ಓದಿನ ಸುಖ "ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು"
ಲೇಖಕರು: ನೇಮಿಚಂದ್ರ
ನೇಮಿಚಂದ್ರರ 'ಬದುಕು ಬದಲಿಸಬಹುದು' ಪುಸ್ತಕವನ್ನು ಓದಿದವರಿಗೆ ಲೇಖಕಿಯ ಶೈಲಿ ಸುಪರಿಚಿತವೇ. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ ಆತ್ಮವಿಶ್ವಾಸ, ಸಕಾರಾತ್ಮಕ ಗುಣವನ್ನು ಬಿತ್ತುವುದು ನೇಮಿಚಂದ್ರರ ಬರಹದ ಉದ್ದೇಶ. 'ಬದುಕು ಬದಲಿಸಬಹುದು' ಪುಸ್ತಕದಲ್ಲಿ ಹಲವು ಘಟನೆಗಳನ್ನು ಉಲ್ಲೇಖಿಸುತ್ತಾ ಆ ಘಟನೆ ಯಾವ ಕಥೆಗೆ ಪ್ರೇರಣೆಯಾಯಿತೆಂದು ಕೂಡ ತಿಳಿಸಿದ್ದಾರೆ. ಹಾಗಾಗಿ ಇಲ್ಲಿದ್ದ ಹೆಚ್ಚಿನ ಕಥೆಗಳ 'ಸತ್ಯ ಕಥೆಗಳು' ಗೊತ್ತಿದ್ದರಿಂದ ನಿರೀಕ್ಷಿತ ಅಂತ್ಯವೆಂದೇ ಹೇಳಬಹುದು.
ಆಕಸ್ಮಿಕವಾಗಿ ಅಪಘಾತದಲ್ಲಿ ನೆನಪು ಕಳೆದುಕೊಂಡ ಪತ್ನಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಪತಿಯ ಹೋರಾಟ, ಜೊತೆ ಜೊತೆಗೆ ಈ ಪರಿಸ್ಥಿತಿಯನ್ನು ಅರಿಯದೆ ತನ್ನ ತಂದೆ ತಾಯಿಯ ಗೊಣಗಾಟವನ್ನು ಧಿಕ್ಕರಿಸಿ ಬದುಕುವ ಹೋರಾಟದ ಕಥೆಯನ್ನು 'ಮರಳಿ ಬದುಕಿಗೆ ಈ ಪಯಣ'ದಲ್ಲಿ ಓದಬಹುದು.
ಕಾನ್ಸರ್ ಬಂದು ಮಾನಸಿಕವಾಗಿ ಕುಗ್ಗಿ, ಸಾವೊಂದೆ ಸತ್ಯ ಎಂಬಂತೆ ತಿಳಿದ ಸೂಕ್ಷ್ಮ ಮನಸ್ಥಿತಿಯ ಶಶಿ ತನ್ನ ಜೀವನದಲ್ಲಿ ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆಯುವ ಕಥೆ 'ಬದುಕು ನಿನ್ನಲ್ಲೆಂಥಾ ಮುನಿಸು'. ತನ್ನ ಗಂಡ ಇನ್ನೊಬ್ಬ ಹೆಂಗಸಿನ ಸಹವಾಸ ಮಾಡಿ, ಸಕಲ ದುರ್ಗುಣಗಳನ್ನು ಹೊಂದಿದ್ದರೂ ಗಂಡ ಬಿಟ್ಟವಳು ಎಂದು ಸಮಾಜದಿಂದ ಅನ್ನಿಸಿಕೊಳ್ಳಲು ಸಿದ್ಧವಿರದ ವಿದ್ಯಾವಂತ ಹುಡುಗಿ ಅಹಲ್ಯಾ , ಸದಾ ಸಮಾಜ ತನ್ನನ್ನು ಏನೆಂದು ಕೊಳ್ಳುತ್ತದೋ ಎಂದು ಭಾವಿಸಿ ತನ್ನ ಮಗಳನ್ನು ಬಿಟ್ಟು ಸನ್ಯಾಸಿನಿಯಾದ ಕಥೆ 'ಕಳೆಯಬೇಕಿದೆ ನಿನ್ನ ಜೊತೆಯಲ್ಲಿ ಒಂದು ಶ್ಯಾಮಲ ಸಂಜೆ' ಯಲ್ಲಿದೆ.
