಾದರು ಅವಳನ್ನು ಅಪ್ಪ ಮುಟ್ಟಿದರೋ ಅವಳ ಬೊಬ್ಬೆ ತಾರಕಕ್ಕೇರುತ್ತಿತ್ತು. ಹೀಗಿದ್ದ ಮಗಳು ಯಾವಾಗ ಅಪ್ಪನ ಮಗಳಾದಳು ಎಂಬುದೇ ನನ್ನ ಆಶ್ಚರ್ಯ. ಈಗಂತೂ ಬೆಳಿಗ್ಗೆ ಎಳುವುದರಿಂದ ಹಿಡಿದು ರಾತ್ರಿ ಅಪ್ಪನ ಕಾಲಲ್ಲಿ ಮಲಗುತ್ತಾ, ಅಪ್ಪನು ಹಾಡುವ ಲಾಲಿ ಹಾಡನ್ನು ಕೇಳುತ್ತಾ ನಿದ್ದೆಗೆ ಜಾರುವವರೆಗೆ ಎಲ್ಲಾ ಕೆಲಸಗಳಿಗೂ ಅಪ್ಪನೇ ಬೇಕು. ನಿದ್ದೆಯಲ್ಲೂ ಕನವರಿಸುವುದು ಅವಳು ಅಪ್ಪನನ್ನೇ. ಇಂತಹ ಅಪ್ಪನ ಮಗಳು ಮೊದಲು ಅಪ್ಪ ಆಫೀಸ್ ಗೆ ಹೋಗುವಾಗ ಬಹಳಷ್ಟು ಸತಾಯಿಸುತ್ತಿದ್ದಳು. ಅವಳು ಹುಟ್ಟಿ ಸ್ವಲ್ಪ ಸಮಯದಲ್ಲಿ, ದೇಶದಲ್ಲಿ ಕೊರೋನಾ ಹಬ್ಬಿ ಲಾಕ್ ಡೌನ್ ಆದ್ದರಿಂದ ನಾವು ಊರಿಗೆ ಬಂದೆವು. ಅಪ್ಪನಿಗೆ ಮನೆಯಿಂದಲೇ ಕೆಲಸ. ಮಗಳಿಗೆ ತಿಳುವಳಿಕೆ ಮೂಡುವ ದಿನಗಳಿಂದಲೂ ಅವಳು ನೋಡುತ್ತಿದ್ದದ್ದು ಮನೆಯಿಂದಲೇ ಕೆಲಸ ಮಾಡುವ ಅಪ್ಪನನ್ನು. ಹೀಗಾಗಿ ಅಪ್ಪನೂ ಸಹ ಅಮ್ಮನಂತೆ ಮನೆಯಲ್ಲೇ ಇರುವ ಜೀವಿ ಎಂದು ಭಾವಿಸಿದ್ದಳು. ಯಾವಾಗ ಲಾಕ್ ಡೌನ್ ತೆರವಾಗಿ ಅಪ್ಪ ಆಫೀಸ್ ಗೆ ಹೋಗಲು ಶುರುಮಾಡಿದರೋ ಆಗ ಅವಳು ಅಳತೊಡಗಿದಳು. ಪ್ರತಿದಿನ ಅಪ್ಪ ಆಫೀಸ್ ಗೆ ಹೋಗುವಾಗ ನಾನು ಅವಳನ್ನು ತಾರಸಿಗೋ ಅಥವಾ ಮನೆಯಿಂದ ಹೊರಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಈಗ ಅಪ್ಪನಿಗೆ ಖುಷಿಯಿಂದ ಟಾಟಾ ಮಾಡಿ ಆಫೀಸ್ ಗೆ ಕಳುಹಿಸಿಕೊಟ್ಟು, ಮನೆಯಲ್ಲಿ ಬೇಸರವಾದಾಗ ಅಪ್ಪನ ಆಫೀಸ್ ಗೆ ಹೋಗೋಣ ಎನ್ನುವಷ್ಟು ಜಾಣೆಯಾಗಿದ್ದಾಳೆ ಪುಟ್ಟ ಪೋರಿ.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"