ಓದಿನ ಸುಖ - "ಯಾವ ನಾಳೆಯೂ ನಮ್ಮದಲ್ಲ"



ಪುಸ್ತಕದ ಹೆಸರು : ಯಾವ ನಾಳೆಯೂ ನಮ್ಮದಲ್ಲ
ಲೇಖಕರು : ಉಷಾ.ಪಿ.ರೈ

            ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳನ್ನು ಬರೆದ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದ ಉಷಾ.ಪಿ.ರೈ ಅವರು ಬರೆದ ತಮ್ಮ ಆತ್ಮಕಥೆಯೇ 'ಯಾವ ನಾಳೆಯೂ ನಮ್ಮದಲ್ಲ'.

          ಪುಸ್ತಕದ ಆರಂಭದಲ್ಲಿ ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಾರೆ ಲೇಖಕಿ. ತಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದ ಉಡುಪಿಯ ಪರಿಸರದ ಅನುಭವದ ಜೊತೆಗೆ ಇಂದಿನ ಉಡುಪಿಯ ಪರಿಸರದ ಬಗ್ಗೆ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಮುಂದೆ ತಮ್ಮ ತಂದೆ ತಾಯಿಯ ಬಗ್ಗೆ ಅಭಿಮಾನದ ಮಾತನ್ನು ಹೇಳಿದ್ದಾರೆ ಲೇಖಕಿ. ತಂದೆ ಹೊನ್ನಯ್ಯ ಶೆಟ್ಟರು ನವಯುಗ ಪತ್ರಿಕೆಯ ಪ್ರವರ್ತಕರು ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿದವರು. ಪತ್ರಿಕೆಯನ್ನು ಹೊರತರಲು ತಂದೆ ಪಡುತ್ತಿದ್ದ ಕಷ್ಟ, ತಂದೆಯ ಎಲ್ಲಾ ಕೆಲಸಗಳನ್ನು ತಾಯಿ ಬೆಂಬಲಿಸುತ್ತಿದ್ದ ರೀತಿ, ಅಂದಿನ ಬಂಟರ ಜೀವನ ಪದ್ಧತಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಡಿದ್ದಾರೆ ಲೇಖಕಿ. 

           ಮುಂದೆ ವೈವಾಹಿಕ ಜೀವನ, ಬ್ಯಾಂಕ್ ಉದ್ಯೋಗ, ಅದರ ಜೊತೆ ಜೊತೆಗೆ ಹವ್ಯಾಸವಾದ ಬರವಣಿಗೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗಿನ ಅನುಭವಗಳು, ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅನುಭವಗಳು, ಸಾಹಿತಿಗಳ ಜೊತೆ ಒಡನಾಟ ಎಲ್ಲವನ್ನೂ ದಾಖಲಿಸಿದ್ದಾರೆ. ಪುಸ್ತಕದಲ್ಲಿ ದಕ್ಷಿಣ ಕನ್ನಡದ ಭಾಷೆಯ ಹಲವು ಪದಗಳು, ನಾವು ಇತ್ತೀಚೆಗೆ ಅಷ್ಟಾಗಿ ಬಳಸದ ಪದಗಳಿದ್ದು ನನಗೆ ಪುಸ್ತಕ ಓದುವಾಗ ಖುಷಿಯನ್ನು ಕೊಟ್ಟಿತು.

          ತಮ್ಮ ಜೀವನದ ಮೊದಲಾರ್ಧದ ಅನುಭವವನ್ನು ಎಷ್ಟು ಪ್ರಾಮಾಣಿಕವಾಗಿ ದಾಖಲಿಸಿದ್ದರೋ ಅಷ್ಟೇ ಪ್ರಾಮಾಣಿಕವಾಗಿ ವೃದ್ಧಾಪ್ಯದಲ್ಲಿ ನಡೆದ ಸಾಲು ಸಾಲು ದುರಂತಗಳು, ಮಕ್ಕಳ ದಾಂಪತ್ಯ ಬದುಕಿನ ಬಿರುಕುಗಳು, ಮಾನಸಿಕ ಒತ್ತಡವನ್ನು ಮುಕ್ತವಾಗಿ ದಾಖಲಿಸಿದ್ದಾರೆ ಲೇಖಕಿ. ನೆಮ್ಮದಿಯನ್ನು ಅರಸುವ ವೃದ್ಧಾಪ್ಯದಲ್ಲಿ ನಡೆದ ದುರಂತಗಳನ್ನು ದಿಟ್ಟವಾಗಿ ಎದುರಿಸಿ ತಮ್ಮ ಇನ್ನೊಂದು ಹವ್ಯಾಸವಾದ ಚಿತ್ರಕಲೆಯನ್ನು ಗಂಭೀರವಾಗಿ ಅಭ್ಯಸಿಸಿ ಚಿತ್ರಕಲಾವಿದೆಯಾಗಿ, ಅನೇಕ ಚಿತ್ರಕಲಾ ಪ್ರದರ್ಶನವನ್ನು ನೀಡಿ ಮಾದರಿಯಾಗಿದ್ದಾರೆ.

