ನಿನ್ನಂತಹ ಅಮ್ಮ ನಾನಾಗಲಾರೆ
ಸಾಮಾನ್ಯವಾಗಿ ಹುಡುಗಿಯರಿಗೆ ಅಪ್ಪ ಅಂದರೆ ಇಷ್ಟ. ಅಮ್ಮ ಅಂದರೆ ಯಾವತ್ತೂ "ಅದು ಮಾಡಬೇಡ", "ಇದು ಮಾಡು", "ಹೀಗೆ ಇರಬೇಡ", "ಹಾಗೆ ಇರು" ಎಂದು ಹೇಳುವ ರೂಲರ್. ಅಮ್ಮ ಅರ್ಥವಾಗಬೇಕೆಂದರೆ ನಾವೇ ಸ್ವತಃ ಅಮ್ಮನಾಗಬೇಕು. ಇದಕ್ಕೆ ನಾನು ಕೂಡ ಹೊರತಾಗಿರಲಿಲ್ಲ. ಅಮ್ಮನ ಬಳಿ ಜಗಳವಾಡುವಾಗಲೆಲ್ಲ ನಾನು ಹೇಳುತ್ತಿದ್ದ ಮಾತೆಂದರೆ "ನಿನ್ನಂತಹ ಅಮ್ಮ ನಾನಾಗಲಾರೆ".
ಅವಿಭಕ್ತ ಕುಟುಂಬದ ಸಣ್ಣ ಸೊಸೆಯಾಗಿ ಬಂದ ಅಮ್ಮ , ಹೆಂಡತಿಯಾಗಿ, ಸೊಸೆಯಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು. ಅದರ ಜೊತೆ ಜೊತೆಗೆ ನನ್ನ ಹಾಗೂ ನನ್ನ ತಮ್ಮನ ಪಾಲನೆ. ನಾನು ಶಾಲೆಗೆ ಹೋಗುತ್ತಿದ್ದಾಗ ಶಾಲೆಯಲ್ಲಿ ಯಾವುದೇ ಸ್ಪರ್ಧೆಗಳಿರಲಿ ಅಮ್ಮ ನಮ್ಮನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದಳು. ಅದು ಹಾಡು ಹೇಳುವುದೇ ಆಗಿರಲಿ, ಛದ್ಮವೇಷ ಸ್ಪರ್ಧೆಯೇ ಆಗಿರಲಿ, ಚಿತ್ರ ಬಿಡಿಸುವ ಸ್ಪರ್ಧೆಯಾಗಿರಲಿ, ಕಥೆ ಹೇಳುವುದಾಗಿರಲಿ. ಸ್ಪರ್ಧೆ ಯಾವುದೇ ಇದ್ದರೂ ನಮ್ಮ ಭಾಗವಹಿಸುವಿಕೆ ಇರಲೇಬೇಕಿತ್ತು. ಹಟ್ಟಿ ಹಾಗೂ ತೋಟದ ಕೆಲಸದ ಜೊತೆ ಜೊತೆಗೇ, ಮನೆಯಲ್ಲೇ ಇರುತ್ತಿದ್ದ ವಸ್ತುಗಳನ್ನು ಉಪಯೋಗಿಸಿ ಛದ್ಮವೇಷ ಸ್ಪರ್ಧೆಗೆ ಅಮ್ಮ ನಮ್ಮನ್ನು ತಯಾರು ಮಾಡುತ್ತಿದ್ದಳು . ಬಹುಮಾನ ಬಾರದೆ ನಾವು ಬೇಸರ ಮಾಡಿಕೊಂಡರೆ "ಬಹುಮಾನ ಬರುವುದು ಮುಖ್ಯವಲ್ಲ. ಭಾಗವಹಿಸುವಿಕೆಯೇ ಮುಖ್ಯ" ಎಂದು ಹೇಳಿ ನಾವು ಮಾಡಿದ ತಪ್ಪುಗಳನ್ನು ತಿಳಿಸುತ್ತಿದ್ದಳು. ಬಹುಮಾನವನ್ನು ಪಡೆದರೆ ನಮಗಿಂತ ಅಮ್ಮನೇ ಜಾಸ್ತಿ ಖುಷಿ ಪಡುತ್ತಿದ್ದಳು.
ಒಮ್ಮೆ ಅಮ್ಮ ನನಗೆ ಹೂ ಕಟ್ಟಲು ಹೇಳಿ ಕೊಡುತ್ತಿದ್ದಳು. ಆಗ ನಾನು ನಾಲ್ಕನೇ ತರಗತಿಯಲ್ಲಿದ್ದೆ. ನನಗೋ ಕಲಿಯಲು ಮನಸಿಲ್ಲ. ಹಾಗಾಗಿ ಅಮ್ಮ ಎಷ್ಟು ಹೇಳಿಕೊಟ್ಟರು ನನಗೆ ಹೂ ಕಟ್ಟಲು ಬರುತ್ತಲೇ ಇರಲಿಲ್ಲ. ಅಮ್ಮ ತನ್ನೆಲ್ಲಾ ಕೆಲಸಗಳನ್ನು ಬಿಟ್ಟು ನನಗೆ 3-4 ದಿನದಿಂದ ಹೂ ಕಟ್ಟುವುದನ್ನು ಹೇಳಿಕೊಡಲು ಪ್ರಯತ್ನಿಸಿದಳು. ನಾನು ಕಲಿತುಕೊಳ್ಳುವ ಲಕ್ಷಣ ಕಾಣಿಸಲಿಲ್ಲ. ಅಮ್ಮನಿಗೆ ಸಿಟ್ಟು ಎಲ್ಲಿತ್ತೋ ಒಂದು ಸೂಜಿ ತಂದು ಬೆರಳಿಗೆ ಚುಚ್ಚಿ ಬಿಟ್ಟಳು. ನಾನು ನೋವಿನಿಂದ ಅಳುತ್ತಾ ಬೇಗ ಹೂ ಕಟ್ಟುವುದನ್ನು ಕಲಿತುಕೊಂಡೆ. ಈ ಘಟನೆ ಸ್ಪಷ್ಟವಾಗಿ ನೆನಪಿರುವುದರಿಂದ ನಾನು ಯಾವಾಗಲಾದರೂ ಅಮ್ಮನಿಗೆ ಇದನ್ನು ನೆನಪಿಸಿದರೆ ಅಮ್ಮ ಬೇಸರ ಪಟ್ಟುಕೊಳ್ಳುತ್ತಾಳೆ. ಮುಂದೆ ಕಾಲೇಜಿನಲ್ಲಿದ್ದಾಗ ಊರಿನಲ್ಲಿ ನಡೆದ ಗಣೇಶೋತ್ಸವದ ನಿಮಿತ್ತ ನಡೆದ ಹೂ ಮಾಲೆ ಕಟ್ಟುವ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಪಡೆದಿದ್ದೆ. ನಂತರ ಮದುವೆಯಾಗಿ ಅತ್ತೆ ಮನೆಗೆ ಬಂದಾಗ, ಅತ್ತೆ ದಿನವೂ ಸುಗಂಧ ಭರಿತ ಮಲ್ಲಿಗೆ ಹೂಗಳನ್ನು ಆಯ್ದು ಮಾಲೆಯನ್ನು ಕಟ್ಟುತ್ತಿದ್ದರು. ಒಂದು ದಿನ ಅವರು ಹೂಗಳನ್ನು ಆಯ್ದು ತಂದು ಏನೋ ಕೆಲಸದಲ್ಲಿ ತೊಡಗಿದ್ದರು. ಹಾಗಾಗಿ ನಾನು ಹೂ ಮಾಲೆಯನ್ನು ಕಟ್ಟಿದೆ. ನಾನು ಕಟ್ಟಿದ ಹೂ ಮಾಲೆಯನ್ನು ನೋಡಿದ ಅತ್ತೆ "ನನಗಿಂತ ನೀನೇ ಚೆನ್ನಾಗಿ ಹೂ ಕಟ್ಟಿದ್ದಿ" ಎಂದು ಪ್ರಶಂಸಿಸಿದರು. ಇದಕ್ಕೆಲ್ಲಾ ನೀನು ಅಂದು ಕೋಪದಿಂದ ಕೈಗೆ ಚುಚ್ಚಿದ್ದೇ ಕಾರಣ ಎಂದು ಅಮ್ಮನಲ್ಲಿ ಹೇಳಿದರೆ ಅಮ್ಮ "ನಿನಗೆ ಎಲ್ಲಾ ಕೆಲಸಗಳು ಗೊತ್ತಿರಬೇಕೆಂದು ಹಾಗೆ ಮಾಡಿದೆ" ಎನ್ನುತ್ತಾಳೆ.
