ಬಾಲ್ಕನಿಯಲೊಂದು ಸಸಿ

       ಮೊಗ್ಗುಗಳು ಯಾವಾಗ ಅರಳುತ್ತವೆ ಎಂದು ಕಾಯುತ್ತಿದ್ದಾಳೆ

ಹೂ ಅರಳಿದ ಖುಷಿ

ಹೂಗಳಿರುವ ಕ್ಲಿಪ್ ನ ಜೊತೆ ಸೇವಂತಿಗೆ ಹೂ ಜೊತೆಗೆ ಹಣೆಯಲ್ಲಿ ಹೂವಿನ ಬೊಟ್ಟು

ಅಪಾರ್ಟ್ಮೆಂಟಿನ ಹೂ ಗಿಡಗಳ ಜೊತೆ ಮಾತು-ಕಥೆ 



              ಮೊದಲಿಂದಲೂ ಮಗಳಿಗೆ ಗಿಡಗಳೆಂದರೆ ಬಹಳ ಪ್ರೀತಿ. ಅವತಾರ್ ಮೂವಿಯನ್ನು ನೋಡಿದ ಮೇಲಂತೂ ಅವರು ಗಿಡಗಳನ್ನು ಸ್ಪರ್ಶಿಸುವಂತೆ ಇವಳೂ ಕೂಡ ಗಿಡಗಳ ಎಲೆಗಳನ್ನು, ಹೂಗಳನ್ನು ಸ್ಪರ್ಶಿಸಿ ಖುಷಿ ಪಡುತ್ತಿದ್ದಳು. ನಾವಿರುವ ವಸತಿ ಸಮುಚ್ಚಯದಲ್ಲಿ ಹೆಚ್ಚಿನ ಎಲ್ಲಾ ಮನೆಗಳ ಬಾಲ್ಕನಿಯಲ್ಲಿರುವ ಗಿಡಗಳನ್ನು ನೋಡಿ "ನಾವು ಯಾವಾಗ ಹೀಗೆ ಗಿಡಗಳನ್ನು ನೆಡುವುದು?" ಎಂದು ಪ್ರಶ್ನಿಸತೊಡಗಿದಳು. "ನಾವು ವಾರಾಂತ್ಯದಲ್ಲಿ ಅಜ್ಜ ಅಜ್ಜಿಯನ್ನು ನೋಡಲು ಮನೆಗೆ ಹೋದಾಗ ಅವುಗಳಿಗೆ ನೀರು ಹಾಕುವುದು ಯಾರು? ಹಾಗಾಗಿ ಇಲ್ಲಿ ಗಿಡಗಳನ್ನು ನೆಡುವುದು ಬೇಡ" ಎಂದು ನಾನು ನಿರಾಕರಿಸಿದೆ. ನಾನು ಹಾಗೆ ಹೇಳಿದ್ದು ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆಮೇಲೆ ಅವಳು ಪುನಃ ಗಿಡ ನೆಡುವುದರ ಬಗ್ಗೆ ಕೇಳಲಿಲ್ಲ. ಆದರೆ ಊರಿಗೆ ಹೋದಾಗಲೆಲ್ಲಾ ಅಜ್ಜಿಯ ಜೊತೆ ಹೂ ಗಿಡಗಳನ್ನು ನೆಡುವುದು, ಅವುಗಳಿಗೆ ನೀರನ್ನು ಹಾಕುವುದು ಅವಳ ಇಷ್ಟದ ಕೆಲಸವಾಗಿತ್ತು. ಅಲ್ಲದೇ ಹೂಗಳನ್ನು ಕೊಯಿದು ನಾವಿಬ್ಬರೂ ಒಟ್ಟಿಗೆ ಕೂತು ತಯಾರಿಸಿದ ಪೇಪರ್ ಕಪ್ ಹೂ ಬುಟ್ಟಿಯಲ್ಲಿ ಆ ಹೂಗಳನ್ನು ಇಟ್ಟು ಜೋಡಿಸುತ್ತಿದ್ದಳು. ಈ ತರಹದ ಸಸ್ಯ ಪ್ರೀತಿ ಅವಳ ಎರಡೂ ಕಡೆಯ ಅಜ್ಜ ಅಜ್ಜಿಯರ ಜೀನ್ ನ ಕೊಡುಗೆ ಎಂಬುದು ನನ್ನ ಬಲವಾದ ನಂಬಿಕೆ.

