ದರ್ಪಣ ಸುಂದರಿ
" ಏನೇ? ಇನ್ನು ಹೊರಟಾಗಿಲ್ವಾ? ಏಷ್ಟು ಹೊತ್ತು ಅಂತಾ ಅಲ್ಲೇ ಕೂತ್ಕೊಂಡು ನಿನ್ನನ್ನ ನೀನೇ ನೋಡ್ಕೊಂಡು ಇರ್ತೀಯ?" ಎಂಬ ಗಂಡನ ಮಾತಿಗೆ, ಸಮಯದ ಪರಿವೆಯಿಲ್ಲದೆ ತನ್ನನ್ನು ತಾನು ನೋಡಿಕೊಂಡು ತನ್ನ ರೂಪವನ್ನು ತಾನೇ ಮೆಚ್ಚಿಕೊಳ್ಳುವ ಹೆಂಡತಿಯನ್ನು ಬೆಚ್ಚಿಬೀಳಿಸುವಂತೆ ಮಾಡುವ ಸರದಿ ನನ್ನದು. ಇಂತಹ ಮಾತನ್ನು ಆಡುವ ಗಂಡಸರನ್ನು ಕೂಡ ಸುಲಭವಾಗಿ ನನ್ನ ಮೋಹ ಜಾಲದೊಳಗೆ ಬೀಳಿಸಿಕೊಳ್ಳುವ ತಾಕತ್ತು ನನಗಿದೆ. ಮನೆಯಲ್ಲಿ ಒಮ್ಮೆ ನನ್ನಲ್ಲಿ , ತನ್ನನ್ನು ತಾನು ನೋಡಿಕೊಂಡು ಹೊರಟ ಗಂಡಸರಿಗೆ ತಮ್ಮ ಬೈಕ್ ನಲ್ಲಿ ಇರುವ ನನ್ನನ್ನು ಮತ್ತೊಮ್ಮೆ ನೋಡದಿದ್ದರೆ ಸಮಾಧಾನವೇ ಇಲ್ಲ ನೋಡಿ. ಇಷ್ಟೆಲ್ಲಾ ಹೇಳಿದ ಮೇಲೆ ನಾನು ಯಾರೂ ಅಂತ ಗೊತ್ತಾಗಿರಬೇಕಲ್ಲ? ಹೌದು ನಿಮ್ಮ ಊಹೆ ಸರಿಯಾಗಿದೆ. ನಾನೇ "ದರ್ಪಣ ಸುಂದರಿ".
ಕಾಲೇಜ್ ಹುಡುಗಿಯರ ಆತ್ಮೀಯ ಗೆಳತಿ ನಾನು. ಅವರ ಬ್ಯಾಗ್
ನೊಳಗೆ ಸದಾ ಬೆಚ್ಚಗಿನ ವಾಸ. ಮಧ್ಯವಯಸ್ಸಿನ ಮಹಿಳೆಯರ ಜಂಭದ ಚೀಲದಲ್ಲಿ ಯಾವಾಗಲೂ ನನಗೊಂದು ಖಾಯಂ ಸ್ಥಾನ.
ನಾನಿಲ್ಲದಿದ್ದರೆ ಜಂಭದ ಚೀಲಕ್ಕೆ ಜಂಭವೆಲ್ಲಿಂದ ಬಂದೀತು? ಗಂಟೆಗೊಮ್ಮೆ ನನ್ನನ್ನು ನೋಡಿಕೊಂಡು ತಮ್ಮ
ಕಾಡಿಗೆ, ತುಟಿಯ ರಂಗನ್ನು ಸರಿಮಾಡಿಕೊಂಡು ಇದ್ದರೆ ನನಗೂ ಸಮಾಧಾನ. ಹಾಗಾಗಿಯೇ ನನ್ನನ್ನು ಕೈಯಲ್ಲಿ
ಹಿಡಿದುಕೊಂಡ ಶಿಲಾಬಾಲಿಕೆ "ದರ್ಪಣ ಸುಂದರಿ" ಎಂದೇ ಪ್ರಸಿದ್ಧ.
