ಓದಿನ ಸುಖ - ಮನಿ ಮನಿ ಎಕಾನಮಿ
ಲೇಖಕರು : ರಂಗಸ್ವಾಮಿ ಮೂಕನಹಳ್ಳಿ
ಹಣವೊಂದಿದ್ದರೆ ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂಬುದು ನಮ್ಮೆಲ್ಲರ ಮನಸ್ಥಿತಿ. ಅದಕ್ಕೇ ತಾನೆ "ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ" ಎಂದು ಹಿರಿಯರು ಹೇಳಿದ್ದು. ಆದರೆ ಹಣವೊಂದು ಮಾತ್ರವಿದ್ದರೆ ಸಾಲದು. ಹಣವನ್ನು ಹೇಗೆ ಉಳಿತಾಯ ಹಾಗೂ ಹೂಡಿಕೆ ಮಾಡಬೇಕು? ವಿತ್ತ ಜಗತ್ತಿನ ಆಗು ಹೋಗುಗಳು, ಬೇರೆ ಬೇರೆ ದೇಶಗಳ ಆರ್ಥಿಕ ಪರಿಸ್ಥಿತಿ ಎಲ್ಲದರ ಬಗ್ಗೆಯೂ ವಿಸ್ತಾರವಾಗಿ, ಆದರೆ ಅತ್ಯಂತ ಸರಳವಾಗಿ ಎಲ್ಲರಿಗೂ, ವಾಣಿಜ್ಯ ವಿಭಾಗದ ಬಗ್ಗೆ ಏನೂ ಗೊತ್ತಿಲ್ಲದವರೂ ಸಹ ಸುಲಭವಾಗಿ ಅರ್ಥೈಸುವಂತೆ ಒಟ್ಟು ೨೫ ಲೇಖನಗಳಲ್ಲಿ ಬರೆದಿದ್ದಾರೆ ಲೇಖಕರು.
'ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆಗಳು' ಎಂಬ ಬರಹದಲ್ಲಿ ವಯಸ್ಸಾದವರಿಗೆ, ಕೆಲಸದಿಂದ ನಿವೃತ್ತರಾದವರಿಗೆ ಹೆಚ್ಚು ಅಪಾಯವಿಲ್ಲದಿರುವ ಹಣ ಉಳಿತಾಯದ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. 'ಪೂರ್ಣ ಡಿಜಿಟಲೀಕರಣವೆಂದರೆ ಮತ್ತೇನಿಲ್ಲ ಹೆಚ್ಚಿನ ನಿಯಂತ್ರಣ' ಎಂಬ ಬರಹದಲ್ಲಿ ಡಿಜಿಟಲ್ ಪಾವತಿಯ ಮೂಲಕ ನಮ್ಮ ಇಷ್ಟಾನಿಷ್ಟಗಳ ಪ್ರೊಫೈಲ್ ಸಿದ್ಧವಾಗಿ ವರ್ಷದ ನಂತರ ನಾವು ಖರೀದಿಸುವ ಕಾರ್, ಸ್ಕೂಟರ್ ಮುಂತಾದುವುಗಳನ್ನು ನಾವು ಕೊಳ್ಳುವಂತೆ ಹೇಗೆ ಪ್ರೇರೇಪಿಸಲಾಗುತ್ತದೆ ಎಂಬುದನ್ನೂ, ಹಿಂದೆ ಇಬ್ಬರ ನಡುವೆ ನಡೆಯುತ್ತಿದ್ದ ವ್ಯಾಪಾರ ಮೂರನೆಯ ವ್ಯಕ್ತಿಗೆ ತಿಳಿಯುತ್ತಿರಲಿಲ್ಲ. ಆದರೆ ಇಂದು ಡಿಜಿಟಲ್ ಪೇಮೆಂಟ್ ನಿಂದಾಗಿ ನಮ್ಮೆಲ್ಲಾ ಮಾಹಿತಿಗಳು ಹೇಗೆ ಶೇಖರಣೆಯಾಗುತ್ತಾ ಹೋಗುತ್ತದೆ, ಡಿಜಿಟಲೀಕರಣದಿಂದಾಗಿ ಆನ್ಲೈನ್ ಸಾಕ್ಷರತೆ ಇಲ್ಲದ ಬಹಳಷ್ಟು ಜನರ ಬವಣೆಯನ್ನು, ಅನೇಕ ಎಚ್ಚರಿಕೆಗಳು ಜೊತೆ ಸೈಬರ್ ಕ್ರೈಮ್ ಬಗ್ಗೆ ವಿವರಿಸಿದ್ದಾರೆ.
