ಓದಿನ ಸುಖ "ನೆನಪೇ ಸಂಗೀತ"
ಪುಸ್ತಕದ ಹೆಸರು : ನೆನಪೇ ಸಂಗೀತ
ಲೇಖಕರು : ವಿದ್ಯಾಭೂಷಣರು
೯೦ ರ ದಶಕದಲ್ಲಿ ಬಾಲ್ಯವನ್ನು ಕಳೆದ ನಮ್ಮಂತಹವರ ಬೆಳಗು ಶುರುವಾಗುತ್ತಿದ್ದುದೇ 'ಆಡಿಸಿದಳು ಯಶೋದೆ' , 'ಪಿಳ್ಳಂಗೋವಿಯ ಚೆಲುವ ಕೃಷ್ಣನ' ಮುಂತಾದ ವಿದ್ಯಾಭೂಷಣರ ಹಾಡುಗಳಿಂದ. ಈ ಹಾಡುಗಳನ್ನು ಬೇರೆ ಬೇರೆ ಹಾಡುಗಾರರು ಹಾಡಿದ್ದರೂ, ಇವತ್ತಿಗೂ ಸಹ ಈ ಹಾಡುಗಳನ್ನು ಗುನುಗುನಿಸುವಾಗ ವಿದ್ಯಾಭೂಷಣರ ಜೇನಿನ ಕಂಠವೇ ನಮ್ಮ ಮನದಲ್ಲಿ ಮೂಡುವುದು. ಅಷ್ಟು ಮಧುರವಾದ ಧ್ವನಿ ಅವರದ್ದು. ಅವರ ಧ್ವನಿಯಷ್ಟೇ ಮಧುರವಾದ, ಸುಲಲಿತ ಶೈಲಿಯಲ್ಲಿ , ಅವರು ತಮ್ಮ ಜೀವನದ ಬಗ್ಗೆ ಬರೆದ ಪುಸ್ತಕವೇ 'ನೆನಪೇ ಸಂಗೀತ'.
ಸನ್ಯಾಸವೆನ್ನುವುದು ಭಾರತೀಯ ಸಂಸ್ಕೃತಿಯ ಪರಮೋಚ್ಚ ಸಂಗತಿ. ತ್ಯಾಗವೆಂಬ ಅತಿ ಶ್ರೇಷ್ಠ ಜೀವನ ಮೌಲ್ಯವೇ ಅದರ ಮೂಲ. ಆದರೆ ಅದು ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿಲ್ಲದೆ ಬೇರೆಯವರ ಹಿತಾಸಕ್ತಿಗೆ ಅಥವಾ ಒತ್ತಾಯಕ್ಕೆ ಕಟ್ಟುಬಿದ್ದು ಸ್ವೀಕರಿಸಿದರೆ ಸನ್ಯಾಸವೂ ಕೂಡ ಬಂಧನವೆ ಎಂದು ಈ ಪುಸ್ತಕವನ್ನು ಓದಿದಾಗ ಅನಿಸುತ್ತದೆ.
ಪುಸ್ತಕದ ಆರಂಭದಲ್ಲಿ ವಿದ್ಯಾಭೂಷಣರು ತಮ್ಮ ಬಾಲ್ಯ ಜೀವನ, ಪೂರ್ವಾಶ್ರಮದ ಹಿರಿಯರ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಬಾಲ್ಯದಿಂದಲೂ ವಿದ್ಯಾಭೂಷಣರಿಗೆ ಸನ್ಯಾಸದ ಬಗ್ಗೆ ಅಷ್ಟೇನು ಒಲವಿರಲಿಲ್ಲ. ಒಬ್ಬ ಜನ ಸಾಮಾನ್ಯನ ಆಸೆಗಳಾದ ಮೆಚ್ಚಿನ ಮಡದಿ, ಬೆಚ್ಚನೆ ಮನೆ, ವೆಚ್ಚಕ್ಕೆ ಹೊನ್ನು. ಮನಸ್ಸಿನ ಸಂತೋಷಕ್ಕಾಗಿ ಸಂಗೀತ-ಸಾಹಿತ್ಯ. ಇಷ್ಟೇ ಆಗಿದ್ದವು ಅವರ ಗುರಿಗಳು. ಆದರೆ ಕೆಲವೊಂದು ಬಾಹ್ಯ ಒತ್ತಡಗಳಿಂದ ತಮ್ಮ ಭಾವನೆಗಳನ್ನು ಬಲಿಗೊಟ್ಟು ಯಾವುದೇ ಪೂರ್ವ ಶಿಕ್ಷಣ, ತರಬೇತಿ, ಮಾನಸಿಕ ಸಿದ್ಧತೆಯಿಲ್ಲದೆ ಹದಿನೈದನೇ ವಯಸ್ಸಿನಲ್ಲೇ ಸನ್ಯಾಸವನ್ನು ಸ್ವೀಕರಿಸಬೇಕಾಯಿತು. ಹೀಗೆ ತಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಸನ್ಯಾಸಿಯಾದರೂ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಗೆ ಕಾರಣರಾದವರನ್ನೂ ಸಹ ಯಾವುದೇ ಪೂರ್ವಾಗ್ರಹಗಳಿಲ್ಲದೆ, ಸ್ಥಿತಪ್ರಜ್ಞತೆಯಿಂದ ಎಲ್ಲದರ ಬಗ್ಗೆ ಬರೆದದ್ದು ಈ ಪುಸ್ತಕದ ಹೆಚ್ಚುಗಾರಿಕೆ. ಸನ್ಯಾಸಿಗಳಾಗಿ ಮಠದಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು, ಆಯೋಜಿಸಿದ ಹಲವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಹೇಳುವಾಗಲೂ ಸಹ ತಾವು ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದೇವೆಂಬ ಯಾವ ಅಹಂಭಾವವು ಕಾಣುವುದಿಲ್ಲ. ತಮಗೆ ತಪ್ಪೆನಿಸಿದ ಬಾಲ ಸನ್ಯಾಸವನ್ನು ಪ್ರಬಲವಾಗಿ ವಿರೋಧಿಸುವ ವಿದ್ಯಾಭೂಷಣರು, ಸಮರ್ಥರಾದ ಮುಂದಿನ ಸನ್ಯಾಸಿಗಳಿಗೆ ಮಠದ ಅಧಿಕಾರವನ್ನು ಹಸ್ತಾಂತರಿಸಿದ ಬಗ್ಗೆ, ತಾವು ಮಠಾಧೀಶರಾಗಿಯೇ ಉಳಿಯುವಂತೆ ತಮ್ಮನ್ನು ಆಗ್ರಹಿಸಿದ ಬಗ್ಗೆ ಹಾಗೂ ತಮ್ಮ ಮದುವೆಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಪೀಠದಲ್ಲಿದ್ದುಕೊಂಡೇ ಅವರು ಮದುವೆಯೂ ಆಗಬಹುದಿತ್ತು. ಆದರೆ ಅದಕ್ಕೆ ವಿದ್ಯಾಭೂಷಣರ ಮನ ಒಪ್ಪುವುದೇ ಇಲ್ಲ. ಮುಂದೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಗೃಹಸ್ಥರಾಗಿಯೂ ಜೀವನದಲ್ಲಿ ಗೆದ್ದರು. ಲೇಖಕರೇ ಹೇಳುವಂತೆ ಈ ಪುಸ್ತದಲ್ಲಿ ಹೇಳದೇ ಉಳಿದದ್ದು ಕೂಡ ಬಹಳಿಷ್ಟಿವೆ. ಅದು ಪುಸ್ತಕದ ಮಿತಿಯೂ ಹೌದು ಧನಾತ್ಮಕ ಅಂಶವೂ ಹೌದು.
ಭಾರತೀಯ ಸಂಸ್ಕೃತಿಯಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಗಳೆಂಬ ಆಶ್ರಮ ಧರ್ಮಗಳಿವೆ. ಇವು ಹಂತ ಹಂತವಾಗಿ ಅನುಸರಿಸುವುದು ಆರೋಗ್ಯಕರ ಜೀವನ ಪದ್ಧತಿ ಹಾಗೂ ಅಧ್ಯಾತ್ಮ ಮಾರ್ಗ. ಆದರೆ ವಿದ್ಯಾಭೂಷಣರು ಸನ್ಯಾಸಿಗಳಾಗಿ ಗೃಹಸ್ಥರಾದವರು. ಇದು ವಿ-ಸಂಗತಿಯಲ್ಲ. ನಮ್ಮ ಬದುಕು ಇರುವುದು ಎಲ್ಲರ ಪಾಡನ್ನೂ ಅರ್ಥ ಮಾಡಿಕೊಳ್ಳಲು ಎಂದು ಮುನ್ನುಡಿಯಲ್ಲಿ ಬರೆದ ಲಕ್ಷ್ಮೀಶ ತೋಳ್ಪಾಡಿಯವರ ಮಾತುಗಳು ಅರ್ಥಪೂರ್ಣವಾಗಿದೆ.
ಕೊನೆಯಲ್ಲಿ ವಿದ್ಯಾಭೂಷಣರು ಹೇಳುವಂತೆ 'ಬದುಕು ನಮ್ಮ ಊಹೆ, ನಿರೀಕ್ಷೆ, ಅಪೇಕ್ಷೆ ಎಲ್ಲವನ್ನೂ ಮೀರಿ ನಡೆಯುತ್ತಿರುತ್ತದೆ. ಪುಷ್ಪಗಿರಿಯ ತುತ್ತ ತುದಿಯಲ್ಲಿ ಸುರಿದ ಮಳೆ ನೀರು ಒಂದಿಂಚು ಅಂತರದಲ್ಲಿ ಅತ್ತಿತ್ತ ಸಿಡಿದು ಪಶ್ಚಿಮಕ್ಕೆ ಹರಿದುದು ಕುಮಾರಧಾರೆಯಾಗಿ, ನೇತ್ರಾವತಿಯೆನಿಸಿ ಅರಬ್ಬೀ ಸಮುದ್ರ ಸೇರುತ್ತದೆ. ಮತ್ತೊಂದು ಹೇಮಾವತಿಯಾಗಿ, ಕಾವೇರಿಯೊಂದಿಗೆ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ. ಓಹ್-ಏನು ವಿಚಿತ್ರ-ಅದ್ಭುತ! ಮತ್ತು ಅದು ಹಾಗೆಯೇ!' ಪುಸ್ತಕವನ್ನು ಓದಿ ಮುಗಿಸಿದಾಗ ಮೇಲಿನ ಮಾತು ವಿಚಿತ್ರವಾದರೂ ಎಷ್ಟೊಂದು ಸತ್ಯ ಎಂದು ಅನಿಸುತ್ತದೆ.
Comments
Post a Comment