ದೇವತೆಗಳ ದ್ವೀಪದಲ್ಲಿ ಭಾಗ -5
ದೇವತೆಗಳ ದ್ವೀಪದಲ್ಲಿ ಭಾಗ - 4
ಹಿಂದಿನ ರಾತ್ರಿ ಹೋಟೇಲ್ ಅನ್ನು ತಲುಪಿ ಇನ್ನೇನು ಮಲಗುವುದು ಎಂದು ಹೊರಟಾಗಲೇ ನೆನಪಾಗಿದ್ದು ನಾಳೆಯ ತಿರುಗಾಟದ ಸಿದ್ಧತೆ ಮಾಡಿಲ್ಲವೆಂದು. 'ನುಸ ಪೆನಿದ' ಎಂಬ ದ್ವೀಪಕ್ಕೆ ಫೆರ್ರಿಯಲ್ಲಿ ಹೋಗುವುದೆಂದು ನಿರ್ಧಾರವಾಗಿದ್ದರೂ ಫೆರ್ರಿಯನ್ನು ಮೊದಲೇ ಬುಕ್ ಮಾಡಿರಲಿಲ್ಲ. ಹಾಗಾಗಿ ನವೀನ್ ಅಂತರ್ಜಾಲದಲ್ಲಿ ಹುಡುಕಾಡಿ "ಫೆರ್ರಿಯನ್ನು ಮೊದಲೇ ಬುಕ್ ಮಾಡಬೇಕಿತ್ತು. ಬೇರೆ ಯಾವುದಾದರೂ ಆಯ್ಕೆ ಇದೆಯೇ ಎಂದು ಹೋಟೆಲ್ ನವರ ಬಳಿ ಕೇಳೋಣ" ಎಂದು ಸ್ವಾಗತಕಾರರಲ್ಲಿ ವಿಚಾರಿಸಿದಾಗ "ಬೆಳಿಗ್ಗೆ ಬೇಗನೆ ಹೊರಡಿ. ಟಿಕೆಟ್ ಸಿಗಬಹುದು" ಎಂದು ಹೇಳಿದರು. ಹಾಗಾಗಿ ಬೆಳಿಗ್ಗೆ ಬೇಗನೆ ಎದ್ದು ಸಿದ್ಧವಾದೆವು.
ನಾವು ಉಳಿದುಕೊಂಡಿದ್ದ 'ಲ ಗ್ರಾಂದೇ'
ಹೋಟೆಲ್ ನಿಂದ ಹೋಟೆಲ್ ಉತ್ಸವ್ ಗೆ ಹೋಗಲು 'Grab' ಆ್ಯಪ್ (ನಮ್ಮ ಓಲ, ಉಬರ್ ನಂತಹ ಆ್ಯಪ್) ನಲ್ಲಿ
ಕಾರನ್ನು ಬುಕ್ ಮಾಡಿದೆವು. ಕಾರ್ ನಲ್ಲಿ ಡ್ರೈವರ್ ಬಳಿ ಮಾತನಾಡುತ್ತಾ ನಾವು ನುಸ ಪೆನಿದಕ್ಕೆ ಹೋಗುತ್ತಿರುವ ವಿಷಯವನ್ನು ತಿಳಿಸಿದೆವು. ಆಗ ಡ್ರೈವರ್ "ನುಸ ಪೆನಿದಕ್ಕೆ ಹೋಗುವುದಾಗಿದ್ದರೆ ನೀವು ಇನ್ನೂ ಬೇಗ ಹೊರಡಬೇಕಾಗಿತ್ತು. ಈಗಾಗಲೇ ತಡವಾಗಿದೆ. ನನಗೆ ಪರಿಚಯವಿರುವವರೊಬ್ಬರು ಫೆರ್ರಿ ನಿಲ್ದಾಣದಲ್ಲಿ ಕೆಲಸದಲ್ಲಿದ್ದಾರೆ. ಅವರ ಬಳಿ ಹೇಳಿ ಮೊದಲೇ ನಿಮಗೆ ಟಿಕೆಟ್ ಬುಕ್ ಮಾಡಿಸುತ್ತೇನೆ" ಎಂದು ಹೇಳಿ ಫೋನ್ ನಲ್ಲಿ ಮಾತನಾಡತೊಡಗಿದರು. ಇನ್ನೇನು ಹೋಟೆಲ್ ಅನ್ನು ತಲುಪಿದೆವು ಎನ್ನುವಷ್ಟರಲ್ಲಿ ಹಿಂದಿನ ರಾತ್ರಿ ಸುರಿದ ಮಳೆಯಿಂದಾಗಿ ಹೋಟೇಲ್ ನ ಮುಂದೆಯೇ ನೀರು ನಿಂತು ರಸ್ತೆ ದುರಸ್ತಿ ಮಾಡುತ್ತಿದ್ದುದರಿಂದ ಹಾಗೂ ಬೆಳಗ್ಗಿನ ವಾಹನ ದಟ್ಟಣೆಯಿಂದ ನಮ್ಮ ಕಾರು ನಿಂತಲ್ಲಿಂದ ಅಲುಗಾಡಲಿಲ್ಲ. ಒಳಗೆ ಕುಳಿತ ನಮಗೋ ಚಡಪಡಿಕೆ!! ಒಂದೊಂದು ನಿಮಿಷದ ಮಹತ್ವವೂ ಅರಿವಾಗುವ ಸಮಯ!
ಅಂತೂ ಹೋಟೇಲ್ ಅನ್ನು ತಲುಪಿ ತಿಂಡಿಯನ್ನು ಆರ್ಡರ್ ಮಾಡಿದೆವು.