'ಕಾಸು, ಮೋಕ್ಷ ಎರಡಕ್ಕೂ ದಾರಿ ಮಾಡಿಕೊಟ್ಟಿದೆ ಕಾಶಿ ಕಾರಿಡಾರ್' ಎಂಬ ಲೇಖನದಲ್ಲಿ ಕಾಶಿ ಕಾರಿಡಾರ್ ಹಿಂದಿರುವ ವಾಣಿಜ್ಯ ಲೆಕ್ಕಾಚಾರವೊಂದೇ ಅಲ್ಲದೇ ಸುತ್ತಮುತ್ತಲ ನಗರಗಳ ಆರ್ಥಿಕತೆ ಹೇಗೆ ಸುಧಾರಿಸುತ್ತದೆ ಎಂಬುದನ್ನು ಲೇಖಕರು ತಿಳಿಸಿದ್ದಾರೆ. ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಹಣ, ಚಿನ್ನ ಮುಂತಾದ ವಸ್ತುಗಳ ವಂಚನೆ ಪ್ರಕರಣದಂತೆಯೇ ಇಂದು ನಡೆಯುತ್ತಿರುವ ಆನ್ ಲೈನ್ ವಂಚನೆಗಳವರೆಗೆ ನಡೆಯುತ್ತಿರುವ ಹಣಕಾಸು ವಂಚನೆಗಳ ವಿಧಗಳನ್ನು ವಿವರಿಸುತ್ತಾ ಇವುಗಳೆಲ್ಲಾ ನಡೆಯುತ್ತಿರುವುದು ಮನುಷ್ಯನ ಲಾಲಸೆಯಿಂದ. ಹಾಗಾಗಿ ಸ್ವನಿಯಂತ್ರಣ ಅಗತ್ಯ ಎಂಬುದನ್ನು ಲೇಖಕರು ಹೇಳಿದ್ದಾರೆ.
ಟೆಲಿಕಾಂ ಕ್ಷೇತ್ರದಲ್ಲಿ ವಿದೇಶಿ ಬಂಡವಾಳದ ಹೂಡಿಕೆಯ ನಿರ್ಧಾರ ಎಷ್ಟು ಸರಿ?, ಒಂದು ದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ಪೈಪೋಟಿಯಲ್ಲಿ ಇತರ ದೇಶಗಳ ನಡುವೆ ನಡೆಯುವ ಸಂಘರ್ಷಗಳು ಎಂತಹ ಸ್ಥಿತಿಯನ್ನು ತಂದಿಡುತ್ತವೆ ಎಂಬುದನ್ನು ಅಮೆರಿಕಾ ಹಾಗೂ ಅಫ್ಘಾನ್ ಉದಾಹರಣೆಯ ಮೂಲಕ ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಎಲ್ಲದಕ್ಕೂ ಪಾಶ್ಚಾತ್ಯ ಆರ್ಥಿಕತೆಯನ್ನು ಅನುಸರಿಸಿದರೆ ಎಂತಹ ದುರಂತವನ್ನು ಕಾಣಬಹುದು ಎಂಬುದನ್ನು ಅಮೆರಿಕಾದ ಹಣದುಬ್ಬರದ ಉದಾಹರಣೆಯ ಮೂಲಕ, ಹಣದುಬ್ಬರ, ಬಿಟ್ ಕಾಯಿನ್ ಬಗ್ಗೆಯೂ ವಿಸ್ತಾರವಾಗಿ ಮಾಹಿತಿಯನ್ನು ನೀಡಿದ್ದಾರೆ. ನಿವೃತ್ತಿಯ ವ್ಯಾಖ್ಯೆ, ನಿವೃತ್ತಿಯಾಗಬೇಕೆಂದು ಬಯಸುವವರು ಮಾಡಿಕೊಳ್ಳಬೇಕಾದ ಸಿದ್ಧತೆಗಳನ್ನು, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಬಗ್ಗೆ, ವೈಜ್ಞಾನಿಕವಾಗಿ ಯಾವುದೇ ಕಾರಣಗಳಿಲ್ಲದೆ ಆಗುವ ಏರಿಳಿತ ಇರುವಲ್ಲಿ ಹೂಡಿಕೆ ಮಾಡುವುದು ಸರಿಯೇ ಎಂಬ ಪ್ರಶ್ನೆಯ ಮೂಲಕ ನಮ್ಮ ವಿವೇಚನೆಗೆ ಬಿಡುತ್ತಾರೆ ಲೇಖಕರು.
