ಅಜ್ಜಿ ಎಂಬ ಅಕ್ಕರೆಯ ತಂತು

ನಾಲ್ಕು ತಲೆಮಾರುಗಳನ್ನು ಬೆಸೆದ ಪ್ರೀತಿಯ ಕೊಂಡಿ 
 
ಅಜ್ಜಿಯ ಪುಳ್ಳಿ 

ಸಂಬಂಧಗಳೇ ಹಾಗೇ. ಬತ್ತಿದ ಎದೆಯಲ್ಲಿ ಪ್ರೀತಿಯ ಅಮೃತ ಸಿಂಚನವನ್ನು ಸುರಿಸುವ ಸ್ವಾತಿ ಹನಿಯಂತೆ. ಒಡಹುಟ್ಟಿದವರಲ್ಲಿ ಪ್ರೀತಿಯ ಜೊತೆಗೆ ಸಣ್ಣ ಮುನಿಸು ಜಗಳಗಳು ಕಾಮನ್. ತಂದೆ ತಾಯಿಗೆ ಮಕ್ಕಳ ಮೇಲೆ ಪ್ರೀತಿಯಿದ್ದರೂ ಸಹ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ ಜವಾಬ್ದಾರಿಯೂ ಇರುತ್ತದೆ. ಆದರೆ ಅಜ್ಜಿ ಮತ್ತು ಮೊಮ್ಮಕ್ಕಳ ಮಧ್ಯೆ ಅಂತಃಕರಣ ತುಂಬಿದ ಪ್ರೀತಿ ಮತ್ತು ಪ್ರೀತಿ ಮಾತ್ರವೇ ಇರಲು ಸಾಧ್ಯ.

 ನನಗೆ ಅಜ್ಜಿ ಎಂದಾಗ ನೆನಪು ಬರುವುದು ನನ್ನ ಅಮ್ಮನ ಅಮ್ಮ. ಅಪ್ಪನ ಅಮ್ಮ ಬಹಳ ಬೇಗ ತೀರಿ ಹೋಗಿದ್ದರಿಂದ ನನ್ನ ಒಡನಾಟವೆಲ್ಲ ಅಮ್ಮನ ಅಮ್ಮನಾದ ಅಜ್ಜಿಯೊಂದಿಗೆ. ನಾವು ಶಾಲೆಗೆ ರಜೆ ಸಿಕ್ಕಿದಾಗಲೆಲ್ಲ ಓಡುತ್ತಿದ್ದುದೇ ಅಜ್ಜಿ ಮನೆಗೆ. ಅಜ್ಜಿಯ ಮಡಿಲು ನಮಗೆ ಸ್ವರ್ಗ ಸುಖವನ್ನೇ ಕೊಡುತ್ತಿತ್ತು. ಎಷ್ಟೇ ಜನ ಮೊಮ್ಮಕ್ಕಳು ಬಂದಿರಲಿ ಅವರ ಬೇಕು ಬೇಡಗಳನ್ನು ನೋಡಿಕೊಂಡು ಅವರಿಗಿಷ್ಟವಾದ ತಿಂಡಿ-ತಿನಿಸುಗಳನ್ನು ಮಾಡಿಕೊಡುತ್ತಾ ನಮ್ಮ ಪಾಲಿಗೆ ಅಜ್ಜಿ ಸಾಕ್ಷಾತ್ ಅನ್ನಪೂರ್ಣೆಯಾಗಿದ್ದರು. ಬೇಸಿಗೆಯಲ್ಲಿ ಹಲಸಿನ ಹಪ್ಪಳ ತಯಾರಿಸುವ ಸಂಭ್ರಮ. ಆಗ ಅಜ್ಜಿ ನಮ್ಮೊಂದಿಗೆ ಶಿಶುಗೀತೆಗಳನ್ನು ಹಾಡಿ, ಒಗಟುಗಳನ್ನು ಬಿಡಿಸಿ, ಬಾಯಿ ಲೆಕ್ಕಗಳನ್ನು ಬಿಡಿಸಿ ನಾವು ಸದಾ ಎಂಗೇಜ್ ಆಗಿರುವಂತೆ ನೋಡಿಕೊಳ್ಳುತ್ತಿದ್ದರು. ಸದಾ ಕ್ರಿಯಾಶೀಲರಾಗಿರುತ್ತಿದ್ದ ಅಜ್ಜಿ ತಮ್ಮ ಮುಖದಲ್ಲಿನ ನಗುವನ್ನು ಮಾಸದಂತೆ ನೋಡಿಕೊಳ್ಳುತ್ತಿದ್ದರು. ತಮ್ಮ ಬಿಡುವಿಲ್ಲದ ಕೆಲಸದ ನಡುವೆ ಪುಸ್ತಕಗಳನ್ನು ಓದುತ್ತಿದ್ದರು, ತುಂಬಾ ಚೆನ್ನಾಗಿ ಹಾಡನ್ನು ಹಾಡುತ್ತಿದ್ದರು. ಇಂತಹ ಅಜ್ಜಿ ನನಗೆ ಮಗಳು ಹುಟ್ಟಿದಾಗ ತಮ್ಮ ಅನಾರೋಗ್ಯವನ್ನು ಸಹ ಲೆಕ್ಕಿಸದೆ ನನ್ನ ಬಾಳಂತನಕ್ಕೆ ಬಂದು ಅಮ್ಮನಿಗೆ ಸಲಹೆ ಸೂಚನೆಗಳನ್ನು ನೀಡಿದರು. ಹಾಗಾಗಿ ನನಗೆ ನನ್ನ ಅಜ್ಜಿಯೆಂದರೆ ಸದಾ ಬತ್ತದ ಪ್ರೀತಿಯ ಚಿಲುಮೆ.

