ಬಸ್ಸಾಯಣ

 ಜೀವನ ಪಯಣವು ಹಲವು ಅನುಭವಗಳ ಆಗರ. ಅಂತಹ ಅನುಭವಗಳಲ್ಲಿ ಬಸ್ ಪ್ರಯಾಣದ ಅನುಭವಗಳು ಸಹ ಒಂದು. ಟಿವಿಯಲ್ಲಿ ಮಗಳು "wheels on the bus go round and round" ಎಂದು ನೋಡುತ್ತಿದ್ದಾಗ ನನಗೆ ನನ್ನ ಜೀವನದ ಬಸ್ ಅನುಭವಗಳು ಮನಸ್ಸಿನಲ್ಲಿ ಹಾದು ಹೋದವು.


 ಬಾಲ್ಯದಲ್ಲಿ ಬಸ್ಸಿನ ಪ್ರಯಾಣವೆಂದರೆ ಖುಷಿಯೋ ಖುಷಿ. ಏಕೆಂದರೆ ಬಸ್ಸಿನಲ್ಲಿ ಹೋಗಲು ಸಿಗುತ್ತಿದ್ದದ್ದೇ ಅಪರೂಪ. ಪ್ರತಿದಿನ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದ ನಾವು ರಜಾ ಕಾಲದಲ್ಲಿ ಅಜ್ಜಿಯ ಮನೆಗೋ, ನೆಂಟರ ಮನೆಗೋ ಹೋಗುವಾಗ ಬಸ್ಸಿನಲ್ಲಿ ಹೋಗುತ್ತಿದ್ದವು. ಹಿಂದೆ ಹಿಂದೆ ಓಡುತ್ತಿದ್ದ ಮರಗಳನ್ನು ಕಣ್ಣು ಮಿಟುಕಿಸದೆ ನೋಡುತ್ತಾ , ನಗರಪ್ರದೇಶಗಳು ಬಂದಾಗ ಅಂಗಡಿಗಳ ಎದುರಿನ ಬೋರ್ಡುಗಳನ್ನು ಓದುತ್ತಾ ಹೋಗುವುದೇ ಅತ್ಯಂತ ಖುಷಿ ಕೊಡುವ ಸಂಗತಿಯಾಗಿತ್ತು. ಮನೆಗೆ ಬಂದ ಮೇಲೆ ಸಂಗ್ರಹಿಸಿದ ಟಿಕೆಟ್ ಗಳೊಂದಿಗೆ ನಮ್ಮ ಬಸ್ ಆಟ ಶುರುವಾಗುತ್ತಿತ್ತು. ಮನೆಯ ತಾರಸಿಯ ಮೆಟ್ಟಿಲುಗಳೇ ನಮ್ಮ ಬಸ್. ಯಾರು ಅತೀ ಹೆಚ್ಚು ಬಸ್ಸಿನ ಟಿಕೆಟ್ ಗಳನ್ನು ಸಂಗ್ರಹಿಸುತ್ತಾರೋ ಅವರಿಗೆ ಕಂಡಕ್ಟರ್ ಆಗುವ ಅವಕಾಶ. ಹಾಗಾಗಿ ಬಸ್ ಟಿಕೆಟ್ ಸಂಗ್ರಹಿಸಲು ಸಹ ನಮ್ಮಲ್ಲಿ ಪೈಪೋಟಿ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ನನ್ನ ತಮ್ಮನಿಗೆ ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗಬೇಕೆಂಬ ಆಸೆಯೂ ಇತ್ತು.