'ಪೇಟಿಮ್ ಎಂಬ ಹಣ ಸುಡುವ ಮಷಿನ್ ಕಥೆ ಇಲ್ಲಿದೆ' ಎಂಬ ಬರಹದಲ್ಲಿ ಪೇಟಿಮ್ ಐಪಿಓ ಕುಸಿತಕ್ಕೆ ಕಾರಣಗಳು, ಒಂದು ಕಂಪೆನಿಯ ವ್ಯಾಲ್ಯುವೇಷನ್ ಅನ್ನು ಹೇಗೆ ಮಾಡುತ್ತಾರೆ ಹಾಗೂ ಇಂದಿನ ವ್ಯಾಪಾರದ ಸತ್ಯಾಸತ್ಯೆಗಳನ್ನು ಅತ್ಯಂತ ವಿಸ್ತಾರವಾಗಿ ನೀಡಿದ್ದಾರೆ.
ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಯಶಸ್ಸನ್ನು ಕಂಡಾಗ ಹೇಗೆ ಆತನ ಅಥವಾ ಸಂಸ್ಥೆಯ ನಿರ್ಧಾರಗಳು, ಅನುಭವಗಳು ಕಾರಣವಾಗುತ್ತವೆಯೋ ಹಾಗೆಯೇ ವ್ಯಕ್ತಿಯ ಅಥವಾ ಸಂಸ್ಥೆಯ ಅವನತಿಗೆ ಆತ ಅಥವಾ ಸಂಸ್ಥೆ ಕೈಗೊಳ್ಳುವ ನಿರ್ಧಾರಗಳು ಹೇಗೆ ಕಾರಣವಾಗುತ್ತವೆ ಎಂಬುದನ್ನು ಹಾಗೂ ಬೆಳವಣಿಗೆ ಸ್ಥಿರವಾಗಿರಬೇಕು. ಹತ್ತಾರು ಮೂಲದಿಂದ ಪಡೆದ ಸಾಲದ ಹಣದಿಂದ ಅಭಿವೃದ್ಧಿ ಹೊಂದಲು ಹವಣಿಸಿದ 'ಎವರ್ ಗ್ರಾಂದೆ' ಎಂಬ ಚೀನಾದ ಕಂಪೆನಿಯ ಕುಸಿತದ ಬಗ್ಗೆ 'ಎವರ್ ಗ್ರಾಂದೆ ಕುಸಿತದಿಂದಲಾದರೂ ಪಾಠ ಕಲಿಯೋಣವೇ?' ಎಂಬ ಲೇಖನದಲ್ಲಿ ವಿವರಿಸಿದ್ದಾರೆ.
