ಓದಿನ ಸುಖ "ನಿರ್ಮಾಲ್ಯ"
ಪುಸ್ತಕದ ಹೆಸರು : ನಿರ್ಮಾಲ್ಯ
ಲೇಖಕರು : ಚಂದ್ರಶೇಖರ ಭಂಡಾರಿ
ಈ ಪುಸ್ತಕ ನನಗೆ ಲಭಿಸಿದ್ದು ಅತ್ಯಂತ ಆಕಸ್ಮಿಕವಾಗಿ. ಐದು ವರ್ಷಗಳ ಹಿಂದೆ ನನ್ನ ಮದುವೆ ನಿಶ್ಚಯವಾದಾಗ, ಆಮಂತ್ರಣ ಪತ್ರಿಕೆಯನ್ನು ಕೊಡಲು ನಾನು ಕಲಿತ ಗುರುಕುಲಕ್ಕೆ ಹೋದಾಗ, ಅದೇ ದಿನ 'ನಿರ್ಮಾಲ್ಯ' ದ ಬಿಡುಗಡೆ ಸಮಾರಂಭ ಮಂಗಳೂರಿನ ಸಂಘನಿಕೇತನದಲ್ಲಿತ್ತು. ಹೇಗೂ ನಾನು ಕೂಡ ಮಂಗಳೂರಿಗೆ ಹಿಂತಿರುಗುವವಳಿದ್ದ ಕಾರಣ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಆಗ ನನಗೆ ಈ ಪುಸ್ತಕವನ್ನು ಪ್ರೀತಿಯಿಂದ ಶ್ರೀಮತಿ ಮಾತೃಶ್ರೀ ಉಡುಗೊರೆ ರೂಪದಲ್ಲಿ ನೀಡಿದ್ದರು. ಮೊದಲ ಬಾರಿಗೆ ಉಡುಗೊರೆ ರೂಪದಲ್ಲಿ ಸಿಕ್ಕಿದ ಪುಸ್ತಕ ಇದಾಗಿತ್ತು.
ಗುರುಕುಲಕ್ಕೆ ಕೃಷ್ಣಪ್ಪ ತಾತ ಬರುತ್ತಾರೆ ಎಂದು ಗೊತ್ತಾದಾಗ ನಮ್ಮ ಮನದಲ್ಲಿ ಖುಷಿಯ ಸಂಚಾರ. ಮನೆಯಲ್ಲಿರುವ ಹಿರಿಯಜ್ಜನಂತೆ ನಮಗೆಲ್ಲಾ ಕಥೆಯನ್ನು ಹೇಳಿ ಮನೆಯ ನೆನಪೂ ಬಾರದಂತೆ ನಡೆದುಕೊಳ್ಳುತ್ತಿದ್ದರು. ಪ್ರತೀ ಬಾರಿ ಗುರುಕುಲಕ್ಕೆ ಬರುವ ಮೊದಲು ನಮಗೆ ಒಂದೊಂದು ಚಟುವಟಿಕೆಗಳನ್ನು ನೀಡುತ್ತಿದ್ದರು. ಒಮ್ಮೆ ಮೂಲಾರಾಮಾಯಣದ 100 ಶ್ಲೋಕಗಳ ಕಂಠಪಾಠ, ಇನ್ನೊಮ್ಮೆ ಎಲ್ಲಾ ಭಾಷೆಗಳ ಒಂದೊಂದು ಪದ್ಯ - ಅರ್ಥ ವಿವರಣೆ ಹೀಗೆ ಗುರುಕುಲದಲ್ಲಿದ್ದ ಆರು ವರ್ಷಗಳಲ್ಲಿ ಏನಾದರೊಂದು ಚಟುವಟಕೆಗಳಲ್ಲಿ ನಾವು ಭಾಗವಹಿಸುವಂತೆ ಮಾಡಿ ನಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತಿದ್ದರು.