 ಬಾಲ್ಯದಲ್ಲಿ ಸದಾ ಮನಸ್ಸಿಗೆ ಮುದವನ್ನು ಕೊಡುತ್ತಿದ್ದ ಬಸ್ ಪ್ರಯಾಣ ಕಾಲೇಜ್ ಗೆ ಬರುವಷ್ಟರಲ್ಲಿ ನಮ್ಮ ದಿನಚರಿಯ ಒಂದು ಭಾಗವೇ ಆಗಿ ಹೋಯಿತು. ನಮ್ಮ ವೇಳಾಪಟ್ಟಿಯನ್ನು ಬಸ್ಸಿನಲ್ಲಿ ಹೋಗಿ ಬರುವ ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಬೆಳಗ್ಗೆ ಮತ್ತು ಸಾಯಂಕಾಲ ಸುಮಾರು ಒಂದು ತಾಸಿನ ಪ್ರಯಾಣ ಬಹಳಷ್ಟು ಅನುಭವಗಳನ್ನು ನೀಡಿತು. ನಾವು ಓಡಾಡುತ್ತಿದ್ದದ್ದು ಸರ್ಕಾರಿ ಬಸ್ಸಿನಲ್ಲಿ ಆದರೂ ಅದು ಸದಾ ಶಾಲಾ ಕಾಲೇಜು ಮಕ್ಕಳಿಂದಲೇ ತುಂಬಿರುತ್ತಿದ್ದರಿಂದ ನಮಗೆ ಸ್ಕೂಲ್ ಬಸ್ ನಂತೆ ಭಾಸವಾಗುತ್ತಿತ್ತು. ಎಷ್ಟೋ ಬಾರಿ ನಮ್ಮ ಊರಿಗೆ ಬರುವ ಮುಂಚೆಯೇ ಬಸ್ ತುಂಬಿರುತ್ತಿದ್ದರಿಂದ ನಮಗೆ ಸ್ಟಾಪ್ ಕೊಡದೇ ಮುಂದೆ ಹೋಗುತ್ತಿತ್ತು. ಆಗ ನಾವು ವಿಧಿ ಇಲ್ಲದೇ ಖಾಸಗಿ ಬಸ್ ಗಳಲ್ಲಿ ಹೋಗುತ್ತಿದ್ದೆವು. ನಮ್ಮ ಊರಿನಲ್ಲಿ ಖಾಸಗಿ ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಟಿಕೆಟ್ ನಲ್ಲಿ concession rate ಇರುತ್ತಿತ್ತು. "ಪ್ರತಿದಿನವೂ ಸರ್ಕಾರಿ ಬಸ್ಸಿನಲ್ಲಿ ಓಡಾಡಿ ಯಾವಾಗಲೋ ಅಪರೂಪಕ್ಕೆ ನಮ್ಮ ಬಸ್ಸಿನಲ್ಲಿ ಬಂದು concession rate (CR) ಕೇಳ್ತೀರಾ"? ಅಂತ ಕಂಡಕ್ಟರ್ ಗಳು ನಮ್ಮನ್ನು ದಬಾಯಿಸುತ್ತಿದ್ದರು. ನಾವು ಎಲ್ಲರೂ ಸೇರಿ ಜಗಳವಾಡಿಯಾದರೂ ಸರಿ CR ಕೊಡುತ್ತಿದ್ದೆವೆ ವಿನಾ ಫುಲ್ ಟಿಕೆಟ್ ಕೊಡುತ್ತಿರಲಿಲ್ಲ. ಸಾಯಂಕಾಲ ಕಾಲೇಜಿನಿಂದ ಬಸ್ಸಿಗೆ ಹತ್ತಲು ನಮ್ಮಲ್ಲಿ ಸದಾ ಶೀತಲ ಸಮರವೇ ನಡೆಯುತ್ತಿತ್ತು. ಬಸ್ ಬಂದು ನಿಂತ ತಕ್ಷಣ ಯಾರು ಹೋಗಿ ಮೊದಲು ಹತ್ತಿ ಸೀಟನ್ನು ಹಿಡಿಯುತ್ತಾರೋ ಅವರೇ ಎಲ್ಲರಿಗಿಂತ ಸ್ಟ್ರಾಂಗ್ ಅಂತ ಅನ್ನಿಸಿಕೊಳ್ಳುತ್ತಿದ್ದರು. ಹೀಗೆ ಓಡುವ ಭರದಲ್ಲಿ ತಳ್ಳಾಟ, ನೂಕಾಟಗಳು ಮಾಮೂಲಿಯಾಗಿತ್ತು. ಇಡೀ ದಿನದ ಸುಸ್ತು ಸೀಟಿನಲ್ಲಿ ಕುಳಿತು ನಿದ್ದೆ ಮಾಡುವುದರಿಂದ ಪರಿಹಾರವಾಗುತ್ತಿತ್ತು. ಶನಿವಾರಗಳಂದು ಮದ್ಯಾಹ್ನದ ಬಿರು ಬಿಸಿಲಿನ ಬೇಗೆಗೆ ಬಹುಬೇಗ ನಿದ್ದೆ ಬಂದು ಇಳಿಯುವ ಸ್ಥಳ ಬಂದರೂ ಎಚ್ಚರವಾಗದೆ ನಮ್ಮದಲ್ಲದ ಸ್ಟಾಪ್ ಗಳಲ್ಲಿ ಇಳಿದಿದ್ದೂ ಇದೆ.

