ಅಪ್ಪನೆಂದರೆ.....
ಮಗಳಿಗೆ
ಅಪ್ಪನೇ ಸರ್ವಸ್ವ. ಅಪ್ಪನ ಪ್ರೀತಿಯ ಅಪ್ಪುಗೆ, ಮಾರ್ಗದರ್ಶನ ಜೀವನದಲ್ಲಿ ಮುನ್ನಡೆಯಲು ಧೈರ್ಯವನ್ನು
ಕೊಡುವ ಸಾಧನ.
ನನಗೆ ನನ್ನ ಅಪ್ಪನೆ ರೋಲ್ ಮಾಡೆಲ್. ಯಾವುದೇ ಕೆಲಸ ಮಾಡೋ ಮುಂಚೆ 'ನಾನಿದ್ದೇನೆ ಹೆದರಬೇಡ' ಅನ್ನೋ ಅಪ್ಪನ ಮಾತು ಎಷ್ಟೇ ಕಷ್ಟವಾದ ಕೆಲಸವನ್ನು ಮಾಡಲು ಧೈರ್ಯವನ್ನು ಕೊಡುತ್ತಿತ್ತು.
ಚಿಕ್ಕವಳಿದ್ದಾಗ ಚಿತ್ರಕ್ಕೆ ಬಣ್ಣ ತುಂಬುವುದರಿಂದ ಹಿಡಿದು ನನ್ನ ಬಟ್ಟೆ ಸೆಲೆಕ್ಷನ್ ವರೆಗೆ ಅಪ್ಪ ಇರಬೇಕಿತ್ತು. ಹಾಗಂತ ಯಾವತ್ತೂ ಅಪ್ಪ ತಮ್ಮ ಅಭಿಪ್ರಾಯವನ್ನು ನಮ್ಮ ಮೇಲೆ ಹೇರುತ್ತಿರಲಿಲ್ಲ. ನನ್ನ ಜೀವನದ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಬಾಲ್ಯದಲ್ಲಿ ಮಾರ್ಗದರ್ಶಕನಾಗಿದ್ದ ಅಪ್ಪ, ಕಾಲೇಜಿಗೆ ಹೋಗುವಾಗ ಬೆಸ್ಟ್ ಫ್ರೆಂಡ್.
ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲದರ ಬಗ್ಗೆಯೂ ಅಪ್ಪನ ಜೊತೆ ಹಂಚಿಕೊಳ್ಳುತ್ತೇನೆ. ಎಂತಹ ಸಂದಿಗ್ಧ ಸಮಯದಲ್ಲಿಯೂ ಅಪ್ಪನ ಬಳಿ ಮಾತನಾಡಿದರೆ ಮನಸ್ಸಿಗೆ ಸಮಾಧಾನ.
ನಾನಾಗ ಡಿಗ್ರಿಯಲ್ಲಿದ್ದೆ. ಪರೀಕ್ಷಾ ಸಮಯ. ಬೇರೆ ದಿನಗಳಲ್ಲಿ ಎರಡು ಕಿಲೋಮೀಟರ್ ದೂರವನ್ನು ನಡೆದು ಬಸ್ ಸ್ಟಾಂಡ್ ನ್ನು ತಲುಪುತ್ತಿದ್ದೆ. ಆದರೆ ಅದು ಪರೀಕ್ಷೆಯ ಸಮಯವಾದ್ದರಿಂದ ನನಗೆ ಕಷ್ಟವಾಗಬಾರದೆಂದು ಅಪ್ಪ ಬೆಳಗಿನ ತಮ್ಮ ಕೆಲಸವನ್ನು ಮುಗಿಸಿ ನನ್ನನ್ನು ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿ ಬಸ್ ಸ್ಟಾಂಡ್ ನಲ್ಲಿ ಬಿಡುತ್ತಿದ್ದರು. ಅಂದು ಎಂದಿನ ಪರೀಕ್ಷಾ ದಿನದಂತೆ ಕಾಲೇಜ್ ಗೆ ಹೊರಟಿದ್ದೆ. ಇನ್ನೇನು ಬಸ್ ಸ್ಟಾಂಡ್ ನ್ನು ತಲುಪಿದೆ ಎನ್ನುವಷ್ಟರಲ್ಲಿ ಹಾಲ್ ಟಿಕೆಟ್ ಮರೆತಿರುವುದು ನೆನಪಿಗೆ ಬಂತು. ತತ್ ಕ್ಷಣ ಅಪ್ಪನ ಬಳಿ ಹೇಳಿದೆ. ಅಪ್ಪ ಈಗ ನನ್ನನ್ನು ಬೈಯ್ಯಬಹುದು ಎಂದುಕೊಂಡೆ. ಆದರೆ ಅಪ್ಪ ಒಂದು ಮಾತು ಕೂಡ ಹೇಳದೇ ಸ್ಕೂಟಿಯನ್ನು ಮನೆ ಕಡೆ ತಿರುಗಿಸಿದರು. ವಾಪಸ್ ಮನೆಗೆ ಬಂದು ಹಾಲ್ ಟಿಕೆಟ್ ತೆಗೆದುಕೊಂಡು ಕಾಲೇಜ್ ತಲುಪಿದಾಗಲೇ ಸಮಾಧಾನವಾಗಿದ್ದು. ಪರೀಕ್ಷೆ ಮುಗಿಸಿ ಮನೆಗೆ ಬಂದಾಗ ಅಪ್ಪ ಪರೀಕ್ಷೆಯಲ್ಲಿ ಹೇಗೆ ಉತ್ತರಿಸಿದೆ ಎಂದು ಕೇಳಿದ್ದಷ್ಟೇ ಅಲ್ಲದೇ ಇನ್ನು ಮುಂದೆ ಪರೀಕ್ಷೆಗೆ ಹೋಗುವ ಮೊದಲು ಪರೀಕ್ಷೆಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡ. ಈ ಮಾತನ್ನು ಆಗಲೇ ನಿನಗೆ ಹೇಳಿದ್ದರೆ ನೀನು ಟೆನ್ಷನ್ ಮಾಡಿಕೊಂಡು ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸದಿದ್ದರೆ ಎಂದುಕೊಂಡು ಈಗ ಹೇಳುತ್ತಿದ್ದೇನೆ ಎಂದರು. ಹೀಗೆ ಅಪ್ಪ ನಮಗೆ ಬುದ್ಧಿ ಮಾತುಗಳನ್ನು ಹೇಳುವಾಗಲೂ ಸಹ ಸಮಯ ಸಂದರ್ಭವನ್ನು ನೋಡಿ ಹೇಳುತ್ತಿದ್ದರು.
