ಓದಿನ ಸುಖ - "ಮನ್ವಂತರ"


ಪುಸ್ತಕದ ಹೆಸರು : ಮನ್ವಂತರ
ಲೇಖಕರು : ವಸುಮತಿ ಉಡುಪ

                ವಸುಮತಿ ಉಡುಪರ 'ಹೆಜ್ಜಾಲ' ಕೃತಿ ಓದಿದ ಮೇಲೆ ಗ್ರಂಥಾಲಯದಲ್ಲಿ ಕಂಡು ಓದಿದ ಪುಸ್ತಕ 'ಮನ್ವಂತರ'. ಲೇಖಕಿಯು ಹೇಳಿದಂತೆ ಕಾದಂಬರಿಯು 80ರ ದಶಕದ ಮಲೆನಾಡಿನ ಕೃಷಿ ಕುಟುಂಬದ ಕಥೆ. ತಂದೆ, ತಾಯಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿರುವ 5 ಮಂದಿಯ ಸಂಸಾರ. ಮನೆಯ ಯಜಮಾನನ ಅಕಾಲಿಕ ಮರಣ ಎಲ್ಲರನ್ನೂ ದಿಕ್ಕೆಡುವಂತೆ ಮಾಡುತ್ತದೆ. ಮಗ ಇನ್ನೂ ಚಿಕ್ಕವನಾದ್ದರಿಂದ, ದೊಡ್ಡಮಗಳು ಗೋದಾವರಿ ಹಾಗೂ ಅವಳ ಗಂಡನ ಸಹಕಾರದಿಂದ ಕೃಷಿ ಕೆಲಸಗಳು ನಡೆಯುತ್ತಿರುತ್ತವೆ. ವರ್ಷಗಳು ಕಳೆದಂತೆ ಕಥಾನಾಯಕಿ ಕಾವೇರಿಗೆ ಮದುವೆಯ ವಯಸ್ಸಾಗುತ್ತದೆ. ಮನೆಯ ಪರಿಸ್ಥಿತಿಗೆ ಬಲಿಪಶುವಾದ ಕಾವೇರಿ ತನ್ನ ಮದುವೆಯ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲೂ ಸಹ ಆಗದೇ ಅಕ್ಕ ಗೋದಾವರಿ ನೋಡಿದ, ಮನೆ ಅಳಿಯನಾಗಿ ಬಂದ ಗಂಡು ಜನಾರ್ದನನ್ನು ಮದುವೆಯಾಗುತ್ತಾಳೆ. ವಯಸ್ಸಿಗೆ ಸಹಜವಾಗಿ ತನ್ನದೇ ಸ್ವಂತ ಮನೆ, ಸಂಸ್ಕಾರವಂತ ಗಂಡನನ್ನು ಅಪೇಕ್ಷಿಸಿದ ಕಾವೇರಿಗೆ ಮುಂದೆ ಒಂದೊಂದಾಗಿ ಗಂಡನ ಅವಗುಣಗಳು ತಿಳಿಯತೊಡಗುತ್ತವೆ. ಇಡೀ ಮನೆಗಾಗಿ, ಅಮ್ಮನಿಗಾಗಿ, ತಮ್ಮನಿಗಾಗಿ ಕಾವೇರಿ ಮಾಡಿದ ತ್ಯಾಗವು ಗಂಡನ ದುರ್ಗುಣಗಳ ಮುಂದೆ ಮರೆಯಾಗತೊಡಗುತ್ತದೆ. ಇದರ ಜೊತೆಗೇ ರಜೆಯಲ್ಲಿ ಪೇಟೆಯಿಂದ ಬರುತ್ತಿದ್ದ ಅಕ್ಕ ಭಾವ ಹಾಗೂ ಮಕ್ಕಳಿಗೆ ಮರ್ಯಾದೆ, ಉಪಚಾರಗಳು ಸಿಗುತ್ತಿದ್ದರೆ, ಹಳ್ಳಿ ಮನೆಯಲ್ಲಿ ದಿನವಿಡೀ ದುಡಿದು ಎಲ್ಲರ ಸೇವೆಯನ್ನು ಮಾಡಿದ ಕಾವೇರಿಗೆ ಒಂದು ದಿನದ ವಿಶ್ರಾಂತಿಯು ಸಹ ಲಭಿಸುತ್ತಿರಲಿಲ್ಲ. ಕಾವೇರಿಯ ತಾಯಿ ಸೀತಮ್ಮ ತಮ್ಮ ಮೊಮ್ಮಕ್ಕಳ ನಡುವೆಯೇ ತಾರತಮ್ಯ ಮಾಡಲು ತೊಡಗುತ್ತಾರೆ. ಕಾವೇರಿಯ ತಮ್ಮ ಕೃಷ್ಣಮೂರ್ತಿ, ಕಾವೇರಿಯ ಮಕ್ಕಳಿಗೆ ಸೋದರಮಾವನೆಂಬ ಪ್ರೀತಿ ತೋರದೆ ಹೊಡೆತ, ಬೈಗುಳಗಳು ಸಾಮಾನ್ಯವಾಗಿದ್ದವು. ಜೊತೆಗೆ ಕಾವೇರಿಯ ಗಂಡನಿಂದ ದುರಾಭ್ಯಾಸಗಳನ್ನು ಕಲಿಯತೊಡಗಿದ.