 

 ಇನ್ನು ಹುಡುಗರಿಗಂತೂ ಬಸ್ಸಿನಲ್ಲಿ ಕುಳಿತುಕೊಳ್ಳಲು ಜಾಗವಿದ್ದರೂ ಸಹ ಮೆಟ್ಟಿಲುಗಳಲ್ಲಿ ನಿಂತು ನೇತಾಡಿಕೊಂಡು ಹೋಗುವುದೇ ಸುಖವಾಗಿತ್ತು. ಎಷ್ಟೋ ಪ್ರೇಮಪ್ರಕರಣಗಳು ಬಸ್ಸಲ್ಲೇ ಹುಟ್ಟಿ ಬಸ್ಸಲ್ಲೇ ಬೆಳೆದು ಬಸ್ಸಲ್ಲೇ ಅಂತ್ಯ ಕಂಡಿದ್ದು ಇವೆ. ಕೆಲವು ಹುಡುಗರು ಬಸ್ ಖಾಲಿಯಿದ್ದರೂ, ಆ ಬಸ್ಸನ್ನು ಬಿಟ್ಟು ಗೆಳತಿ ಬರುವ ಬಸ್ಸಿಗೋಸ್ಕರ ಕಾಯುತ್ತಿದ್ದರು.
 ಒಂದು ದಿನ ಮಧ್ಯಾಹ್ನದ ತರಗತಿಗಳು ಇರಲಿಲ್ಲವಾದ್ದರಿಂದ ನಾನು ಎಂದಿನಂತೆ ಬಸ್ಸಿನಲ್ಲಿ ಕುಳಿತು ಮನೆಗೆ ಹೊರಟಿದ್ದೆ. ಬಸ್ಸಿನಲ್ಲಿ ಹೆಚ್ಚು ಜನರೂ ಇರಲಿಲ್ಲ. ನನ್ನ ಪಕ್ಕ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಬಂದು ಕುಳಿತರು. ಸ್ವಲ್ಪ ಸಮಯದ ನಂತರ ಅವರು ನನ್ನನ್ನು ಮಾತಿಗೆಳೆಯಲು ಪ್ರಯತ್ನಿಸಿದರು. ನಾನು ಅವರ ಮಾತಿಗೆ ಹೆಚ್ಚು ಸ್ಪಂದಿಸಲಿಲ್ಲ. ಕೆಲವೊಮ್ಮ ಕೆಲವರು ಖಾಸಗಿ ವಿಷಯಗಳನ್ನು ಕೆದಕಿ ಮನಸ್ಸಿಗೆ ಕಸಿವಿಸಿಯನ್ನು ಉಂಟುಮಾಡುವುದರಿಂದ ನಾನು ಸುಮ್ಮನೆ ಕುಳಿತಿದ್ದೆ. ಅವರಿಗೆ ಏನನ್ನಿಸಿತೋ ಏನೋ ತಮ್ಮ ಕಥೆಯನ್ನು ಹೇಳತೊಡಗಿದರು. "ನನ್ನ ಮಗಳು ಇದೇ ಕಾಲೇಜ್ ನಲ್ಲಿ ಓದುತ್ತಿದ್ದಳು. ಒಂದು ದಿನ ಅವಳ ಅಣ್ಣನ ಜೊತೆ ಬೈಕ್ ನಲ್ಲಿ ಹೋದವಳು