ಎಲ್ಲಿಗೋ ಹೊರಟವರು ಇನ್ನೆಲ್ಲಿಗೋ ತಲುಪಿದೆವು
"ದೀಪಾವಳಿಗೆ ಊರಿಗೆ ಬರುತ್ತಿದ್ದೇನೆ. ಹೇಗೂ ರಜಾ ಇದೆ. ಅಣ್ಣನಿಗೆ ಬಿಡುವಿದ್ದರೆ ಚಿಕ್ಕಮಗಳೂರಿಗೆ ಹೋಗೋಣ" ಎಂದು ಮೈದುನ ಫೋನ್ ಮಾಡಿದಾಗ "ಸರಿ" ಎಂದೇನೋ ಒಪ್ಪಿಗೆ ಕೊಟ್ಟಿದ್ದೆವು. ಆದರೆ ತಿಂಗಳಿನಿಂದ ಮಗಳಿಗೂ ಸೇರಿ ನಮ್ಮೆಲ್ಲರಿಗೂ ಕಾಡುತ್ತಿರುವ ಶೀತ, ಕಫ, ಕೆಮ್ಮು, ಜ್ವರವು ನಮ್ಮನ್ನು ಚಿಕ್ಕಮಗಳೂರಿಗೆ ಹೋಗಲು ಹಿಂದೇಟು ಹಾಕುವಂತೆ ಮಾಡುತ್ತಿತ್ತು. ಅಷ್ಟರಲ್ಲೇ ನನ್ನ ತಮ್ಮನೂ ಊರಿಗೆ ಬರುವವನಿದ್ದ ಕಾರಣ ಅವನಿಗೆ ನಮ್ಮ ಪ್ಲಾನ್ ತಿಳಿಸಿ "ನೀನೂ ನಮ್ಮ ಮನೆಗೇ ಬಾ. ಒಟ್ಟಿಗೆ ಚಿಕ್ಕಮಗಳೂರಿಗೆ ಹೋಗಬಹುದು" ಎಂದು ಹೇಳಿದೆ. ಅವನೂ "ಸರಿ" ಎಂದು ಒಪ್ಪಿದ್ದ. ಉಳಿದ ಸಹೋದರರು ಜೊತೆ ಸೇರಿ ಒಟ್ಟಿಗೇ ಹೋಗೋಣ ಎಂದು ನಿರ್ಧರಿಸಿದ್ದೆವು. ಇಷ್ಟೆಲ್ಲ ಯೋಜನೆ ಮಾಡಿ ವಾರ ಕಳೆದಿದ್ದರೂ ನಮ್ಮ ಶೀತ ಕಫ ಕಮ್ಮಿಯಾಗುವ ಲಕ್ಷಣವೇ ಕಾಣುತ್ತಿಲ್ಲ. ಹಾಗಾಗಿ ಹೋಗುವುದೇ ಬೇಡವೇ ಎಂಬ ದ್ವಂದ್ವದಲ್ಲೇ ಊರನ್ನು ತಲುಪಿದವು.
ಚಿಕ್ಕಮಗಳೂರಿಗೆ ಹೋಗುವುದೆಂದು ನಿರ್ಧರಿಸಿದ್ದರೂ
ಯಾವ ಸ್ಥಳಕ್ಕೆ ಹೋಗೋದು ಎಂದು ಇನ್ನು ತೀರ್ಮಾನಿಸಿರಲಿಲ್ಲ. ಹಾಗಾಗಿ ರಾತ್ರಿಯ ಊಟದ ನಂತರ ದೊಡ್ಡ ಪ್ರಶ್ನಾರ್ಥಕ
ಚಿಹ್ನೆಯೊಂದಿಗೆ ಒಂದು ಸಣ್ಣ ಸಭೆ ಸೇರಿದೆವು😀 "ನೀಲ ಕುರುಂಜಿಯನ್ನು ನೋಡಲು ಹೋಗೋಣ"
ಎಂದು ಒಬ್ಬರು ಹೇಳಿದಾಗ, ಇನ್ನೊಬ್ಬರು "ಬೆಟ್ಟವನ್ನು ಏರಬೇಕೆಂದರೆ ಕನಿಷ್ಠ ಮೂರು ಕಿಲೋಮೀಟರ್
ನಡೆಯಬೇಕು" ಎಂದು ಹೇಳಿದರು. "ನಡೆಯಲು ಸ್ವಲ್ಪ ಉದಾಸೀನ ಮಾಡುವ ಮಗಳನ್ನು ಕರೆದಕೊಂಡು
ಮೂರು ಕಿಲೋಮೀಟರ್ ನಡೆಯುವುದು ಕಷ್ಟವೇ. ಸಾಧ್ಯವಿಲ್ಲ. ಅತ್ತೆ ಮಾವನೂ ಜೊತೆಗೆ ಬರುತ್ತಿರುವುದರಿಂದ
ಅವರಿಗೆ ನಡೆಯಲು ಕಷ್ಟವಾಗಬಹುದು" ಎಂದು ನಾನು ಹೇಳಿದೆ. ಅಲ್ಲಿಗೆ ಆ ಯೋಜನೆಯನ್ನು ಕೈ ಬಿಡಲಾಯಿತು.
ಮತ್ತೆ ಎಲ್ಲಿಗೆ?? ಪುನಃ ದೊಡ್ಡ ಪ್ರಶ್ನೆ. ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ಸಮಾಧಾನ ಕೊಟ್ಟರೆ,
ಮತ್ತೊಬ್ಬರಿಗೆ ಬೇರೇನೋ ಕಾರಣಕ್ಕೆ ಇಷ್ಟವಿಲ್ಲ. ಹೀಗೆ ಕಪ್ಪೆಗಳನ್ನು ಪಾತ್ರೆಗಳಲ್ಲಿ ಹಾಕಿಟ್ಟಂತಹ
ಸ್ಥಿತಿ ನಮ್ಮ ಪರಿಸ್ಥಿತಿ 😂 ಜೊತೆ ಜೊತೆಗೆ ನಾವು ತೀರ್ಮಾನಿಸಿದ ಸ್ಥಳಗಳನ್ನು ಬೆಂಗಳೂರಿನಿಂದ
ಬರುತ್ತಿದ್ದವರಿಗೆ ಫೋನ್ ನಲ್ಲಿ ತಿಳಿಸುವುದು, ಎಲ್ಲಿಗೆ ತಲುಪಿದ್ದೀರಿ? ಎಂದು ವಿಚಾರಿಸುವುದು ನಡುರಾತ್ರಿಯವರೆಗೂ
ನಡೆದೇ ಇತ್ತು. ಕೊನೆಗೆ "ಸಂಸೆ ಟೀ ಎಸ್ಟೇಟ್ ಗೆ ಹೋಗೋಣ" ಎಂಬ ಮಾತಿಗೆ ಸರ್ವಾನುಮತದ ಅನುಮೋದನೆ
ದೊರೆತು ನಿದ್ರೆಗೆ ಜಾರಿದೆವು.
ಮರುದಿನ ಬೆಳಿಗ್ಗೆ ಬೆಂಗಳೂರಿನಿಂದ ಬರುವವರಿಗೆ ದಾರಿ
ಕಾಯುವುದೇ ಕೆಲಸವಾಯಿತು. ನಾವು ಮನೆಯಿಂದ ಹೊರಡುವಾಗಲೆ 11 ಗಂಟೆಯಾದರೆ ಸಂಸೆಯನ್ನು ತಲುಪಿ ವಾಪಾಸ್ಸು
ಮನೆಗೆ ತಲುಪುವುದು ತಡವಾಗಬಹುದುದೆಂದು ಸಂಸೆಗೆ ಹೋಗುವುದು ಬೇಡವೆಂದು, ಕುದುರೆಮುಖ ವ್ಯೂ ಪಾಯಿಂಟ್
ಗೆ ಹೋಗುವುದೆಂದು ನಿರ್ಧರಿಸಿದೆವು. "ಇದೇನಿದು. ನಿಮಿಷಕ್ಕೊಮ್ಮೆ ಪ್ಲಾನ್ ಚೇಂಜ್ ಮಾಡುತ್ತಿದ್ದಾರೆ"
ಎಂದು ನಾನು ಗೊಣಗಿಕೊಂಡೆ. "ಹೋಗುವುದು ಎಲ್ಲಿಗಾದರೇನು? ಒಟ್ಟಿಗೆ ಹೋಗುವುದೇ ಒಂದು ಮಜಾ"
ಎಂದು ನವೀನ್ ನನ್ನ ಮೇಲೆ ರೇಗಿದರು. ಅಂತೂ ಎಲ್ಲರೂ ಸಿದ್ಧರಾಗಿ ಹೊರಡುವಾಗ 10.45.
