ಓದಿನ ಸುಖ - ಬದುಕು ಬದಲಿಸಬಹುದು


 


ಪುಸ್ತಕದ ಹೆಸರು : ಬದುಕು ಬದಲಿಸಬಹುದು
ಲೇಖಕರು : ನೇಮಿಚಂದ್ರ
           ಮಾನವನ ಬದುಕು ಹಲವು ಭಾವಗಳ ಮಿಶ್ರಣ. ಸೋಲು-ಗೆಲುವು, ಸುಖ-ದುಃಖ, ಸಮ್ಮಾನ-ಅವಮಾನ ಇವುಗಳು ಎಲ್ಲಾ ಮನುಷ್ಯರ ಜೀವನದಲ್ಲಿ ಸಾಮಾನ್ಯ . ಆದರೆ ದುಃಖದ ಸನ್ನಿವೇಶಗಳು ಬಂದಾಗ ಮನುಷ್ಯ ಹೇಗೆ ವರ್ತಿಸುತ್ತಾನೆ? ಇತರರ ಸಂಕಷ್ಟಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ? ಅಪಮಾನಗಳನ್ನು ಎದುರಿಸಿ ಹೇಗೆ ಆತ್ಮವಿಶ್ವಾಸದಿಂದ ಮುಂದುವರಿಯುತ್ತಾನೆ? ಎಂಬುದನ್ನು ಈ ಪುಸ್ತಕದಲ್ಲಿ ಲೇಖಕಿಯು ಹಲವು ಉದಾಹರಣೆಗಳ ಮೂಲಕ ಹೇಳಿದ್ದಾರೆ. ಸೋಲಿನಿಂದ ಕಂಗೆಟ್ಟಾಗ, ಅಪಮಾನದಿಂದ ಕುಸಿದಾಗ ಈ ಪುಸ್ತಕವನ್ನು ಓದಿದಾಗ ಮನಸ್ಸಿಗೆ ಆತ್ಮವಿಶ್ವಾಸ ಮೂಡುವುದು ಸುಳ್ಳಲ್ಲ.

            'ಸೋಲಿಲ್ಲದ ಮನೆಯ ಸಾಸಿವೆ' ಎಂಬ ಬರಹದಲ್ಲಿ ಬರೀ ಗೆಲ್ಲುವುದೊಂದನ್ನೇ ನಮ್ಮ ಮಕ್ಕಳಿಗೆ ಹೇಳಿಕೊಟ್ಟು, ಹೇಗೆ ಚಿಕ್ಕ ಸೋಲು ಸಹ ಅವರನ್ನು ಧೃತಿಗೆಡಿಸಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳನ್ನು ಕೈಗೊಂಡು ಬಿಡುತ್ತಿದ್ದಾರೆ ಎಂದು ಹೇಳುತ್ತಾ, ಮಕ್ಕಳು ಮಾತ್ರವಲ್ಲದೆ ಯುವಜನರು ಸಹ ಸೋಲು ಅವಮಾನಗಳನ್ನು ಎದುರಿಸಲು ಸಾಧ್ಯವಾಗದೆ ಬದುಕಿನಿಂದ ವಿಮುಖರಾಗುತ್ತಿರುವ ಬಗ್ಗೆ ಎಚ್ಚರಿಸುತ್ತಾ, " ಕಲಿಸುವುದು ಹೇಗೆ ಸೋಲನ್ನು , ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತಮ್ಮ ತಪ್ಪೇ ಇಲ್ಲದೆ ಮುಗಿಬೀಳುವ ಅಪಮಾನವನ್ನು ಎದುರಿಸುವುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಯದೆ, ಇದ್ದು ಬದುಕುವ ದಿಟ್ಟತನವನ್ನು, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಕಲಿಸುವುದು ಹೇಗೆ?" ಎಂದು ಲೇಖಕಿಯು ಕೇಳಿದ್ದಾರೆ. ಬರೀ ಗೆಲುವೊಂದೇ ಜೀವನದ ಗುರಿಯೆಂಬಂತೆ ಮನೆ ಹಾಗೂ ಸಮಾಜ ಭಾವಿಸುತ್ತಿರುವ ಈ ಸಂದರ್ಭದಲ್ಲಿ , ರೇಸ್ ಕುದುರೆಯಂತೆ ಓಡುತ್ತಿರುವ ನಾವು ಸಣ್ಣದಾಗಿ ಮುಗ್ಗರಿಸಿದರೆ ಜೀವನವೇ ಮುಗಿಯಿತೆಂದು ಭಾವಿಸುವ ಸಮಾಜ ಇವರೆಲ್ಲರನ್ನೂ ಎಚ್ಚರಿಸುತ್ತದೆ ಈ ಲೇಖನ.

              ಉಡುಗೊರೆ ಎಂಬುದು ಪ್ರದರ್ಶನದ ವಸ್ತುವಾಗಬಾರದು, ಪ್ರತಿಷ್ಠೆಯ ಪ್ರತೀಕವಾಗಬಾರದು. ಉಡುಗೊರೆಯು ಕೊಟ್ಟ ಹಾಗೂ ತೆಗೆದುಕೊಂಡ ವ್ಯಕ್ತಿಗಳ ನಡುವಿನ ಮಧುರ ಬಾಂಧವ್ಯದ ಗುರುತಾಗಬೇಕು. ಇಂದು ಉಡುಗೊರೆ ಕೊಡಲೇಬೇಕೆಂಬ ಒತ್ತಡವಾದರೂ ಏನು? ಎಂದು ಲೇಖಕಿ ಕೇಳುತ್ತಾರೆ. ಉಡುಗೊರೆ ಪ್ರದರ್ಶನದ ವಸ್ತುವಲ್ಲ. ಇಂದಿನ ಕೊಳ್ಳುಬಾಕ ಸಂಸ್ಕೃತಿಯ ಪರಾಕಾಷ್ಠೆಯಲ್ಲಿ, ಜಾಹೀರಾತುಗಳ ಆರ್ಭಟದಲ್ಲಿ ಉಡುಗೊರೆ ಎಂಬುದು ಹಣದಿಂದ ಕೊಳ್ಳುವ, ಅತೀ ಹೆಚ್ಚು ಹಣದಿಂದ ಕೊಳ್ಳುವ ವಸ್ತುವಾಗುತ್ತಿದೆ ಎಂದು ಲೇಖಕಿಯು ಬೇಸರಿಸುತ್ತಾರೆ.

               'ಜಗತ್ತು ಬದಲಾಗಬಹುದು' ಎಂಬ ಬರಹದಲ್ಲಿ ನನ್ನೊಬ್ಬಳಿಂದ ಏನಾಗಬಹುದು ಎಂಬ ಸೋಮಾರಿತನದಲ್ಲಿರುವ ನಾವು ನಮ್ಮಿಂದಾಗುವ ಕೆಲಸವನ್ನು ಸಹ ಮಾಡದೇ ಮಲಗುತ್ತೇವೆ. ಅಮೆರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ರೋಸಾ ಪಾರ್ಕ್, ತಿಹಾರ್ ಜೈಲನ್ನು ತಿಹಾರ್ ಆಶ್ರಮವಾಗಿ ಪರಿವರ್ತಿಸಿದ ಕಿರಣ್ ಬೇಡಿ, ಸಾಲು ಮರಗಳನ್ನು ನೆಡುತ್ತಾ ಹೋದ ತಿಮ್ಮಕ್ಕ ಇವರೆಲ್ಲಾ ಒಬ್ಬರಿಂದ ಏನಾಗಬಹುದು ಎಂದು ಕೂತಿದ್ದರೆ ಜಗತ್ತನ್ನು ಬದಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಉದಾಹಣೆಗಳ ಮೂಲಕ ಹೇಳಿದ್ದಾರೆ.