ಮುಂದೆ ಗುರುಕುಲ ಶಿಕ್ಷಣವನ್ನು ಮುಗಿಸಿ ಕಾಲೇಜ್ ಸೇರಿದ ಮೇಲೆ ಎಸ್.ಎಲ್. ಭೈರಪ್ಪನವರ ಹಲವು ಕಾದಂಬರಿಗಳನ್ನು ಓದಿ ಅವರ ಆತ್ಮಕಥೆಯಾದ ಭಿತ್ತಿಯನ್ನು ಓದುತ್ತಿದ್ದಾಗ ಅದರಲ್ಲಿ ಕೃಷ್ಣಪ್ಪನವರ ಬಗ್ಗೆ ಉಲ್ಲೇಖಿಸಿದ್ದು ನೋಡಿ ಆಶ್ಚರ್ಯವಾಗಿತ್ತು. ಆ ನಂತರವೇ ಗೊತ್ತಾಗಿದ್ದು ಕೃಷ್ಣಪ್ಪನವರ ಹಾಗೂ ಭೈರಪ್ಪನವರ ಸ್ನೇಹದ ವಿಚಾರ. ಅಲ್ಲದೇ ಎಸ್.ಎಲ್.ಭೈರಪ್ಪನವರು 'ಧರ್ಮಶ್ರೀ'ಕಾದಂಬರಿಯ ಶಂಕರ ಪಾತ್ರವನ್ನು ಕೃಷ್ಣಪ್ಪ ನವರ ವ್ಯಕ್ತಿತ್ವವನ್ನು ನೋಡಿಯೇ ಚಿತ್ರಿಸಿದ್ದು ಎಂಬುದು 'ನಿರ್ಮಾಲ್ಯ' ಪುಸ್ತಕವನ್ನು ಓದಿದಾಗಲೇ ನನಗೆ ತಿಳಿದದ್ದು.
'ನಿರ್ಮಾಲ್ಯ'ವು ಸಂಘದ ಪ್ರಚಾರಕರಾದ ನ.ಕೃಷ್ಣಪ್ಪನವರ ವ್ಯಕ್ತಿತ್ವವನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದೆ. ಕೃಷ್ಣಪ್ಪನವರನ್ನು ಹತ್ತಿರದಿಂದ ಬಲ್ಲ ಹಲವರ ಅನುಭವಗಳು, ಸಮಾಜದ ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಗಳ ಅನುಭವಗಳನ್ನು ದಾಖಲಿಸಿದ್ದು ಈ ಪುಸ್ತಕದ ಹೆಚ್ಚುಗಾರಿಕೆ. ಜೊತೆಗೆ ಕೃಷ್ಣಪ್ಪನವರು ತಾವು ಸ್ವತಃ ಕೈಬರಹದಲ್ಲಿ ಬರೆದ ಪತ್ರಗಳ ಸಂಗ್ರಹವು ಪುಸ್ತಕದ ಮಹತ್ವವನ್ನು ಹೆಚ್ಚಿಸಿವೆ. ಹೀಗೆ ಎಲ್ಲಾ ವಿಧದಲ್ಲಿಯೂ ಲೇಖಕರ ಪರಿಶ್ರಮ ಎದ್ದು ಕಾಣುತ್ತದೆ.
ಈ ಪುಸ್ತಕವನ್ನು ಸ್ಥೂಲವಾಗಿ ಎರಡು ವಿಭಾಗ ಮಾಡಬಹುದು. ಅದರಲ್ಲಿ ಮೊದಲನೆಯದಾಗಿ ಪ್ರಚಾರಕರಾಗಿ ಕೃಷ್ಣಪ್ಪನವರ ವ್ಯಕ್ತಿತ್ವ, ಇನ್ನೊಂದು ಕ್ಯಾನ್ಸರ್ ಪೀಡಿತರಾದ ಮೇಲಿನ ಕೃಷ್ಣಪ್ಪನವರ ಜೀವನ ವಿಧಾನ.