ಅಪ್ಪ ಯಾವಾಗಲೂ ತಮ್ಮ ಕೆಲಸವನ್ನು ತಾವೇ ಮಾಡಿಕೊಂಡು ನಮ್ಮನ್ನು ಸ್ವಾವಲಂಬಿಗಳಾಗಲು ಪ್ರೋತ್ಸಾಹಿಸುತ್ತಿದ್ದರು. ಹಾಗಾಗಿ ನನಗೆ ಹಾಗೂ ನನ್ನ ತಮ್ಮನಿಗೆ ಉತ್ತಮ ವಿದ್ಯಭ್ಯಾಸವನ್ನು ಕೊಡಿಸಿದ್ದಲ್ಲದೇ ಪುಸ್ತಕ ಓದುವುದು, ಬರೆಯುವುದು, ಹೊಲಿಗೆ ಮುಂತಾದ ಉತ್ತಮ ಹವ್ಯಾಸಗಳನ್ನು ಕಲಿಯಲು ಸದಾ ಪ್ರೋತ್ಸಾಹಿಸುತ್ತಿದ್ದರು. ಅಪ್ಪ ದುಂದು ವೆಚ್ಚವನ್ನು ಸದಾ ವಿರೋಧಿಸುತ್ತಿದ್ದರು. ಯಾವುದೇ ವಸ್ತುಗಳನ್ನು ಖರೀದಿಸುವಾಗಲೂ ನಮ್ಮ ಅಗತ್ಯತೆಗೆ ತಕ್ಕಂತೆ ಖರೀದಿಸಿಬೇಕೆಂದು ಹೇಳುತ್ತಿದ್ದರು. ಎಂತಹ ಕ್ಲಿಷ್ಟ ಸಂದರ್ಭದಲ್ಲಿಯೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು, ಕೆಲಸದಲ್ಲಿನ ಅಚ್ಚುಕಟ್ಟುತನವನ್ನು ಅಪ್ಪನಿಂದ ಕಲಿಯುತ್ತಿದ್ದೇನೆ.
ಹೀಗೆ ನಮಗೆ ಪ್ರೀತಿಯ ಜೊತೆಗೆ ಜವಾಬ್ದಾರಿಯನ್ನು ಕಲಿಸಿದ ಅಪ್ಪನ ಒಂದು ಮುಖವನ್ನು ಮಾತ್ರ ಕಂಡಿದ್ದ ನಾನು, ನನ್ನ ಮಗಳಿಗೆ ಅಜ್ಜನಾದಾಗ ಇನ್ನೊಂದು ಮುಖವನ್ನು ಕಂಡೆ. ನಮಗೆಲ್ಲಾ ಹೆಚ್ಚು ಚಾಕಲೇಟ್ ಕೊಡಿಸದ ಅಪ್ಪ ಮೊಮ್ಮಗಳಿಗೋಸ್ಕರ ಪ್ರತೀ ಬಾರಿ ಬರುವಾಗ ವಿಧ ವಿಧವಾದ ಚಾಕಲೇಟ್ ತರುತ್ತಾರೆ. 'ಅಪ್ಪ ನಾವು ಚಿಕ್ಕವರಿದ್ದಾಗ ನೀವು ನಮಗೆ ಚಾಕಲೇಟ್ ಕೊಡಿಸಲಿಲ್ಲ' ಎಂದು ನಾನು ಹೇಳಿದರೆ 'ಈಗ ನಾನು ಅಪ್ಪನಲ್ಲ. ಅಜ್ಜ' ಎಂದು ಹೇಳಿ ನಸುನಗುತ್ತಾರೆ. ಮೊಮ್ಮಗಳನ್ನು ಹೆಗಲ ಮೇಲೆ ಕೂರಿಸಿ ತೋಟವಿಡೀ ಸುತ್ತುತ್ತಾರೆ. ಹೀಗೆ ಮೊಮ್ಮಗಳೊಂದಿಗೆ ಮಗುವಾಗಿ ಖುಷಿಯ ಕ್ಷಣಗಳನ್ನು ಕಳೆಯುವ ಅಪ್ಪನನ್ನು ಕಂಡಾಗ ನಾವೂ ಸಂತೋಷವನ್ನು ಅನುಭವಿಸುತ್ತೇವೆ.
Comments
Post a Comment