ನಾನು ಮತ್ತು ತಮ್ಮ ಮನೆಯಿಂದ ಸುಮಾರು ಒಂದು ಗಂಟೆಯ ದೂರದ ಕಾಲೇಜಿಗೆ ಹೋಗಲು ಶುರುಮಾಡಿದಾಗ ಅಮ್ಮ ಅಕ್ಷರಶಃ ಯಂತ್ರದಂತೆಯೇ ದುಡಿದಳು. ಬೆಳಿಗ್ಗೆ 4.45ಕ್ಕೆಲ್ಲಾ ಎದ್ದು ಹಟ್ಟಿ ಕೆಲಸದಲ್ಲಿ ಅಪ್ಪನಿಗೆ ಸರಿಸಮವಾಗಿ ದುಡಿದು ನಮಗೆ ಬೆಳಗ್ಗಿನ ಉಪಾಹಾರ, ಮದ್ಯಾಹ್ನದ ಬುತ್ತಿಗೆ ಊಟವನ್ನು ಸಿದ್ಧಮಾಡಿ ಕೊಡುತ್ತಿದ್ದಳು. ಇದನ್ನೆಲ್ಲಾ ಮಾಡಿದ್ದು ಕೇವಲ ಒಂದೆರಡು ದಿನವಲ್ಲ. ಸತತ ಐದು ವರ್ಷ! ಒಂದು ದಿನವೂ ನಾವು ಬೆಳಗ್ಗಿನ ತಿಂಡಿಯನ್ನಾಗಲಿ, ಮಧ್ಯಾಹ್ನದ ಊಟವನ್ನಾಗಲಿ ಅಮ್ಮನಿಂದಾಗಿ ಎಂದೂ ತಪ್ಪಿಸಿಕೊಳ್ಳಲಿಲ್ಲ. ತನ್ನ ಹವ್ಯಾಸಗಳಾದ ಹೊಲಿಗೆ, ಕಸೂತಿ ಹಾಗೂ ಪುಸ್ತಕ ಓದುವುದನ್ನು ಸಂಪೂರ್ಣವಾಗಿ ತ್ಯಜಿಸಿದಳು. ಏಕೆಂದರೆ ಅದಕ್ಕೆಲ್ಲಾ ಅವಳಿಗೆ ಸಮಯವೇ ಸಾಲುತ್ತಿರಲಿಲ್ಲ. ತನ್ನ ಇಷ್ಟಾನಿಷ್ಟಗಳನ್ನು ನಿರ್ಲಕ್ಷಿಸಿ ತ್ಯಾಗಮಯಿಯೇ ಆದಳು. ಆಗ ನಾನು ಹೇಳುತ್ತಿದ್ದ ಮಾತೆಂದರೆ "ನಿನ್ನಂತಹ ಅಮ್ಮ ನಾನಾಗಲಾರೆ".
ವರ್ಷಕ್ಕೊಮ್ಮೆ ತನ್ನ ತವರು ಮನೆಗೆ ಹೋಗಲೂ ಅಮ್ಮ ಹಿಂದೆ ಮುಂದೆ ಯೋಚಿಸುತ್ತಿದ್ದಳು. "ಅಮ್ಮ, ನೀನೇನೂ ಯೋಚಿಸಬೇಡ. ಆರಾಮವಾಗಿ ಹೋಗಿ ಬಾ. ಹೇಗೂ ನಮೆಗೆಲ್ಲರಿಗೂ ಎಲ್ಲಾ ಕೆಲಸಗಳು ಬರುತ್ತವೆ. ನಾವೇ ಮಾಡಿಕೊಳ್ಳುತ್ತೇವೆ" ಎಂದು ಹೇಳಿದರೆ ಅವಳಿಗೆ ಸಮಾಧಾನವಿಲ್ಲ. ತೋಟಕ್ಕೆ ಮದ್ದು ಬಿಡಲು ಕೆಲಸದವರು ಬರುತ್ತಾರೆಂದೋ, ನಮಗೆ ಪರೀಕ್ಷೆಯ ಸಮಯವೆಂದೋ ಕಾರಣಗಳನ್ನು ಕೊಟ್ಟು ಒಂದೇ ದಿನದಲ್ಲಿ ಮನೆಗೆ ವಾಪಾಸ್ಸು. ಆಗ ನಾನು ಅಮ್ಮನಲ್ಲಿ ಹೇಳುತ್ತಿದ್ದೆ "ನನಗೆ, ನನ್ನ ಗಂಡ ಮಕ್ಕಳಿಗೆ ಇಷ್ಟೆಲ್ಲಾ ಮಾಡಲು ಸಾಧ್ಯವೇ ಇಲ್ಲ. ನಿನ್ನಂತಹ ಅಮ್ಮ ನಾನಾಗಲಾರೆ".
😍
ReplyDelete