"ಸಂಘದಲ್ಲಿ ಪ್ರಚಾರಕ ಎಂಬುದು ಸಂಘಟನೆಯ ಒಂದು ಸ್ಥಾನವೋ ಅಥವಾ ಒಂದು ಜವಾಬ್ದಾರಿಯೋ ಆಗಿರದೆ ಅದೊಂದು ವಿಶಿಷ್ಟ ಜೀವನಶೈಲಿ ಎಂಬುದೇ ನಿಜ" ಎಂದು ಮುನ್ನುಡಿಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ ಮಾತು, ಪುಸ್ತಕದಲ್ಲಿ ಕೃಷ್ಣಪ್ಪನವರ ಜೀವನದ ಘಟನೆಗಳನ್ನು ಓದಿದಾಗ ಸ್ಪಷ್ಟವಾಗುತ್ತದೆ.
ನಾಗಪುರದ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗದ ಶಿಕ್ಷಾರ್ಥಿಯಾಗಿ ತೆರಳಿ ನಂತರ ಕೃಷ್ಣಪ್ಪನವರು ಪ್ರಚಾರಕರಾದರು. ಪ್ರಚಾರಕರಾಗಿ ಹೊರಟ ಮೊದಲ ದಿನವೇ ಕಾರ್ಯಕರ್ತರ ಮನೆಯಲ್ಲಿ ಭೋಜನವನ್ನು ಮಾಡಿ ಅವರು ಒಗ್ಗರಣೆಯಲ್ಲಿ ಉಪಯೋಗಿಸಿದ ಹರಳೆಣ್ಣೆಯಿಂದಾಗಿ ಭೇದಿ ಪ್ರಾರಂಭವಾಯಿತು. ಆಗ ಅವರ ಜೊತೆಗಿದ್ದ ಶೇಷಾದ್ರಿ ಅವರು ಇಂತಹ ಸನ್ನಿವೇಶದಲ್ಲಿ ಕಾರ್ಯಕರ್ತರಾದವರ ವರ್ತನೆ ಹೇಗಿರಬೇಕೆಂಬುದನ್ನು ತಾವು ಸ್ವತಃ ಆಚರಿಸಿ ತೋರಿಸಿದರು. ಬಹುಶಃ ಇದನ್ನೇ ಕೃಷ್ಣಪ್ಪನವರೂ ತಮ್ಮ ಪ್ರಚಾರಕ ಜೀವನದುದ್ದಕ್ಕೂ ಅಳವಡಿಸಿಕೊಂಡರು.
ಕೃಷ್ಣಪ್ಪನವರು ತಮ್ಮ ಸಂಪೂರ್ಣ ಜೀವನವನ್ನು ಸಂಘಕ್ಕಾಗಿ ಅರ್ಪಿಸಿದ್ದರು. ಇದನ್ನು ಮೊದಲು ಅವರ ಕುಟುಂಬದವರಿಗೆ ತಿಳಿಸಿದಾಗ ಆರಂಭದಲ್ಲಿ ವಿರೋಧಿಸಿದ್ದರೂ ಸಹ ನಂತರ ಕೃಷ್ಣಪ್ಪನವರ ಸಮರ್ಪಣಾ ಮನೋಭಾವ ಹಾಗೂ ಸೇವಾ ಕಾರ್ಯಗಳನ್ನು ನೋಡಿ ಸಂಪೂರ್ಣ ಬೆಂಬಲವನ್ನು ನೀಡಿದರು. ಹೀಗೆ ಕೃಷ್ಣಪ್ಪನವರು ಹಂತ ಹಂತವಾಗಿ ಸಂಘದ ಜವಾಬ್ದಾರಿಗಳನ್ನು ನಿರ್ವಹಿಸಿ ವಿಭಾಗ ಪ್ರಚಾರಕರಾದಾಗ ಅವರ ತಂದೆಯವರು "ಸ್ಥಾನಮಾನ ಲಭಿಸುವುದು ಪರಿಸ್ಥಿತಿಯಿಂದ. ಆದರೆ ಅದರಿಂದಲೇ ಯೋಗ್ಯತೆ ಬರುತ್ತದೆಂದೇನಲ್ಲ. ಅದನ್ನು ಗಳಿಸಬೇಕಾದುದು ಸ್ವಪ್ರಯತ್ನದಿಂದಲೇ" ಎಂಬ ಕಿವಿಮಾತನ್ನು ಹೇಳಿದರು.
