ಅಮ್ಮನಂತಹ ಅತ್ತೆ
ಮದುವೆಯಾಗುವ ಮೊದಲು ಏನೇ ಕೆಲಸ ಮಾಡಲೂ ಸ್ವಲ್ಪ ಸೋಮಾರಿತನ ತೋರಿದರೆ ಸಾಕು ಅಮ್ಮ ಹೇಳುತ್ತಿದ್ದದ್ದು ಒಂದೇ "ನೀನು ನಿನ್ನ ಅತ್ತೆ ಕೈಲಿ, ನಿನ್ನ ಅಮ್ಮ ನಿಂಗೆ ಇಷ್ಟೇ ಹೇಳಿಕೊಟ್ಟಿದ್ದಾ ಎಂದು ಬೈಸಿಕೊಳ್ತಿಯ ಬಿಡು" ಎಂದು. ಆಗ ನಾನು ಏನಾದರೂ ಒಂದು ಸಬೂಬು ಕೊಟ್ಟು ಅಮ್ಮನ ಬಾಯಿ ಮುಚ್ಚಿಸುತ್ತಿದ್ದೆ. ಮೊದಲಿಂದಲೂ ಅಡುಗೆ ಮಾಡುವ ಕೆಲಸವು ನನಗೆ ಸ್ವಲ್ಪ ಬೇಸರವೇ. ಅದು ಬಿಟ್ಟರೆ ಉಳಿದ ಸಾಮಾನ್ಯ ಕೆಲಸಗಳನ್ನು ನಾನು ಮಾಡುತ್ತಿದ್ದೆ. ಆದರೆ ಅಮ್ಮನ ಮಾತುಗಳನ್ನು ಸುಳ್ಳು ಮಾಡಿದ್ದು ನನ್ನ ಹಾಗೂ ನನ್ನ ಅತ್ತೆಯ ಪ್ರೀತಿಯ ಸಂಬಂಧ.
ಮೊದಲಿಂದಲೂ ಅತ್ತೆ - ಸೊಸೆ ಸಂಬಂಧಗಳ ಬಗ್ಗೆ ಆಡಿಕೊಳ್ಳುವುದನ್ನು,
ಸೊಸೆಯ ಮೇಲೆ ಅತ್ತೆ ನಡೆಸುತ್ತಿದ್ದ ದರ್ಪದ ಕಥೆಗಳನ್ನು ಹಾಗೂ ಸೊಸೆ ವಯಸ್ಸಾದ ಅತ್ತೆ ಮಾವನನ್ನು ಸತಾಯಿಸುವ
ಕಥೆಗಳನ್ನು ಓದಿದ್ದ ನನಗೆ ಸ್ವಲ್ಪ ಭಯ ಇತ್ತು. ಆದರೆ ಅದೆಲ್ಲಕ್ಕಿಂತಲೂ ಭಿನ್ನವಾಗಿದೆ ನನ್ನ ಹಾಗೂ
ನನ್ನ ಅತ್ತೆಯ ಅನುಬಂಧ.