          ಸ್ವಲ್ಪ ದಿನಗಳ ನಂತರ ಅತ್ತೆ ತಮ್ಮ ಅನಾರೋಗ್ಯದ ನಿಮಿತ್ತ ನಮ್ಮೊಡನೆ ಇರಲು ಬಂದಿದ್ದರು. ಹಾಗಾಗಿ ಎರಡು ವಾರಾಂತ್ಯಗಳನ್ನು ಊರಿಗೆ ಹೋಗದೆ ಇಲ್ಲೇ ಕಳೆದೆವು. ಹೀಗೆ ಒಂದು ದಿನ ವಾಕಿಂಗ್ ಹೋಗುತ್ತಿದ್ದಾಗ ಮಗಳು "ಅಮ್ಮ, ನಾವು ಯಾವಾಗ ಊರಿಗೆ ಹೋಗುವುದು?" ಎಂದು ಕೇಳಿದಳು. "ಅಜ್ಜಿ ಹುಷಾರಾದ ಮೇಲೆ ಊರಿಗೆ ಹೋಗೋಣ. ಸದ್ಯಕ್ಕಂತೂ ಹೋಗಲು ಸಾಧ್ಯವಿಲ್ಲ" ಎಂದು ನಾನು ಹೇಳಿದ ತತ್ ಕ್ಷಣ ಅವಳು, "ಹಾಗಾದರೆ ನಮ್ಮ ಬಾಲ್ಕನಿಯಲ್ಲಿ ಸಸಿಗಳನ್ನು ನೆಡೋಣ" ಎಂದಳು. ನನಗೆ ಆಶ್ಚರ್ಯವಾಗಿದ್ದು ನಾನು ಹೇಳಿದ ತತ್ ಕ್ಷಣ ಅವಳು ಕನೆಕ್ಟ್ ಮಾಡಿದ ರೀತಿ. ಊರಿಗೆ ಹೋಗದಿದ್ದರೆ ಸಸಿಗಳನ್ನು ನೆಡಬಹುದು ಎಂಬುದನ್ನು ನಾನು ಹೇಳದೆಯೂ ಅರ್ಥ ಮಾಡಿಕೊಂಡುಬಿಟ್ಟಿದ್ದಳು. ಅವಳು ಕೇಳಿದ ರೀತಿಗೆ ಇಲ್ಲವೆನ್ನಾಲಾಗದೆ ಒಪ್ಪಿಗೆ ನೀಡಿದೆ. ನಾನು ಒಪ್ಪಿಗೆ ನೀಡಿದ್ದೇ ತಪ್ಪಾಯಿತು ಎನ್ನುವಂತೆ ಪ್ರತಿದಿನವೂ ಪೀಡಿಸತೊಡಗಿದಳು. ಅದೂ ಇದೂ ನೆಪ ಹೇಳಿ ತಪ್ಪಿಸುತ್ತಾ ವಾರಾಂತ್ಯ ಬಂತು. ಒಂದು ಶನಿವಾರ ಗಿಡಗಳನ್ನು ತರೋಣ ಎಂದು ನಿರ್ಧರಿಸಿದೆವು . ಮಗಳಂತೂ ಖುಷಿಯಲ್ಲಿ ಕುಣಿದಾಡಿದಳು. ಹೊರಡುವಾಗ "ಅಮ್ಮ, ನೀನು ಬರಬೇಡ. ನಾನು, ಅಪ್ಪ ಇಬ್ಬರೇ ಹೋಗಿ ಗಿಡಗಳನ್ನು ತರುತ್ತೇವೆ" ಎಂದು ಹೇಳಿದ ಕಾರಣ ನಾನು ಮನೆಯಲ್ಲೇ ಉಳಿದೆ. ಅಪ್ಪ - ಮಗಳು ಇಬ್ಬರೂ ಸೇರಿ ಅಲ್ಲಿ ಇಲ್ಲಿ ಎಂದು ನರ್ಸರಿಗಳನ್ನು ಹುಡುಕಿದ್ದಾಯಿತು. ಅಲ್ಲಿಂದ ನನಗೆ ವಿಡಿಯೋ ಕಾಲ್! ಮನೆಯಿಂದ ಹೊರಡುವವರೆಗೆ ಹೂವಿರುವ ಗಿಡವೇ ಬೇಕೆಂದವಳು ನರ್ಸರಿಯಲ್ಲಿರುವ ಗಿಡಗಳನ್ನು ನೋಡಿದ ತಕ್ಷಣವೇ ಪ್ಲೇಟ್ ಚೇಂಜ್! ಒಂದು ಕ್ರೋಟನ್ ಸಸಿಯನ್ನು ಆಯ್ಕೆ ಮಾಡಿಕೊಂಡಿದ್ದಳು. ಹಾಗಾಗಿ ನನ್ನ ಗಂಡನಿಗೆ ಗೊಂದಲವಾಗಿ ನನಗೆ ಕಾಲ್ ಮಾಡಿದ್ದರು. ಕೊನೆಗೆ ಒಂದು ಕ್ರೋಟನ್ ಸಸಿಯನ್ನು, ಇನ್ನೊಂದು ಹೂವುಗಳಿರುವ ಸೇವಂತಿಗೆ ಗಿಡವನ್ನು ಖರೀದಿಸಿ ಮನೆ ತಲುಪಿದಾಗ ಮಧ್ಯಾಹ್ನ 2 ಗಂಟೆಯಾಗಿತ್ತು. ಆದರೂ ಮಗಳಿಗೆ ಹಸಿವೆಯಿಲ್ಲ. ಸಸಿಗಳನ್ನು ಬಾಲ್ಕನಿಯಲ್ಲಿಟ್ಟು ನೀರು ಹಾಕಿದ್ದಾಯಿತು, ಸೇವಂತಿಗೆ ಸಸಿಯಲ್ಲಿದ್ದ ಮೊಗ್ಗುಗಳು ಯಾವಾಗ ಹೂವಾಗಿ ಅರಳುತ್ತವೆ ಎಂದು ಅಲ್ಲೇ ಅವಳ ಕುರ್ಚಿ ಹಾಕಿ ಕುಳಿತಿದ್ದಾಯಿತು. ಇವತ್ತು ಮೊಗ್ಗುಗಳು ಅರಳುವುದಿಲ್ಲ ಎಂಬ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ, ಊಟವನ್ನೂ ಸಹ ಮಾಡದೇ, ನಿಮಿಷಕ್ಕೊಮ್ಮೆ ಸಸಿಗಳಿಗೆ ನೀರು ಹಾಕುತ್ತಾ, ಅವಳದ್ದೇ ಖುಷಿಯ ಲೋಕದಲ್ಲಿದ್ದಳು ಆ ದಿನವಿಡೀ. 

