ನಿನ್ನಂತಹ ಅಮ್ಮ ನಾನಾಗಲಾರೆ

      
            
                
               ಮನೆಗೆಲಸ, ಹಟ್ಟಿ, ತೋಟದ ಕೆಲಸ ಇವೆಲ್ಲವುಗಳ ಮಧ್ಯೆ ಆಯಾ ಕಾಲಕ್ಕೆ ಸಿಗುವ, ನಮ್ಮ ತೋಟದಲ್ಲಿ ಬಿಡುವ ಹಣ್ಣು, ಕಾಯಿ, ತರಕಾರಿಗಳಿಂದ ವಿಶೇಷ ರುಚಿಗಳನ್ನು ಮಾಡಲೇಬೇಕು ಎಂಬುದು ಅಮ್ಮನ ಅಲಿಖಿತ ನಿಯಮ. ಮಾವಿನಕಾಯಿ ಸಿಗುವ ಸಮಯದಲ್ಲಿ ಉಪ್ಪಿನಕಾಯಿ ಹಾಕುವ ಸಂಭ್ರಮ. ಹದವಾದ ಕಾಯಿಗಳನ್ನು ಕೊಯಿದು, ಆರಿಸಿ ತಂದು, ಚೆನ್ನಾಗಿರುವುದನ್ನು ಆರಿಸಿ, ಒರೆಸಿ, ನೀರು ತಾಕದಂತೆ ಉಪ್ಪಿನಕಾಯಿ ಹಾಕುವುದನ್ನು ನೋಡಿದರೆ ಅಮ್ಮನೇ ಉಪ್ಪಿನಕಾಯಿ ಹಾಕುವ ಇಡೀ ಯಜ್ಞ ಕಾರ್ಯದ ಪ್ರಧಾನ ಅಧ್ವರ್ಯು! ಸ್ವಲ್ಪ ನೀರು ತಾಕಿದರೂ ಉಪ್ಪಿನಕಾಯಿ ಹಾಳಾಗುವ ಸಂಭವವಿರುವುದರಿಂದ ಆ ಜಾಗ ನಮಗೆಲ್ಲಾ ನೋ ಎಂಟ್ರಿ ಪ್ರದೇಶವಾಗಿ ಬಿಡುತ್ತಿತ್ತು! ಇನ್ನು ಬೇಸಿಗೆ ಬಂತೆಂದರೆ, ನಮಗೆ ರಜಾ ಸಮಯವಾದ್ದರಿಂದ ನಮ್ಮನ್ನೂ ಸೇರಿಸಿಕೊಂಡು ಹಲಸಿನ ಹಪ್ಪಳದ ತಯಾರಿ ಶುರು. ಹಲಸಿನಕಾಯಿಯನ್ನು ಕೊಯಿದು ಅದರ ತೊಳೆ ಬಿಡಿಸಿ, ಬೇಯಿಸಿ, ಹಿಟ್ಟು ಮಾಡಿ ಹಪ್ಪಳ ಬಿಸಿಲಿನಲ್ಲಿ ಒಣಗಿಸಿ ಬೆಚ್ಚಗೆ ಇರಿಸಿದರೆ ಆ ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆಯನ್ನು ನೋಡುತ್ತಾ ಹುರಿದ ಹಪ್ಪಳ ತಿನ್ನುವ ಸುಖ ಬೋನಸ್! ಇನ್ನು ಪುನರ್ಪುಳಿ ಹಣ್ಣಾಗುವ ಸಮಯದಲ್ಲಿ ಅವುಗಳಿಂದ ಜ್ಯೂಸ್ ತಯಾರಿ, ಅನನಾಸು ಹಣ್ಣುಗಳಿಂದ ಜಾಮ್ ತಯಾರಿ ಹೀಗೆ ಕಾಲಕ್ಕೆ ತಕ್ಕಂತೆ ಅಮ್ಮ ವಿವಿಧ ರುಚಿಗಳನ್ನು ತಯಾರಿಸಿದರೆ ಅಮ್ಮನಿಗೆ ಸುಸ್ತೇ ಆಗಲ್ಲವೇನೋ ಎಂದು ಅನಿಸುತ್ತಿತ್ತು. ಇಷ್ಟನ್ನೆಲ್ಲಾ ಮಾಡುವುದಷ್ಟೇ ಅಲ್ಲದೇ ಅವುಗಳನ್ನೆಲ್ಲ ಹಾಳಾಗದಂತೆ ಕಾಪಿಡುವುದು, ನೆಂಟರಿಷ್ಟರಿಗೆ ಅದನ್ನು ಪ್ರೀತಿಯಿಂದ ಕೊಡುವುದು ಸಹ ಅಮ್ಮನಿಗೆ ಇಷ್ಟದ ಕೆಲಸವೇ. ಇನ್ನು ವಿಶೇಷ ತಿಂಡಿಗಳನ್ನು ಮಾಡಿದಾಗ ನಮ್ಮ ತೋಟದ ಕೆಲಸಕ್ಕೆ, ಸಹಾಯಕ್ಕೆ ಬರುವವರಿಗೂ ಅಮ್ಮ ಅದನ್ನು ಹಂಚುತ್ತಿದ್ದಳು. ಅವರ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರಿಗೆ ಕಳುಹಿಸಿಕೊಡುತ್ತಿದ್ದಳು. ಮಧ್ಯಾಹ್ನ ಊಟದ ಸಮಯದಲ್ಲಿ ಯಾರೇ ಗುರುತು ಪರಿಚಯವಿಲ್ಲದರಿವವರು ಬರಲಿ ಅಮ್ಮ ಅವರಿಗೆ ಊಟ ಬಡಿಸಿಯೇ ಕಳುಹಿಸುವುದು. ಅಮ್ಮ ಇಷ್ಟೆಲ್ಲಾ ಮಾಡುವಾಗ ಕಷ್ಟ ಎಂದು ನನಗೆ ಅನಿಸಿ ನಾನು ಹೇಳುತ್ತಿದ್ದ ಮಾತೊಂದೇ "ನಿನ್ನಂತಹ ಅಮ್ಮ ನಾನಾಗಲಾರೆ".        