ಹಿಂದಿನ ರಾತ್ರಿ ಹೋಟೇಲ್ 'ಉತ್ಸವ್' ನಲ್ಲಿ ಊಟ ಮಾಡುತ್ತಾ "ನಾಳೆ ಬೆಳಗ್ಗೆ ತಿಂಡಿಗೆ ದೋಸೆ ಸಿಗಬಹುದೇ?" ಎಂದು ವಿಚಾರಿಸಿದಾಗ "ಖಂಡಿತ ನಿಮಗೆ ತಯಾರಿಸಿ ಕೊಡುತ್ತೇವೆ. ಇಲ್ಲಿ ಡೆಲ್ಲಿಯಿಂದ ಬಂದಿರುವ ಬಾಣಸಿಗರು ಇರುವ ಕಾರಣ ಸಾಂಪ್ರದಾಯಿಕವಾದ ಭಾರತೀಯ ಶೈಲಿಯ ಆಹಾರವನ್ನು ತಯಾರಿಸುತ್ತೇವೆ" ಎಂದು ಆಗಷ್ಟೇ ಬಂದು ಹೋಟೇಲ್ ನ ಮೇಲ್ವಿಚಾರಣೆ ನಡೆಸುತ್ತಿದ್ದ ಹೋಟೆಲ್ ನ ಮಾಲಿಕರು ಹೇಳಿದ್ದರು. ಹಾಗಾಗಿ ಬೆಳಗಿನ ತಿಂಡಿಗೆ ಮಸಾಲೆ ದೋಸೆಯನ್ನು ಆರ್ಡರ್ ಮಾಡಿದೆವು. ನಮ್ಮ ಡ್ರೈವರ್ ಗೋ ನಮ್ಮನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತೇನೋ ಇಲ್ಲವೋ ಎಂಬ ಆತಂಕ. ಹಾಗಾಗಿ ಎರಡು ಮೂರು ಬಾರಿ ಹೋಟೇಲ್ ನ ಸಿಬ್ಬಂದಿಗಳನ್ನು ಬೇಗ ತಿಂಡಿ ಸಿದ್ಧ ಮಾಡಿಕೊಡುವಂತೆ ಹಾಗೂ ನಮ್ಮನ್ನು ಬೇಗ ತಿಂಡಿ ತಿನ್ನುವಂತೆ ಎಚ್ಚರಿಸಿದರು. ಅಂತೂ ಇಂತೂ ತಿಂಡಿ ತಿಂದು, ದ್ವೀಪಕ್ಕೆ ಹೋಗುವುದರಿಂದ ಅಲ್ಲಿ ಸಸ್ಯಾಹಾರಿ ಊಟ ಸಿಗಲಿಕ್ಕಿಲ್ಲವೆಂದು ಇಲ್ಲಿಂದಲೇ ಮಧ್ಯಾಹ್ನದ ಊಟವನ್ನು ಪಾರ್ಸೆಲ್ ತೆಗೆದುಕೊಂಡೆವು.
ನಾವು ಮುಕ್ಕಾಲು ಗಂಟೆಯಲ್ಲಿ ಫೆರ್ರಿ ನಿಲ್ದಾಣವನ್ನು ತಲುಪಬೇಕಿತ್ತು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ನಮ್ಮ ಡ್ರೈವರ್ ನಮ್ಮನ್ನು ಅಲ್ಲಿಗೆ ತಲುಪಿಸಲು ಪ್ರಯತ್ನಿಸಿದರು. ಸಮಯಕ್ಕೆ ಸರಿಯಾಗಿ ತಲುಪುತ್ತೇವೋ ಇಲ್ಲವೋ ಎಂಬ ಆತಂಕ ಒಂದೆಡೆಯಾದರೆ, ತಲುಪಲಿಲ್ಲವೆಂದರೆ ಮುಂದೇನು ಮಾಡುವುದು ಎಂಬ ಯೋಚನೆ. ಹೀಗೆಯೇ ಸಾಗುತ್ತಿರಬೇಕಾದರೆ ಸೇತುವೆಯ ಮೇಲೆ ನಮ್ಮ ಕಾರ್ ಚಲಿಸತೊಡಗಿತು. ಈ ಸೇತುವೆ ಎಷ್ಟು ಉದ್ದವಾಗಿದೆಯೆಂದರೆ ಎಷ್ಟು ಸಾಗಿದರೂ ಮುಗಿಯುತ್ತಿಲ್ಲ!! ಮತ್ತೆ ನೋಡಿದರೆ ಬಾಲಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ವಿಮಾನದಲ್ಲಿ ನಮಗೆ ಕಂಡಿದ್ದ ಸೇತುವೆ ಇದುವೆ! ಇದು ಬಾಲಿಯ ಅತ್ಯಂತ ಉದ್ದದ ಸೇತುವೆ. ಸುಮಾರು 8.3km ನಷ್ಟು ಉದ್ದವಿರುವ ಈ ಸೇತುವೆ ಡೆನ್ಪಸಾರ್, ದಕ್ಷಿಣ ಕುಟ, ಬಡುಂಗ್, ನುಸ ದುವ ಹಾಗೂ ನಗುವ ರೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಾಲಿ ವಿಮಾನ ನಿಲ್ದಾಣ) ವನ್ನು ಸಂಪರ್ಕಿಸುತ್ತದೆ. ಇದನ್ನು 'ಬಾಲಿ ಮಂದಾರ ಟೋಲ್ ರೋಡ್' ಎಂದು ಕೂಡ ಕರೆಯುತ್ತಾರೆ. ಸುತ್ತಲೂ ಸಮುದ್ರದ ಹಿನ್ನೀರು, ವೇಗವಾಗಿ ಭರ್ರನೆ ಸಾಗುವ ಕಾರ್ ಗಳು, ಅಲ್ಲಲ್ಲಿ ಸಿಗುವ ಟೋಲ್ ಪಾವತಿಸುವ ಕೇಂದ್ರದಲ್ಲಿ ತನ್ನ ಬಳಿ ಇರುವ ಕಾರ್ಡ್ ನ ಮೂಲಕ ಟೋಲ್ ಪಾವತಿಸಿ ಮುಂದೆ ಸಾಗುತ್ತಿದ್ದರು ನಮ್ಮ ಡ್ರೈವರ್. ನಾವು ಫೆರ್ರಿ ನಿಲ್ದಾಣವನ್ನು ತಲುಪುವ ಮೊದಲೇ ನಮ್ಮ ಡ್ರೈವರ್ ಅಲ್ಲಿ ಕೆಲಸ ಮಾಡುತ್ತಿರುವ, ತಮ್ಮ ಪರಿಚಯದವರ ಬಳಿ ಮೊದಲೇ ನಾವು ಬರುತ್ತಿರುವ ಬಗ್ಗೆ ಹೇಳಿ ಫೆರ್ರಿಯಲ್ಲಿ ಸೀಟ್ ಕಾಯ್ದಿರಿಸಿದರು. ಫೆರ್ರಿ ನಿಲ್ದಾಣದ ಬಳಿಗೆ ಕಾರ್ ತೆಗೆದುಕೊಂಡು ಹೋಗಲು ಇನ್ನೂ ಸುತ್ತಿ ಬಳಸಿ ಹೋಗಬೇಕಿದ್ದರಿಂದ ಹೆದ್ದಾರಿಯ ಬದಿಯಲ್ಲಿಯೇ ಕಾರನ್ನು ನಿಲ್ಲಿಸಿ ಹೆದ್ದಾರಿಯನ್ನು ದಾಟಿಸಿ ನಮ್ಮನ್ನು ಅಲ್ಲಿಗೆ ಕರೆದೊಯ್ದರು. ಆಗ ಡ್ರೈವರ್ ನ ಪರಿಚಯದ ಹುಡುಗಿಯೂ ಬಂದು ನಮ್ಮ ಜೊತೆ ಸೇರಿಕೊಂಡು ಫೆರ್ರಿ ಬೂತ್ ಗೆ ಕರೆದುಕೊಂಡು ಹೋದಳು. ಅಲ್ಲಿ ನಮ್ಮ ಕೈಗಳಿಗೆ ಟ್ಯಾಗ್ ಕಟ್ಟಿದರು. "ಅಬ್ಬ!! ಫೆರ್ರಿ ಹೊರಡಲಿಲ್ಲ. ಸಮಯಕ್ಕೆ ಸರಿಯಾಗಿ ನಾವು ತಲಪಿದೆವು" ಎಂದು ನಾವು ಮಾತನಾಡಿಕೊಳ್ಳುವಷ್ಟರಲ್ಲಿ ಆ ಹುಡುಗಿ ನವೀನ್ ನನ್ನು ಕರೆದುಕೊಂಡು ಮುಂದೆ ಎಲ್ಲೋ ಹೋದಳು. ನಾವು ಬೂತ್ ನಲ್ಲಿ ಕಾಯುತ್ತಾ ಕುಳಿತೆವು. ಸ್ವಲ್ಪ ಹೊತ್ತಿನಲ್ಲಿ ಬೂತ್ ನಲ್ಲಿದ್ದ ಸಿಬ್ಬಂದಿ ಅವರ ಭಾಷೆಯಲ್ಲಿ ಅವರೊಳಗೆ ಮಾತನಾಡುತ್ತಾ ನಮ್ಮ ಕೈಗೆ ಕಟ್ಟಿದ್ದ ಟ್ಯಾಗ್ ಅನ್ನು ಕತ್ತರಿಸಿದರು. ಅದೇ ಸಮಯಕ್ಕೆ ನವೀನ್ ಕೂಡ ಹಿಂತಿರುಗಿದರು. ಅಷ್ಟರಲ್ಲಾಗಲೇ ನುಸಾ ಪೆನಿದಕ್ಕೆ ಹೋಗುವ ಫೆರ್ರಿ ಹೊರಟಾಗಿತ್ತು. ನಮಗೆ ಫೆರ್ರಿ ತಪ್ಪಿ ಹೋಗಿತ್ತು. ಮತ್ತೆ ನೋಡಿದರೆ ನಮ್ಮ ಕೈಗೆ ಟ್ಯಾಗ್ ಅನ್ನು ಕಟ್ಟಿ, ನಮ್ಮ ಬಳಿ ಏನನ್ನೂ ಹೇಳದೆ ದುಡ್ಡು ಪಾವತಿಸಲು ಬೇಕಾದ ಹಣವನ್ನು ಪಡೆಯಲು ಈ ಹುಡುಗಿ ಎಟಿಎಂ ಹುಡುಕಲು ನವೀನ್ ನ್ನು ಕರೆದುಕೊಂಡು ಹೋಗಿದ್ದಾಳೆ. "ನಾನು ಕಾರ್ಡ್ ನಲ್ಲೇ ದುಡ್ಡನ್ನು ಪಾವತಿಸುತ್ತಿದ್ದೆನಲ್ಲ? ಯಾಕೆ ನನಗೆ ಹೇಳದೇ ಅಲ್ಲಿ ಇಲ್ಲಿ ಸುತ್ತಾಡಿಸಿದಿರಿ. ಈಗ ನೋಡಿ ಫೆರ್ರಿ ಕೂಡಾ ತಪ್ಪಿ ಹೋಯಿತು" ಎಂದು ನವೀನ್ ತಮ್ಮ ಅಸಮಾಧಾನವನ್ನು ಹೊರಹಾಕಿದಾಗ "ಕ್ಷಮಿಸಿ, ಒತ್ತಡದಲ್ಲಿ ಏನು ಮಾಡಬೇಕೆಂದೇ ನನಗೆ ತೋಚಲಿಲ್ಲ" ಎಂದಳು. ಅಂತೂ ಅವರ ಭಾಷೆ ನಮಗೆ ಅರ್ಥವಾಗುತ್ತಿರಲ್ಲಿ. ನಮ್ಮ ಇಂಗ್ಲಿಷ್ ಅವರಿಗೆ ತಿಳಿಯುತ್ತಿರಲಿಲ್ಲ. ಅಷ್ಟರಲ್ಲಿ ನಮ್ಮಂತೆಯೇ ನುಸ ಪೆನಿದಕ್ಕೆ ಹೋಗುವ ಫೆರ್ರಿಯನ್ನು ತಪ್ಪಿಸಿಕೊಂಡ ಇಂಗ್ಲಂಡ್ ವ್ಯಕ್ತಿಯೊಬ್ಬರು ಬಂದು, ನುಸ ಪೆನಿದಕ್ಕೆ ಹೋಗುವ ಬೇರೆ ಕಂಪನಿಯ ಫೆರ್ರಿಗಳಿವೆಯೆಂದೂ, ಆದರೆ ಅವುಗಳಿಗೆ ಗೂಗಲ್ ನಲ್ಲಿ ಒಳ್ಳೆಯ ಅಭಿಪ್ರಾಯಗಳಿಲ್ಲವೆಂದೂ ತಿಳಿಸಿದರು. ಇಷ್ಟಾದರೂ ಸಹ ನಮ್ಮ ಡ್ರೈವರ್ ಮತ್ತು ಈ ಹುಡುಗಿ ನಮ್ಮನ್ನು ಫೆರ್ರಿಯಲ್ಲಿ ಕಳುಹಿಸಿಯೇ ಸಿದ್ಧ ಎಂದು ಪಣ ತೊಟ್ಟವರಂತೆ ಇನ್ನೊಂದು ಬೂತ್ ಗೆ ಕರೆದುಕೊಂಡು ಹೋದರು. ಅಲ್ಲಿ ಏನು ಮಾತನಾಡಿದರೋ ಗೊತ್ತಿಲ್ಲ ಅಂತೂ ನಮಗೆ ಇನ್ನರ್ಧ ಗಂಟೆಯಲ್ಲಿ ನುಸ ಪೆನಿದಕ್ಕೆ ಹೊರಡುವ ಫೆರ್ರಿ ಇದೆ ಎಂದು ಹೇಳಿ ಟಿಕೆಟ್ ಬುಕ್ ಮಾಡಿದರು. "ಸಾಯಂಕಾಲ 4 ಗಂಟೆಗೆ ಹಿಂತಿರುಗಿ ಬರುವ ಟಿಕೆಟ್ ಸಹ ಜೊತೆಗಿದೆ" ಎಂದರು ಟಿಕೆಟ್ ಅನ್ನು ನಮ್ಮ ಕೈಗಿಡುತ್ತಾ. "ನಮ್ಮನ್ನು ಕೇಳದೆಯೇ ಯಾಕೆ 4 ಗಂಟೆಗೆ ಹಿಂತಿರುಗಿ ಬರುವ ಟಿಕೆಟ್ ಬುಕ್ ಮಾಡಿದಿರಿ? ಕನಿಷ್ಟ ಪಕ್ಷ 6 ಗಂಟೆಯ ಫೆರ್ರಿಯನ್ನಾದರೂ ಬುಕ್ ಮಾಡಬೇಕಿತ್ತು" ಎಂದು ನವೀನ್ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಅದಕ್ಕೂ ಅವರ ಬಳಿ ಉತ್ತರವಿತ್ತು. "ಸಾಯಂಕಾಲ 4 ಗಂಟೆಯ ನಂತರ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಫೆರ್ರಿಯಲ್ಲಿ ಪ್ರಯಾಣ ಮಾಡುವುದು ಅಪಾಯ" ಎಂದರು. "ಸರಿ ಇನ್ನೇನು ಮಾಡುವುದು... ಆದರೂ ಸಾಯಂಕಾಲ 4 ಗಂಟೆ ಎಂದರೆ ಬೇಗನೆ ಹೊರಡಬೇಕಾಗುತ್ತದೆ" ಎಂದು ಗೊಣಗಿಕೊಳ್ಳುತ್ತಾ, ಬಹಳ ದೊಡ್ಡ ತಪ್ಪೊಂದನ್ನು ಮಾಡುತ್ತಿದ್ದೇವೆಂಬ ಅರಿವಿಲ್ಲದೇ ಯಾರೊಬ್ಬರೂ ಸಹ ಒಂದೇ ಒಂದು ಬಾರಿ ಕೂಡ ಟಿಕೆಟ್ ನತ್ತ ಕಣ್ಣು ಹಾಯಿಸದೆ ಟಿಕೆಟ್ ಅನ್ನು ಬ್ಯಾಗ್ ನಲ್ಲಿಟ್ಟುಕೊಂಡೆವು.
ನಮ್ಮ ಡ್ರೈವರ್ ಗೆ ಧನ್ಯವಾದಗಳನ್ನು ತಿಳಿಸಿ ಫೆರ್ರಿ ನಿಲ್ದಾಣಕ್ಕೆ ಹೋದೆವು. ಫೆರ್ರಿ ನಿಲ್ದಾಣ ಎಷ್ಟು ಸುಸಜ್ಜಿತವಾಗಿತ್ತೆಂದರೆ ಹೀಗಿರಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಸಮುದ್ರದ ದಡದಲ್ಲಿ ವಿವಿಧ ದ್ವೀಪಗಳಿಗೆ ಹೋಗುವ ವಿವಿಧ ಫೆರ್ರಿ ನಿಲ್ಲಲು ಸ್ಥಳಾವಕಾಶ, ನಿಲ್ದಾಣದಿಂದ ಫೆರ್ರಿ ನಿಂತಿರುವ ಜಾಗಕ್ಕೆ ಪ್ರವಾಸಿಗರಿಗೆ ನಡೆದು ಹೋಗಲು ಮಾಡಿರುವ ವ್ಯವಸ್ಥೆ, ಒಂದು ಹೆಜ್ಜೆಯೂ ಸಹ ನೀರಿನಲ್ಲಿ ಇಡಬೇಕಾಗಿರಲಿಲ್ಲ ಅಷ್ಟು ವ್ಯವಸ್ಥಿತವಾಗಿತ್ತು! ಅಂತೂ ನಿಗದಿತ ಸಮಯಕ್ಕೆ ಫೆರ್ರಿ ಹೊರಟಿತು. ಫೆರ್ರಿ ಜನರಿಂದ ತುಂಬಿದ್ದರಿಂದ ಸೀಟ್ ಸಿಕ್ಕಿದ ಕಡೆ ಕುಳಿತುಕೊಂಡೆವು. ಸಮುದ್ರದ ಅಲೆಗೆ ತಕ್ಕಂತೆ ಫೆರ್ರಿಯೂ ಸಹ ಓಲಾಡುತ್ತಾ ಮುಂದೆ ಮುಂದೆ ಸಾಗಿದಂತೆ ಅಲೆಯ ಅಬ್ಬರಕ್ಕೆ ತಕ್ಕಂತೆ ಫೆರ್ರಿಯ ವೇಗವೂ ಜಾಸ್ತಿಯಾಗುತ್ತಾ ಅಲೆಗಳನ್ನು ಸೀಳಿ ಹೋಗುವಂತೆ ಭಾಸವಾಗುತ್ತಿತ್ತು. ಫೆರ್ರಿ ಹಾಗೂ ಅಲೆಗಳಿಗೆ ಸ್ಪರ್ಧೆಯೇ ಏರ್ಪಟ್ಟಿತ್ತು. ಪ್ರತಿಯೊಂದು