ಪುಸ್ತಕಗಳ ಜೊತೆ ನನ್ನ ಅನುಬಂಧ

 "ದೇಶ ಸುತ್ತು ಕೋಶ ಓದು" ಎಂಬುದು ಹಿರಿಯರು ಹೇಳಿದ ಮಾತು. ಇಂದು ಜ್ಞಾನವನ್ನು ಸಂಪಾದಿಸಲು ಹಲವಾರು ಮಾಧ್ಯಮಗಳಿದ್ದರೂ ಸಹ ಪುಸ್ತಕಗಳಷ್ಟು ಸಶಕ್ತ ಮಾಧ್ಯಮವು ಬೇರೊಂದಿಲ್ಲ. ಏಪ್ರಿಲ್ ತಿಂಗಳ 23 ರಂದು 'ವಿಶ್ವ ಪುಸ್ತಕ ದಿನ'ವನ್ನಾಗಿ ಆಚರಿಸುತ್ತಾರೆ. ಆ ಪ್ರಯುಕ್ತ ಪುಸ್ತಕದ ಜೊತೆಗಿನ ನನ್ನ ಅನುಬಂಧವನ್ನು ಹಂಚಿಕೊಳ್ಳುತ್ತೇನೆ.

 
 ನಾನು ಚಿಕ್ಕವಳಿದ್ದಾಗ, ಊರಿನಲ್ಲಿರುವ ಗ್ರಂಥಾಲಯದಲ್ಲಿ ಅಪ್ಪ ಸದಸ್ಯತ್ವವನ್ನು ಪಡೆದು ಮನೆಯಲ್ಲಿ ತಮಗೆ ಓದಲು ತರುತ್ತಿದ್ದ ಪುಸ್ತಕಗಳಲ್ಲಿ ಒಂದನ್ನು ನನಗೋಸ್ಕರ ತರುತ್ತಿದ್ದರು. ನಾನು ಓದಿದ ಮೊದಲ ಪುಸ್ತಕ 'ನನ್ನ ಗೋಪಾಲ' ಎನ್ನುವ ಚಿತ್ರಕಥಾ ಪುಸ್ತಕ. ಮುಂದೆ ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ ಕಥೆಗಳು, ರಾಮಾಯಣ, ಮಹಾಭಾರತ, ಬಾಲಮಂಗಳ ಹೀಗೆ ನನ್ನ ಪುಸ್ತಕದ ಓದು ಸಾಗಿತು. ಹಾಗೇಯೇ ಆಗ ಶನಿವಾರ ಬರುತ್ತಿದ್ದ 'ಪುಟಾಣಿ ವಿಜಯ' ಎಂಬ ಮಕ್ಕಳ ಪತ್ರಿಕೆಯನ್ನು ನಾನು ಅಪ್ಪ ಒಟ್ಟಿಗೆ ಕುಳಿತುಕೊಂಡು ಓದುತ್ತಿದ್ದೆವು 😍 ಶಾಲೆಯಲ್ಲಿ ಕೊಡುತ್ತಿದ್ದ ಪಠ್ಯಪುಸ್ತಕಗಳಲ್ಲಿ ಭಾಷಾ ಪುಸ್ತಕಗಳನ್ನು ಒಮ್ಮೆ ಮೊದಲೇ ಓದಿಬಿಡುತ್ತಿದ್ದೆ.

 ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈತ್ರೇಯಿ ಗುರುಕುಲವನ್ನು ಸೇರಿದ ಮೇಲೆ, ಅಲ್ಲಿಯ ಗ್ರಂಥಾಲಯದಿಂದ ನಮಗೆ ಬೇಕಾದ ಪುಸ್ತಕಗಳನ್ನು ನಾವೇ ಆರಿಸಿ ತೆಗೆದು ಬರೀ ಓದುವುದಲ್ಲದೆ ನಮ್ಮ ಅನಿಸಿಕೆಗಳನ್ನು ಬರೆದಿಡಬೇಕಿತ್ತು. ಹಾಗಾಗಿ ಪುಸ್ತಕಗಳನ್ನು ಓದಿ ಲೇಖಕರ ಅಭಿಪ್ರಾಯವನ್ನಲ್ಲದೇ ನಮ್ಮದೇ ಒಂದು ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಳ್ಳುವುದು ಸಾಧ್ಯವಾಯಿತು. ಆಗ ಪೂರ್ಣ ಚಂದ್ರ ತೇಜಸ್ವಿ ಯವರ ಪುಸ್ತಕಗಳು ಹಾಗೂ ಹಲವಾರು ಇತರ ಲೇಖಕರ ಪುಸ್ತಕಗಳನ್ನು ಓದಿ ಆನಂದಿಸಿದ್ದೆ. ಕನ್ನಡ ಪುಸ್ತಗಳನ್ನು ಮಾತ್ರವಲ್ಲದೇ ಇಂಗ್ಲಿಷ್ ಹಾಗೂ ಸಂಸ್ಕೃತ ಪುಸ್ತಕಗಳನ್ನು ಓದಲು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ರಜೆಯಲ್ಲಿ ಮನೆಗೆ ಬಂದಾಗ ಅಜ್ಜನ ಸಂಗ್ರಹದಲ್ಲಿದ್ದ ಪುಸ್ತಕಗಳನ್ನೂ ಓದಿ ಮುಗಿಸುತ್ತಿದ್ದೆ.

 ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿದ್ದರಿಂದ ಪಠ್ಯಪುಸ್ತಕಗಳನ್ನು ಬಿಟ್ಟು ಇತರ ಪುಸ್ತಕಗಳ ಓದು ಸ್ವಲ್ಪ ಕಡಿಮೆಯಾಯಿತು. ಆದರೆ ಪದವಿಗೆ ಬಂದಾಗ ನನ್ನ ಓದುವ ಹವ್ಯಾಸ ಇನ್ನಷ್ಟು ಜಾಸ್ತಿಯಾಯಿತು. ಎಸ್.ಡಿ.ಎಂ.ಕಾಲೇಜ್ ನ ವಿಶಾಲವಾದ ಗ್ರಂಥಾಲಯವನ್ನು ನೋಡಿ ಆಶ್ಚರ್ಯ ಪಟ್ಟಿದ್ದೆ. ಅಷ್ಟೊಂದು ಪುಸ್ತಕಗಳು ಬಹಳ ಅಚ್ಚುಕಟ್ಟಾಗಿ ಜೋಡಿಸಿಟ್ಟು ಇ-ಲೈಬ್ರೆರಿಯ ವ್ಯವಸ್ಥೆಯೂ ಇತ್ತು. ಎಷ್ಟೋ ಬಾರಿ ಎಸ್.ಎಲ್.ಭೈರಪ್ಪನವರ ಕಾದಂಬರಿಗಳನ್ನು ರಾತ್ರಿ ಹಗಲಿನ ವ್ಯತ್ಯಾಸ ತಿಳಿಯದವಳಂತೆ ಓದುತ್ತಿದ್ದೆ.

 ಮುಂದೆ ಉದ್ಯೋಗಗಕ್ಕೆ ಸೇರಿದ ಮೇಲೆ ನನ್ನ ಸಂಪಾದನೆಯಿಂದ, ನನಗೆ ಬೇಕಾದ ಪುಸ್ತಕಗಳನ್ನು ನಾನೇ ಖರೀದಿಸಿ ಓದಲು ಶುರುಮಾಡಿದೆ. ನನ್ನ ಗಂಡನಿಗೂ ಓದುವ ಹವ್ಯಾಸವಿರುವುದರಿಂದ ಅವರೂ ನನ್ನ ಓದುವ ಹವ್ಯಾಸವನ್ನು ಪ್ರೋತ್ಸಾಹಿಸುತ್ತಾರೆ. ನನಗೆ, ನಾನು ಅತಿ ವೇಗವಾಗಿ ಪುಸ್ತಕವನ್ನು ಓದುತ್ತೇನೆಂಬ ಅಹಂಕಾರವಿತ್ತು. ಅದಕ್ಕೆ ಪೆಟ್ಟು ಬಿದ್ದದ್ದು ಮದುವೆಯಾದ ಮೇಲೆಯೇ. ಏಕೆಂದರೆ ನನ್ನ ಮಾವನವರು ನನಗಿಂತ ವೇಗವಾಗಿ ನಾನು ಖರೀದಿಸಿದ ಪುಸ್ತಕಗಳನ್ನು ಓದಿ ಚೆನ್ನಾಗಿದೆಯೋ ಇಲ್ಲವೋ ಎಂದು ತಿಳಿಸುತ್ತಾರೆ. ಪುಸ್ತಕಗಳನ್ನು ಓದುವುದು ಮಾತ್ರವಲ್ಲದೇ ಪುಸ್ತಕಗಳ ಸಂಗ್ರಹಣೆಯನ್ನೂ ಈಗ ಮಾಡುತ್ತಿದ್ದೇನೆ.

 ನನಗಂತೂ ಪುಸ್ತಕಗಳನ್ನು ಓದುವುದೆಂದರೆ ಅತ್ಯಂತ ಇಷ್ಟದ ಕೆಲಸ. ಕುಳಿತಲ್ಲಿಯೇ ಜ್ಞಾನ ಸಂಪಾದನೆ ಹಾಗೂ ಮನರಂಜನೆ ಎರಡೂ ಏಕಕಾಲದಲ್ಲಿ ಸಾಧ್ಯವಾಗುವುದು ಪುಸ್ತಕಗಳನ್ನು ಓದುವುದರಿಂದ. ನಮ್ಮದೇ ಒಂದು ಅನೂಹ್ಯ ಹಾಗು ಕಲ್ಪನಾ ಪ್ರಪಂಚದೊಳಗೆ ವಿಹರಿಸಬಹುದು. ಪುಸ್ತಕಗಳನ್ನು ಓದುವುದು ಮಾತ್ರವಲ್ಲದೇ ಅದರಲ್ಲಿರುವ ಒಳ್ಳೆಯ ಅಂಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಈಗಂತೂ
ಇ-ಪುಸ್ತಕಗಳು ಬಂದಿರುವುದರಿಂದ ಎಲ್ಲಿ ಬೇಕಾದರೂ ಯಾರು ಬೇಕಾದರೂ ಪುಸ್ತಕಗಳನ್ನು ಓದಬಹುದಾಗಿದೆ. ಪುಸ್ತಕಗಳಿಗಿಂತ ಒಳ್ಳೆಯ ಸಂಗಾತಿಗಳು ಬೇರಿಲ್ಲ. ಓದುವ ಅಭ್ಯಾಸವಿರುವವರು ಎಂದೂ ಒಂಟಿಯಲ್ಲ ಎಂದು ನನ್ನ ಅಭಿಪ್ರಾಯ.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"