               ನಾನು ಮದುವೆಯಾಗಿ ಗಂಡನ ಮನೆ ಸೇರಿದೆ. ತಮ್ಮ ಉದ್ಯೋಗಕ್ಕಾಗಿ ಬೆಂಗಳೂರನ್ನು ಸೇರಿದ. ಇಷ್ಟು ಸಮಯ ನಮಗೋಸ್ಕರ ದುಡಿದ ಅಮ್ಮ ಇನ್ನು ಹೇಗೆ ಸಮಯ ಕಳೆಯಬಹುದೆಂದು ಕುತೂಹಲಿಯಾಗಿದ್ದೆ. ಅಮ್ಮ ನನಗೇ ಆಶ್ಚರ್ಯವಾಗುವಂತೆ ಬದಲಾದಳು. ಮೊದಲು ಸ್ಮಾರ್ಟ್ ಫೋನ್ ನ ಬಳಕೆಯನ್ನು ನಮ್ಮಿಂದ ಕಲಿತಳು. ನಂತರ ಯೂಟ್ಯೂಬ್ ನ್ನು ನೋಡಿ ಹೊಸ ರುಚಿಗಳ ತಯಾರಿಯನ್ನು ಕಲಿತಳು .ಅಪಾರ ಪರಿಶ್ರಮ ಹಾಗೂ ತಾಳ್ಮೆ ಬೇಡುವ ಸಾಂಪ್ರದಾಯಿಕ ತಿಂಡಿಗಳಾದ ಅತ್ತಿರಸ, ಗೋಧಿ ಹಲ್ವಾ ಮುಂತಾದ ವಿಶೇಷ ರುಚಿಗಳನ್ನು ತಯಾರಿಸುವುದು ಹಾಗೂ ಈಗಿನವರು ಇಷ್ಟ ಪಡುವ ಪಾನಿ ಪೂರಿ, ಕೇಕ್ ಮುಂತಾದ ಹೊಸ ರುಚಿಗಳ ತಯಾರಿಯನ್ನು ಕೂಡ ಶ್ರದ್ಧೆಯಿಂದ ಮಾಡತೊಡಗಿದಳು. ಕೆಲವು ಹೊಲಿಗೆ ಕಲಿಸುವ ಚಾನೆಲ್ ಗಳನ್ನು ನೋಡಿ ತಾನು ಅಂದು ಕಲಿತ ಹೊಲಿಗೆಗಳನ್ನು ಜ್ಞಾಪಿಸಿ ತನಗೆ ಬೇಕಾದ ರವಿಕೆಗಳನ್ನು ಹೊಲಿದುಕೊಳ್ಳುತ್ತಾಳೆ, ತನ್ನ ಬಿಡುವಿರದ ಮನೆಕೆಲಸ ಹಾಗೂ ಹಟ್ಟಿಕೆಲಸದ ನಡುವೆ. "ಅಮ್ಮಾ, ಯಾಕೆ ಇಷ್ಟೊಂದು ಕಷ್ಟ ಪಡ್ತಿಯ? ಇನ್ನಾದರೂ ಕೆಲಸ ಕಮ್ಮಿ ಮಾಡಬಾರದಾ?" ಎಂದು ನಾನು ಆಕ್ಷೇಪಿಸಿದರೆ "ಇದೆಲ್ಲಾ ನನಗಿಷ್ಟ. ನನಗೋಸ್ಕರ ನಾನು ಮಾಡುತ್ತಿದ್ದೇನೆ" ಎಂದು ಹೇಳಿ ನನ್ನ ಬಾಯಿ ಮುಚ್ಚಿಸುತ್ತಾಳೆ. ಇನ್ನು ಮೊಬೈಲ್ ನಲ್ಲಿ ಮೈಲಾಂಗ್ , ಮೊಮ್ಸ್ಪ್ರೆಸ್ಸೋ ಆಪ್ ಗಳ ಬಳಕೆಯನ್ನು ಹೇಳಿಕೊಟ್ಟ ಮೇಲೆ ಅವುಗಳಲ್ಲಿ ಪುಸ್ತಕಗಳನ್ನು ಹಾಗೂ ಲೇಖನಗಳನ್ನು ಓದುತ್ತಾ ತನ್ನ ಓದುವ ಹವ್ಯಾಸವನ್ನು ಪುನಃ ಶುರುಮಾಡಿದ್ದಾಳೆ. ಅಲ್ಲದೇ ನಾನು ಖರೀದಿಸಿದ ಪುಸ್ತಕಗಳನ್ನು ಓದಿ ಅಭಿಪ್ರಾಯವನ್ನು ತಿಳಿಸುತ್ತಾಳೆ. "ನಮಗೋಸ್ಕರ ಎಷ್ಟೆಲ್ಲಾ ಕಷ್ಟಪಟ್ಟೆ ನೀನು" ಎಂದು ನಾನು ಹೇಳಿದರೆ "ನನ್ನ ಅಮ್ಮ ಪಟ್ಟ ಕಷ್ಟಗಳ ಮುಂದೆ ಇದೆಲ್ಲಾ ಏನೂ ಅಲ್ಲ" ಎಂದು ಹೇಳಿ ನನ್ನ ಬಾಯಿ ಮುಚ್ಚಿಸುತ್ತಾಳೆ.