ತೆರೆ ಬಂದಾಗಲೂ ಫೆರ್ರಿ ಎಡಕ್ಕೂ ಬಲಕ್ಕೂ ವಾಲಿದಾಗ ಪ್ರಯಾಣಿಕರ ಬಾಯಿಯಿಂದ ಹೋ ಎಂಬ ಉದ್ಗಾರ! ಫೆರ್ರಿಯ ವೇಗ ಜಾಸ್ತಿಯಾದಂತೆ ರಭಸದಿಂದ ಅಪ್ಪಳಿಸುವ ತೆರೆಗಳು ಫೆರ್ರಿಯ ಕಿಟಕಿಯ ಮೂಲಕ ಒಳಗೆ ಸಿಡಿದು ಕಿಟಕಿಯ ಬಳಿ ಕುಳಿತವರ ಮೇಲೆ ಉಪ್ಪು ನೀರಿನ ಸಿಂಚನ! ಅಪಾಯದ ಅರಿವಿರಿದ ಮಕ್ಕಳಿಗಂತೂ ರೋಮಾಂಚನ! ಅಪಾಯದ ಅರಿವಿರುವ ದೊಡ್ಡವರಿಗೆ ಸ್ವಲ್ಪ ಆತಂಕ. ನೀಲಿ ಬಣ್ಣ ಬಿಟ್ಟು ಹಸಿರು ಬಣ್ಣ ಕಾಣಿಸುತ್ತಿದೆಯೋ? ದ್ವೀಪವನ್ನು ತಲುಪಿದೆವೋ? ಎಂದು ಸಣ್ಣ ಕಿಟಕಿಯಲ್ಲಿ ನೋಡಿದರೆ ಹೊರಗೆ ನೀಲ ಸಮುದ್ರದಲ್ಲಿ ಅಲೆಗಳ ಅಬ್ಬರ! ಭರ್ತಿ ಮುಕ್ಕಾಲು ಗಂಟೆಯ ಪ್ರಯಾಣದ ಕೊನೆಗೆ ನನ್ನ ಪಕ್ಕ ಕುಳಿತ ಸ್ಥಳೀಯ ಹುಡುಗಿ ನನ್ನನ್ನು ಮಾತಿಗೆಳೆದಳು. ಉಬುಡುವಿನ ತನ್ನ ಮನೆಯಿಂದ ಇಲ್ಲಿ ಬಂದು ದ್ವೀಪದಲ್ಲಿರುವ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿರುವ ಈ ಹುಡುಗಿ, ಎರಡು ವಾರಕ್ಕೊಮ್ಮೆ ದ್ವೀಪದಿಂದ ಉಬುಡುವಿಗೆ ಪ್ರಯಾಣ ಮಾಡಿ ದ್ವೀಪಕ್ಕೆ ವಾಪಾಸಾಗುತ್ತಿದ್ದಳು. "ಯಾವ ದೇಶದಿಂದ ಬಂದಿದ್ದೀರಿ?" ಎಂದು ಕೇಳಿದಾಗ "ಭಾರತ" ಎಂದೆ. ತತ್ ಕ್ಷಣ ಅವಳು ಕೇಳಿದ್ದು ನಮ್ಮ ಸಾಂಪ್ರದಾಯಿಕ ಉಡುಪು ಸೀರೆಯ ಬಗ್ಗೆ😃 ನನ್ನ ಸೀರೆಯ ವಿವರಣೆಯನ್ನು ಕೇಳಿದ ಅವಳು ಜೀವನದಲ್ಲಿ ಒಮ್ಮೆ ಭಾರತಕ್ಕೆ ಭೇಟಿ ನೀಡಬೇಕೆಂಬ ಆಸೆ ಇದೆ ಎಂದಳು. ಅವಳ ಆಸೆ ಆದಷ್ಟು ಬೇಗ ಈಡೇರಲಿ ಎಂದು ಹಾರೈಸಿದೆ. ಅಷ್ಟರಲ್ಲಿ ದ್ವೀಪವನ್ನು ತಲುಪಿದೆವು. ಮೊಳಕಾಲಿನವರೆಗೆ ಬರುತ್ತಿದ್ದ ನೀರಿನಲ್ಲಿ ನಡೆಯುತ್ತಾ ಮರಳಿನ ಮೇಲೆ ಹೆಜ್ಜೆ ಊರಿದೆವೋ ಇಲ್ಲವೋ ಒಬ್ಬ ಟ್ಯಾಕ್ಸಿ ಡ್ರೈವರ್ ನಮ್ಮ ಬೆನ್ನು ಬೀಳತೊಡಗಿದರು. "ನಾನು ನಿಮ್ಮನ್ನು ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇನೆ. ಬನ್ನಿ" ಎಂದು ಬೆಂಬಿಡದೆ ಕಾಡತೊಡಗಿದರು. ಒಂದು ಕಡೆ ನಿಂತು vanderlog ಆ್ಯಪ್ ನಲ್ಲಿ ಪಟ್ಟಿ ಮಾಡಿಟ್ಟಿದ್ದ
ನುಸ ಪೆನಿದದಲ್ಲಿ ನೋಡಬೇಕಾದ ಸ್ಥಳಗಳ ಹೆಸರುಗಳನ್ನು ಹೇಳಿದ್ದೇ ತಡ "ಈ ಸ್ಥಳಗಳಿರುವುದು ನುಸ ಪೆನಿದದಲ್ಲಿ. ಇಲ್ಲಿ ಅಲ್ಲ" ಎಂದರು. "ಇಲ್ಲಿ ಅಲ್ಲ" ಎಂದು ಹೇಳಿದ ಕೊನೆ ಸಾಲು ನಮ್ಮ ತಲೆಯೊಳಗೆ ಹೋಗದೇ ಮತ್ತೊಮ್ಮೆ "ನಮಗೆ ಹೋಗಬೇಕಾಗಿರುವುದು ನುಸ ಪೆನಿದಕ್ಕೆ" ಎಂದು ವಿವರಿಸಿದೆವು. "ಈ ದ್ವೀಪದ ಹೆಸರು 'ನುಸ ಲೆಂಬೋಂಗನ್'. ಇದು ನುಸ ಪೆನಿದ ಅಲ್ಲ. ಇಲ್ಲಿಂದ ನುಸ ಪೆನಿದಕ್ಕೆ ಇನ್ನೊಂದು ಫೆರ್ರಿಯಲ್ಲಿ ಸಮುದ್ರದ ಮೂಲಕ ಹೋಗಲು ಮುಕ್ಕಾಲು ಗಂಟೆ ಬೇಕು" ಎಂದಾಗ "ಹ್ಹಾ"!!