              'ಮುಗಿಲು ಕೂಡ ಮಿತಿಯಲ್ಲ' ಎಂಬ ಲೇಖನದಲ್ಲಿ 'ಜೊನಾಥನ್' ಎಂಬ ಹಾರಲು ಬಯಸುವ ಕಡಲು ಹಕ್ಕಿಯ ಕಥೆಯನ್ನು ಹೇಳುತ್ತಾ, "ಸಾಮರ್ಥ್ಯಕ್ಕೆ ಮಿತಿ ಇದೆಯೇ? ಕನಸುಗಳಿಗೆ ಎಲ್ಲೆ ಇದೆಯೇ? ಪರಿಪೂರ್ಣತೆಗೆ ಮಿತಿ ಎಂಬುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಬದುಕಿಗೆ ಇಲ್ಲದ ಬೇಲಿ, ಸರಹದ್ದು, ಎಲ್ಲೆಗಳನ್ನು ಹಾಕಿಕೊಳ್ಳುತ್ತೇವೆ. ಕಾಲ್ಪನಿಕ ಮಿತಿಗಳಲ್ಲಿ , ಕನಸು ಕಾಣಲೂ ಹೆದರುತ್ತೇವೆ. ಮಿತಿಗಳು ಇರುವುದು ನಿಜ. ಆದರೆ ಅವು ಹೊರಗಿನ ಜಗತ್ತಿನಲ್ಲಿಲ್ಲ. ನಮ್ಮ ಮನಸ್ಸಿನಲ್ಲಿವೆ. ನಮ್ಮ ಮೇಲೆ ನಂಬಿಕೆ ಇರಲಿ. ಭರವಸೆ ಇರಲಿ. ಭರವಸೆ ಕಳೆದುಕೊಳ್ಳದ ಬದುಕು ಇರಲಿ. ಕನಸುಗಳ ಬೆನ್ನತ್ತುವ, ಧೈರ್ಯದಿಂದ ಕನಸುಗಳನ್ನು ನನಸಾಗಿಸಲು ಬೆವರು ಸುರಿಸುವ ಪ್ರಯತ್ನವಿರಲಿ. ನಾವು ಪರಿಪೂರ್ಣತೆಯನ್ನು ಸಾಧಿಸಬಲ್ಲಲ್ಲೆವು" ಎಂದು ಹೇಳಿದ್ದಾರೆ.

            ಸೌಂದರ್ಯ ಸಾಧನಗಳ ಸರಕು ಮಾರಾಟದ, ಅಬ್ಬರದ ಜಾಹೀರಾತು ಯುಗದಲ್ಲಿ ಯುವಜನತೆಗೆ ಇಲ್ಲದ ಕೀಳರಿಮೆ ಕಾಡುತ್ತಿದೆ. ಇಲ್ಲದ ಊನಗಳು ಎದ್ದು ಕಾಣುತ್ತಿವೆ. ತಮ್ಮ ಓದು, ಸಾಮಾನ್ಯ ಜ್ಞಾನ, ಪ್ರತಿಭೆ, ಹವ್ಯಾಸ, ಸ್ನೇಹಗಳನ್ನು ಬೆಳೆಸಿಕೊಳ್ಳುವ ವಯಸ್ಸಿನಲ್ಲಿ ಸೌಂದರ್ಯದ ಗೀಳು ರೋಗಕ್ಕೆ ಬಲಿಯಾಗಿ ಬದುಕಿನ ನೂರು ಸಾಧ್ಯತೆಗಳನ್ನು, ಅವಕಾಶಗಳನ್ನು ಕಳೆದುಕೊಳ್ಳುವ ಬಗ್ಗೆ 'ರೂಪ ರೂಪಗಳನು ದಾಟಿ' ಎಂಬ ಬರಹದಲ್ಲಿ ಬರೆದಿದ್ದಾರೆ.