ಕೃಷ್ಣಪ್ಪನವರು ಪ್ರಚಾರಕರಾಗಿದ್ದಾಗ ತಮ್ಮ ಕಾರ್ಯಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳಿಗೆ ನಾಂದಿ ಹಾಡಿದರು. ಅದರಲ್ಲಿ ಮೊದಲನೆಯದಾಗಿ ಕೇವಲ ವ್ಯಕ್ತಿಗಳಿಗಷ್ಟೆ ಅಲ್ಲದೇ ಅವರ ಕುಟುಂಬದವರಿಗೂ ಸಹ ಸಂಘದ ಪರಿಚಯವಾಗಬೇಕೆಂದು ಸಹಭೋಜನವನ್ನು ಆರಂಭಿಸಿದರು. ರಾತ್ರಿ, ಕೇವಲ ನಾಲ್ಕು ಘಂಟೆಗಳಲ್ಲಿ ಯಾವುದೇ ಸಂಪರ್ಕ ಸಾಧನವಿಲ್ಲದೆ ಸಂಘದ ಕಾರ್ಯಕರ್ತರನ್ನು ಸೇರಿಸಿದ್ದು ಮುಂತಾದ ವಿನೂತನ ಪ್ರಯೋಗಗಳನ್ನು ಮಾಡಿದರು. ಕುಟುಂಬದಿಂದ ದೂರವಿದ್ದು ತಮ್ಮನ್ನು ತಾವು ಸಮಾಜ ಸೇವೆಗೆ ಅರ್ಪಿಸಿದ್ದ ಪ್ರಚಾರಕರೆಲ್ಲರೂ ಒಟ್ಟಾಗಿ ಸೇರಿ ವಿವಿಧ ಹಬ್ಬಗಳಗನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ, ತುರ್ತು ಪರಿಸ್ಥಿಯಲ್ಲಿ ಸಂಘ ನಿಷೇಧಿತವಾಗಿದ್ದ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಗಣೇಶೋತ್ಸವ ಆಚರಣೆ, ಮಂಗಳೂರು ವಿಭಾಗ ಕೇಂದ್ರದ ಪ್ರಚಾರಕರಾಗಿದ್ದಾಗ ಕಾರ್ಯಕರ್ತರ ಬೌದ್ಧಿಕ ವಿಕಾಸಕ್ಕಾಗಿ ಗ್ರಂಥಾಲಯದ ಆರಂಭ ಮುಂತಾದ ಹಲವಾರು ಉಪಕ್ರಮಗಳಿಗೆ ಚಾಲನೆ ನೀಡಿದರು.
ಸಂಘದ ದೈನಂದಿನ ಚಟುವಟಿಕೆಗಳಲ್ಲಿ ಹೆಣ್ಣು ಮಕ್ಕಳ ಸಹಭಾಗಿತ್ವವಿಲ್ಲವೆಂಬುದು ಸರ್ವವಿದಿತ. ಹಾಗಾಗಿ ಕೃಷ್ಣಪ್ಪನವರು ಮಾತೃಶಕ್ತಿ ಜಾಗರಣಕ್ಕಾಗಿ 2000 ಇಸವಿಯ ಫೆಬ್ರವರಿ 6 ರಂದು ಮಂಗಳೂರಿನಲ್ಲಿ ಮಾತೃಸಂಗಮ ಕಾರ್ಯಕ್ರಮವನ್ನು ಆಯೋಜಿಸಿದರು. ಆ ಕಾರ್ಯಕ್ರಮದ ಸಂಪೂರ್ಣ ಯೋಜನೆ, ನಿರ್ವಹಣೆ, ನಿಧಿ ಸಂಗ್ರಹ, ವಸ್ತು ರೂಪದ ಸಂಪನ್ಮೂಲಗಳ ಸಂಗ್ರಹಣೆ ಮುಂತಾದ ಎಲ್ಲಾ ಜವಾಬ್ದರಿಗಳನ್ನು ನಿರ್ವಹಿಸಿದ್ದು ಮಹಿಳೆಯರೇ ಅನ್ನುವುದು ವಿಶೇಷ.
ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕರಾದ ಅಜಿತ್ ಕುಮಾರ್ ಸೇರಿದಂತೆ ನಾಲ್ವರು ಆಕಸ್ಮಿಕ ರಸ್ತೆ ದುರಂತದಲ್ಲಿ ಸಾವನ್ನಪ್ಪಿದಾಗ ಪ್ರತಿಷ್ಠಾನದ ಸೇವಾವ್ರತಿಗಳಿಗೆ ಧೈರ್ಯಗೆಡದಂತೆ ಸ್ಥಿತಪ್ರಜ್ಞತೆಯಿಂದ ವರ್ತಿಸಿದ ರೀತಿ ಕೃಷ್ಣಪ್ಪನವರ ಮೇಲೆ ಗೌರವ ಭಾವನೆಯನ್ನು ಮೂಡಿಸುತ್ತದೆ.
ಅಹಿಂದುಗಳೆನಿಸಿಕೊಳ್ಳುವವರು ಸಹ ನಮ್ಮವರೇ. ಸಂಘವು ಸಮಾಜವನ್ನು ಸಂಘಟಿಸುವ ಧನಾತ್ಮಕ ಕಾರ್ಯವಲ್ಲದೇ, ಯಾರನ್ನಾದರೂ ದ್ವೇಷಿಸುವ ಅಥವಾ ವೈರಿಗಳನ್ನಾಗಿ ತಿಳಿಯುವಂತಹ ಋಣಾತ್ಮಕ ಕಾರ್ಯವಲ್ಲ ಎಂದು ಹೇಳಿದ ಕೃಷ್ಣಪ್ಪನವರು ಅದರಂತೆ ಸಂಘದ ವತಿಯಿಂದ ಸರ್ವಧರ್ಮ ಸಮಾವೇಶವನ್ನು ಆಯೋಜಿಸಿದರು.
'ನೇಪಥ್ಯದ ಉತ್ಪ್ರೇರಕ ' ಎಂಬ ಭಾಗದಲ್ಲಿ ಹಲವು ಪ್ರಥಮಗಳಾದ ಸಂಸ್ಕೃತ ಸಂಭಾಷಣೆ ಸಾಮಾನ್ಯ ಜನರಿಗೆ ತಲುಪಲು ಆರಂಭಿಸಿದ ಸಂಸ್ಕೃತ ಭಾರತಿ ಗೆ ಅಗತ್ಯ ಸಲಹೆ ಸೂಚನೆಗಳನ್ನು ಆರಂಭದಲ್ಲಿ ನೀಡಿದ್ದು, ಕುಟುಂಬ ಪ್ರಬೋಧನದ ಮೂಲಕ ಭಾರತೀಯ ಜೀವನ ಪದ್ಧತಿಯನ್ನು ಕುಟುಂಬದಲ್ಲಿ ಅಳವಡಿಕೆ, ಗುರುಕುಲ ಶಿಕ್ಷಣವನ್ನು ಆರಂಭಿಸಲು ಪ್ರೇರಣೆ ನೀಡಿದ ಬಗ್ಗೆ ವಿವರಿಸಿದ್ದಾರೆ ಲೇಖಕರು.