 ಮಗಳು ಹುಟ್ಟಿದ ಸ್ವಲ್ಪ ಸಮಯದಲ್ಲೇ ಎಲ್ಲಾ ಕಡೆಯೂ ಕೊರೋನ ಹಬ್ಬಿ ಲಾಕ್ ಡೌನ್ ಆದಾಗ ನಾವು ಊರಿಗೆ ಬಂದೆವು. ಹಾಗಾಗಿ ಮಗಳಿಗೂ ಸಹ ಅವಳ ಅಜ್ಜಿಯ ಒಡನಾಟ ದೊರೆಯಿತು. ಅವಳಿಗಂತೂ ಎಲ್ಲಾ ಕೆಲಸಗಳಿಗೆ ಅಜ್ಜಿಯೇ ಬೇಕು. ಹಠ ಮಾಡಿದಾಗ ನನ್ನ ಕೋಪದ ದೊಡ್ಡ ಕಣ್ಣುಗಳನ್ನು ನೋಡಿದ ಕೂಡಲೇ ಅಜ್ಜಿ ಎಂದು ಕೂಗಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದಳು. ಊಟ ಮಾಡಲು ಮನಸ್ಸಿಲ್ಲದೆ ಇದ್ದಾಗ ನಾನು ಊಟ ಮಾಡಿಸುತ್ತಿದ್ದಂತೆ ಅಜ್ಜಿಯ ಬಳಿ ಹೋಗಿ ಬಾಯಿ ತೆರೆಯದೆ ಕುಳಿತುಕೊಳ್ಳುತ್ತಿದ್ದಳು. ಆಗ ನಾನು ಬೈಯುವಂತಿರಲಿಲ್ಲ. ಅಜ್ಜಿಯ ಮಡಿಲಲ್ಲಿ ಅವಳು ಸೇಫ್. ನಾನು ಮಗಳಿಗೆ ಸ್ನಾನ ಮಾಡಿಸುವಾಗ ಹೆಚ್ಚು ನೀರಿನಲ್ಲಿ ಆಟವಾಡಲು ಬಿಡುತ್ತಿರಲಿಲ್ಲ. ಆಗ ಅವಳು ಅಜ್ಜಿಯನ್ನು ಕರೆದು ತನ್ನ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಳು.
 ಮಗಳಿಗೆ ಒಂದೂವರೆ ವರ್ಷವಾದಾಗ ಇಂಜೆಕ್ಷನ್ ಗೆಂದು ಡಾಕ್ಟರ್ ಬಳಿ ಹೋಗಿದ್ದೆವು. ನರ್ಸ್ ಇಂಜೆಕ್ಷನ್ ಚುಚ್ಚಿದ್ದೇ ತಡ ಇವಳು "ಅಜ್ಜೀ ಅಜ್ಜೀ "ಎಂದು ಅತ್ತಳು. ನರ್ಸ್ "ಎಲ್ಲಾ ಮಕ್ಕಳು ಅಮ್ಮಾ ಎಂದು ಅತ್ತರೆ ಇವಳು ಮಾತ್ರ ಅಜ್ಜೀ ಎಂದು ಅಳುತ್ತಾಳಲ್ಲ" ಎಂದು ನಕ್ಕರು. ಅವಳ ಪ್ರಕಾರ ಯಾರೇ ಅವಳಿಗೆ ನೋವನ್ನುಂಟುಮಾಡಿದರೂ ಅಜ್ಜಿ ಅವರನ್ನು ತಡೆಯುತ್ತಾರೆ ಎಂಬ ಭಾವನೆಯಿತ್ತು. ಪುಟ್ಟ ಮಗುವಿದ್ದಾಗ ಅಜ್ಜಿ ಹಾಡುವ ಎಲ್ಲ ಹಾಡುಗಳಿಗೆ ಡಾನ್ಸ್ ಮಾಡುತ್ತಿದ್ದ ಪುಟ್ಟ ಪೋರಿ ಈಗ ಎರಡು ವರ್ಷವಾದ ಕೂಡಲೇ ಅವಳ ಹಾಡುಗಳಿಗೆ ಅಜ್ಜಿ ದನಿಗೂಡಿಸಿದರೆ "ಅಜ್ಜಿ ಇದು ನನ್ನ ಹಾಡು. ನನಗೆ ಮಾತ್ರ ಗೊತ್ತಿರೋದು. ನಿನಗೆ ಗೊತ್ತಿಲ್ಲ" ಎಂದು ಅಜ್ಜಿಯ ಬಾಯಿ ಮುಚ್ಚಿಸುತ್ತಾಳೆ. ದಿನವೂ ಅಜ್ಜಿ ಮೊಮ್ಮಗಳು ಸೇರಿ ಡಾಕ್ಟರ್ - ಪೇಷಂಟ್ ಆಟ ಆಡುತ್ತಾರೆ. ಹತ್ತಿರದ ಮನೆಗಳಲ್ಲಿ ಏನಾದರೂ ಸಣ್ಣ ಕಾರ್ಯಕ್ರಮಗಳಿದ್ದಾಗ ಅಮ್ಮನನ್ನು ಬಿಟ್ಟು ಒಬ್ಬಳೇ ಅಜ್ಜಿಯೊಂದಿಗೆ ಹೋಗಿ ಬರುತ್ತಾಳೆ. ಯಾರಾದರೂ "ನೀನು ಅಜ್ಜಿ ಪುಳ್ಳಿಯಾ (ಮೊಮ್ಮಗಳಾ)"? ಎಂದು ಕೇಳಿದರೆ ಖುಷಿಯಿಂದ ಹೌದೆನ್ನುತ್ತಾಳೆ.
 ನಾನು ತವರು ಮನೆಗೆ ಹೋದಾಗ ನನ್ನ ಅಮ್ಮನಂತೂ ಮೊಮ್ಮಗಳಿಗೋಸ್ಕರ ತಮ್ಮ ಎಲ್ಲಾ ಕೆಲಸಗಳನ್ನೂ ಬದಿಗೊತ್ತಿ ನಿಂತಿರುತ್ತಾರೆ. ಕಾಯಕವೇ ಕೈಲಾಸ ಎಂದು ಸದಾ ತೋಟ, ಹಟ್ಟಿ,ಮನೆ ಎಂದು ದುಡಿಯುವ ಅಮ್ಮನಿಗೆ ಮೊಮ್ಮಗಳ ಆಗಮನವೇ ಚೈತನ್ಯವನ್ನು ನೀಡುತ್ತದೆ. ಮಗಳಿಗೂ ಅಷ್ಟೇ ಅಜ್ಜಿಯ ಮನೆಗೆ ಹೋದ ಮೇಲೆ ಸ್ನಾನ ಮಾಡಿಸುವುದರಿಂದ ಹಿಡಿದು ರಾತ್ರಿ ಮಲಗುವ ತನಕ ಅಜ್ಜಿಯೇ ಬೇಕು. ರಾತ್ರಿ ಅಜ್ಜಿಯ ಕಾಲಿನಲ್ಲಿ ಮಲಗಿದಾಗಲೆ ಅವಳಿಗೆ ಸಮಾಧಾನ.
 ಹೀಗೆ ಇಬ್ಬರು ಅಜ್ಜಿಯಂದಿರ ಮುದ್ದಿನ ಮೊಮ್ಮಗಳಾಗಿ ಮಗಳು ಪ್ರೀತಿಯನ್ನು ಅನುಭವಿಸುತ್ತಿದ್ದರೆ ನಾನು ನನ್ನ ಬಾಲ್ಯದ ಅಜ್ಜಿ ಮನೆಯ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತೇನೆ.

 

 ನಾಲ್ಕು ತಲೆಮಾರುಗಳನ್ನು ಬೆಸೆದ ಪ್ರೀತಿಯ ಕೊಂಡಿ 

 ಅಜ್ಜಿಯ ಪುಳ್ಳಿ


Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"