🙄 ಎಂದ ತೆರೆದ ಬಾಯಿ ಮುಚ್ಚಲು ಹಲವು ನಿಮಿಷಗಳೇ ಬೇಕಾಗಿದ್ದವು. ಆಗಲೇ ನಾವು ಮಾಡಿದ ತಪ್ಪಿನ ಅರಿವಾಗಿದ್ದು. ದಡಬಡಿಸಿ ಬ್ಯಾಗ್ ನಿಂದ ಟಿಕೆಟ್ ತೆರೆದು ನೋಡಿದಾಗ, ಹೌದು ಡ್ರೈವರ್ ಹೇಳುತ್ತಿರುವುದು ಸತ್ಯ ಎಂದು ಮನದಟ್ಟಾಯಿತು. "ಛೇ! ಕಾರ್ ನ ಡ್ರೈವರ್ ಅಷ್ಟು ಚೆನ್ನಾಗಿ ಮಾತನಾಡಿ ಮೋಸ ಮಾಡಿಬಿಟ್ಟರಲ್ಲ" ಎಂದು ಒಬ್ಬರು ಲೊಚಗುಟ್ಟಿದರೆ, "ಟಿಕೇಟ್ ಅನ್ನು ನೋಡಬೇಕಿತ್ತು. ಟಿಕೆಟ್ ಅನ್ನು ನೋಡದೇ ಇದ್ದದ್ದು ನಮ್ಮ ತಪ್ಪು" ಎಂದರು ಒಬ್ಬರು. "ನಾವು ಟಿಕೆಟ್ ಕೊಡಿಸುತ್ತಿರುವುದು ನುಸ ಲೆಂಬೋಂಗನ್ ಗೆ, ನುಸ ಪೆನಿದಕ್ಕೆ ಅಲ್ಲ ಎಂದು ಹೇಳಿದ್ದರೆ ಕನಿಷ್ಟ ಪಕ್ಷ ನಾವು ಅಂತರ್ಜಾಲದಲ್ಲಿ ಹುಡುಕಾಡಿ ಬೇರೆ ಯಾವುದಾದರೂ ದ್ವೀಪವನ್ನು ಆಯ್ದುಕೊಳ್ಳಬಹುದಿತ್ತು" ಎಂದು ಹಲುಬಿದರು ಮತ್ತೊಬ್ಬರು. ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ ಮಗಳು "ವಾಂತಿ ಬರುವಂತಾಗುತ್ತಿದೆ" ಎಂದು ಅಳತೊಡಗಿದಳು. ಸಮುದ್ರದ ಅಲೆಗಳ ಜೊತೆ ಫೆರ್ರಿಯ ಓಲಾಟಕ್ಕೆ ಆಗಿರಬಹುದು ನನಗೂ ಹೊಟ್ಟೆ ತೊಳಸಿದಂತಾಗುತ್ತಿತ್ತು. ಆದರೆ ಇದನ್ನೆಲ್ಲಾ ಯೋಚನೆ ಮಾಡುತ್ತಾ ಕೂರಲು ಸಮಯವಿರಲಿಲ್ಲ. ಮುಂದೇನು ಮಾಡುವುದು? ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮುಖದಲ್ಲಿ. ಈ ದ್ವೀಪ ನುಸ ಲೆಂಬೋಂಗನ್ ನಿಂದ ನುಸ ಪೆನಿದ ದ್ವೀಪಕ್ಕೆ ಫೆರ್ರಿಯ ಮೂಲಕ ಹೋಗಲು ಮುಕ್ಕಾಲು ಗಂಟೆ. ಅಲ್ಲಿಂದ ನಾವು ನೋಡುವ ಸ್ಥಳಗಳಿಗೆ ಹೋಗಲು ಕನಿಷ್ಟ ಪಕ್ಷ ಮುಕ್ಕಾಲು ಗಂಟೆ. ವಾಪಾಸು 4 ಗಂಟೆಗೆ ಇಲ್ಲಿಗೆ ಹಿಂತಿರುಗಿ ಬರಬೇಕೆಂದರೆ 3 ಗಂಟೆಗೇ ಅಲ್ಲಿಂದ ಹೊರಡಬೇಕು. ಈಗಾಗಲೇ ಗಂಟೆ 11. ಹೀಗೇ ಅಳೆದು ತೂಗಿ ಯೋಚನೆ ಮಾಡಿದಾಗ, ಈ ದ್ವೀಪದಲ್ಲಿ ನೋಡುವ ಸ್ಥಳಗಳಿಗೆ ಭೇಟಿ ಕೊಡೋಣ ಎಂದು ಎಲ್ಲರೂ ಸೇರಿ ನಿರ್ಧರಿಸಿದೆವು. "ಆದರೆ ಯಾಕೋ ಈ ಡ್ರೈವರ್ ಬೇಡ. ನೋಡಲು ಮೋಸ ಮಾಡುವರಂತೆ ಕಾಣುತ್ತಾರೆ. ನಾವು ಅಧಿಕೃತವಾಗಿ ನೊಂದಣಿಯಾದ ಟಾಕ್ಸಿ ಬೂತ್ ಗೆ ಹೋಗಿ ಅಲ್ಲಿ ಬೇರೆ ಟ್ಯಾಕ್ಸಿ ಡ್ರೈವರ್ ಅನ್ನು ಆರಿಸೋಣ" ಎಂದು ನವೀನ್ ಬೂತ್ ಗೆ ಹೋದರೆ ಅಲ್ಲಿಯೂ ಈ ಚಾಲಕ ಹಿಂಬಾಲಿಸಬೇಕೆ!! "ಇವರು ನನ್ನ ಗ್ರಾಹಕರು. ನನ್ನ ಬಳಿ ಒಪ್ಪಿ ಈಗ ನಿಮ್ಮ ಬಳಿ ಬಂದಿದ್ದಾರೆ" ಎಂದು ದೂರತೊಡಗಿದರು. "ಸರಿ ಯಾಕೋ ಇವತ್ತು ನಮ್ಮ ಗ್ರಹಚಾರ ನೆಟ್ಟಗಿಲ್ಲ" ಎಂದು ಮನದಲ್ಲೇ ಶಪಿಸುತ್ತಾ ಚಾಲಕನನ್ನು ಅನುಸರಿಸಿದೆವು.
