ಮೊದಲ ದಿನ ಮೌನ

        ಮೊದಲ ಬಾರಿ ಎಳೆ ಮಗಳನ್ನು ಎತ್ತಿದಾಗ ಮನದಲ್ಲಿ ಮೂಡಿದ ಪ್ರಶ್ನೆ ಇವಳು ಹೇಗೆ ದೊಡ್ಡವಳಾಗುತ್ತಾಳಪ್ಪ? ಇವಳನ್ನು ಬೆಳೆಸುವುದು ನನ್ನಿಂದ ಸಾಧ್ಯವೇ? ಎಂದು. ಸಮಯ ಉರುಳಿತು. ಸದಾ ನನಗೇ ಅಂಟಿಕೊಂಡಿರುತ್ತಿದ್ದ ಮಗಳು ಯಾವಾಗ ಶಾಲೆಗೆ ಹೋಗುತ್ತಾಳೊ ಎಂದು ಅನಿಸಲು ಶುರುವಾಯಿತು. ಮಗಳಿಗೆ ಮೂರು ವರ್ಷವಾದಾಗ ಅವಳನ್ನು ಶಾಲೆಗೆ ಸೇರಿಸಲು ಹತ್ತಿರದ ಶಾಲೆಗಳನ್ನು ವಿಚಾರಿಸಿದೆವು. ಒಂದು ಶಾಲೆಯವರಂತು ಮಗಳಿಗೆ ಮೂರು ವರ್ಷವಾಗಿಯೂ ಇನ್ನೂ ಯಾವದೇ ಶಾಲೆಗೆ ಸೇರಿಸದಿದ್ದ ನಮ್ಮನ್ನು ಶಿಲಾಯುಗದ ಪಾಲಕರಂತೆ ಕಂಡರು. ಯಾಕಿಷ್ಟು ತಡ ಮಾಡಿದಿರಿ? ಅಜ್ಜ ಅಜ್ಜಿಯರ ಪ್ರೀತಿಯನ್ನು ಸವಿದ ಮಕ್ಕಳು ಶಾಲೆಗೆ ಹೊಂದಿಕೊಳ್ಳುವುದು ಕಷ್ಟ ಎಂದು ಹೇಳಿದಾಗ ನಾವು ಸಹ ಧೈರ್ಯಗುಂದಿದ್ದು ಸುಳ್ಳಲ್ಲ. ಒಂದು ಶಾಲೆಯ ವಾತಾವರಣ ಹಿಡಿಸದಿದ್ದರೆ, ಇನ್ನೊಂದು ಶಾಲೆಯನ್ನು ದುಬಾರಿ ಶುಲ್ಕದ ಕಾರಣಕ್ಕೆ ಬಿಟ್ಟೆವು. ಮತ್ತೊಂದು ಶಾಲೆಯಲ್ಲಿ ವಿದ್ಯಾರ್ಥಿ - ಶಿಕ್ಷಕರ ಸಂಖ್ಯಾ ಅನುಪಾತ ನಮಗೆ ಹೊಂದುವಂತೆ ಇಲ್ಲದ ಕಾರಣ ಬಿಟ್ಟೆವು. ಹೀಗೆ ಎಲ್ಲವನ್ನೂ ಗಮದಲ್ಲಿಟ್ಟುಕೊಂಡು ಮನೆಗೆ ಹತ್ತಿರವಿದ್ದ ಶಾಲೆಗೆ ಅಡ್ಮಿಷನ್ ಮಾಡಿಸಿದೆವು.
          ಅಡ್ಮಿಷನ್ ಮಾಡಿದ ಮೇಲೆ ಮಗಳಿಗೆ ಶಾಲೆಗೆ ಹೋಗುವುದರ ಬಗ್ಗೆ ಹೇಳತೊಡಗಿದೆ. ಆದರೆ ಅದಕ್ಕಿಂತ ಮೊದಲೇ ಅವಳು ಕಾರ್ಟೂನ್ ನೋಡಿ ಶಾಲೆಯ ಬಗ್ಗೆ ಒಳ್ಳೆಯ ಕನಸುಗಳನ್ನೇ ಕಂಡಿದ್ದಳು. ಆದರೆ ನಾನು ಅವಳ ಜೊತೆ ಶಾಲೆಗೆ ಹೋಗಬೇಕೆಂಬುದೇ ಅವಳ ಆಸೆಯಾಗಿತ್ತು. ಶಾಲೆಗೆ ಸೇರಿಸುವ ಮುನ್ನ ಒಮ್ಮೆ ಮೇ ತಿಂಗಳಿನಲ್ಲಿ ಅವಳನ್ನು ಶಾಲೆಗೆ ಕರೆದುಕೊಂಡು ಹೋಗಿದ್ದೆ. ಆಗ ಅಲ್ಲಿದ್ದ ಟೀಚರ್ "ಈಗ ಸಮ್ಮರ್ ಕ್ಯಾಂಪ್ ನಡೆಯುತ್ತಿದೆ. ಒಂದು ವಾರ ಸಮ್ಮರ್ ಕ್ಯಾಂಪ್ ಗೆ ಸೇರಿಸಿ. ಆಗ ಅವಳಿಗೂ ಅಭ್ಯಾಸವಾಗುತ್ತದೆ" ಎಂದು ಸಲಹೆಯನ್ನು ನೀಡಿದರು. ನಮಗೂ ಅವರು ಹೇಳಿದ್ದು ಸರಿ ಕಂಡಿದ್ದರಿಂದ ನಮ್ಮ ಒಪ್ಪಿಗೆಯನ್ನು ಸೂಚಿಸಿದೆವು. ಒಂದು ಸೋಮವಾರ ಅವಳನ್ನು ಸಮ್ಮರ್ ಕ್ಯಾಂಪ್ ಗೆ ಕರೆದುಕೊಂಡು ಹೋದೆ. ಟೀಚರ್ ಅನ್ನು ನೋಡಿದಳೋ ಇಲ್ಲವೋ ಗೊಳೋ ಎಂದು ಅಳಲು ಶುರು ಮಾಡಿದಳು. ನನ್ನನ್ನು ಬಿಟ್ಟು ಹೋಗಲು ಕೇಳುತ್ತಲೇ ಇಲ್ಲ. ಟೀಚರ್ ಇಂತಹ ಎಷ್ಟು ಮಕ್ಕಳನ್ನು ನೋಡಿಲ್ಲ. ಅವರು ಅವಳ ಅಳುವನ್ನು ಲೆಕ್ಕಿಸದೇ ಕ್ಲಾಸ್ ರೂಮ್ ಗೆ ಕರೆದುಕೊಂಡು ಹೋದರು. ಆ ದಿನ ಕೇವಲ ಒಂದು ಗಂಟೆ ಶಾಲೆಯಲ್ಲಿ ಇದ್ದಳು. "ಇಡೀ ಒಂದು ಗಂಟೆ ಅತ್ತೂ ಅತ್ತೂ, ಯಾರಾದರೂ ಹತ್ತಿರ ಬಂದು ಮಾತನಾಡಿಸಿದರೂ ಅಮ್ಮಾ, ಅಮ್ಮಾ ಎಂದು ಅಳುತ್ತಲೇ ಇದ್ದಳು" ಎಂದು ಟೀಚರ್ ಹೇಳಿದರು. ಅತ್ತೂ ಅತ್ತೂ ಅವಳಿಗೆ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. 
          ಮರುದಿನದಿಂದ ಅವಳು ಶಾಲೆಗೆ ಹೋದಷ್ಟು ಸಮಯ ನಾನು ನನ್ನ ಸಮಯವನ್ನು ಕಳೆಯಲು, ಮೊದಲೇ ಒಂದು ಟೈಮ್ ಟೇಬಲ್ ಅನ್ನು ಸಿದ್ಧ ಮಾಡಿಟ್ಟುಕೊಂಡಿದ್ದೆ. ಅವಳನ್ನು ಶಾಲೆಯಲ್ಲಿ ಬಿಟ್ಟು ಬಂದು ಮನೆ ಕೆಲಸಗಳನ್ನು ಮುಗಿಸಿ , ಓದಬೇಕಾದ ಪುಸ್ತಕ, ನೋಡಬೇಕಾದ ಸಿನಿಮಾ, ಬರೆಯಬೇಕಾದ ಬ್ಲಾಗ್....... ಹೀಗೆ ಪಟ್ಟಿ ದೊಡ್ಡದಿತ್ತು. ಆದರೆ ಒಂದು ಕೆಲಸವನ್ನು ಶುರುಮಾಡಲೂ ಸಹ ಮನಸ್ಸೇ ಇಲ್ಲ. ಮನದ ತುಂಬಾ ಖಾಲಿ ಖಾಲಿ ಭಾವ. ಮಗಳು ಶಾಲೆಗೆ ಹೋಗುವ ಮೊದಲು ಯಾವಾಗ ಇವಳ ಶಾಲೆ ಶುರುವಾಗುತ್ತದೆಯಪ್ಪಾ ಎಂದು ಕಾದು ಕುಳಿತಿದ್ದವಳಿಗೆ ಇಂದು ಒಂದೇ ಒಂದು ಕೆಲಸವನ್ನು ಮಾಡಲು ಕೈ ಕಾಲೇ ಆಡುತ್ತಿಲ್ಲ. ಅವಳನ್ನು ಶಾಲೆಗೆ ಬಿಟ್ಟು ಬಂದು ಬಿನ್ ಬ್ಯಾಗ್ ನಲ್ಲಿ ಕುಳಿತಿದ್ದೆ ಬಂತು. ಗಳಿಗೆಗೊಮ್ಮೆ ಬಾಗಿಲ ಬಳಿ ಕಣ್ಣು ಹಾಯಿಸುವುದು. ಅವಳನ್ನು ಶಾಲೆಯಿಂದ ನಾನೇ ಮರಳಿ ಕರೆದುಕೊಂಡು ಬರುವುದು ಎಂದು ಕೂಡ ಗೊತ್ತು. ಆದರೂ ಸಹ ನಿಮಿಷಕ್ಕೊಮ್ಮೆ ಬಾಗಿಲ ಬಳಿ ದೃಷ್ಟಿ. ಸ್ವಲ್ಪ ಸಮಯ ಕಳೆದ ನಂತರ ಎಲ್ಲೋ ಗೆಜ್ಜೆ ಸದ್ದು. ಹೌದು! ಅದು ಅವಳದ್ದೇ ಗೆಜ್ಜೆಯ ಗಿಜಿ ಗಿಜಿ. ಅದು ಕೇಳಿದ್ದೆಲ್ಲಿಂದ? ನನ್ನದೆಯಿಂದಲೇ....? ಎಲ್ಲಾ ಭಾವಗಳಿಗೂ ಬಿಡುಗಡೆ ಅವಳನ್ನು ಶಾಲೆಯಿಂದ ಮರಳಿ ಕರೆದುಕೊಂಡು ಬಂದಾಗಲೇ. ನನ್ನನ್ನು ಕಂಡ ತತ್ಕ್ಷಣ ನಗು ಬೀರಿ ನನ್ನ ಕಾಲುಗಳನ್ನು ತಬ್ಬಿ ಹಿಡಿದಾಗ ಕಾಡುವ ಭಾವ ಯಾವುದು?!
          

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"