ಇಬ್ಬರು ಸ್ಕೂಟಿಯಲ್ಲಿಯೂ, ಉಳಿದವರೆಲ್ಲರೂ ಕಾರ್ ನಲ್ಲಿಯೂ
ಹೊರಟೆವು. ಬಜಗೋಳಿಯಲ್ಲಿ ಬಲಭಾಗಕ್ಕೆ ತಿರುಗಿ ಕುದುರೆಮುಖದ ಕಡೆ ಸಾಗಿತು ನಮ್ಮ ಪ್ರಯಾಣ . ಮೊದಲ ಚೆಕ್
ಪೋಸ್ಟ್ ತಲುಪಿ, ಅಧಿಕಾರಿಗಳ ಬಳಿ ಮಾತಾಡಿ ಬಂದು "ಇನ್ನೊಂದು ಗಂಟೆಯೊಳಗೆ ಮುಂದಿನ ಚೆಕ್ ಪೋಸ್ಟ್
ಅನ್ನು ತಲುಪಬೇಕು. ದಾರಿ ಮಧ್ಯೆ ಎಲ್ಲೂ ಕಾರ್ ನಿಲ್ಲಿಸುವಂತಿಲ್ಲ. ಮುಖ್ಯವಾದ ವಿಷಯವೆಂದರೆ ಕುದುರೆಮುಖ
ವ್ಯೂ ಪಾಯಿಂಟ್ ಗೆ ಹೋಗುವಂತಿಲ್ಲ" ಎಂದು ಹೇಳಿದಾಗ "ಹಾ!!! ಹಾಗಿದ್ರೆ ಮತ್ತೆಲ್ಲಿಗೆ
ಹೋಗುವುದು??" "ಯಾಕೆ ವ್ಯೂ ಪಾಯಿಂಟ್ ಗೆ ಹೋಗಬಾರದು?" ಹೀಗೆ ಒಬ್ಬೊಬ್ಬರು ಒಂದೊಂದು
ಪ್ರಶ್ನೆಗಳನ್ನು ಕೇಳತೊಡಗಿದೆವು. "ಹಲವು ವರ್ಷಗಳ ಹಿಂದೆಯೇ ಕುದುರೆಮುಖ ವ್ಯೂ ಪಾಯಿಂಟ್ ಗೆ
ಪ್ರವಾಸಿಗರನ್ನು ನಿರ್ಬಂಧಿಸಿದ್ದಾರೆ. ನಮಗೆ ತಿಳಿದಿರಲಿಲ್ಲ ಅಷ್ಟೇ" ಎಂದು ಹೇಳಿದಾಗ ನಾವೆಲ್ಲರೂ
ಒಂದು ಕ್ಷಣ ಬೆಪ್ಪಾದೆವು. "ಮೊದಲು ಮುಂದಿನ ಚೆಕ್ ಪೋಸ್ಟ್ ಅನ್ನು ತಲುಪೋಣ. ಆಮೇಲೆ ಎಲ್ಲಿಗೆ
ಹೋಗುವುದು ಎಂಬುದನ್ನು ನಿರ್ಧರಿಸೋಣ" ಎನ್ನುತ್ತಾ ಕಾರ್ ಚಲಾಯಿಸತೊಡಗಿದರು ನವೀನ್.
ಕಾರ್ ಮುಂದೆ ಮುಂದೆ ಸಾಗುತ್ತಿದ್ದಂತೆ ರಸ್ತೆಯ ಎರಡೂ
ಬದಿಯಲ್ಲಿ ಹಚ್ಚ ಹಸಿರಿನಿಂದ ಕೂಡಿದ ಮರಗಳು, ನಿಮಿಷಕ್ಕೊಮ್ಮೆ ಬರುವ ತಿರುವುಗಳು, ತಂಪಾದ ವಾತಾವರಣ
ಮನಸ್ಸಿಗೆ ಆಹ್ಲಾದವನ್ನೇ ಉಂಟುಮಾಡುತ್ತಿದ್ದವು. ಆದರೆ ತಿರುವಿನಿಂದ ಕೂಡಿದ ರಸ್ತೆಗಳಲ್ಲೂ ಸಹ ಅತ್ಯಂತ
ವೇಗವಾಗಿ ಬರುತ್ತಿದ್ದ ವಾಹನಗಳು ಮಾತ್ರ ಸ್ವಲ್ಪ ಭಯವನ್ನು ಉಂಟುಮಾಡುತ್ತಿತ್ತು. ರಸ್ತೆಯ ಬದಿಯಲ್ಲಿದ್ದ
'ಸಿರಿಮನೆ ಫಾಲ್ಸ್' ಎಂಬ ಬೋರ್ಡ್ ಅನ್ನು ನೋಡಿ ಅಲ್ಲಿಗೆ ಹೋಗೋಣ ಎಂದು ನಿರ್ಧರಿಸಿ ಆ ಕಡೆಗೆ ಕಾರ್
ಹಾಗೂ ಸ್ಕೂಟಿ ತಿರುಗಿತು.