          ಸದಾ ಏನಾದರೊಂದು ಕೆಲಸ ಮಾಡುತ್ತಾ, ತನ್ನ ಹವ್ಯಾಸಗಳನ್ನೆಲ್ಲ ಬದಿಗೊತ್ತಿ ತನಗೋಸ್ಕರ ಎಂದು ಒಂದು ದಿನವೂ ಬದುಕದ ಅಮ್ಮನನ್ನು ನೋಡಿ ನಾನು ಯಾವಾಗಲೂ ಹೇಳುತ್ತಿದ್ದೆ "ನಿನ್ನಂತಹ ಅಮ್ಮ ನಾನಾಗಲಾರೆ". ಆದರೆ ನಾನೇ ಅಮ್ಮನಾದಾಗ??! ಮಗಳಿಗೋಸ್ಕರ ಇಡೀ ದಿನ ಕೊಟ್ಟರೂ ಸಮಾಧಾನವಿಲ್ಲ. "ಬಾ, ಸ್ವಲ್ಪ ದಿನ ತವರಲ್ಲಿ ಇರು. ಮಗಳು ಶಾಲೆಗೆ ಹೋಗಲು ಶುರುಮಾಡಿದರೆ ಬರಲು ಸಾಧ್ಯವಾಗಳಿಕ್ಕಿಲ್ಲ" ಎಂದು ಅಮ್ಮ ಕರೆದರೆ ಗಂಡನಿಗೆ ಅಡುಗೆ ಮಾಡಲು ಬಂದರೂ ಎರಡು ದಿನ ಅಮ್ಮನ ಮನೆಗೆ ಹೋಗಿ ವಾಪಾಸ್ಸು ಬರುತ್ತೇನೆ. ನನಗೆ ಇಷ್ಟದ ತಿನಿಸುಗಳ ಪಟ್ಟಿ ಮರೆತು, ಮಗಳು ಹಾಗೂ ಗಂಡನ ಇಷ್ಟವೇ ನನ್ನ ಆಯ್ಕೆಯೂ ಆಗಿದೆ. ಇದನ್ನೆಲ್ಲಾ ನೋಡಿ ಅಮ್ಮ "ನನ್ನಂತಹ ಅಮ್ಮ ಆಗಲಾರೆ ಎಂದು ಹೇಳಿದವಳು ನೀನೇ ತಾನೆ?" ಎಂದು ನಗುತ್ತಾರೆ. ಆಗ ನನ್ನದು ಚಕ್ರ ತಿರುಗಿದ ಭಾವ!!

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"