ಸ್ವಾತಂತ್ರ್ಯಾನಂತರ ಮಕ್ಕಳ ಸವಲತ್ತುಗಳಲ್ಲಿ ಉಂಟಾದ ಅಭಿವೃದ್ಧಿ
(ಆಕಾಶವಾಣಿ ಮಂಗಳೂರಿನಿಂದ ಪ್ರಸಾರವಾದ ಲೇಖನ)
" ಇಂದಿನ ಮಕ್ಕಳೇ ನಾಳಿನ ಪ್ರಜೆಗಳು" ಎಂಬ ಮಾತಿನಂತೆ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸುದೃಢರಾಗಿದ್ದರಷ್ಟೇ ಒಂದು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಅನಾರೋಗ್ಯ ಹಾಗೂ ಶಿಕ್ಷಣ ವಂಚಿತ ಮಕ್ಕಳಿಂದಾಗಿ ಒಂದಿಡೀ ತಲೆಮಾರು, ಅದರಿಂದಾಗಿ ಒಂದು ದೇಶವೇ ಅಭಿವೃದ್ಧಿಯಿಂದ ಹಿಂದುಳಿಯುವಂತಾಗುತ್ತದೆ. ಸ್ವಾತಂತ್ರ್ಯಾ ನಂತರ, ಮಕ್ಕಳ ಸರ್ವತೋಮುಖ ಬೆಳವಣಿಗೆ ಸರ್ಕಾರವು ಹಲವಾರು ಸವಲತ್ತುಗಳನ್ನು ಹಾಗೂ ಯೋಜನೆಗಳನ್ನು ರೂಪಿಸಿವೆ. ಕಾಲ ಕಾಲಕ್ಕೆ ಮಕ್ಕಳ ಸವಲತ್ತುಗಳಲ್ಲಿ ಬದಲಾವಣೆಗಳಾಗಿವೆ. ಅವುಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.
ಸ್ವಾತಂತ್ರ್ಯಾ ಪೂರ್ವದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಅಧಿಕವಾಗಿತ್ತು. ಭಾರತದಲ್ಲಿ ಈ ಹಿಂದೆ ಹುಟ್ಟಿದ ಒಂದು ವರ್ಷದೊಳಗೆ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪುತ್ತಿದ್ದರು. ತಾಯಿಯ ಅಪೌಷ್ಠಿಕತೆ, ಚಿಕ್ಕ ವಯಸ್ಸಿನಲ್ಲೇ ಮದುವೆ, ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆ, ಶಿಶುಗಳ ಕಡಿಮೆ ತೂಕ ಸೇರಿದಂತೆ ಹಲವು ಕಾರಣಗಳಿಂದ ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದವು. 2010ರಲ್ಲಿ ಭಾರತದಲ್ಲಿ 1000 ನವಜಾತ ಶಿಶುಗಳ ಪೈಕಿ 47 ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದವು. ಆದರೆ 2020ರ ವೇಳೆಗೆ ನವಜಾತ ಶಿಶುಗಳ ಸಾವಿನ ಸಂಖ್ಯೆ 28ಕ್ಕೆ ಇಳಿದಿದೆ. ಜಾಗತಿಕ ಮಟ್ಟದಲ್ಲಿ 1000 ನವಜಾತ ಶಿಶುಗಳ ಪೈಕಿ 27 ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ. ಅಂದರೆ ಭಾರತವು ಈಗ ಜಾಗತಿಕ ಸರಾಸರಿ ಮಟ್ಟದ ಸನಿಹಕ್ಕೆ ಬಂದಿದೆ.
ನವಜಾತ ಶಿಶುಗಳ ಸಾವನ್ನು ತಪ್ಪಿಸಲು ಹಾಗೂ ಆರೋಗ್ಯವಂತ ಮಗುವಿನ ಜನನಕ್ಕೆ ಗರ್ಭಿಣಿಯರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಕರ್ತವ್ಯವಾಗಿದೆ. ಆದ್ದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ವಿತರಣೆ, ಪ್ರತಿತಿಂಗಳ ವೈದ್ಯಕೀಯ ತಪಾಸಣಾ ವರದಿಯ ದಾಖಲಾತಿಯನ್ನು ಮಾಡಲಾಗುತ್ತದೆ. ಅಲ್ಲದೇ ತಾಯಿಕಾರ್ಡ್ ಹೊಂದಿದ ಗರ್ಭಿಣಿಯರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯವಿರುತ್ತದೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲುಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ನವಜಾತ ಶಿಶು ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ನವಜಾತ ಶಿಶುವಿನ ಆರೋಗ್ಯದ ಮೇಲೆ ನಿಗಾ ಇಡುವ ದೃಷ್ಟಿಯಿಂದ ಆಶಾಕಾರ್ಯಕರ್ತೆಯರು ಶಿಶು ಇರುವ ಮನೆಗೆ ನಿರಂತರ ಭೇಟಿ ಕೊಟ್ಟು ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ.
ಇನ್ನು ಆರು ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುವ ಸಮಸ್ಯೆಯೆಂದರೆ ಪೌಷ್ಟಿಕತೆಯ ಕೊರತೆ ಹಾಗೂ ಅನಾರೋಗ್ಯ. ಇದನ್ನು ತಡೆಗಟ್ಟಲು ಹಾಗೂ ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯವನ್ನು ಹಾಕಲು ಅಂಗನವಾಡಿ ಕೇಂದ್ರದ ಮುಖಾಂತರ ಪೌಷ್ಠಿಕ ಆಹಾರ ವಿತರಣೆ, ಕಾಲ ಕಾಲಕ್ಕೆ ಉಚಿತ ಲಸಿಕೆಯ ಮೂಲಕ ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಠಿಕತೆ ಹಾಗೂ ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸಲಾಗಿದೆ.
ಸ್ವಾತಂತ್ರ್ಯಾ ಪೂರ್ವದಲ್ಲಿ ಶಿಕ್ಷಣವೆನ್ನುವುದು ವೃತ್ತಿಗನುಗುಣವಾಗಿ ನಡೆಯುತಿತ್ತು. ಗುರುಕುಲಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಲಿಕೆಯು ನಡೆಯುತಿತ್ತು. ಬ್ರಿಟಿಷರ ಆಡಳಿತದಿಂದಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾದವು. ದೇಶದ ಆರ್ಥಿಕ ಹಾಗೂ ಸಾಮಜಿಕ ಅಭಿವೃದ್ಧಿಗೆ ಶಿಕ್ಷಣವೊಂದೇ ಮಂತ್ರ ಎಂದು ಮನಗಂಡ ಸರಕಾರ ಸರ್ವರಿಗೂ ಉಚಿತ ಶಿಕ್ಷಣ ಲಭಿಸಬೇಕೆಂದು 'ಸರ್ವ ಶಿಕ್ಷಾ ಅಭಿಯಾನ'ವನ್ನು ಆರಂಭಿಸಿತು. ಈ ಯೋಜನೆಯ ಮೂಲಕ ಭಾರತದಲ್ಲಿ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿತು. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣದ ದಾಖಲಾತಿ ಪ್ರಮಾಣ 96% ರಷ್ಟು ಏರಿಕೆಯಾಗಿದೆ ಎಂದು ವಾರ್ಷಿಕ ಶಿಕ್ಷಣ ವರದಿಯು ಹೇಳುತ್ತದೆ. ಸರ್ವ ಶಿಕ್ಷಾ ಅಭಿಯಾನದಂತಹ ಶೈಕ್ಷಣಿಕ ಕ್ರಾಂತಿಯಿಂದಾಗಿ ಇಂದು ದೇಶದ ಜನರ ಆರ್ಥಿಕ ಹಾಗೂ ಸಾಮಾಜಿಕ ಜೀವನ ಪ್ರಗತಿಯನ್ನು ಕಂಡಿದೆ.
ಇಂದು ಶಿಕ್ಷಣವು ಎಲ್ಲರ ಮೂಲಭೂತ ಹಕ್ಕು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಅಗತ್ಯವಿರುವ ಮೂಲಭೂತ ಸೌಲಭ್ಯ ಹಾಗೂ ಮಾನವ ಸಂಪನ್ಮೂಲವನ್ನು ಒದಗಿಸುವುದು, ಮಗುವಿನ ಸರ್ವತೋಮಖ ಬೆಳವಣಿಗೆ ಸಾಧಿಸಲು ಶಿಕ್ಷಣವನ್ನು ಸಾಧನವನ್ನಾಗಿ ರೂಪಿಸುವುದು, ಕಲಿಕಾ ಪ್ರಕ್ರಿಯೆಯನ್ನು ಚಟುವಟಿಕೆ ಆಧಾರಿತವಾಗಿ ಹಾಗೂ ಸಂತಾಸದಾಯಕವಾಗಿರುವಂತೆ ಮಾಡುವುದು ಇಂದಿನ ಅಗತ್ಯತೆಯಾಗಿದೆ.
