ಓದಿನ ಸುಖ "ಧೃತಿಗೆಡದ ಹೆಜ್ಜೆಗಳು"

               ಅದೊಂದು ಕಾಲವಿತ್ತು. ಗಂಡು ಹೊರಗಡೆ ಹೋಗಿ ದುಡಿದರೆ ಸಾಕಿತ್ತು. ಹೆಣ್ಣು ಮನೆವಾರ್ತೆ ನೋಡಿಕೊಂಡು ಇರುತ್ತಿದ್ದಳು. ಆರ್ಥಿಕವಾಗಿ ಸಬಲರಾಗಿದ್ದ ಕುಟುಂಬಗಳಲ್ಲಿ ಕೂಡ ಹೆಣ್ಣಿಗೆ ವಿಧ್ಯಾಭ್ಯಾಸವಿರಲಿಲ್ಲ. ಕಾಲ ಸರಿದಂತೆ ಹೆಣ್ಣುಮಕ್ಕಳಿಗೂ ವಿದ್ಯಾಭ್ಯಾಸ ದೊರೆತು ಅವರೂ ಗಂಡಸರಿಗೆ ಸರಿಸಮವಾಗಿ ಹೊರಗೆ ದುಡಿದು ಆರ್ಥಿಕವಾಗಿ ಸಬಲರಾದರು. ಆದರೆ ಇಂದಿನ ಕಾಲದ ಹೆಣ್ಣುಮಕ್ಕಳು ಕೇವಲ ಶಿಕ್ಷಣವನ್ನು ಮಾತ್ರ ಪಡೆಯುವುದಲ್ಲದೇ, ಯಾರ ಕೈಕೆಳಗೂ ದುಡಿಯದೆ ತಮ್ಮದೇ ಸ್ವಂತ ಉದ್ಯಮವನ್ನು ನಡೆಸಿ, ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಕನಸು ಕಾಣುವವರು. ಅದು ಹಳ್ಳಿಯಾಗಲಿ ಇಲ್ಲವೇ ಪಟ್ಟಣವಾಗಲೀ.

 
             "ದೃತಿಗೆಡೆದ ಹೆಜ್ಜೆಗಳು" ಪುಸ್ತಕವು ಇಂತಹ ಮಹಿಳಾ ಉದ್ಯಮಿ ಸಾಧಕರನ್ನು ಪರಿಚಯಿಸಿದೆ. ಪುಸ್ತಕವನ್ನು ಕೈಗೆತ್ತಿಕೊಂಡದ್ದಷ್ಟೇ ನೆನಪು. ಮಡಚುವಾಗ ಕೊನೆಯ ಪುಟದಲ್ಲಿದ್ದೆ. ಅಷ್ಟೊಂದು ಸರಾಗವಾಗಿ ಓದಿಸಿಕೊಂಡು ಹೋಯಿತು. ಪ್ರತೀ ಸಾಧಕಿಯ ಕಥೆಯೂ ವಿಭಿನ್ನ ಹಾಗೂ ವಿಶಿಷ್ಟ.
 
              'ಮನೋಬಲದ ಮುಂದೆ ಇನ್ಯಾವುದೂ ಇಲ್ಲ' ಎಂದು ಒಂಟಿಯಾಗಿ ಕೊರೋನಾ ಸಮಯದಲ್ಲಿ ಸೀರೆಯಿಂದ ಕವರ್ ಹೊಲಿದು ಮಾರಾಟ ಮಾಡಿ ಈಗ ನಾಲ್ಕು ಜನರಿಗೆ ಉದ್ಯೋಗವನ್ನು ನೀಡಿದ ಛಾಯಾ ಮಹಾಲೆ, ಕಣ್ಣ ಮುಂದೆಯೇ ತಾನು ಬೆಳೆದಿರುವ ಬಾಳೆಗೆ ಬೆಲೆ ಸಿಗದಿದ್ದಾಗ ಬಾಳೆಕಾಯಿ ಹುಡಿ ಮಾಡುವುದನ್ನು ಕಲಿತು ಪ್ರಧಾನ ಮಂತ್ರಿಯವರೂ ತಮ್ಮ ಹೆಸರನ್ನು ಉಲ್ಲೇಖಿಸಿವಂತೆ ಸಾಧನೆ ಮಾಡಿರುವ ವಸುಂಧರಾ ಹೆಗಡೆ, ದೈಹಿಕ ನ್ಯೂನತೆಗಳಿದ್ದರೂ ಸಹ ಅದನ್ನು ಮೆಟ್ಟಿ ನಿಂತು ತಮ್ಮ ಶ್ರಮ ಹಾಗೂ ಛಲದಿಂದ ಮೊಗ್ಗಿನ ಜಡೆ ಮಾರಾಟ ಮಾಡಿ ಸ್ವಾವಲಂಬಿಯಾಗಿರುವ ಶ್ರೀದೇವಿ ಹಾದಿಮನಿ, 'ಕನಸುಗಳಿಗೆ ವಯಸ್ಸಿನ ಹಂಗಿಲ್ಲ' ಎಂಬಂತೆ ತಮ್ಮ 74 ಇಳಿವಯಸ್ಸಿನಲ್ಲಿ , ಯುವಕರೂ ನಾಚುವಂತೆ, ಉತ್ತರ ಕರ್ನಾಟಕದ ಕಡೆ ಪ್ರಸಿದ್ಧಿಯಾಗಿರುವ ಪುಡಿಗಳನ್ನು ಮಾರಾಟ ಮಾಡುವ ಸರೋಜಿನಿ ಅವರಾದಿ, ಎರಡು ಉಪ್ಪಿನಕಾಯಿಯಿಂದ ಶುರುಮಾಡಿದ ವ್ಯಾಪಾರ ಇಂದು 20ಕ್ಕೂ ಹೆಚ್ಚಿನ ರೀತಿಯ ಉಪ್ಪಿನಕಾಯಿ, ಜಾಮ್ ಗಳನ್ನು ಮಾಡಿ ವ್ಯಾಪಾರ ಮಾಡುವ ರೂಪ ಹೆಬ್ಬಾರ್, ಕೈತುಂಬಾ ಗಳಿಸುವ ಸಾಫ್ಟ್ವೇರ್ ಉದ್ಯೋಗವನ್ನು ಬಿಟ್ಟು, ಹಾಸನ ಜಿಲ್ಲೆಯಲ್ಲಿ ಮೊಟ್ಟ ಮೊದಲ ಮರದ ಗಾಣವನ್ನು ಸ್ಥಾಪಿಸಿ ಮುನ್ನಡೆಸುತ್ತಿರುವ ಶುಭಾ ರವಿಕಿರಣ್, ಮಣ್ಣಿ ಹುಡಿ ವ್ಯಾಪಾರ ಮಾಡಿ ಯಶಸ್ಸನ್ನು ಕಂಡಿರುವ ಆಶಾ ಹೆಗಡೆ ಹೀಗೆ ಇವರೆಲ್ಲರ ಬಗ್ಗೆ ಓದುತ್ತಿರುವಂತೆ ನಮ್ಮಲ್ಲೊಂದು ಆತ್ಮವಿಶ್ವಾಸ ಹಾಗೂ ಹುಮ್ಮಸ್ಸು ಮೂಡುವುದು ಸುಳ್ಳಲ್ಲ.
 
