ಓದಿನ ಸುಖ "ಪುನರ್ವಸು"
ಪುಸ್ತಕದ ಹೆಸರು: ಪುನರ್ವಸು
ಲೇಖಕರ ಹೆಸರು: ಡಾ. ಗಜಾನನ ಶರ್ಮಪುಸ್ತಕವನ್ನು ಕೊಂಡು ಅರ್ಧ ವರ್ಷವೇ ಕಳೆದಿತ್ತು. ಪುಸ್ತಕದ ಗಾತ್ರ ನೋಡಿ ಓದಲು ಹಿಂಜರಿಯುತ್ತಿದ್ದೆ. ಆದರೆ ಯಾವಾಗ ಪುಸ್ತಕವನ್ನು ಓದಲು ಕೈಗೆತ್ತಿಕೊಂಡೆನೋ ಪುಸ್ತಕದ ವಿಷಯದ ಅಗಾಧತೆಯ ಅರಿವಾಯಿತು. ವಿಶಾಲವಾದ ಕಾನ್ವಾಸ್ ನಲ್ಲಿ ಹರಡಿದ ವಿವಿಧ ಬಣ್ಣಗಳಿಂದ ಆವೃತವಾದ ಪೈಂಟಿಂಗ್ ನಂತೆಯೇ ಭಾಸವಾಯಿತು.
ಇದು ಮುಳುಗಡೆಯ ಕಥೆಯೋ? ತಲೆಮಾರುಗಳ ನಡುವಿನ ಮಾನಸಿಕ ಅಂತರದ ಕಥೆಯೋ? ಒಂದು ಭೂ ಭಾಗದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸ್ಥಿತ್ಯಂತರದ ಕಥೆಯೋ? ಹೌದು ಇದೆಲ್ಲವನ್ನೂ ಒಳಗೊಂಡ ಒಂದು ಕಾದಂಬರಿ. ಒಂದು ಕಾದಂಬರಿಯಲ್ಲೇ ಎಷ್ಟು ವ್ಯಕ್ತಿಗಳ ವ್ಯಕ್ತಿತ್ವದ ಚಿತ್ರಣ, ಮಾನಸಿಕ ತುಮುಲ, ತಾವು ಜೀವಿಸಿದ ಊರನ್ನು ಬಿಟ್ಟು ಹೋಗುವ ಸಂಕಟ ಎಲ್ಲವನ್ನೂ ಎಷ್ಟು ಅದ್ಭುತವಾಗಿ ಲೇಖಕರು ಹೆಣೆದಿದ್ದಾರೆ ಎಂದರೆ ಲೇಖಕರ ಕಥನ ಕೌಶಲ್ಯಕ್ಕೆ ತಲೆಬಾಗಲೇಬೇಕಾಗುತ್ತದೆ.
೧೯೩೦ ಆಸುಪಾಸಿನಲ್ಲಿ ಸರ್.ಎಂ.ವಿ ಯವರ ಕನಸಾದ ಶರಾವತಿ ನದಿಗೆ ಅಣೆಕಟ್ಟಿನ ನಿರ್ಮಾಣ ಸ್ಥಳೀಯ ಜನರ ಸಹಕಾರದೊಂದಿಗೆ ಆರಂಭವಾಗುತ್ತದೆ. ಅದು ನಿರ್ಮಾಣಗೊಂಡ ನಾಲ್ಕೇ ವರ್ಷಗಳಲ್ಲಿ ಅದಕ್ಕಿಂತ ದೊಡ್ಡದಾದ ಲಿಂಗನಮಕ್ಕಿ ಅಣೆಕಟ್ಟಿನ ನಿರ್ಮಾಣ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ಮುಳುಗಡೆಯಾದ ಮಲೆನಾಡಿನ ಹಳ್ಳಿಯಾದ ಭಾರಂಗಿಯ ಕಥೆಯೇ 'ಪುನರ್ವಸು'.