ಅವರು ಮೊದಲು ನಮ್ಮನ್ನು ಕರೆದುಕೊಂಡು ಹೋಗಿದ್ದು ಬೋಟಿಂಗ್ ಮಾಡುವ ಸ್ಥಳಕ್ಕೆ. ಸಮುದ್ರದ ಹಿನ್ನೀರು ನಿಂತ ಸುಮಾರು ಎರಡು ಕಿಲೋಮೀಟರ್ ಜಾಗದಲ್ಲಿ ಬೋಟಿಂಗ್ ಮಾಡಿದರು. ನನಗೋ ಮೊದಲೇ ನೀರೆಂದರೆ ಭಯ. ಅದರಲ್ಲೂ ಜೀವರಕ್ಷಕ ಸಾಧನಗಳಿಲ್ಲದೇ ಹೇಗೆ ಬೋಟ್ ನಲ್ಲಿ ಕುಳಿತುಕೊಂಡೆನೋ ಗೊತ್ತಿಲ್ಲ. ಹಿನ್ನೀರಿನಲ್ಲಿ ಬೆಳೆದ ದೊಡ್ಡ ದೊಡ್ಡ ಮರದ ಬೇರುಗಳು ಒಂದಕ್ಕೊಂದು ಬೆಸೆದು ಭಯವನ್ನೇ ಹುಟ್ಟಿಸುತ್ತಿತ್ತು. ಹಿನ್ನೀರಿನಲ್ಲಿ ಮಾತ್ರವಲ್ಲದೇ ಹೆಚ್ಚು ಆಳವಿಲ್ಲದ ಸಮುದ್ರದ ದಡದಲ್ಲಿ ಸಹ ಬೋಟ್ ಅನ್ನು ನಡೆಸಿದರು. ಅಂತೂ ಇಂತೂ ಬೋಟಿಂಗ್ ಮುಗಿಸಿ ಬಂದ ನಮ್ಮನ್ನು ಯೆಲ್ಲೋ ಬೀಚ್ ಗೆ ಕರೆದುಕೊಂಡು ಹೋದರು. ಅದು ಅಂತಹ ವಿಶೇಷವಾದ ಬೀಚ್ ಎಂದು ನಮಗೆ ಅನಿಸಲಿಲ್ಲ. ಹಾಗಾಗಿ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಇನ್ನೊಂದು ಬೀಚ್ ಗೆ ಹೋದೆವು.
ನಾವು ಜೀಪಿನಲ್ಲಿ ಸಾಗುತ್ತಿದ್ದಾಗಲೇ ಸಮುದ್ರ ತೀರ ಕಾಣಿಸುತ್ತಿದ್ದು, ತೆಂಗಿನ ಮರಗಳು, ಸಮುದ್ರ ತೀರ, ದಡದಲ್ಲಿ ನಿಂತಿದ್ದ ಬೋಟ್ ಗಳು ಎಲ್ಲವೂ ಒಟ್ಟಾಗಿ ಒಂದು ಸಿನಿಮಾದ ದೃಶ್ಯದಂತೆ ಭಾಸವಾಗುತ್ತಿತ್ತು. ನೀರಿನಲ್ಲಿ ಆಡಲು ಸೂಕ್ತವಾದ ಸ್ಥಳವನ್ನು ತೋರಿಸಿದರು. ಅತ್ತೆ ಮಾವ ಸಮುದ್ರ ಕಾಣುವಂತಿದ್ದ ಹೋಟೆಲ್ ನಲ್ಲಿ ಕುಳಿತರು. ನಾವೆಲ್ಲರೂ ನೀರಿಗಿಳಿದೆವು. ದಿನ ನಿತ್ಯದ ಜಂಜಡಗಳನ್ನು ಮರೆತು ಅಕ್ಷರಶಃ ಮಕ್ಕಳಂತೆ ನೀರಿನಲ್ಲಿ ಆಟವಾಡಿದೆವು. ಮಧ್ಯಾಹ್ನದ ಸೂರ್ಯ ಪ್ರಖರವಾಗಿದ್ದರೂ ನೀರಿನಲ್ಲಿ ಆಟವಾಡಲು ಅದು ಅಡ್ಡಿಯಾಗಲಿಲ್ಲ. ಎಲ್ಲರೂ ನೀರಿನಲ್ಲಿ ಆಟವಾಡಿದ್ದರಿಂದ, ಯಾರು ಕೂಡ ಮೊಬೈಲ್ ತೆಗೆದುಕೊಂಡು ಹೋಗದ್ದರಿಂದ ಇಲ್ಲಿಯ ಒಂದೇ ಒಂದು ಫೋಟೋವನ್ನೂ ತೆಗೆದುಕೊಳ್ಳಲಾಗಿಲ್ಲ. ಅಂತೂ ಮನಸೋ ಇಚ್ಛೆ ನೀರಿನಲ್ಲಿ ಆಟವಾಡಿ ಜೀಪಿನಲ್ಲಿ ಫೆರ್ರಿ ಬರುವ ಸ್ಥಳಕ್ಕೆ ಹಿಂತಿರುಗಿದೆವು.