ಹೀಗೆ ಇಡೀ ಪುಸ್ತಕದ ಮೂಲಕ ವಿತ್ತ ಜಗತ್ತಿನ ಆಗು ಹೋಗುಗಳನ್ನು ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವಲ್ಲಿ ರಂಗಸ್ವಾಮಿಯವರು ಯಶಸ್ವಿಯಾಗಿದ್ದಾರೆ. ಎಲ್ಲಾ ಲೇಖನಗಳ ಕೊನೆಯಲ್ಲಿ ಬರೆದಿರುವ 'ಕೊನೆಮಾತು' ಇಡೀ ಲೇಖನದ ಆಶಯವನ್ನು ಕೆಲವೇ ಕೆಲವು ಪದಗಳಲ್ಲಿ ಸಶಕ್ತವಾಗಿ ಹೇಳುವಲ್ಲಿ ಯಶಸ್ವಿಯಾಗಿದೆ. ಬರೀ ಆರ್ಥಿಕತೆಯ ಬಗ್ಗೆ ಮಾತ್ರವೇ ಹೇಳದೆ "ನಾವಿರುವ ನೆಲ, ಜಲವನ್ನು ಸಂರಕ್ಷಿಸದೆ ಇದ್ದರೆ ಎಷ್ಟೇ ದೊಡ್ಡ ಮಟ್ಟದ ಅಭಿವೃದ್ಧಿ ನಿಷ್ಪ್ರಯೋಜಕ " ಎನ್ನುವ ಲೇಖಕರು ನಮ್ಮದಲ್ಲದ ಜೀವನ ಶೈಲಿಯಿಂದ, ಸಾಮಾಜಿಕ ಒತ್ತಡದಿಂದ ನಾವು ವ್ಯಯಿಸುತ್ತಿರುವ ಹಣದ ಅರಿವೇ ಇಲ್ಲದೆ ಖರ್ಚು ಮಾಡುತ್ತಿರುವುದರ ಬಗ್ಗೆ ಹಾಗೂ ಇಂದಿನ ಕಾಲಕ್ಕೆ ಉಳಿತಾಯ ಮಾತ್ರವಲ್ಲದೆ ಹೂಡಿಕೆ ಎಷ್ಟು ಆವಶ್ಯಕವೆಂದು ವಿವರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುಸ್ತಕದ ನಕಾರಾತ್ಮಕ ಅಂಶವೆಂದರೆ ಅಲ್ಲಲ್ಲಿ ನುಸುಳಿರುವ ಅಕ್ಷರ ದೋಷಗಳು. ಉದಾಹರಣೆಗೆ 'ಚಲನ ಚಿತ್ರಗಳಲ್ಲಿ ಭೂಮಿಕೆ ಅಂತ್ಯವಾಗುತ್ತದೆ' ಎಂಬ ವಾಕ್ಯದಲ್ಲಿ ಭೂಮಿಕೆ ಬದಲು ಭೂಮಿ ಎಂದು, 'ನಿರ್ಬಂಧಗಳನ್ನು ಏರುವುದು' ಎಂಬ ತಪ್ಪುಗಳು ಸರಾಗವಾದ ಓದಿಗೆ ಬ್ರೇಕ್ ಹಾಕಿದ್ದು ಸುಳ್ಳಲ್ಲ.
"ಬೆಳವಣಿಗೆ ಎನ್ನುವುದು ಸಸ್ಟೆನೆಬಲ್ ಆಗಿರಬೇಕು. ಅದು ಲಾಭದ ಭದ್ರ ಬುನಾದಿಯ ಮೇಲೆ ಆಗಿರಬೇಕು. ಆತುರದಿಂದ, ವಿವೇಚನೆಯಿಲ್ಲದೆ ಮಾಡಿದ ಕೆಲಸದಿಂದ ಎಂದಿಗೂ ಸುಸ್ಥಿರ ಬೆಳವಣಿಗೆ ಸಾಧ್ಯವಿಲ್ಲ" ಎಂಬ ಲೇಖಕರ ಮಾತಿನಲ್ಲಿ ಇಡೀ ಪುಸ್ತಕದ, ವಿತ್ತ ಜಗತ್ತಿನ ಆಶಯ ಸಮರ್ಥವಾಗಿ ವ್ಯಕ್ತವಾಗಿದೆ.
Comments
Post a Comment