            ಒಂದು ಬಾರಿ ತವರಿಗೆ ಬಂದ ಅಕ್ಕ ಗೋದಾವರಿ, ಕಾವೇರಿಯ ಮಗಳಾದ ರಾಜೇಶ್ವರಿ ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ಪ್ರಾಪ್ತ ವಯಸ್ಕಳಾದಾಗ ತಮ್ಮ ಕೃಷ್ಣಮೂರ್ತಿಗೆ ಮದುವೆ ಮಾಡಿಸಿ ತವರ ಸಂಬಂಧವನ್ನು ಭದ್ರಪಡಿಸುವ ಮಾತನಾಡಿದಳು. ಅದನ್ನು ಕೇಳಿದ ಕಾವೇರಿ ತನ್ನ ಮಗಳು ತನ್ನಂತೆ ಈ ಹಳ್ಳಿಯಲ್ಲಿ, ಅದೂ ಗೌರವವಿರದ ಈ ಮನೆಯಲ್ಲಿ ಅದೂ ಅಲ್ಲದೆ ದುರಾಭ್ಯಾಸವಿರುವ ತನ್ನ ತಮ್ಮನಿಗೆ ಪತ್ನಿಯಾಗಿ ಇರಬೇಕೆ ಎಂದು ಯೋಚಿಸಿ, ಎಂದೂ ಮನೆ ಬಿಟ್ಟು ಹೊರ ಹೋಗದ, ಹೊರಗಿನ ವ್ಯವಹಾರಗಳನ್ನು ಅರಿಯದವಳು ತನ್ನ ಮಗಳಿಗೋಸ್ಕರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಎಂಬುದರಿಂದ ಇಡೀ ಕಾದಂಬರಿ ಬೇರೆಯೇ ತಿರುವನ್ನು ಪಡೆದುಕೊಳ್ಳುತ್ತದೆ.

               ಹೆಣ್ಣೊಬ್ಬಳು ಕೆಲವೊಮ್ಮೆ ತನ್ನ ಜೀವನದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಅಸಮರ್ಥಳಾದರೂ ಸಹ ಮಕ್ಕಳಿಗೋಸ್ಕರ ಎಷ್ಟೇ ಕಷ್ಟದ, ಎಂತಹುದೇ ಗಟ್ಟಿಯಾದ ನಿರ್ಧಾರವನ್ನು ಕೈಗೊಳ್ಳಲು ಸಿದ್ಧ ಎಂಬುದನ್ನು ಕಥಾನಾಯಕಿ ಕಾವೇರಿಯ ಮೂಲಕ ಲೇಖಕಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸಂಬಂಧಿಗಳ ನಡುವೆ ಇರುವ ಪ್ರೀತಿ, ಗೌರವ, ಪರಸ್ಪರ ಸ್ನೇಹ ಸೌಹಾರ್ದತೆಗಳು ಕಾಲ ಕಳೆದಂತೆ ಹೇಗೆ ಸ್ವಾರ್ಥ ಸಾಧನೆಗಾಗಿ ಬಳಕೆಯಾಗುತ್ತವೆ ಎಂಬುದನ್ನು ಕಾದಂಬರಿಯಲ್ಲಿ ಅತ್ಯಂತ ಸಮರ್ಥವಾಗಿ ವಿವಿಧ ಪಾತ್ರಗಳ ಮೂಲಕ ಲೇಖಕಿಯು ಕಟ್ಟಿಕೊಟ್ಟಿದ್ದಾರೆ. ಹೀಗೆ ಕಥಾನಾಯಕಿ ಕಾವೇರಿ ಇಡೀ ಕಾದಂಬರಿಯ ಸಶಕ್ತ ಪಾತ್ರವಾಗಿ, ಜೊತೆಗೆ ಅವಳ ಮಕ್ಕಳ ಪಾತ್ರಗಳೂ ಪೂರಕವಾಗಿ ರೂಪಿತಗೊಂಡಿವೆ.

              80ರ ದಶಕದ ಮಲೆನಾಡಿನ ಚಿತ್ರಣ, ಮಲೆನಾಡಿನ ಮಳೆಗಾಲದ ಚಿತ್ರಣ, ಕೃಷಿ ಕುಟುಂಬದ ಜೀವನಶೈಲಿ, ಹೆಣ್ಣಿನ ಮಾನಸಿಕ ತುಮುಲಗಳನ್ನು ಲೇಖಕಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಸರಳ ಸುಂದರ ಬರಹದ ಶೈಲಿ ಓದಿಗೆ ಯಾವುದೇ ಅಡೆ ತಡೆಯನ್ನು ನೀಡದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. 


  

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"