ಓದಿನ ಸುಖ - "ಪುರುಷೋತ್ತಮ"
ಪುಸ್ತಕದ ಹೆಸರು: ಪುರುಷೋತ್ತಮ
ಲೇಖಕರು : ಯಶವಂತ ಚಿತ್ತಾಲ
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಲೆಕ್ಚರರ್ ಒಬ್ಬರು ಯಶವಂತ ಚಿತ್ತಾಲರ ಬಗ್ಗೆ ಹೇಳಿದ್ದರು. ಅವರ ಯಾವುದೇ ಪುಸ್ತಕಗಳನ್ನು ಓದಿರದ ನಾನು ಮೊದಲು ಶಿಕಾರಿ ಕೈಗೆತ್ತಿಗೊಂಡಿದ್ದೆ. ಆದರೆ ಆಗ ಅದು ಎಷ್ಟು ಅರ್ಥವಾಗಿತ್ತೋ ನನಗೇ ಗೊತ್ತಿಲ್ಲ. ಕೆಲವು ಲೇಖಕರ ಪುಸ್ತಕಗಳನ್ನು ಅಷ್ಟು ಸುಲಭದಲ್ಲಿ ಓದಿ ದಕ್ಕಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ನಮ್ಮ ಜೀವನದ ದೃಷ್ಟಿ, ಅನುಭವಗಳು, ಯೋಚನಾ ಶೈಲಿ ಎಲ್ಲವೂ ಕೂಡ ಕಾರಣವಾಗಿರುತ್ತವೆ. ಅಂತಹ ಲೇಖಕರ ಸಾಲಿಗೆ ಯಶವಂತ ಚಿತ್ತಾಲರು ಸೇರುತ್ತಾರೆ.
ಮೊನ್ನೆ ಮನೆ ಹತ್ತಿರದ ಗ್ರಂಥಾಲಯದಲ್ಲಿ "ಪುರುಷೋತ್ತಮ" ಕಂಡಾಗ ಸ್ವಲ್ಪ ಅಳುಕಿನಿಂದಲೇ ಕೈಗೆತ್ತಿಕೊಂಡೆ. ಅದಕ್ಕೆ ಕಾರಣ ಚಿತ್ತಾಲರ ಶೈಲಿ ಹಾಗೂ ಕಾದಂಬರಿಯ ಹರವು. ಮನುಷ್ಯನ ಮಾನಸಿಕ ಹೊಯ್ದಾಟವನ್ನು ದಟ್ಟವಾಗಿ ಚಿತ್ರಿಸಿ, ಬಗೆದಷ್ಟೂ ಆಳವಾದ, ಸಂಕೀರ್ಣವಾದ ಮನುಷ್ಯನ ಮಾನಸಿಕ ಸ್ಥಿತಿಯನ್ನು ಕಾದಂಬರಿಯುದ್ದಕ್ಕೂ ಆವರಿಸಿ ವಿಷಾದವೊಂದೇ ಸ್ಥಾಯೀ ಭಾವವೇನೋ ಎಂಬಂತೆ ಚಿತ್ರಿಸಿದ ಕಾದಂಬರಿ "ಪುರುಷೋತ್ತಮ".
ಕೆಮಿಕಲ್ ಎಂಜಿನಿಯರಿಂಗ್ ಮುಗಿಸಿ ಮುಂಬೈಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಪುರುಷೋತ್ತಮ, ತನ್ನ ಮುತ್ತಜ್ಜ ಕಟ್ಟಿಸಿರುವ ಮನೆಯ ಮೇಲೆ ಬೀಳುವ ಭೂ ಮಾಫಿಯಾದವರ ಕಣ್ಣು, ಅದರ ಜೊತೆ ಜೊತೆಗೆ ತನ್ನ ಮುತ್ತಜ್ಜನ ಊರಾದ ಹನೇಹಳ್ಳಿಯ ದಾಯಾದಿ ಕಲಹ, ಮುತ್ತಜ್ಜನ ಡೈರಿ, ನಾಥಾನಿ ಕುಟುಂಬ, ಸುಬ್ಬರಾವ್, ವೆಂಕಟದಾಸು, ರಾಜಕೀಯ ಪುಢಾರಿಗಳ ಕುತಂತ್ರ , ತುಂಬಾ ಕೆಟ್ಟವನೆಂದು ಚಿತ್ರಿತವಾಗಿರುವ ಮಂಜುನಾಥ ಬರು ಬರುತ್ತಾ ಕಾದಂಬರಿಯುದ್ದಕ್ಕೂ ಆವರಿಸಿ ಕೊಳ್ಳುವ ಪರಿ, ದಿಕ್ಕೆಟ್ಟು ನಿಂತಾಗ ಕೇವಲ ಕೆಲವೇ ಕೆಲವು ಮಾತುಗಳಲ್ಲಿ ದಾರಿತೋರುವ ಸದಾಶಿವ ಮಾಮ ಹೀಗೆ ಒಂದಕ್ಕೊಂದು ಸುಳಿಯಂತೆ ಸಿಕ್ಕಿ ಹಾಕಿಕೊಳ್ಳುತ್ತಾ ಮುಂದೇನು? ಎಂಬ ಕುತೂಹಲದೊಂದಿಗೆ ಕಥೆ ಸಾಗುತ್ತದೆ. ತಮ್ಮ ಕಾರ್ಯಸಾಧನೆಗೋಸ್ಕರ ಒಬ್ಬರ ಮೇಲೆ ಮತ್ತೊಬ್ಬರು ನಡೆಸುವ ತಂತ್ರಗಳು, ಸನ್ನಿವೇಶಕ್ಕೆ ತಕ್ಕಂತೆ ಹೆಣೆಯುವ ಪ್ರತಿತಂತ್ರಗಳು, ಅದರ ಜೊತೆಗೇ ತನ್ನ ಜನ್ಮ ವೃತ್ತಾಂತವನ್ನು ತಿಳಿಯುವ ಪುರುಷೋತ್ತಮ, ತನ್ನ ತಾಯಿಯ ಅಂದಿನ ಪರಿಸ್ಥಿತಿಯ ಪ್ರತಿರೂಪದಂತಿರುವ ಕಮಲಾವತಿಯ ಇಂದಿನ ಸ್ಥಿತಿ, ಹೀಗೆ ಒಂದು ಬಿಂದುವಿನಿಂದ ಪ್ರಾರಂಭವಾದ ವೃತ್ತವೊಂದು ಸಂಪೂರ್ಣಗೊಂಡು ಅದೇ ಬಿಂದುವಿನಲ್ಲಿ ಕೊನೆಗೊಳ್ಳುವಂತೆ ಪುರುಷೋತ್ತಮನ ದೃಢ ನಿರ್ಧಾರದೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.