ಇನ್ನು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣೆಯನ್ನು ಮಾಡಲಾಗುತ್ತದೆ. ಜೊತೆಗೆ ಅನ್ಯಾನ್ಯ ಕಾರಣಗಳಿಂದ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಾಲೆ ಬಿಟ್ಟವರಿಗೆ 'ಮರಳಿ ಶಾಲೆಗೆ' ಎಂಬಂತಹ ಯೋಜನೆಗಳು ಸಹಕಾರಿಯಾಗಿವೆ.
ಇಂದು ಶಿಕ್ಷಣವೆನ್ನುವುದು ಕೇವಲ ಸರಕಾರಿ ಶಾಲೆಗಳಿಗೆ ಮಾತ್ರವೇ ಸೀಮಿತವಾಗಿರದೆ ಅನೇಕ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಸಹ ಶಿಕ್ಷಣವನ್ನು ನೀಡುತ್ತಿವೆ. ಆದರೂ ಉನ್ನತ ಶಿಕ್ಷಣವೆನ್ನುವುದು ಇಂದಿಗೂ ಅನೇಕರ ಕನಸಾಗಿಯೇ ಉಳಿದಿದೆ. ಆದ್ದರಿಂದ ಅನೇಕ ಬ್ಯಾಂಕ್ ಗಳು ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಒದಗಿಸುತ್ತವೆ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ದೊರೆಯುತ್ತದೆ.
ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ಅಜ್ಞಾನದಿಂದ ಶಿಕ್ಷಣವು ಎಲ್ಲರನ್ನೂ ಒಳಗೊಳ್ಳುತ್ತಿಲ್ಲ. ಅಲ್ಲದೇ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಬೇಕಾಗಿದೆ. ಇಂದು ಶಿಕ್ಷಣ ಕ್ಷೇತ್ರದ ಬಹುದೊಡ್ಡ ಸವಾಲುಗಳೆಂದರೆ ಗರಿಷ್ಠ ವಿದ್ಯಾರ್ಥಿ ಹಾಗೂ ಕನಿಷ್ಠ ಶಿಕ್ಷಕರ ಅನುಪಾತ, ಆರ್ಥಿಕ ವ್ಯವಸ್ಥೆಯ ಕೊರತೆ ಮತ್ತು ಕನಿಷ್ಠ ಮಟ್ಟದ ಶಿಕ್ಷಕರ ತರಬೇತಿ. ಅಲ್ಲದೇ ಪಠ್ಯ ಪುಸ್ತಕದ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯದ ತರಬೇತಿಯೂ, ಸಂಸ್ಕಾರಯುತ ಶಿಕ್ಷಣವೂ ಇಂದಿನ ಆವಶ್ಯಕತೆಯಾಗಿದೆ.
'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ಮಾತಿನಂತೆ ಹೆಣ್ಣೊಬ್ಬಳು ಸುಶಿಕ್ಷಿತಳಾದರೆ ಅವಳಿಂದ ಕುಟುಂಬ, ಅದರಿಂದಾಗಿ ಇಡೀ ದೇಶವೇ ಸುಶಿಕ್ಷಿತವಾಗುವುದರಲ್ಲಿ ಸಂಶಯವಿಲ್ಲ. ಬಡತನ ನಿರ್ಮೂಲನೆಗೆ ಹೆಣ್ಣು ಮಕ್ಕಳ ಶಿಕ್ಷಣವು ಅತ್ಯಗತ್ಯವಾಗಿದೆ. ಬಡತನ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅನಕ್ಷರತೆ ಹಾಗೂ ಅಜ್ಞಾನದಿಂದ ಹೆಣ್ಣು ಮಕ್ಕಳು ಶಾಲಾ ಪ್ರವೇಶಕ್ಕೆ ಅಡೆತಡೆಯನ್ನು ಎದುರಿಸುತ್ತಾರೆ.