ಇಷ್ಟು ಹೊತ್ತಿಗಾಗಲೇ ಚಾಲಕನ ಬಗೆಗಿದ್ದ ನಮ್ಮ ತಪ್ಪು ಭಾವನೆ ಮಾಯವಾಗಿತ್ತು. ಎಲ್ಲಿಯೂ ಕೂಡ ಮೋಸ ಮಾಡದೆ, ನಮ್ಮ ಆವಶ್ಯಕತೆಗಳನ್ನು ಮನಗಂಡು ಅದಕ್ಕೆ ಪೂರಕವಾಗಿ ವರ್ತಿಸಿದ ರೀತಿ, ಅವರ ವಿನಯದ ವರ್ತನೆ ನಮಗೆಲ್ಲರಿಗೂ ಅವರ ಮೇಲೆ ಗೌರವದ ಭಾವನೆಯನ್ನು ಮೂಡಿಸಿತು. ದಿನದ ಆರಂಭದಲ್ಲಿ ಅವರ ಮೇಲೆ ಮೂಡಿದ್ದ ತಪ್ಪು ಕಲ್ಪನೆಯ ಬಗ್ಗೆ ನಮಗೇ ನಾಚಿಕೆಯಾಯಿತು. ವ್ಯಕ್ತಿಯೊಬ್ಬನನ್ನು ಸಂಪೂರ್ಣವಾಗಿ ತಿಳಿಯದೆ, ನೋಡಿದ ಕೂಡಲೇ ಪೂರ್ವಾಗ್ರಹವಾಗಿ ಆಲೋಚಿಸುವುದು, ಅವರ ಸ್ವಭಾವವನ್ನು ನಿರ್ಣಯಿಸುವುದು ಎಷ್ಟು ದೊಡ್ಡ ತಪ್ಪು ಎಂಬ ಪಾಠವನ್ನು ಈ ಪ್ರವಾಸ ನಮಗೆ ಕಲಿಸಿಕೊಟ್ಟಿತು.
ಸರಿಯಾಗಿ 4 ಗಂಟೆಗೆ ಫೆರ್ರಿ ನುಸ ಲೆಂಬೋಂಗನ್ ದ್ವೀಪದಿಂದ ಹೊರಟಿತು. ಸಾಯಂಕಾಲದವಾದ್ದರಿಂದ ಅಲೆಗಳ ಅಬ್ಬರ ಜೋರಾಗಿತ್ತು. ಹಾಗಾಗಿ ಅಲೆಗಳ ಜೊತೆ ಸಾಗುತ್ತಿದ್ದ ಫೆರ್ರಿಯ ಓಲಾಟವೂ ಹೆಚ್ಚಾಗಿತ್ತು. ಬೆಳಗ್ಗಿನ ಪ್ರಯಾಣಕ್ಕೆ ಹೋಲಿಸಿದರೆ ಸಾಯಂಕಾಲದ ಪ್ರಯಾಣ ಹೆಚ್ಚು ಭಯವನ್ನು ಉಂಟುಮಾಡಿತು. ಫೆರ್ರಿಯ ಒಳಗೆ ಕುಳಿತ ನಮಗೆ ಆತಂಕವಾಗಿದ್ದರೆ ವಿದೇಶಿ ಯುವಕನೊಬ್ಬ ಫೆರ್ರಿಯ ಮೇಲೆ ಕುಳಿತು ಪ್ರಯಾಣವನ್ನು ಆನಂದಿಸುತ್ತಿದ್ದ. ನಮಗೋ ಅವನನ್ನು ನೋಡಿಯೇ ದಿಗಿಲಾಗುತ್ತಿತ್ತು. ಫೆರ್ರಿಯಲ್ಲಿದ್ದ ಮಕ್ಕಳ ಹರ್ಷದ ಉದ್ಗಾರ ಮುಗಿಲು ಮುಟ್ಟುತ್ತಿತ್ತು. ಅಂತೂ ಮುಕ್ಕಾಲು ಗಂಟೆಯಲ್ಲಿ ಪುನಃ ನೀರಿನಿಂದ ಭೂಮಿಯ ಮೇಲಿದ್ದೆವು. ಮತ್ತೆ ಪುನಃ ಒಂದು ಗಂಟೆಯ ಕಾರ್ ಪ್ರಯಾಣದಲ್ಲಿ ಎಲ್ಲರೂ ನಿದ್ದೆಗೆ ಜಾರಿದ್ದೆವು.
ಭೂ, ನೆಲ ಹಾಗೂ ಜಲ ಈ ಮೂರೂ ಮಾರ್ಗದ ಸಂಪರ್ಕ ಸಾಧನಗಳಲ್ಲಿ ಪ್ರಯಾಣ ಮಾಡಿದ್ದರಿಂದ ಈ ಪ್ರವಾಸವು ಬಹುಕಾಲ ನೆನಪಿನಲ್ಲಿ ಉಳಿಯವಂತಹ ಪ್ರವಾಸವಾಗಿದೆ. ಅಲ್ಲದೇ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಹೋಗಿ ಸಮಯ ಕಳೆದಿದ್ದು ಸಹ ಸಂತಸದ ಅನುಭವ.
ಇನ್ನೂ ಎರಡೋ ಮೂರೋ ತಿಂಗಳ ಮಗುವನ್ನು ಎತ್ತಿಕೊಂಡು ತುಂಟಾಟ ಮಾಡುತ್ತಿದ್ದ ಎರಡು ವರ್ಷದ ಮಗಳನ್ನು ಸಂಭಾಳಿಸುತ್ತಿದ್ದ ಯುರೋಪಿಯನ್ ದಂಪತಿಗಳು, ಬಾಲಿಯ ದೇವಸ್ಥಾನದಲ್ಲಿ ಕೋಲು ಊರಿಕೊಂಡು ಬಂದು ಗೈಡ್ ನಿಂದ ಸ್ಥಳದ ಇತಿಹಾಸವನ್ನು ತಿಳಿಯುತ್ತಿದ್ದ ಅಮೆರಿಕನ್ ವೃದ್ಧ, ಒಂಟಿ ಪ್ರಯಾಣವನ್ನು ಕೈಗೊಂಡ ಯುವಕ ಯುವತಿಯರು, ಸಮುದ್ರದ ಅಲೆಗಳ ಜೊತೆ ಜೊತೆಗೆ ಸರ್ಫ್ ಮಾಡುತ್ತಿದ್ದ ಸಾಹಸಿಗಳು ಜೊತೆಗೇ ಬಾಲಿಯ ಸ್ಥಳೀಯರ ನಿಷ್ಕಲ್ಮಶ ನಡವಳಿಕೆ.... ಓಹ್!! ಒಂದು ಪ್ರವಾಸದಲ್ಲಿ ಎಷ್ಟೊಂದು ಚಿತ್ರಗಳು!! ನೆನಪಿನ ಲೋಕವನ್ನು ಶ್ರೀಮಂತಗೊಳಿಸಿದವು.
Comments
Post a Comment