ಮುನ್ನುಡಿಯಲ್ಲಿ ಚಿತ್ತಾಲರೇ ಹೇಳಿದಂತೆ ಸೃಜನ ಶೀಲತೆಯ ಸರ್ವಸ್ವವನ್ನೂ ಧಾರೆಯೆರದು ಎಂಬಂತೆ ಬರೆದ ಈ ಕೃತಿ ನಮ್ಮ ನಮ್ಮ ಪಾಲಿಗೆ ದಕ್ಕಿದಷ್ಟು. ಇದು ಹೀಗೆಯೇ, ಇಷ್ಟೇ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಅದು ಚಿತ್ತಾಲರ ಶೈಲಿಯ ವೈಶಿಷ್ಟ್ಯ. ಚಿತ್ತಾಲರೇ ಹೇಳಿದಂತೆ "ನಮ್ಮ ಬದುಕಿನಲ್ಲಿ ಘಟನೆಗಳು ಒಂದು ಕ್ರಮದಲ್ಲಿ ನಡೆದಯುವುದಿಲ್ಲ; ಒಂದು ಕ್ರಮದಲ್ಲಿ ಅರಿವಿಗೆ ತಂದುಕೊಳ್ಳುತ್ತೇವೆ" ಎಂಬಂತೆ ಇಲ್ಲಿ ಘಟನೆಗಳು ಅನುಕ್ರಮವಾಗಿರದೆ, ಚದುರಿದ ಚುಕ್ಕಿಗಳಂತೆ ಅಲ್ಲಲ್ಲಿ ಹರಡಿದ್ದು ಅವುಗಳನ್ನೆಲ್ಲ ಜೋಡಿಸಿದಾಗಲೇ ಮೂಡುವ ಚಿತ್ತಾರದಂತೆ ಕಾದಂಬರಿಯನ್ನು ಹೆಣೆದಿದ್ದು ಚಿತ್ತಾಲರ ಸೃಜನಶೀಲತೆಗೆ ಸಾಕ್ಷಿಯಾಗಿದೆ.
ಪುಸ್ತಕದಲ್ಲಿ ನನಗಿಷ್ಟವಾದ ಸಾಲುಗಳು:
"ಜೀವನ ನಮಗೆ ಮತ್ತೆ ಮತ್ತೆ ಸಾವು ಬದುಕುಗಳಲ್ಲಿ ಒಂದನ್ನು ಆಯ್ಕೆ ಮಾಡುವ ಸನ್ನಿವೇಶಗಳನ್ನು ಒಡ್ಡುತ್ತಿರುತ್ತದೆ. ಬದುಕನ್ನು ಆಯ್ದುಕೊಳ್ಳುವಷ್ಟು ದೊಡ್ಡ ಪುಣ್ಯದ ಕೆಲಸ ಬೇರೊಂದಿಲ್ಲ. ಯಾಕೆಂದರೆ ಆಯ್ಕೆಯ ಜವಾಬ್ದಾರಿಯನ್ನು ಮನುಷ್ಯನಿಗೆ ಒಪ್ಪಿಸಿದ ದೇವರು ಆಯಲು ಬೇಕಾದ ವಿವೇಕವನ್ನೂ ಅವನಿಗೆ ದಯಪಾಲಿಸಿರುತ್ತಾನೆ. ಹಾಗೆ ದಯಪಾಲಿಸಿದವನಿಗೆ ಎರಡು ಬಗೆಯದಂತೆ ಬದುಕಲು ನಾವು ಕಲಿಯಬೇಕು. ಸಾವಿನ ಎದುರು ಪ್ರಶ್ನಿಸಿಕೊಳ್ಳಬೇಕಾದದ್ದು ನಮ್ಮ ಅಹಂಕಾರವನ್ನೇ ಹೊರತು ಬದುಕುವ ಉದ್ದೇಶವನ್ನಲ್ಲ".
Comments
Post a Comment