ಸ್ವಾತಂತ್ರ್ಯ ಪಡೆದಾಗ ದೇಶದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣವು 8.6% ರಷ್ಟಿತ್ತು. ಇಂದು ಅದು 64.63%ರಷ್ಟು ಏರಿಕೆಯಾಗಿದೆ. ಇಂದು ಶಾಲೆಯಲ್ಲಿ ಉಚಿತ ಶಿಕ್ಷಣ ಮಾತ್ರವಲ್ಲದೇ ಉಚಿತವಾಗಿ ಸಮವಸ್ತ್ರ ಹಾಗೂ ಸೈಕಲ್ ವಿತರಣೆಯನ್ನು ಮಾಡಲಾಗುತ್ತಿದೆ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಉಚಿತ ಹಾಸ್ಟೆಲ್ ಸೌಲಭ್ಯವು ದೊರೆಯುತ್ತದೆ.
2015ರಲ್ಲಿ ಭಾರತ ಸರ್ಕಾರವು ಮಹಿಳಾ ಸಮಾನತೆ ಹಾಗೂ ಸಬಲೀಕರಣವನ್ನು ಸಾಧಿಸಲು 'ಬೇಟಿ ಬಚಾವೋ ಬೇಟಿ ಪಢಾವೋ' ಯೋಜನೆಯನ್ನು ಆರಂಭಿಸಿತು. ಗಂಡು ಹಾಗೂ ಹೆಣ್ಣು ಮಕ್ಕಳ ನಡುವಿನ ಅನುಪಾತವನ್ನು ಸುಧಾರಿಸುವುದು ಹಾಗೂ ಹೆಣ್ಣು ಮಗುವಿನ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹೆಣ್ಣು ಮಕ್ಕಳ ಆರ್ಥಿಕ ಅಭಿವೃದ್ಧಿ, ಅವರ ಭವಿಷ್ಯದ ವಿದ್ಯಾಭ್ಯಾಸ ಹಾಗೂ ವಿವಾಹದಂತಹ ಖರ್ಚು ವೆಚ್ಚಗಳಲ್ಲಿ ಪೋಷಕರಿಗೆ ನೆರವಾಗಲು ಭಾರತ ಸರ್ಕಾರವು 'ಸುಕನ್ಯಾ ಸಮೃದ್ಧಿ ಯೋಜನೆ'ಯನ್ನು ಜಾರಿಗೆ ತಂದಿದೆ. ಹೆಣ್ಣು ಮಗುವಿನ ಹೆಸರಿನಲ್ಲಿ ಬ್ಯಾಂಕ್ ಅಥವಾ ಪೊಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ತೆರೆಯುವ ಯೋಜನೆ ಇದಾಗಿದೆ.
ಅಲ್ಲದೇ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್, ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ 'ಉಡಾನ್' ಯೋಜನೆಯನ್ನು ಆರಂಭಿಸಿದೆ. ಇದು ಭಾರತಾದ್ಯಂತ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜುಗಳಲ್ಲಿ ದಾಖಲಾದ ಹುಡುಗಿಯರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
'ಬಾಲಿಕಾ ಸಮೃದ್ಧಿ ಯೋಜನೆ'ಯು ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಗುವಿನ ಕುಟುಂಬಕ್ಕೆ ಧನಸಹಾಯವನ್ನು ಮಾಡುವ ಯೋಜನೆಯಾಗಿದೆ. ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸುವುದು, ಶಾಲಾ ದಾಖಲಾತಿಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇನ್ನು ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 'ಭಾಗ್ಯಲಕ್ಷ್ಮಿ' ಎಂಬ ಯೋಜನೆಯನ್ನು ಕರ್ನಾಟಕ ಸರ್ಕಾರವು ರೂಪಿಸಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನಕ್ಕೆ ಉತ್ತೇಜನ ಕೊಡುವುದು, ಬಾಲಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ಮಾರಾಟ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಿಂದಾಗಿ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವುದರಿಂದ ಸಮಾಜದಲ್ಲಿ ಅವರನ್ನು ಆರ್ಥಿಕ ಸುದೃಢರನ್ನಾಗಿ ಮಾಡಲು ಸಾಧ್ಯವಾಗಿದೆ.
ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಕಂಡುಬರುವ ದೊಡ್ಡ ಪಿಡುಗು. ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುತ್ತದೆ. ಇಂಥವುಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮಾನಸಿಕವಾಗಿ ಅಸ್ವಸ್ಥನಾಗಿ ಸಮಾಜಕಂಟಕನಾಗುತ್ತಾನೆ. ಹದಿವಯಸ್ಸಿನಲ್ಲಿ ಶೋಕಿಗೆಂದೋ, ನಟರ ಶೈಲಿಯ ಅನುಕರಣೆಗೆಂದೋ ಅಥವಾ ಆನಂದ ಪಡೆಯಲೆಂದೋ ಶುರುವಾದ ಮಾದಕ ವ್ಯಸನವು ದುಶ್ಚಟವಾಗಿ ಪರಿವರ್ತನೆಯಾಗಿ ಇಡೀ ಜೀವನದ ದಿಕ್ಕು ದೆಸೆಯನ್ನೇ ದುರಂತಮಯವಾಗಿಸುತ್ತದೆ. ಸಾಮಾನ್ಯವಾಗಿ ಶಾಲಾ ಮಕ್ಕಳು ತಮ್ಮ ಸ್ನೇಹಿತರಿಂದ ಅನೇಕ ದುಶ್ಚಟಗಳ ದಾಸರಾಗುತ್ತಾರೆ. ಅಲ್ಲದೇ ಸುಲಭವಾಗಿ ಅದರ ಕಡೆ ವಾಲುತ್ತಾರೆ. ಸುಮಾರು 40% ರಷ್ಟು ಮಕ್ಕಳು ತಮ್ಮ ಹತ್ತು ವರ್ಷದ ಹೊತ್ತಿಗೆ ಆಲ್ಕೋಹಾಲ್ ಅನ್ನು ಪ್ರಯತ್ನಿಸಿರುತ್ತಾರೆ ಎಂದು ವರದಿಯು ಹೇಳುತ್ತದೆ. ಮಾದಕ ವಸ್ತುಗಳ ಮೊದಲ ಉಪಯೋಗ ಹದಿಹರೆಯದ ಹಾಗೂ ತಾರುಣ್ಯದ ಹಂತದಲ್ಲಿ ಪ್ರಾರಂಭವಾಗುವುದರಿಂದ ಶಾಲೆಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತವೆ. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ 1989 ರಿಂದ ಪ್ರತಿವರ್ಷ ಜೂನ್ 26 ರಂದು 'ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನ' ವನ್ನಾಗಿ ಆಚರಿಸಲಾಗುತ್ತದೆ. ಅಂದು ಶಾಲೆಗಳಲ್ಲಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಣಾಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳಿಂದ ದುಷ್ಪರಿಣಾಮದ ಅರಿವು ಹಾಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತದೆ. ಅಲ್ಲದೇ ಪಠ್ಯ ಪುಸ್ತಕಗಳಲ್ಲಿ ಅದಕ್ಕೆ ಸಂಬಂಧಿಸಿದ ಪಾಠಗಳು, ಅರಿವು ಮೂಡಿಸುವ ಕಾರ್ಯಾಗಾರಗಳು ಹಾಗೂ ಬೀದಿ ನಾಟಕಗಳಿಂದ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಅಲ್ಲದೇ ಯಾವುದೇ ಶಿಕ್ಷಣ ಸಂಸ್ಥೆಗಳು ಇರುವ ಸ್ಥಳದಿಂದ 500ಮೀ ಅಂತರದಲ್ಲಿ ಮಾದಕ ದ್ರವ್ಯ ಮಾರಾಟವನ್ನು ಸರ್ಕಾರವು ನಿಷೇಧಿಸಿದೆ. ಅಲ್ಲದೇ ಮಾದಕ ವ್ಯಸನಕ್ಕೆ ತುತ್ತಾದ ಮಕ್ಕಳನ್ನು ರಕ್ಷಿಸಲು ಆಪ್ತಸಲಹಾ ಕೇಂದ್ರಗಳನ್ನು ತೆರೆಯಲಾಗಿದೆ.