ಅಂತೂ ಎಲ್ಲೂ ಕಾರ್ ನಿಲ್ಲಿಸದೆ ಎರಡನೇ ಚೆಕ್ ಪೋಸ್ಟ್
ಅನ್ನು ತಲುಪಿ ಕಾರ್ ಅನ್ನು ನಿಲ್ಲಿಸಿದೆವು. ಎಲ್ಲರೂ ಕಾರ್ ನಿಂದಿಳಿದು ಅಲ್ಲೇ ಇದ್ದ ಹೋಟೆಲ್ ನತ್ತ
ನಡೆದೆವು. ಹೋಟೆಲ್ ಸಣ್ಣದಿದ್ದರೂ ಅತ್ಯಂತ ಶುಚಿಯಾಗಿತ್ತು. ರುಚಿಯಾದ ಊಟವನ್ನು ಮಾಡಿ, ಸಿರಿಮನೆ ಫಾಲ್ಸ್
ಗೆ ಹೋಗುವ ದಾರಿಯನ್ನು ಅಲ್ಲಿದ್ದವರ ಬಳಿ ವಿಚಾರಿಸಿದೆವು.
ಮುಂದೆ ಸಾಗುತ್ತಿದ್ದಂತೆ ಒಂದು ತೂಗುಸೇತುವೆ ಸಿಕ್ಕಿತು.
ಅದನ್ನು ನೋಡಿ, ಸಿರಿಮನೆ ಫಾಲ್ಸ್ ನತ್ತ ಸಾಗಿದೆವು. ರಸ್ತೆಯು ಕಿರಿದಾಗುತ್ತಾ ಬಂತು. ರಸ್ತೆಯ ಒಂದು
ಬದಿ ಹಸಿರಿನಿಂದ ಕೂಡಿದ ಗದ್ದೆ. ಮುಂದೆ ಸಾಗುತ್ತಿದ್ದಂತೆ ಒಂದು ಎಡ ಬದಿಗೂ, ಇನ್ನೊಂದು ಮುಂದಕ್ಕೂ
ರಸ್ತೆಗಳಿದ್ದವು. ಈಗ ಯಾವ ರಸ್ತೆಯಲ್ಲಿ ಹೋಗುವುದೆಂಬ ಗೊಂದಲ. ಒಬ್ಬೊಬ್ಬರು ಅವರವರ ಲೆಕ್ಕಾಚಾರದಂತೆ
ದಾರಿಯನ್ನು ನಿರ್ದೇಶಿಸಿತೊಡಗಿದರು. ಮೊಬೈಲ್ ನಲ್ಲಿ ನೋಡಣವೆಂದರೆ ಆ ಕಾಡಿನಲ್ಲಿ ನೆಟ್ ವರ್ಕ್ ಸಿಗಬೇಕೆ.
ಏನೇ ಆಗಲಿ ಎಂದು ಎಡ ಬದಿಯ ರಸ್ತೆಯಲ್ಲಿ ಸಾಗಿದೆವು. ಸ್ವಲ್ಪ ಮುಂದೆ ಹೋದರೆ ರಸ್ತೆಯೇ ಇಲ್ಲ. ತಿರುಗಿ
ಬಂದು ಇನ್ನೊಂದು ರಸ್ತೆಯಲ್ಲಿ ಸಾಗಿದವು. ಅಂತೂ ಕೊನೆಗೂ ಸಿರಿಮನೆ ಜಲಪಾತವನ್ನು ತಲುಪಿದೆವು.
Comments
Post a Comment