ಓದಿನ ಸುಖ - ಹಿಂದಿನ ನಿಲ್ದಾಣ

             
ಪುಸ್ತಕದ ಹೆಸರು : ಹಿಂದಿನ ನಿಲ್ದಾಣ
ಲೇಖಕರು : ಶುಭಶ್ರೀ ಭಟ್ಟ 
           ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾನೆ. ಅದೇ ಅವನನ್ನು ವರ್ತಮಾನದಲ್ಲಿ ಜೀವಂತವಾಗಿರಿಸುವುದು ಎನ್ನುವುದು ನನ್ನ ನಂಬಿಕೆ. ಆದರೆ ಈ ಪುಸ್ತಕದಲ್ಲಿ ಲೇಖಕಿ ತಮ್ಮ ಬಾಲ್ಯದ ಭಾವ ಜಗತ್ತನ್ನು ಪುಟ್ಟ ಪುಟ್ಟ ಲೇಖನಗಳ ಮೂಲಕ ಅಕ್ಷರ ರೂಪಕ್ಕಿಳಿಸಿದ್ದಾರೆ. ಇಲ್ಲಿರುವ ಎಲ್ಲಾ ಬರಹಗಳು ಲೇಖಕಿಯ ಅನುಭವಗಳು. ಮುನ್ನುಡಿಯಲ್ಲಿ ಹಿರಿಯರಾದ ಸುಬ್ರಾಯ ಚೊಕ್ಕಾಡಿಯವರು ಹೇಳಿದಂತೆ "ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು" ಎನ್ನುವಂತೆ ಅಂದು ಅನುಭವಿಸಿದ ದುಃಖವು ಇಂದು ನಗೆಯನ್ನು ಉಕ್ಕಿಸಿದರೆ, ಅಂದಿನ ಖುಷಿಯ ಘಟನೆಗಳು ಇಂದು ಕಣ್ಣನ್ನು ತೇವಗೊಳಿಸುತ್ತವೆ. ಅಂತಹ ಹಲವಾರು ಉದಾಹರಣೆಗಳು ಈ ಪುಸ್ತಕದಲ್ಲಿ ಸಿಗುತ್ತವೆ.

             'ಪರೀಕ್ಷಾಗಾಲದಲ್ಲಿ ಜನಿಸುವ ಕಥೆಗಳು ' ಎಂಬ ಬರಹದಲ್ಲಿ ಎಲ್ಲಾ ಕಾಲದ ಮಕ್ಕಳ ತಲೆನೋವಾಗಿರುವ, ಪರೀಕ್ಷೆಯ ಓದುವ ಸಮಯದಲ್ಲಿ ಮಾಡುವ ಕಿತಾಪತಿಗಳನ್ನು ಹೇಳುತ್ತಾ, ಪ್ರಕೃತಿಯ ಮಡಿಲಲ್ಲಿ ಓದುತ್ತಾ, ಪ್ರಕೃತಿಯ ಅತ್ಯಂತ ಸೂಕ್ಷ್ಮ ವಿಷಯಗಳನ್ನೂ ಗಮನಿಸುತ್ತಾ ಅದನ್ನೆಲ್ಲಾ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅತ್ಯಂತ ಸಾಮಾನ್ಯವಾಗಬಹುದಾಗಿದ್ದ ಈ ಬರಹ ಲೇಖಕಿಯ ಸೂಕ್ಷ್ಮ ದೃಷ್ಟಿಯಿಂದಾಗಿ ಉತ್ತಮ ಬರಹವಾಗಿದೆ.

                'ಪ್ರಕೃತಿಯೆಂಬ ಬಾಲ್ಯ ಸ್ನೇಹಿತೆ ' ಎಂಬ ಬರಹದಲ್ಲಿ ಪ್ರಕೃತಿಯನ್ನು ಉಳಿಸಲು ಹೇಳುವ ಸಿದ್ಧ ಮಾದರಿಗಳನ್ನು ಬದಿಗಿರಿಸಿ, ನಮ್ಮ ಹಿಂದಿನ ತಲಮಾರಿನವರು ಹೇಗೆ ತಮ್ಮ ದಿನನಿತ್ಯದ ಸಹಜ ಕೆಲಸಗಳ ಮೂಲಕ ಮಕ್ಕಳಲ್ಲಿ ಪ್ರಕೃತಿ ಪ್ರೇಮವನ್ನು ಮೂಡಿಸುತ್ತಿದ್ದರು ಎಂದು ಹೇಳುತ್ತಾ , "ಪ್ರಕೃತಿಯನ್ನು ಮನೆಮಗಳಂತೆ, ಬಾಲ್ಯದ ಗೆಳತಿಯಂತೆ ಕಾಣುವಷ್ಟು ಮಮತೆ ಬೆಳೆಸಿಕೊಂಡರೂ ಸಾಕು" ಎಂದು ಲೇಖಕಿಯು ಹೇಳಿದ್ದಾರೆ.