ಕಾರ್ಮಿಕ ಅಥವಾ ಲೈಂಗಿಕ ಶೋಷಣೆಗಾಗಿ ಮಕ್ಕಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಅಥವಾ ವರ್ಗಾವಣೆ ಮಾಡುವ ಕಾನೂನು ಬಾಹಿರ ಕೃತ್ಯವನ್ನು ಮಕ್ಕಳ ಕಳ್ಳಸಾಗಾಣಿಕೆ ಎಂದು ಕರೆಯಲಾಗುತ್ತದೆ. ಬಡತನದ ಕಾರಣದಿಂದ ಪಾಲಕರು ಹಣದಾಸೆಗೆ ತಮ್ಮ ಮಕ್ಕಳನ್ನು ಮಾರಾಟ ಮಾಡುತ್ತಾರೆ. ಇಂತಹ ಮಕ್ಕಳನ್ನು ಭಿಕ್ಷಾಟನೆಗೋ, ಕಾರ್ಮಿಕರಾಗಿಯೋ, ಅಂಗಾಂಗ ಕಸಿಗಾಗಿಯೋ ಅಥವಾ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಇಂತಹ ಕೃತ್ಯಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಮಕ್ಕಳನ್ನು ರಕ್ಷಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಆರಂಭಿಸಲಾಗಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣ ಈ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಿಲುಕಿದ ಮಕ್ಕಳಿಗೆ ಸಾಂತ್ವನ ಕೇಂದ್ರಗಳನ್ನು ಹಾಗೂ ಆಪ್ತ ಸಲಹೆ ಕೇಂದ್ರಗಳನ್ನು ತೆರೆದು ಸಹಾಯವನ್ನು ಮಾಡಲಾಗುತ್ತದೆ. ಯಾವುದೇ ತರಹದ ದೌರ್ಜನ್ಯಕ್ಕೆ ತುತ್ತಾದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ದೂರನ್ನು ದಾಖಲಿಸಲು ಅವಕಾಶವಿರುತ್ತದೆ.
ಆಟ ಪಾಠದೊಂದಿಗೆ ಬಾಲ್ಯವನ್ನು ಕಳೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು. ಬಡತನ ಹಾಗೂ ಶಿಕ್ಷಣ ವಂಚಿತ ಪಾಲಕರಿಂದಾಗಿ ಅನೇಕ ಮಕ್ಕಳು ಬಾಲಕಾರ್ಮಿಕರಾಗಿ ಬೇರೆ ಬೇರೆ ಕಡೆ ದುಡಿದು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ. ಇಂದು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅನೇಕ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. 5 ರಿಂದ 14 ವರ್ಷ ವಯೋಮಾನದ ಈ ಮಕ್ಕಳು ಅವರ ಆರೋಗ್ಯ ರಕ್ಷಣೆಗೆ ಯೋಗ್ಯವಲ್ಲದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರನ್ನು ಒತ್ತಾಯದಿಂದ ದುಡಿಸಿ ಕೊಡಲಾಗುತ್ತಿದೆ. ಅವರು ಒಂದು ರೀತಿ ಬಾಲಕಾರ್ಮಿಕ ಅಲ್ಲದೇ ಜೀತದಾಳುಗಳೂ ಆಗಿದ್ದಾರೆ. ಅಂತಹ ಮಕ್ಕಳ ರಕ್ಷಣೆಗೋಸ್ಕರ ಭಾರತ ಸರ್ಕಾರವು 1986ರಲ್ಲಿ 'ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ'ಯನ್ನು ಜಾರಿಗೆ ತಂದಿತು. ಇದರ ಪ್ರಕಾರ ಮಕ್ಕಳನ್ನು ಅನಾರೋಗ್ಯಕರವಾದ ಸ್ಥಳಗಳಲ್ಲಿ ದುಡಿಸಿಕೊಳ್ಳಬಾರದೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಬಾಲಕಾರ್ಮಿಕ ನಿಷೇಧ ಕಾಯ್ದೆಯಲ್ಲದೇ ಮಕ್ಕಳ ಉದ್ಯೋಗ ಕಾಯ್ದೆ, ಕನಿಷ್ಠ ವೇತನಗಳ ಕಾಯ್ದೆ, ಪ್ಲಾಂಟೇಷನ್ ಕಾಯ್ದೆ, ಬೀಡಿ ಸಿಗರೇಟು ಕಾರ್ಮಿಕರ ಕಾಯ್ದೆ ಇತ್ಯಾದಿ ಕಾಯ್ದೆಗಳು ಸಹ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸುತ್ತದೆ. 2011ರ ಜನಗಣತಿಯ ಪ್ರಕಾರ 5 ರಿಂದ 18 ವಯಸ್ಸಿನ 33 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. 