ತಮ್ಮ ಮಕ್ಕಳ ಕುರಿತು ಮಹತ್ವಾಕಾಂಕ್ಷಿಗಳಾಗಿರುವ ಪೋಷಕರು, ತಮ್ಮ ಅನುಭಗಳ ಹಿನ್ನಲೆಯಲ್ಲಿ ತಮ್ಮ ಮಕ್ಕಳನ್ನು ಅರ್ಥೈಸುವ ತಂದೆ ತಾಯಿಗಳು ತಮಗೆ ಸಾಧ್ಯವಾದದ್ದು ಮತ್ತೊಬ್ಬರಿಗೆ ಅಸಾಧ್ಯವಾಗಬಲ್ಲದು ಎಂಬ ತಿಳುವಳಿಕೆಯಿಲ್ಲದೆ ಮಕ್ಕಳ ಮೇಲೆ ತಮ್ಮ ಆಕಾಂಕ್ಷೆಯನ್ನು ಹೇರುವ ಬಗ್ಗೆ ಇರುವ ಕಥೆ 'ಇತಿಹಾಸದಂಚಿನಲಿ'.
ಹದಿ ಹರೆಯದ ಮಗಳು 'ಪ್ರೀತಿಯಲ್ಲದ' ಪ್ರೀತಿಯಲ್ಲಿ ಬಿದ್ದಾಗ, ತನ್ನ ಹಾದಿಯಲ್ಲಿ ಹಾದ ಸೌಧಗಳನ್ನು, ಬೆಳ್ಳಿ ಮರಳ ದಂಡೆಯನ್ನು, ತಾನು ಹಾದು ಬಂದ ನೂರಾರು ನಿಲ್ದಾಣಗಳಿಗೆ ಕರೆದೊಯ್ಯುವ ತಾಯಿ , ಮಗಳು ತನ್ನ ಪ್ರೀತಿಯ ಬಗ್ಗೆ ಅಮ್ಮ ನಡೆದು ಬಂದ ಹಾದಿಯಲ್ಲಿ ನಿಂತು ಅಮ್ಮನ ಅನುಭವಗಳ ಮೂಲಕ ತೆಗೆದುಕೊಳ್ಳುವ ದೃಢನಿರ್ಧಾರದೊಂದಿಗೆ 'ನೆನಪಿನಂಗಳದಲ್ಲಿ ನೂರು ಚಿತ್ತಾರ' ಕಥೆ ಮುಕ್ತಾಯವಾಗುತ್ತದೆ.
ಜೀವನದಲ್ಲಿ ಬಂದ ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನೊಬ್ಬ ಬದುಕಿನ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ ಬದುಕಲು ಪ್ರೇರೇಪಿಸಿದ ಘಟನೆ 'ಸಾವಿನತ್ತ ಒಂದು ಹೆಜ್ಜೆ'ಲ್ಲಿದ್ದರೆ, ಗಂಡನ ಅನೈತಿಕ ಸಂಬಂಧ ಬಯಲಾಗಿ, ಆತನನ್ನು ತೊರೆದು ಸ್ವಂತ ಉದ್ಯಮ ಆರಂಭಿಸಿ ತನ್ನ ಕಾಲ ಮೇಲೆ ನಿಂತ ಹೆಣ್ಣುಮಗಳು ಕಥೆ 'ಕಪ್ಪು ಮೋಡ ಬೆಳ್ಳಿ ಅಂಚು'ವಿನಲ್ಲಿದೆ. ಹೀಗೆ ಎಲ್ಲಾ ಕಥೆಗಳು ನಮ್ಮ ಸುತ್ತಮುತ್ತ ನಡೆದ, ಕೇಳಿದ ಕಂಡ ಬದುಕಿನ ಕಥೆಗಳಾದ್ದರಿಂದ ಮನಸ್ಸಿಗೆ ತಾಕುವುದರಲ್ಲಿ ಸಂಶಯವಿಲ್ಲ.
Comments
Post a Comment