ಅಪಘಾತದಲ್ಲಿ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದಳು. ಅವಳು ಬಹಳ ಜಾಣೆ. ನಿನ್ನನ್ನು ನೋಡಿದಾಗ ನನಗೆ ನನ್ನ ಮಗಳನ್ನೇ ಕಂಡಂತಾಯಿತು. ಇವತ್ತು ಅವಳ ಲಗೇಜ್ ಗಳನ್ನ ತರಲು ಹಾಸ್ಟೆಲ್ ಗೆ ಬಂದಿದ್ದೆ" ಎಂದು ಅಳುತ್ತಾ ತಮ್ಮ ಮೊಬೈಲ್ ನಲ್ಲಿದ್ದ ಮಗಳ ಫೋಟೋವನ್ನು ತೋರಿಸಿದರು. ನನಗೆ ಶಾಕ್ ಆಯಿತು. ಇಂತಹವರ ಬಗ್ಗೆ ತಪ್ಪು ತಿಳಿದುಕೊಂಡು ಬಿಟ್ಟೆನಲ್ಲಾ ಎಂದು ನನ್ನ ಬಗ್ಗೆ ನನಗೇ ಬಹಳ ಬೇಸರವಾಯಿತು. ಆ ಹುಡುಗಿ ನಮ್ಮದೇ ಬಸ್ಸಿನಲ್ಲಿ ಬರುತ್ತಿದ್ದ ಇನ್ನೊಬ್ಬ ಹುಡುಗಿಯ ಫ್ರೆಂಡ್ ಆಗಿದ್ದಳು. ಹಾಗಾಗಿ ನನಗೆ ಆ ಘಟನೆಯ ಅರಿವಿತ್ತು. ಆದರೆ ನನ್ನ ಪಕ್ಕ ಕುಳಿತವರು ಅವಳ ಅಪ್ಪ ಎಂದು ತಿಳಿದಿರಲಿಲ್ಲ. ಅವರ ಮಾತಿನಿಂದ ನನಗೆ ಏನು ಹೇಳಬೇಕೋ ತೋಚಲಿಲ್ಲ. ಸ್ವಲ್ಪ ಸಮಾಧಾನದ ಮಾತುಗಳನ್ನು ಹೇಳಿದೆ. " ಪುತ್ರಶೋಕಮ್ ನಿರಂತರಮ್" ಎನ್ನುವಂತೆ ಅದು ಅವರ ದುಃಖವನ್ನೇನೂ ಕಡಿಮೆಗೊಳಿಸಲಾರದು ಎಂದು ನನಗೂ ತಿಳಿದಿತ್ತು. ಆದರೂ ನನ್ನ ಮನಸ್ಸಿನ ಸಮಾಧಾನಕ್ಕಾಗಿ ನನಗೆ ತೋಚಿದ್ದನ್ನು ಹೇಳಿ ನನ್ನ ವರ್ತನೆಗೆ ಕ್ಷಮೆಯನ್ನೂ ಸಹ ಯಾಚಿಸಿದೆ. ಈ ಘಟನೆ ನಡೆದು ಸುಮಾರು ವರ್ಷಗಳೇ ಕಳೆದರೂ ನನಗೆ ಮಾತ್ರ ಇದನ್ನು ನೆನಪಿಸಿಕೊಂಡಾಗ ಈಗಲೂ ಕಣ್ಣುಗಳು ತುಂಬಿ ಬರುತ್ತವೆ.