1986 ರಲ್ಲಿ ಜಾರಿಗೆ ತಂದ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಗೆ 2016 ರಲ್ಲಿ ತಿದ್ದುಪಡಿ ಮಾಡುವ ಮೂಲಕ 'ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ' ಎಂದು ಬದಲಾವಣೆ ತಂದಿದ್ದು ಅದರಂತೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸುವುದು ಶಿಕ್ಷಾರ್ಹ ಅಪರಾಧ. ಈ ಕಾಯ್ದೆಯನ್ನು ಉಲ್ಲಂಘಸಿದಲ್ಲಿ ಮಾಲೀಕರಿಗೆ 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 20,000 ದಿಂದ 50,000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಪುನರಾವರ್ತಿತ ಅಪರಾಧಕ್ಕೆ 10,000 ಗಳ ದಂಡವನ್ನು ವಿಧಿಸಲಾಗುತ್ತದೆ. ಯಾವುದೇ ಅಪಾಯಕಾರಿ ಕೆಲಸಗಳಲ್ಲಿ ತೊಡಗಿರುವ ಬಾಲಕಾರ್ಮಿಕರನ್ನು ಹಾಗೂ ಮಕ್ಕಳ ಕಳ್ಳ ಸಾಗಣೆಯನ್ನೂ ಕಂಡ ಕೂಡಲೇ ಸಾರ್ವಜನಿಕರು ಸಂಬಂಧಿಸಿದ ಅಧಕಾರಿಗಳಿಗೆ ಮಾಹಿತಿಯನ್ನು ನೀಡಬಹುದು.
ಇನ್ನು ಬಡತನ ಹಾಗೂ ಶಿಕ್ಷಣದ ಕೊರತೆಯಿಂದ ಹೆಣ್ಣು ಮಕ್ಕಳು ಹೊರೆ ಎಂಬ ಭಾವನೆಯಿಂದ ಬಾಲ್ಯ ವಿವಾಹವನ್ನು ಮಾಡಲಾಗುತ್ತದೆ. ಬಾಲ್ಯ ವಿವಾಹವು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಮಾಡುವುದರಿಂದ ವಯಸ್ಸಿಗೆ ಮೀರಿದ ಜವಾಬ್ದಾರಿ ಹೋರಿಸಿದಂತಾಗುತ್ತದೆ. ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಗರ್ಭಿಣಿಯಾಗುವುದರಿಂದ ವಿಕಲಾಂಗ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ. ಶಿಶುಮರಣ ಹೆಚ್ಚಾಗುತ್ತದೆ. ರಕ್ತ ಹೀನತೆ, ಖಿನ್ನತೆ ಉಂಟಾಗುತ್ತದೆ. ಇದನ್ನು ಮನಗಂಡ ಸರ್ಕಾರ 2006 ರಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಿತು. ಈ ಕಾಯ್ದೆಯ ಪ್ರಕಾರ ಬಾಲ್ಯ ವಿವಾಹವು ಜಾಮೀನು ರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿರುತ್ತದೆ. ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ, ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ ಹಾಗೂ ನೆರವೇರಿಸುವ ವ್ಯಕ್ತಿ ಅಥವಾ ಸಂಸ್ಥೆ ಮಗುವಿನ ಜವಾಬ್ದಾರಿ ಹೊತ್ತ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಬಾಲ್ಯ ವಿವಾಹದಲ್ಲಿ ಭಾಗವಹಿಸುವವರು ಈ ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಸಿದವರು ತಪ್ಪಿತಸ್ಥರಾಗಿರುತ್ತಾರೆ. ಇಂತಹವರಿಗೆ 2 ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ 1 ಲಕ್ಷ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಬಹುದು. ಇನ್ನು ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹದ ದುಷ್ಪರಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕರಪತ್ರಗ, ಬೀದಿ ನಾಟಕಗ, ಕಲಾ ಜಾಥ ಹಾಗೂ ಗೋಡೆ ಬರಹಗಳ ಮೂಲಕ ಅರಿವನ್ನು ಮೂಡಿಸಲಾಗುತ್ತಿದೆ.
Comments
Post a Comment