            ಒಂದು ಸಣ್ಣ ವಿಷಯ ಹೇಗೆ ಲೇಖಕಿಯ ನೆನಪಿನ ಭಾವಕೋಶವನ್ನು ಸಮೃದ್ಧವಾಗಿಸಿದೆ ಎಂಬುದು 'ಬೊಂಬಾಯಿ ಮಿಠಾಯಿ ಮಾಮ' ಬರಹದಲ್ಲಿ ದಾಖಲಾಗಿದೆ. ಸಹಜ ಮುಗ್ಧ ಪ್ರೀತಿಯ ಬಗ್ಗೆ 'ಮುಗುದೆ ಮಾಸ್ತಿ ಮತ್ತವಳ ಪ್ರೀತಿ' ಎಂಬ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕಿ. ಬಾಲ್ಯದ ಆ ಮುಗ್ಧ ಪ್ರೀತಿಯನ್ನು ಲೇಖಕಿ ಇನ್ನೂ ನೆನಪಿಟ್ಟುಕೊಂಡದ್ದು ಅವರ ಭಾವನಾತ್ಮಕತೆಗೆ ಸಾಕ್ಷಿಯಾಗಿದೆ.

            'ನವಿಲುಗರಿಯ ಮೋಹ, ಕೃಷ್ಣನೆಡಗಿನ ಸೆಳೆತ'ದಲ್ಲಿ ಅತ್ಯಂತ ಆಪ್ತವಾಗಿ ತನ್ನ ಭಾವನೆಗೆ ತಕ್ಕಂತೆ ಕೃಷ್ಣನ ರೂಪಾಂತರವನ್ನು, ಜೊತೆಗೆ ತನ್ನ ಮನದ ಭಾವನೆಗಳ ರೂಪಾಂತರವನ್ನು ವಿವರಿಸಿದ್ದಾರೆ ಲೇಖಕಿ. ಕೊನೆಯಲ್ಲಿ ತಾಯಿಗೆ ಕಂದನಾಗಿ ಕಾಣುವ ಕೃಷ್ಣನ ಭಾವವೇ ಅತ್ಯಂತ ಖುಷಿಯ ಭಾವ ಎಂದು ಹೇಳಿದ್ದಾರೆ.

             ಬರಹಗಾರರಿಗಿರಬೇಕಾದ ಭಾವತೀವ್ರತೆ ಹಾಗೂ ಎಲ್ಲವನ್ನೂ ಸಮದೃಷ್ಟಿಯಿಂದ ನೋಡುವ ಸೂಕ್ಷ್ಮತೆ ಈಗಾಗಲೇ ಲೇಖಕಿಯಲ್ಲಿದೆ. ಅಲ್ಲದೇ ಬಾಲ್ಯದ ನೆನಪುಗಳ ಬಗ್ಗೆ ಬರೆಯುವಾಗ ಎಲ್ಲೂ 'ನಮ್ಮ ಬಾಲ್ಯವೇ ಶ್ರೇಷ್ಠ' ಎಂಬ ಶ್ರೇಷ್ಠತೆಯ ವ್ಯಸನವಿಲ್ಲ. ನಮ್ಮ ಬಾಲ್ಯದಲ್ಲಿ ಹೀಗಿತ್ತು. ನಾವು ಈಗ ಕಳೆದುಕೊಳ್ಳುತ್ತಿರುವುದೇನನ್ನು ಎಂದು ನಮಗೆ ನಾವೇ ಪ್ರಶ್ನಿಸುವಂತೆ ಮಾಡುವಲ್ಲಿ ಲೇಖಕಿಯು ಯಶಸ್ವಿಯಾಗಿದ್ದಾರೆ. ಪುಸ್ತಕದ ಬಗ್ಗೆ ನನಗಿರುವ ತಕರಾರರೆಂದರೆ ಬಹಳ ಬೇಗ ಮುಗಿಯುವ ಲೇಖನಗಳು ಹಾಗೂ ಅವರ ಸ್ಥಳೀಯ ಕನ್ನಡದ ಪದಗಳು ಸರಾಗವಾದ ಓದಿಗೆ ಸ್ವಲ್ಪ ಬ್ರೇಕ್ ನೀಡಿದ್ದು ಸುಳ್ಳಲ್ಲ.

              
         

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"