            ಲೇಖಕಿಯೇ ಹೇಳಿದಂತೆ ಬಹಳ ನಾಚಿಕೆಯ ಸ್ವಭಾವದ, ಕಡಿಮೆ ಮಾತನಾಡುತ್ತಿದ್ದ, ಹೆದರುತ್ತಿದ್ದ, ಯಾರಾದರೂ ಸ್ವಲ್ಪ ಗಟ್ಟಿಯಾಗಿ ಮಾತನಾಡಿದರೆ ಅಳುತ್ತಿದ್ದ ಹುಡುಗಿ, ಲೇಖಕಿಯಾಗಿ, ಬ್ಯಾಂಕ್ ಉದ್ಯೋಗಿಯಾಗಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ನಡೆದು ಬಂದ ಹಾದಿ ಸುಲಭವಾಗಿರಲಿಲ್ಲ.

            "ಸಾವೇ ಇಲ್ಲವೇನೋ ಎಂದು ಬದುಕುತ್ತೇವೆ. ಸಾಯುವಾಗ ನಾವು ಬದುಕಿಯೇ ಇಲ್ಲವೇನೋ ಎನ್ನುವಂತೆ ಸಾಯುತ್ತೇವೆ" ಎನ್ನುವ ಲೇಖಕಿ "ಬದುಕುವುದು ಸುಲಭದ ಕೆಲಸವಲ್ಲ. ಸುತ್ತಲೂ ದೃಷ್ಟಿ ಹಾಯಿಸಿದರೆ ಎಲ್ಲರ ಬದುಕಿನಲ್ಲೂ ಹೊರ ನೋಟಕ್ಕೆ ಕಾಣುವ ಸುಖ ಸಂತಸಗಳ ಮಧ್ಯೆ ಒಂದಲ್ಲ ಒಂದು ನ್ಯೂನತೆಯನ್ನು, ನೋವನ್ನು ಗುರುತಿಸಬಹುದು. ಎಲ್ಲರ ಬದುಕಿನಲ್ಲೂ ಹೋರಾಟವಿದೆ. ಕೆಲವು ಹಂತಗಳಲ್ಲಿ ಕುರುಕ್ಷೇತ್ರದ ರೀತಿಯ ಕದನವಿದೆ. ಒಂದೇ ವ್ಯತ್ಯಾಸವೆಂದರೆ ಕೃಷ್ಣನಂತಹ ಮಾರ್ಗದರ್ಶಕರು ಎಲ್ಲರಿಗೂ ಸಿಗುವುದಿಲ್ಲ. ಹಾಗಾಗಿ ಗೆಲ್ಲುವುದು ಬಹಳ ಕಷ್ಟ. ಅದರಲ್ಲೂ ಹೆಚ್ಚಿನವರ ಹೋರಾಟ ಒಬ್ಬಂಟಿ ಹೋರಾಟ" ಎಂಬ ಜೀವನದ ಸತ್ಯ ದರ್ಶನ ಮಾಡಿದ್ದಾರೆ.

              ಕಾಲದ ಸ್ಥಿತ್ಯಂತರದಲ್ಲಿ ಉದ್ಯೋಗಕ್ಕೆ ಸೇರಿದ ಮೊದಲ ತಲೆಮಾರಿನ ಮಹಿಳೆಯಾಗಿ, ಕುಟುಂಬ, ಉದ್ಯೋಗ, ಹವ್ಯಾಸ ಎಲ್ಲವನ್ನೂ ಸರಿದೂಗಿಸಿಕೊಂಡ ಮಹಿಳೆಯ ಜೀವನ, ಮಾನಸಿಕ ಒತ್ತಡ ಎಲ್ಲವನ್ನೂ ದಾಖಲಿಸಿದ ಕಾರಣ ಈ ಆತ್ಮಕಥೆ ಮಹತ್ವದ ಕೃತಿಯಾಗಿದೆ.

              


         

            

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"