              ಇವರ್ಯಾರು ಪ್ರಸಿದ್ಧ ಬ್ಯುಸಿನೆಸ್ ಕಾಲೇಜ್ ಗಳಲ್ಲಿ ಕಲಿತವರಲ್ಲ. ಜೀವನವೆಂಬ ವಿಶ್ವವಿದ್ಯಾಲಯದಲ್ಲಿ, ಅನುಭವವೆಂಬ ಗುರುವಿನಲ್ಲಿ ಪಳಗಿದವರು. ಕನಸೆಂಬ ಮೊಟ್ಟೆಗೆ ಸತತ ಪರಿಶ್ರಮವೆಂಬ ಕಾವನ್ನು ಕೊಟ್ಟು ಹಕ್ಕಿಯಂತೆ ಹಾರಾಡಿದವರು. ಕೊರೋನಾ ಬಂದ ಸಂದರ್ಭದಲ್ಲಿ ಕುಟುಂಬದ ಆಧಾರ ಸ್ತಂಭಗಳು ಅಲುಗಾಡಿದಾಗ ಅನಿವಾರ್ಯವಾಗಿ ಉದ್ಯಮವನ್ನು ಆರಂಭಿಸಿದರೂ, ತಮ್ಮ ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಗ್ರಾಹಕರ ಮನ ಗೆದ್ದವರು. ಇವರು ಇವತ್ತು ಕಂಡಿರುವ ಯಶಸ್ಸು ನಿನ್ನೆ ಮೊನ್ನೆಯದ್ದಲ್ಲ. ಸತತ ಸೋಲು, ಅವಮಾನಗಳನ್ನು ಮೆಟ್ಟಿ ನಿಂತು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪರಿಶ್ರಮಿಸಿದವರು. ಸಾಧಿಸುವ ಛಲ ಹಾಗೂ ಆತ್ಮವಿಶ್ವಾಸವಿದ್ದರೆ ಮಹಿಳೆ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಈ ಉದ್ಯಮಿ ಮಹಿಳೆಯರೇ ಸಾಕ್ಷಿ. ಹೆಣ್ಣು ಮಕ್ಕಳು ಒಂದು ನಿರ್ಧಾರ ಮಾಡಿದ ಮೇಲೆ ಹೆಜ್ಜೆ ಹಿಂದಕ್ಕೆ ಇಡುವುದು ಕಡಿಮೆ. ಅವರ ಅಂತಃಶಕ್ತಿ ಅಷ್ಟು ದೃಢವಾಗಿರುತ್ತದೆ ಎಂಬುದಕ್ಕೆ "ಧೃತಿ ಮಹಿಳಾ ಮಾರುಕಟ್ಟೆ"ಯನ್ನು ಆರಂಭಿಸಿದ ಹಾಗೂ ಅದನ್ನು ಮುನ್ನಡೆಸುತ್ತಿರುವ ಎಲ್ಲಾ ಮಹಿಳೆಯರೂ ಸಾಕ್ಷಿ. ಅಂತಹ ಮಹಿಳೆಯರ ಸಾಧನೆಯನ್ನು ಗುರುತಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು ಅಭಿನಂದನೀಯ ಕೆಲಸ.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"