ಓದಿನ ಸುಖ "ಪತ್ನಿಯರು ಕಂಡಂತೆ ಪ್ರಸಿದ್ಧರು"
ಪುಸ್ತಕದ ಹೆಸರು: ಪತ್ನಿಯರು ಕಂಡಂತೆ ಪ್ರಸಿದ್ಧರು
ಲೇಖಕರು: ಬಿ. ಎಸ್. ವೆಂಕಟಲಕ್ಷ್ಮಿ
ಪ್ರಕಾಶಕರು: ಅಹರ್ನಿಶಿ ಪ್ರಕಾಶನಪುಸ್ತಕದ ಬೆಲೆ: 300₹
ಸಾಧಕರ ಜೀವನ ಯಾವಾಗಲೂ ಕಷ್ಟದ ಹಾದಿ. ಅದು ಕೇವಲ ಆ ವ್ಯಕ್ತಿಯೊಬ್ಬನ ಪರಿಶ್ರಮ ಹಾಗೂ ತ್ಯಾಗವನ್ನು ಬೇಡದೇ ಹಲವಾರು ಜನರ ತ್ಯಾಗದ ಫಲ. ಒಮ್ಮೆ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದನೋ ಆಗ ಅಂತಹ ವ್ಯಕ್ತಿತ್ವದ ಬಗ್ಗೆ ಎಲ್ಲರಿಗೂ ಕುತೂಹಲ ಸಹಜ. ಅಂತಹ ನಮ್ಮ ಮನುಷ್ಯ ಸಹಜವಾದ ಕುತೂಹಲವನ್ನು ಮಾತ್ರ ತಣಿಸದೇ ಅವರ ಕಷ್ಟದ ಹಾದಿಯನ್ನ ಸವೆಸಲು ಅವರ ಜೊತೆ ನಡೆದ ಅವರ ಪತ್ನಿಯರ ಅನುಭವಗಳ ಗುಚ್ಛವೇ 'ಪತ್ನಿಯರು ಕಂಡಂತೆ ಪ್ರಸಿದ್ಧರು' ಪುಸ್ತಕ. ಈ ಪುಸ್ತಕದಲ್ಲಿ ಒಟ್ಟು 40 ವಿವಿಧ ಕ್ಷೇತ್ರಗಳ ಸಾಧಕರ ಪತ್ನಿಯರನ್ನು ಲೇಖಕಿಯು ಸಂದರ್ಶಿಸಿದ್ದಾರೆ. ಇವರೆಲ್ಲರೂ ತಮ್ಮ ಪತಿಯ ಸಾಧನೆಗೆ ಬೆನ್ನೆಲುಬಾಗಿ ನಿಂತವರು. ಇಲ್ಲಿ ತಮ್ಮ ಮನದ ಮಾತನ್ನು ,ತಮ್ಮ ಕೌಟುಂಬಿಕ ಜೀವನದ ಸುಖ ದುಃಖಗಳನ್ನು ಹೇಳಿದ್ದಾರೆ.
ಪ್ರಸಿದ್ಧ ವೀಣಾ ವಾದಕರಾದ ದೊರೆಸ್ವಾಮಿ ಅಯ್ಯಂಗಾರರ ಪತ್ನಿ ಶಾರದಮ್ಮನವರು ತಮ್ಮ ಪತಿಯ ಸರಳ ಶುದ್ಧ ಮನಸ್ಸಿನ ಬಗ್ಗೆ ಹೇಳಿದ್ದಾರೆ. ವರ್ಣಮಯ ಬದುಕಿನ ದುಃಖ, ಬೇಗುದಿ, ಆತಂಕದ ಜೊತೆ ಜೊತೆಗೆ ನಾಟಕ ಕಂಪೆನಿಗಳ ಹಾಗೂ ಸಿನಿಮಾ ಅನುಭವಗಳನ್ನು ಹಂಚಿಕೊಂಡಿದ್ದಾರೆ ಕನ್ನಡದ ವರನಟ ರಾಜಕುಮಾರ್ ಅವರ ಪತ್ನಿ ಪಾರ್ವತಮ್ಮನವರು. ಬಾಹ್ಯಾಕಾಶ ವಿಜ್ಞಾನಿಗಳು, ಇಸ್ರೋದ ಮಾಜಿ ಅಧ್ಯಕ್ಷರಾದ ಯು. ಆರ್. ರಾವ್ ಅವರ ಸರಳ ನಡೆಯನ್ನು ಹಾಗೂ ಅವರು ತಮ್ಮ ಪತ್ನಿಗೆ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಪತ್ನಿಯ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಸರಳವಾಗಿ ಬದುಕುತ್ತಾ, ಎಷ್ಟೇ ಒತ್ತಡದ ಸಂದರ್ಭದಲ್ಲೂ ಶಾಂತಿಯಿಂದ ಇರುವ ಅವರ ವರ್ತನೆಯ ಬಗ್ಗೆ ಹೆಮ್ಮಯಿಂದ ಮಾತನಾಡಿದ್ದಾರೆ ಅವರ ಪತ್ನಿ ಯಶೋದಾ ಯು. ಆರ್. ರಾವ್. ಛಾಯಾಗ್ರಹಣದ ಹವ್ಯಾಸದ ಬೆನ್ನುಹತ್ತಿ ಅದನ್ನೇ ಜೀವನೋಪಾಯವಾಗಿಸಿಕೊಂಡು ಕಷ್ಟ ನಷ್ಟಗಳನ್ನೆಲ್ಲಾ ಸಮಚಿತ್ತದಿಂದ ಎದುರಿಸಿದ ಪತಿ, ಭಾರತದ ಪ್ರಖ್ಯಾತ ಫೋಟೋ ಜರ್ನಲಿಸ್ಟ್ ಟಿ.ಎಸ್. ಸತ್ಯನ್ ಬಗ್ಗೆ ಅವರ ಪತ್ನಿ ರತ್ನಾ ಸತ್ಯನ್ ತಮ್ಮ ಪತಿಯೊಂದಿಗಿನ ಒಡನಾಟವನ್ನು ದಾಖಲಿಸಿದ್ದಾರೆ. ಪ್ರಸಿದ್ಧ ವಿಜ್ಞಾನಿ, ಅಂತರರಾಷ್ಟ್ರೀಯ ವೈಜ್ಞಾನಿಕ ಕ್ಷೇತ್ರದಲ್ಲಿನ ಅತ್ಯಂತ ಗೌರವಾನ್ವಿತ ಹಾಗೂ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಒಬ್ಬರೆನಿಸಿರುವ ಸಿ.ಎನ್.ಆರ್.ರಾವ್ ಅವರ ಕಲಾ ಆಸಕ್ತಿ ವಿದೇಶದಲ್ಲಿ ತಮ್ಮ ಪತ್ನಿಯ ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹವನ್ನು ಅವರ ಪತ್ನಿ ಇಂದುಮತಿ ರಾವ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇವೆಲ್ಲದರ ಜೊತೆಗೆ ಪ್ರಸಿದ್ಧರ ಪತ್ನಿಯಾಗಿದ್ದೂ ಅತ್ಯಂತ ವಿಷಾದದ, ಸಂಕಟದ ಜೀವನವನ್ನು ಸಾಗಿಸಿದ ಕಮಲಮ್ಮ ರಾಮಮೂರ್ತಿ ಹಾಗೂ ಅನಂತಲಕ್ಷ್ಮಿಯವರ ಮಾತುಗಳನ್ನು ಓದಿದಾಗ ಮನಸ್ಸಿಗೆ ಬಹಳ ಖೇದವೆನಿಸುತ್ತದೆ. ಪ್ರಸಿದ್ಧ ವೀಣಾವಾದಕರಾದ ಸೂರ್ಯನಾರಾಯಣ ಅವರ ಪತ್ನಿ ಅನಂತಲಕ್ಷ್ಮಿ ತಮ್ಮ ಪತಿಯ ಎಲ್ಲಾ ಶೋಕಿಗಳ ಬಗ್ಗೆ ನೇರವಾಗಿ ಹೇಳುತ್ತಾ, ತಮ್ಮ ಸ್ವಂತ ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರವನ್ನು, ಮಗಳ ಆಪರೇಷನ್ ಗೆ ಹಣ ಖರ್ಚು ಮಾಡುವುದು ವ್ಯರ್ಥ ಎನ್ನುವ ತಮ್ಮ ಗಂಡನ ಬಗ್ಗೆ ನೇರವಾಗಿ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಆದರೆ ಪತಿಯ ವಿದ್ವತ್ತಿನ ಬಗ್ಗೆ ಗೌರವವಿದೆ. "ಮುಂದಿನ ಜನ್ಮದಲ್ಲಿ ನಂಗೆ ಖಂಡಿತವಾಗಿಯೂ ಸಂಗೀತಗಾರನಾದ ಗಂಡ ಸಿಗೋದು ಬೇಡ" ಎಂಬ ಅವರ ಮಾತು ಕೇಳಿದಾಗಲೇ ಅವರು ಜೀವನದಲ್ಲಿ ಎಷ್ಟು ನೊಂದಿರಬಹುದು ಎಂದು ನಾವು ತಿಳಿಯಬಹುದು.