ಇನ್ನು ಪುಟ್ಟ ಮಕ್ಕಳಂತೂ ಹೊಸ ಬಟ್ಟೆಯನ್ನು ತೊಟ್ಟು
ತಮ್ಮ ತೊದಲು ನುಡಿಯಲ್ಲಿ ನನ್ನ ಮುಂದೆ ಬಂದು ನಿಂತುಕೊಂಡರೆ ನನಗೇ ಅವರ ಮೇಲೆ ಮುದ್ದು ಉಕ್ಕಿ ಬರುವಷ್ಟು
ಸಂತಸ. ಪುಟ್ಟ ಮಕ್ಕಳ ಅಳುವನ್ನು ನಿಲ್ಲಿಸಲು ನನ್ನನ್ನು ಬೆಳಕಿಗೆ ಹಿಡಿದು ಗೋಡೆಯ ಮೇಲೆ ಬೆಳಕಿನ ಚಿತ್ತಾರವನ್ನು
ಮೂಡಿಸಿದರೆ ಸಾಕು. ಮಕ್ಕಳ ಅಳು ನಿಲ್ಲದಿದ್ದರೆ ಕೇಳಿ. ಪುಟ್ಟ ರಾಮನು ಚಂದಮಾಮ ಬೇಕೆಂದು ಅತ್ತಾಗ ಮಂಥರೆಯು
ನನ್ನಲ್ಲಿ ಚಂದ್ರನ ಬಿಂಬವನ್ನು ತೋರಿಸಿದಾಗ ರಾಮನು ಖುಷಿಯಿಂದ ಕುಣಿದಾಡಿದ. ಹೀಗೆ ಪುಟ್ಟ ದೇವರನ್ನೇ
ಸಮಾಧಾನ ಪಡಿಸಿದ ಹೆಮ್ಮೆ ನನ್ನದು.
ವಾಹನ ಸವಾರರಿಗಂತೂ ನಾನಿಲ್ಲದಿದ್ದರೆ ವಾಹನ ಚಾಲನೆಯೇ ಅಸಾಧ್ಯ. ಹಿಂದೆ, ಪಕ್ಕದಲ್ಲಿ ಚಲಿಸುತ್ತಿರುವ ವಾಹನಗಳನ್ನು, ಪಾದಚಾರಿಗಳನ್ನು ಗಮನಿಸಿಕೊಂಡು ವಾಹನ ಚಾಲನೆ ನನ್ನ ಇರುವಿಕೆಯಿಂದ ಸುಲಭ ಸಾಧ್ಯ.
ಫ್ಯಾನ್ಸಿ ಅಂಗಡಿಗಳಲ್ಲಿ , ಮಾಲ್ ಗಳಲ್ಲಿ ನನ್ನದೇ ಹವಾ. ಎಲ್ಲಾ ವಸ್ತುಗಳನ್ನು , ಅವುಗಳು ಇರುವುದಕ್ಕಿಂತಲೂ ಚೆನ್ನಾಗಿ ಪಳ ಪಳ ಹೊಳೆಯುವಂತೆ ತೋರಿಸುವ ಕಲೆ ನನಗೆ ಚೆನ್ನಾಗಿ ಸಿದ್ಧಿಸಿದೆ. ಗ್ರಾಹಕರನ್ನು ನನ್ನ ಮಾಯದ ಬಲೆಯೊಳಗೆ ಬೀಳಿಸಿ ವ್ಯಾಪಾರಿಗಳ ವ್ಯಾಪಾರವನ್ನು ವೃದ್ಧಿಸುತ್ತೇನೆ. ಇಂತಹ ಮಾಯೆಯನ್ನು ಉಂಟುಮಾಡುವುದರಿಂದಲೇ ದಾಸ ಶ್ರೇಷ್ಠರಾದ ಪುರಂದರ ದಾಸರು ಕೂಡ "ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಲವನ ವಶವಹುದೇ ರಂಗ" ಎಂದು ಹಾಡಿದ್ದಾರೆ.
ಹೀಗೆ ನನ್ನ ಜೀವಮಾನವಿಡೀ ನಾನು ಬೇರೆಯವರಿಗೆ ಸಂತಸ ನೀಡುವುದರಿಂದ ಯಾರಿಂದಲೂ ಉಪೇಕ್ಷಿಸಲ್ಪಟ್ಟಿಲ್ಲ. ಆದರೆ ಬಿದ್ದು ಒಡೆದರೆ ಮಾತ್ರ ನನ್ನಿಂದ ಗಾಯವಾಗುವುದು ನಿಶ್ಚಿತ. ಆದ್ದರಿಂದ ಎಲ್ಲರೂ ನನ್ನನ್ನು ಅತ್ಯಂತ ಜಾಗರೂಕತೆಯಿಂದ ಬಳಸುವುದರಿಂದ ನಾನು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ.
Comments
Post a Comment