 ಮುಂದೆ ಉದ್ಯೋಗಕ್ಕಾಗಿ ಮಂಗಳೂರನ್ನು ಸೇರಿದ ಮೇಲೆ ಬಸ್ ಪಯಣ ಬೇರೆಯದೆ ಅನುಭವವನ್ನು ನೀಡಿತು. ಉದ್ಯೋಗಕ್ಕೆ ಸೇರಿದ ಹೊಸತು ಹಾಗೂ ಮದುವೆಯಾದ ಹೊಸತು. ಮನೆಯಲ್ಲಿ ಅಡುಗೆ ಮಾಡಿ , ಅಧ್ಯಾಪನ ವೃತ್ತಿಯಾದ ಕಾರಣ ಸೀರೆಯನ್ನು ಉಟ್ಟು ಹೋಗಬೇಕಾಗಿತ್ತು. ಕಾಲೇಜ್ ನ ಬಸ್ ಇದ್ದರೂ ಸಹ ಕೆಲವೊಮ್ಮೆ ಬಸ್ ತಪ್ಪುತ್ತಿತ್ತು. ಆಗ ನನಗೆ ಸಿಟಿ ಬಸ್ ನಲ್ಲಿ ಹೋಗದೆ ವಿಧಿಯಿರುತ್ತಿರಲ್ಲ. ಸಿಟಿ ಬಸ್ಸುಗಳೊ ಮೊದಲೇ ಜನರಿಂದ ತುಂಬಿ ತುಳುಕುತ್ತಿರುತ್ತಿತ್ತು ಆದರೂ ಎಲ್ಲರನ್ನೂ ಹತ್ತಿಸಿಕೊಂಡು ಹೋಗುತ್ತಿದ್ದವು. ಸದಾ ವೇಗವಾಗಿ ಓಡುತ್ತಿದ್ದ ಬಸ್ಸುಗಳು ನನಗಂತೂ ಅಂತಕನ ದೂತರಂತೆ ಭಾಸವಾಗುತ್ತಿತ್ತು. ಒಂದು ದಿನ ಕಾಲೇಜ್ ಬಸ್ ತಪ್ಪಿ ಸಿಟಿ ಬಸ್ ನಲ್ಲಿ ಹೋಗಬೇಕಾಯಿತು. ಬಸ್ ನ ಮೆಟ್ಟಿಲಿನಲ್ಲಿ ಒಂದು ಕಾಲಿಟ್ಟಿದ್ದೆನೋ ಇಲ್ಲವೋ ಕಂಡೆಕ್ಟರ್ ನ ಸೀಟಿಗೆ ಜೈ ಎಂಬಂತೆ ಡ್ರೈವರ್ ಬಸ್ ನ್ನು ಮುಂದೆ ಚಲಾಯಿಸಿದ. ಸಾವರಿಸಿಕೊಂಡು ಒಂದು ಕೈಯಲ್ಲಿ ಬ್ಯಾಗನ್ನು ಇನ್ನೊಂದು ಕೈಯಲ್ಲಿ ಸೀರೆಯ ನೆರಿಗೆಯನ್ನು ಹಿಡಿದುಕೊಂಡು ಇದ್ದ ಸ್ವಲ್ಪ ಸ್ಥಳದಲ್ಲೇ ನಿಲ್ಲಲು ಪ್ರಯತ್ನಿಸಿದೆ. ಮುಂದಿನ ಸ್ಟಾಪ್ ನಲ್ಲಿ ಒಂದಿಷ್ಟು ಶಾಲಾ ಮಕ್ಕಳು ಅವರಿಗಿಂತ ದೊಡ್ಡ ಬ್ಯಾಗ್ ಗಳೊಂದಿಗೆ ಹತ್ತಿಕೊಂಡರು. ಅವರ ನೂಕಾಟದಿಂದ ನನ್ನನ್ನು ಹಾಗೂ ನನ್ನ ಸೀರೆಯನ್ನು ರಕ್ಷಿಸಿಕೊಂಡು ಕಾಲೇಜು ನಲ್ಲಿ ಇಳಿದು ಸಮಾಧಾನದ ನಿಟ್ಟುಸಿರನ್ನು ಬಿಟ್ಟು ಇನ್ನೆಂದೂ ಕಾಲೇಜ್ ಬಸ್ ನ್ನು ತಪ್ಪಿಸಿಕೊಳ್ಳಲಾರೆ ಎಂದು ಪ್ರತಿಜ್ಞೆ ಮಾಡಿದೆ. ಮರುದಿನದಿಂದ ಎಷ್ಟೇ ಕಷ್ಟವಾಗಲಿ ಬೆಳಗ್ಗೆ ಬೇಗನೆ ಎದ್ದು ಮನೆಕೆಲಸವನ್ನು ಮುಗಿಸಿ ಕಾಲೇಜ್ ಬಸ್ ಬರುವ ಐದು ನಿಮಿಷ ಮುಂಚೆಯೇ ನನ್ನ ಸ್ಟಾಪ್ ನ್ನು ತಲುಪುತ್ತಿದ್ದೆ.