ಸಾಮಾನ್ಯವಾಗಿ, ಸೊಸೆ ಹೊಸತನ್ನೇನಾದರೂ ಕಲಿಯಲು ಹೊರಟರೆ
ನಿರುತ್ಸಾಹಗೊಳಿಸುವವರೇ ಹೆಚ್ಚು. "ಅವಳಿಗ್ಯಾಕೆ ಇಲ್ಲದ ಉಸಾಬರಿ? ಮನೆಕೆಲಸಗಳನ್ನು ಮಾಡುತ್ತಾ
ಇರಲಿ" ಎಂಬುದೇ ಈಗಲೂ ಹೆಚ್ಚಿನವರ ಅಭಿಮತ. ಆದರೆ ನನ್ನ ಅತ್ತೆ ಇದಕ್ಕೆ ತದ್ವಿರುದ್ಧ. ನಾನು
ಕಾರು ಡ್ರೈವಿಂಗ್ ಕಲಿಯುತ್ತೀನೆಂದು ಹೇಳಿದಾಗ ನನ್ನ ಮಗಳಿಗೆ ೫ ತಿಂಗಳು. ಅತ್ತೆ "ನಾನು ಮಗಳನ್ನು
ನೋಡಿಕೊಳ್ಳುತ್ತೇನೆ. ನೀನು ಡ್ರೈವಿಂಗ್ ಕಲಿ" ಎಂದು ಪ್ರೋತ್ಸಾಹಿಸಿ ನಾನು ನಿಶ್ಚಿಂತೆಯಿಂದ
ಡ್ರೈವಿಂಗ್ ಕಲಿಯುವಂತೆ ಮಾಡಿದರು. ಎಷ್ಟೋ ಬಾರಿ ನನ್ನ ಮಗಳನ್ನು ತಾವು ನೋಡಿಕೊಂಡು ನನ್ನ ಹವ್ಯಾಸಗಳನ್ನು
ಮುಂದುವರಿಸಲು ಪರೋಕ್ಷವಾಗಿ ಬೆಂಬಲವನ್ನು ಕೊಟ್ಟರು. ಮಗಳು ಚಿಕ್ಕವಳಿದ್ದಾಗ ನಿದ್ದೆ ಮಾಡಲು ಸತಾಯಿಸುತ್ತಿದ್ದಾಗ
ಸ್ವತಃ ತಾವೇ ತೊಟ್ಟಿಲು ತೂಗಿ ಜೋಗುಳ ಹಾಡಿ ನನ್ನ ಭಾರವನ್ನು ಕಡಿಮೆ ಮಾಡುತ್ತಿದ್ದರು.
ಇನ್ನು ನಾನು ಮಾಡುವ ಹೊಸ ರುಚಿಗಳ ತಯಾರಿಗೆ ಅಗತ್ಯವಾದ ಸಹಾಯ ಮಾಡುವುದು, ಏನಾದರೂ ಹೆಚ್ಚು ಕಡಿಮೆಯಾದರೆ ಕೋಪಿಸಿಗೊಳ್ಳದೇ ಅದನ್ನು ಹೇಗೆ ಹಾಳಾಗದಂತೆ ಉತ್ತಮಗೊಳಿಸುವುದು ಎಂದು ಟಿಪ್ಸ್ ಕೊಡುತ್ತಾರೆ. ಎಷ್ಟೋ ಮನೆಗಳಲ್ಲಿ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸೊಸೆಯನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ಇಂದಿಗೂ ನಡೆಯುತ್ತಿದೆ. ಆದರೆ ನಮ್ಮ ಮನೆಯಲ್ಲಿ ಹಾಗಲ್ಲ. ಅತ್ತೆ ಸದಾ ನನ್ನ ಬಳಿ, ನನ್ನ ಅಭಿಪ್ರಾಯಗಳನ್ನು ಕೇಳುವುದಷ್ಟೇ ಅಲ್ಲದೇ ಅದನ್ನು ಗೌರವಿಸುತ್ತಾರೆ. ನಾನು ಬರೆಯುವ ಬ್ಲಾಗ್ ಗಳನ್ನು ಓದಿ ಅದನ್ನು ತಮ್ಮ ಸಂಬಂಧಿಕರ ಜೊತೆ ಹಂಚಿಕೊಳ್ಳುತ್ತಾರೆ. ಯಾವತ್ತೂ ಕೂಡ "ಹೀಗೆ ಇರಿ" ಎಂದು ನಮಗೆ ಆದೇಶಿಸಿದವರಲ್ಲ. ಬದಲಿಗೆ ನಡೆದು ತೋರಿಸುತ್ತಾರೆ. ಎಂತಹ ಕಠಿಣ ಪರಿಸ್ಥಿತಿಯಿರಲಿ ತಾಳ್ಮೆಯಿಂದಿರುವುದು ಅತ್ತೆಯ ದೊಡ್ಡ ಗುಣ. ಕೆಲಸವು ಯಾವುದೇ ಇರಲಿ ನಾವಿಬ್ಬರೂ ಹಂಚಿಕೊಂಡು ಮಾಡುತ್ತೇವೆ. ಹೀಗೆ ಪರಸ್ಪರ ಅರಿತು ಹೊಂದಾಣಿಕೆಯಿಂದ ನಡೆದರೆ ಅತ್ತೆಯೂ ಅಮ್ಮನಾಗಬಹುದು.
Comments
Post a Comment