               ಲೇಖಕಿಯ ಜೀವನದಲ್ಲಿ ನಡೆದ ಒಂದು ಅಪಘಾತದಿಂದಾಗಿ ಒಂದೆರಡು ತಿಂಗಳ ತಾತ್ಕಾಲಿಕ ಅಂಗವಿಕಲತೆಗೆ ಗುರಿಯಾಗಿ ಕಷ್ಟವನ್ನು ಅನುಭವಿಸುವಾಗ ಅವರು ತಮ್ಮನ್ನು ತಾವು ಸ್ಫೂರ್ತಿಗೊಳ್ಳಲು ನೆನೆದದ್ದು ಸ್ಟೀಫನ್ ಹಾಕಿಂಗ್ ನ ಜೀವನವನ್ನು. ದೇಹದ ಯಾವ ಭಾಗವೂ ಸ್ವಾಧೀನದಲ್ಲಿಲ್ಲದೇ, ಕೇವಲ ಮೆದುಳು ಮಾತ್ರವೇ ಇದ್ದ, ನ್ಯೂಟನ್, ಐನ್ಸ್ಟೀನ್ ಆನಂತರದ ಅತ್ಯಂತ ಪ್ರತಿಭಾವಂತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನ ಯಶೋಗಾಥೆಯನ್ನು 'ಬದುಕು ನಿನ್ನಲ್ಲಂಥಾ ಮುನಿಸು' ಎಂಬ ಬರಹದಲ್ಲಿ ಬರೆದಿದ್ದಾರೆ. ಎಲ್ಲವೂ ಸರಿಯಿದ್ದು, ಅದಿಲ್ಲ ಇದಿಲ್ಲ ಎಂದು ಕೊರಗುವ ನಮ್ಮನ್ನು ಎಚ್ಚರಿಸುತ್ತದೆ ಈ ಲೇಖನ.

               ತಮ್ಮ ಜೀವನದಲ್ಲಿ ನಡೆದ ಘಟನೆಯ ಜೊತೆಗೆ ವಿವಿಧ ಉದಾಹರಣೆಗಳನ್ನು ಹೇಳುತ್ತಾ , 'ಅಯ್ಯೋ, ಹೀಗಾಗಿ ಹೋಯಿತು' ಎಂದು ಕುಸಿಯುವುದಕ್ಕಿಂತ 'ಆದದ್ದೆಲ್ಲ ಬಹುಶಃ ಒಳಿತಿಗೆ' ಎಂದು ಅಪ್ಪಟ ಆಶಾವಾದಿಯಂತೆ ಅತ್ಯಂತ ಕೆಟ್ಟ ಅನುಭವದಲ್ಲೂ 'ಲಾಭ' ಕಂಡುಕೊಳ್ಳಬಹುದು. ನೋವಿನ ಕ್ಷಣಗಳು ನಮ್ಮೊಳಗಿನ ಆಂತರ್ಯದ ಶಕ್ತಿಯ ಪರಿಚಯವನ್ನು ನಮಗೇ ಮಾಡಿಕೊಡುತ್ತದೆ. ಬದುಕು ನಿಜಕ್ಕೂ 'ನಮಗೇನಾಯಿತು?' ಎಂಬುದಲ್ಲ. 'ನಮಗಾಗಿದ್ದಕ್ಕೆ ನಾವು ಹೇಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆವು, ಜೀವನವನ್ನು ಹೇಗೆ ಎದುರಿಸಿದೆವು ಎಂಬುದಾಗಿದೆ ಎಂದು 'ಆದದ್ದೆಲ್ಲ ಒಳಿತೇ ಆಯಿತು' ಎಂಬ ಬರಹದಲ್ಲಿ ವಿವರಿಸಿದ್ದಾರೆ. 