 

 ಮಗಳು ಹುಟ್ಟಿದ ಮೇಲೆ ಅವಳು ಚಿಕ್ಕವಳಾದ ಕಾರಣ ಬಸ್ ನಲ್ಲಿ ಓಡಾಟ ಇಲ್ಲವೇ ಇಲ್ಲ ಎನ್ನುವಂತಾಯಿತು. ಆಮೇಲೆ ಕೋರೋನದಿಂದಾಗಿ ನಮ್ಮ ಓಡಾಟವೇ ಕಮ್ಮಿಯಾಗಿ ಹೆಚ್ಚಾಗಿ ಕಾರ್ ನಲ್ಲೆ ಪ್ರಯಾಣಿಸುತ್ತಿದ್ದೆವು. ಹಾಗಾಗಿ ಮಗಳಿಗೆ ಬಸ್ ಪ್ರಯಾಣ ಕುತೂಹಲವನ್ನು ಮೂಡಿಸಿತ್ತು. ಮಗಳಿಗೆ ಎರಡು ವರ್ಷವಾದಾಗ ಅವಳು "ಬಸ್ಸಿನಲ್ಲಿ ಹೋಗೋಣ" ಎಂದು ಪದೇ ಪದೇ ಅವಳದೇ ಮುದ್ದು ಭಾಷೆಯಲ್ಲಿ ಕೇಳತೊಡಗಿದಾಗ ನಿರಾಕರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಒಮ್ಮೆ ನಾನು ಮತ್ತು ಮಗಳು ಮಂಗಳೂರಿನಿಂದ ನಮ್ಮ ಊರಿಗೆ ಬಸ್ಸಿನಲ್ಲಿ ಬರುವುದೆಂದು, ಗಂಡನಿಗೆ ಕೆಲಸವಿದ್ದ ಕಾರಣ ಮನೆಯಲ್ಲೇ ಉಳಿಯುವುದೆಂದು ನಿರ್ಧರಿಸಿದೆವು. ಮಗಳು ಖುಷಿಯಿಂದ ಒಪ್ಪಿದಳು. ಆದರೂ ನನಗೆ ಒಳಗೊಳಗೇ ಅಳುಕಿತ್ತು. ಅಪ್ಪನೇ ಬೇಕೆಂದು ಮಗಳು ಹಠ ಹಿಡಿದರೆ? ಬಸ್ಸಿನಲ್ಲೇ ವಾಂತಿ ಮಾಡಿಕೊಂಡರೆ? ಜನರನ್ನು ಕಂಡು ಅತ್ತರೆ? ಎಂಬ ರೆ ಪ್ರಶ್ನೆಗಳು ತಲೆ ತಿನ್ನುತ್ತಿದ್ದವು. ಆದರೆ ಮಗಳು ಯಾವುದೇ ತಕರಾರು ಮಾಡದೇ ಖುಷಿಯಿಂದ ಬಸ್ಸಿನಲ್ಲಿ ಕುಳಿತಳು. ಈಗ ಎಲ್ಲಿಯೇ ಬಸ್ ಕಂಡರೂ ಅಪ್ಪನನ್ನು ಬಿಟ್ಟು ನಾವಿಬ್ಬರೇ ಹೋದ ಬಸ್ ಎಂದು ಖುಷಿಯಿಂದ ಕುಣಿಯುತ್ತಿರುತ್ತಾಳೆ.
 ಹೀಗೆ ಬಸ್ ಪ್ರಯಾಣವು ತಲೆಮಾರಿನ ಅಂತರವಿಲ್ಲದೇ ನನಗೆ ಮತ್ತು ನನ್ನ ಮಗಳಿಗೆ ಬೆರಗನ್ನು ಸೃಷ್ಟಿಸಿದೆ.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"