ತಾರ್ಕಿಕವಾಗಿ ಯೋಚಿಸಿ ಒಂದು ಪ್ರಾಜೆಕ್ಟ್ ಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕೊನೆಗೆ ಯಾರ ಭಾವನೆಗಳಿಗೂ ಬೆಲೆ ಕೊಡದ, ಇಡೀ ವ್ಯವಸ್ಥೆಯ ಕ್ರೂರತೆಯನ್ನು ಬಿಂಬಿಸುವ ಎಂಜಿನಿಯರ್ ಕೃಷ್ಣರಾವ್ , ಭಾರಂಗಿಯಲ್ಲೇ ಹುಟ್ಟಿ, ಬೆಳೆದು ಭಾವನಾತ್ಮವಾಗಿ ಯೋಚಿಸಿ ಬೇರನ್ನು ಬಿಟ್ಟು ಹೋಗುವ ಕ್ಷಣ ಕ್ಷಣದ ಸಂಕಟವನ್ನು ಅನುಭವಿಸುವ ದತ್ತಪ್ಪ ಹೆಗಡೆ, ಕಾದಂಬರಿಯ ಉದ್ದಕ್ಕೂ ವ್ಯಾಪಿಸಿದ್ದಾರೆ. ಸರ್ ಎಂ ವಿ, ಕಡಾಂಬಿ, ಕೃಷ್ಣರಾವ್ ಮುಂತಾದ ಎಂಜಿನಿಯರ್ ಗಳು ತಮ್ಮ ವೈಯಕ್ತಿಕ ಜೀವನವನ್ನು ಯೋಚಿಸದೇ ಮೆರೆದ ಕರ್ತವ್ಯ ನಿಷ್ಠೆ, ದತ್ತಪ್ಪ, ದೋಣಿ ಗಣಪ, ತುಂಗಕ್ಕಯ್ಯ, ಮುಂತಾದ ಹಳ್ಳಿ ಜನರ ಮುಗ್ಧ ನಿಷ್ಕಲ್ಮಶ ಪ್ರೀತಿ, ನದಿ, ಗುಡ್ಡ, ಕೋಟೆ ಎಂದು ಭಾವನಾತ್ಮವಾಗಿ ತಾವು ಹುಟ್ಟಿ, ಬೆಳೆದ ಭೂಮಿಗೆ ಅಂಟಿಕೊಂಡ ಒಂದು ತಲೆಮಾರು, ಮುಳುಗಡೆಯಾಗುವ ಭೂಮಿಗೆ ಸಿಕ್ಕಿದಷ್ಟು ಪರಿಹಾರ ತೆಗೆದುಕೊಂಡು ನಿರ್ಭಾವುಕವಾಗಿ ಬೇರು ಕಡಿಕೊಳ್ಳುವ ಮುಂದಿನ ತಲೆಮಾರು, ತಮ್ಮ ಭೂಮಿ ಮುಳುಗಡೆಯಾಗುವ ವಾಸ್ತವತೆಯನ್ನು ಒಪ್ಪಲಾರದೇ ಮಾನಸಿಕವಾಗಿ ಜರ್ಝರಿತರಾಗುವ ಹಲವರು, ಪರಿಹಾರ ವಿತರಣೆಯಲ್ಲಿ ಹಾಗೂ ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಕೆಲವು ಅಧಿಕಾರಿಗಳ ನಿರ್ಲಜ್ಜ, ನಿರ್ಲಿಪ್ತ ಧೋರಣೆ ಎಲ್ಲವನ್ನೂ ಲೇಖಕರು ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ಎಂದರೆ ಪುಸ್ತಕವನ್ನು ಓದಿ ಬಹುದಿನದವರೆಗೂ ಕಾಡುತ್ತದೆ.
ಇಂದು ನಾವು ಟೇಕನ್ ಫಾರ್ ಗ್ರಾಂಟೆಡ್ ಎಂಬಂತೆ ಅನುಭವಿಸುತ್ತಿರುವ ವಿದ್ಯುತ್ ನಿರ್ಮಾಣದಲ್ಲಿ ಎಷ್ಟೊಂದು ಮುಗ್ಧ ಜನರ ಕಣ್ಣೀರಿದೆ, ಒಂದಿಡೀ ಜನಾಂಗದ ತ್ಯಾಗವಿದೆ ಎಂಬುದು ಪುಸ್ತಕವನ್ನು ಓದಿದಾಗ ತಿಳಿಯುತ್ತದೆ.
"ಶರಾವತಿ ಪರಿಸರದ ವಿವರಣೆ ಜೊತೆ ಜೊತೆಗೇ ಬದುಕನ್ನೂ ಹೆಣೆದಿದ್ದು ಲೇಖಕರನ್ನು ವಿಶಿಷ್ಟ ಕಥಾಕಾರನನ್ನಾಗಿ ಮಾಡಿದೆ" ಎಂದು ಹೇಳಿದ ಜೋಗಿಯವರ ಮಾತು ಸತ್ಯ ಎಂದು ಪುಸ್ತಕ ಓದಿ ಮುಗಿಸಿದಾಗ ನಮಗೂ ಅರಿವಾಗುತ್ತದೆ.
"ಮುಳುಗಡೆ ಎಂಬುದು ತಮ್ಮ ತಮ್ಮೊಳಗಿನ ಆತ್ಮೀಯತೆಯ ಮುಳುಗಡೆ, ಬಾಂಧವ್ಯದ ಮುಳುಗಡೆ, ಸ್ನೇಹದ ಮುಳುಗಡೆ, ಊರಿನೊಂದಿಗೆ ಬೆಸೆದ ಬೇರುಗಳ ಮುಳುಗಡೆ" ಎಂದು ಹೇಳುವ ಲೇಖಕರು "ಕಾಲದ ಪ್ರವಾಹಕ್ಕೆ ಯಾರೋ ಬಲಿಯಾಗುವುದು, ಯಾರೋ ಬಚಾವಾಗುವುದು?" ಎಂಬ ಮಾತುಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ.
ಕೊನೆಯಲ್ಲಿ, ಇಡೀ ಭಾರಂಗಿಯ ಮನೆಮಗಳಾಗಿ ತಣ್ಣಗೆ ತನ್ನ ಪಾಡಿಗೆ ಹರಿಯುತ್ತಿದ್ದ ಶರಾವತಿ ನದಿಯ ಮರ, ಗಿಡ, ಬೆಟ್ಟ ಗುಡ್ಡಗಳನ್ನು ಯಾರೋ ಹೊರಗಿನವರು ಬಂದು ಕಡಿದು ಅತ್ಯಾಚಾರವನ್ನು ಎಸಗಿದಂತೆ ಪರ್ಯಾಯವಾಗಿ ವ್ಯಕ್ತಿಚಿತ್ರವಾಗಿ ಭಾರಂಗಿಯ ಮನೆಮಗಳಾದ ಕಿವುಡಿ, ಮೂಕಿ ಶರಾವತಿಯ ಮೇಲೆ, ಅಣೆಕಟ್ಟು ನಿರ್ಮಿಸಲು ಬಂದ ಕಾರ್ಮಿಕರು ನಡೆಸುವ ಅತ್ಯಾಚಾರ, ಎಸ್.ಎಲ್.ಭೈರಪ್ಪನವರ "ತಬ್ಬಲಿಯು ನೀನಾದೆ ಮಗನೆ" ಕಾದಂಬರಿಯಲ್ಲಿ ತಾಯಿ ಗೋವಿಗೆ ಪರ್ಯಾಯವಾಗಿ ವ್ಯಕ್ತಿಚಿತ್ರ ಮೂಕಿ, ತಾಯಿ ತಾಯವ್ವನಂತೆ ಕಾಡುತ್ತದೆ.
Comments
Post a Comment