             ನಾವು ಅಷ್ಟಾಗಿ ಗಮನಿಸದ, ಸಣ್ಣ ಪುಟ್ಟ ವಿಷಯಗಳು ಎಂದು ನಿರ್ಲಕ್ಷಿಸಿದ ವಿಷಯಗಳಾದ, ಅಂಗಡಿಗೆ ಹೋಗುವಾಗ ಮರೆಯದೆ ಕೈಚೀಲ ಒಯ್ಯುವುದು, ನಮ್ಮ ಮನೆಯಿಂದ ಅಂತರ್ಜಲಕ್ಕೆ ಕೀಟನಾಶಕಗಳು ಹರಿಯದಂತೆ ಸಹಜ ಕೀಟನಾಶಕಗಳನ್ನು ಬಳಸುವುದು ಹೀಗೆ ನಮ್ಮ ನಮ್ಮ ಮಿತಿಯಲ್ಲಿ ಪರಿಸರ ಹಾಗೂ ಸಮಾಜದ ಬಗ್ಗೆ ನಮಗಿರುವ ಕಳಕಳಿಯನ್ನು ಕಾರ್ಯರೂಪಕ್ಕೆ ಇಳಿಸುವ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತಾ "ಸುಮ್ಮನೆ ದೂರಬೇಡ. ಏನಾದರೂ ಮಾಡು. ಸಮಸ್ಯೆಯ ಭಾಗವಾಗಬೇಡ. ಪರಿಹಾರದ ಹಾದಿಯಲ್ಲಿ ಸಣ್ಣ ಹೆಜ್ಜೆಯನ್ನಾದರೂ ಇಡು" ಎಂದು 'ಏನಾದರೂ ಮಾಡಿ. ದೂರಬೇಡಿ' ಎಂಬ ಬರಹದಲ್ಲಿ ನಮ್ಮನ್ನು ಎಚ್ಚರಿಸಿದ್ದಾರೆ.

              ಅತ್ಯಂತ ಬಡತನದ ಹಿನ್ನಲೆಯಲ್ಲಿ ಬೆಳೆದು ಬಂದು ತಮ್ಮ ಕನಸನ್ನು ನನಸಾಗಿಸಿದ ರಾಜು ಭಾಟಿಯಾ ಅವರ ಜೀವನದ ಸಾಹಸಗಾಥೆ 'ಅವರೊಂದು ಉದಾಹರಣೆ' ಎಂಬ ಬರಹದಲ್ಲಿದ್ದರೆ, ಅನಕ್ಷರಸ್ಥ ದಲಿತ ದಂಪತಿಗಳು ತಮ್ಮ ಏಳೂ ಜನ ಹೆಣ್ಣು ಮಕ್ಕಳನ್ನು ಇನ್ನಿಲ್ಲದಂತೆ ಓದಿಸಿದ, ಅವರಲ್ಲಿ ಒಬ್ಬರಾದ ಕಿದ್ವಾಯಿ ಕಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಪ್ರೊಫೆಸರ್ ಆಗಿರುವ ಡಾ. ವಿಜಯಲಕ್ಷ್ಮಿ ಅವರ ಸಾಹಸಗಾಥೆ 'ಬನ್ನಿ ಸಾಧನೆಯ ರಂಗಕ್ಕೆ' ಎಂಬ ಬರಹದಲ್ಲೂ, ಬದುಕಿನಲ್ಲಿ ನಡೆದ ದುರಂತಗಳನ್ನು ಮೆಟ್ಟಿ ನಿಂತ ಕಮಲ್ ಮತ್ತು ಹರ್ ಪ್ರೀತ್ ಅಹ್ಲುವಾಲಿಯಾ ಬಗ್ಗೆ 'ಮರಳಿ ಬದುಕಿಗೆ ಈ ಪಯಣ' ಎಂಬ ಬರಹದಲ್ಲಿ ಉಲ್ಲೇಖಿಸಿದ್ದಾರೆ.

              ಇಲ್ಲಿ ಯಶಸ್ಸಿನ ಕಥೆಗಳಿವೆ. ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡವರ ಸಾಹಸವಿದೆ. ಜೀವನದಲ್ಲಿ ದುಃಖಕ್ಕೆ ಕುಗ್ಗಿದಾಗ, ಕಷ್ಟಗಳು ಬೆದರಿಸಿದಾಗ ಈ ಪುಸ್ತಕವನ್ನೊಮ್ಮೆ ಓದಿದರೆ ಮನದಲ್ಲಿ ಆತ್ಮ ವಿಶ್ವಾಸದ ಕಿಚ್ಚು ಹಚ್ಚುವುದರಲ್ಲಿ ಸಂಶಯವಿಲ್ಲ. ಈ ಪುಸ್ತಕದ ಓದು ಯಾವುದೇ ವ್ಯಕ್ತಿತ್ವ ವಿಕಸನ ಶಿಬಿರಕ್ಕಿಂತ ಕಡಿಮೆಯಿಲ್ಲ.


              

             
              

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"