          ಇನ್ನು ಶಾಲೆಯಿಂದ ಬಂದ ಮೇಲೆ ಕೇಳಬೇಕೆ? ಗಿಡಗಳ ಮುಂದೆ, ಟೀಚರ್ ಹೇಳಿಕೊಟ್ಟ ಹಾಡು, ನೃತ್ಯ, ಶ್ಲೋಕ, ಕಥೆ ಎಲ್ಲವನ್ನೂ ಹೇಳುತ್ತಿದ್ದಳು. ಕೆಲವೊಮ್ಮೆ ಅವಳೇ ಟೀಚರ್ ನಂತೆ ಅಭಿನಯಿಸುತ್ತಿದ್ದಳು. ಅಪ್ಪನ ಆಫೀಸ್ ಮೀಟಿಂಗ್ ಗೆ ಸದಾ ಏನಾದರೊಂದು ತರಲೆ ಮಾಡುವ ತುಂಟಿಗೆ " ಗಿಡಗಳ ಬಳಿ ಹೋಗಿ ಮಾತನಾಡಿ ಬಾ. ನೀನು ಮಾತನಾಡಿಸದೆ ಗಿಡಗಳು ಬೇಸರದಲ್ಲಿವೆ" ಎಂದು ಹೇಳಿದರೆ ಸಾಕಿತ್ತು, ತತ್ ಕ್ಷಣ ಗಿಡಗಳ ಮುಂದೆ ಹಾಜರ್. ತಾನು ಮಾಡುತ್ತಿದ್ದ ತಂಟೆ ತರಲೆಗಳನ್ನು ಮರೆತು ಬಿಡುತ್ತಿದ್ದಳು. 

           ಈಗ ಗಿಡಗಳಲ್ಲಿ ಹೂ ಅರಳುತ್ತಿವೆ. ಥೇಟ್ ಮಗಳ ಮುಖದ ಮೇಲಿನ ನಗುವಿನಂತೆ.

          
      

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"