ಇನ್ನು ಕ್ಯಾನ್ಸರ್ ಪೀಡಿತರಾದ ಮೇಲೂ ಕೃಷ್ಣಪ್ಪನವರ ಇಚ್ಛಾಶಕ್ತಿಯೇನೂ ಕಡಿಮೆಯಾಗಲಿಲ್ಲ. ನಿತ್ಯಕರ್ಮದ ಅನುಷ್ಠಾನದ ಜೊತೆಗೆ ಯೋಗ, ಪ್ರವಾಸ ಹಾಗೂ ಸಂಘದಲ್ಲಿ ತಮಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಸಮರ್ಪವಾಗಿ ನಿರ್ವಹಿಸಿ ಮಾದರಿಯಾಗಿದ್ದಾರೆ. ಅಲೋಪತಿ ಔಷಧಿಯ ಜೊತೆಗೆ ದೇಹಕ್ಕೆ ಮಾರಕವಲ್ಲದ ಉಳಿದ ಚಿಕಿತ್ಸೆಗಳಾದ ಆಯುರ್ವೇದ ಮುಂತಾದ ವೈದ್ಯ ಪದ್ಧತಿಯನ್ನು ಅನುಸರಿಸುತ್ತಿದ್ದರು. ಕ್ಯಾನ್ಸರ್ ಪೀಡತರಾಗಿದ್ದಾಗಲೂ ಸಹ ಅರುಣಾಚಲೇಶ್ವರ ದೇವಾಲಯದ ಬೆಟ್ಟಕ್ಕೆ 14km ನಷ್ಟು ದೀರ್ಘವಾದ ಪ್ರದಕ್ಷಿಣೆಯನ್ನು( 'ಗಿರಿವಲಂ' ಎಂದು ಕರೆಯುತ್ತಾರೆ)ಕಾರ್ಯಕರ್ತರೊಂದಿಗೆ ಸೇರಿ ಮಾಡಿದ್ದುದ್ದು ಕೃಷ್ಣಪ್ಪನವರ ಇಚ್ಛಾಶಕ್ತಿಗೆ ಮಾದರಿ.
ಸಂಪ್ರದಾಯ ನಿಷ್ಠರಾಗಿದ್ದರು ಎಂದು ತಿಳಿಯಲಾಗುವ ಕೃಷ್ಣಪ್ಪ ನವರು ಕೇರಳದಲ್ಲಿ ಹುತಾತ್ಮರಾದ 200 ರಷ್ಟು ಕಾರ್ಯಕರ್ತರಿಗೆ ಸ್ವತಃ ಶ್ರಾದ್ಧವನ್ನು ಮಾಡಿದರು. ಆದರೆ ಸ್ವಂತದ ವಿಷಯಕ್ಕೆ ಬಂದಾಗ ಅದನ್ನು ಮೀರಿ ಮುಂದೆ ಹೆಜ್ಜೆ ಹಾಕಿದ್ದು ನಿಜಕ್ಕೂ ವಿಶೇಷ. ಅಗತ್ಯ ಕಾನೂನು ವ್ಯವಸ್ಥೆಗಳನ್ನು ತೆಗೆದುಕೊಂಡೇ ತಮ್ಮ ದೇಹಾಂತ್ಯದ ನಂತರ ದೇಹದಾನ ಮಾಡಿದ ಆಧುನಿಕ ದಧೀಚಿ ಕೃಷ್ಣಪ್ಪನವರು. ಹೀಗೆ ತಮ್ಮ ಇಡೀ ಜೀವನವನ್ನು ಸಮಾಜದ ಹಿತಕ್ಕಾಗಿ ಸಮರ್ಪಿಸಿಕೊಂಡು ಕೊನೆಗೆ ತಮ್ಮ ದೇಹವನ್ನು ಸಹ ದಾನ ಮಾಡಿದ ಕೃಷ್ಣಪ್ಪನವರು ಒಂದು ಕಡೆಯಾದರೆ, ಇನ್ನೊಂದು ಕಡೆ ತಮ್ಮ ಜೀವಮಾನವಿಡೀ ಹಿಂದೂಗಳ ನಂಬಿಕೆಯನ್ನು, ಸಂಪ್ರದಾಯಗಳನ್ನು, ಆಚರಣೆಗಳನ್ನು ಲೇವಡಿ ಮಾಡುತ್ತಾ ಕಳೆದು, ಮರಣದ ನಂತರ ಅಂತ್ಯಸಂಸ್ಕಾರವನ್ನು ಅವರ ಕುಟುಂಬದವರೆಲ್ಲರೂ ಸೇರಿ ತಾವು ನಂಬದಿದ್ದ ಹಿಂದೂ ಧರ್ಮದ ಆಚರಣೆಯಂತೆ ಅತ್ಯಂತ ವೈಭವಯತವಾಗಿ, ಸಂಪ್ರದಾಯಬದ್ಧವಾಗಿ ಮಾಡಿ ತಮ್ಮ ಮಾತಿಗೂ, ಕೃತಿಗೂ ಸಂಬಂಧವೇ ಇಲ್ಲದಂತೆ ವರ್ತಿಸಿದವರನ್ನು ಕಂಡ ನಮಗೆ ಕೃಷ್ಣಪ್ಪನವರ ವ್ಯಕ್ತಿತ್ವ ಎಷ್ಟು ಉನ್ನತವಾದದ್ದು ಎಂಬುದು ಅರಿವಾಗುತ್ತದೆ.
ಒಂದು ಕಡೆ ಸ್ವಂತದ ನಡವಳಿಕೆಯಲ್ಲಿ ನಿತ್ಯ ಸ್ನಾನ , ಸಂಧ್ಯಾವಂದನೆ, ದೇವರಪೂಜೆ ಇತ್ಯಾದಿ ವಿಷಯಗಳಲ್ಲಿ ಕಟ್ಟುನಿಟ್ಟು ಇನ್ನೊಂದು ಕಡೆ ಹಿಂದೂ ಸಮಾಜದ ಎಲ್ಲ ಸ್ತರದ ಕಾರ್ಯಕರ್ತರ ಮನೆ ಮನಗಳನ್ನು ಬೆಸೆದಿದ್ದು ಅಲ್ಲದೇ ಸಂಪ್ರದಾಯವಾದಿ ಕಾರ್ಯಕರ್ತರ ಮನೆಯಲ್ಲಿ ಆ ಮನೆಯ ಹಿರಿಯರು ಆಚರಿಸುತ್ತಿದ್ದ ಅಸ್ಪೃಶ್ಯತೆಯನ್ನು ನಿವಾರಿಸಿದರು.
"ನಾನು ತೊಡುತ್ತಿರುವುದು ಬಿಳಿ ಅಂಗಿ, ಉಡುತ್ತಿರುವುದು ಬಿಳಿ ಪಂಚೆ ಆದರೆ ಅಂತರಂಗದಲ್ಲಿ ನಾನೊಬ್ಬ ಸನ್ಯಾಸಿ" ಎಂಬ ಕೃಷ್ಣಪ್ಪನವರ ಮಾತನ್ನು ಭಿತ್ತಿಯಲ್ಲಿ ಭೈರಪ್ಪನವರು ಉಲ್ಲೇಖಿಸಿದ್ದನ್ನು, ಈ ಪುಸ್ತಕದಲ್ಲಿ ನಾವು ಉದಾಹರಣೆಗಳ ಮೂಲಕ ಓದಬಹುದು.
ಅಂತಿಮವಾಗಿ ಸಂಘದ ಬಗ್ಗೆ ಗೌರವವಿರುವವರೂ, ಸಂಘದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವವರೂ ಸಹ ಓದಲೇಬೇಕಾದ ಪುಸ್ತಕ 'ನಿರ್ಮಾಲ್ಯ'
Comments
Post a Comment