ಇನ್ನು ಕಮಲಮ್ಮ ಅವರು ಖ್ಯಾತ ಪತ್ತೇದಾರಿ ಕಾದಂಬರಿಕಾರ ಎಂದು ಪ್ರಸಿದ್ಧರಾಗಿದ್ದ, ಕನ್ನಡ ಬಾವುಟವನ್ನು ರಚಿಸಿದ ಮ. ರಾಮಮೂರ್ತಿಯವರ ಪತ್ನಿ. ಅತಿ ಚಿಕ್ಕ ವಯಸ್ಸಿನಲ್ಲೇ ಒಂದು ದುರಂತದಲ್ಲಿ ತಮ್ಮ ಇಬ್ಬರು ಮಕ್ಕಳು ಹಾಗೂ ಪತಿಯನ್ನು ಕಳೆದುಕೊಂಡ ಕಮಲಮ್ಮನವರು ಒಂಟಿಯಾಗಿ ಜೀವನವನ್ನು ನಡೆಸುತ್ತಾ ತಮ್ಮ ಪತಿಯ ಬರವಣಿಗೆ ಹಾಗೂ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಲೇಖಕಿ ಶ್ರವಣಕುಮಾರಿ ಅವರು ವಿಶ್ವವಾಣಿ ಪತ್ರಿಕೆಯಲ್ಲಿ ತಾವು ಕಮಲಮ್ಮನವರನ್ನು ಭೇಟಿ ಮಾಡಿದ ಬಗ್ಗೆ ಬರೆದ ಲೇಖನವನ್ನು ಓದಿದಾಗ ನನಗೆ ನೆನಪಾಗಿದ್ದು ಇದೇ ಪುಸ್ತಕ.
ಒಬ್ಬರು ಕಲಾವಿದರಾದರೆ, ಇನ್ನೊಬ್ಬರು ವೈದ್ಯರು, ಮತ್ತೊಬ್ಬರು ವಿಜ್ಞಾನಿಗಳು, ಮಗದೊಬ್ಬರು ಅಧಿಕಾರಿಗಳಾದರೆ, ಮತ್ತೊಬ್ಬರು ರಾಜಕಾರಣಿಗಳು, ಇನ್ನು ಕೆಲವರು ಸಾಹಿತಿಗಳು ಹೀಗೆ ಎಲ್ಲಾ ಕ್ಷೇತ್ರದ ಸಾಧಕರ ಪತ್ನಿಯರ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ ಲೇಖಕಿ. ಎಲ್ಲಾ ಸಂದರ್ಶನಗಳ ಸಾರಾಂಶವೆಂದರೆ ಪತ್ನಿಯರ ಮೂಲ ಉದ್ದೇಶ ತಮ್ಮಿಂದಾಗಿ ತಮ್ಮ ಪತಿಗೆ ಸಾಧಿಸುವ ಕ್ಷೇತ್ರದಲ್ಲಿ ಯಾವುದೇ ತೊಂದರೆಯಾಗಬಾರದು. ಅಲ್ಲದೇ ಕುಟುಂಬದ ಯಾವುದೇ ಜವಾಬ್ದಾರಿಗಳು ತಮ್ಮ ಗಂಡನ ಮೇಲೆ ಬೀಳದಂತೆ ನೋಡಿಕೊಂಡು ಏಕಾಂಗಿಯಾಗಿ ನಿಭಾಯಿಸಿದವರು. 'ಪ್ರತೀ ಯಶಸ್ವೀ ಪುರುಷನ ಹಿಂದೆ ಮಹಿಳೆಯಿರುತ್ತಾಳೆ' ಎಂಬ ಮಾತು ಅಕ್ಷರಶಃ ಸತ್ಯ ಎಂಬುದು ಈ ಪುಸ್ತಕವನ್ನು ಓದಿದಾಗ ತಿಳಿಯುತ್ತದೆ.
Comments
Post a Comment