ಸೋತು ಗೆದ್ದವರು


ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2)

ಲೇಖಕರು : ನೇಮಿಚಂದ್ರ

 

            "ವಿಧಿ ಬರೆದ ಬರಹವನು ಅಳಿಸಿ" ಎಂಬ ಬರಹದಲ್ಲಿ ಬದುಕು ತನ್ನತ್ತ ಎಸೆದ ಸವಾಲನ್ನು ಸಾಹಸದಿಂದ ಎದುರಿಸಿದ, ಹಿಮಾಲಯ ಹಾಗೂ ರಾಜಸ್ಥಾನದ ಮರುಭೂಮಿಯಲ್ಲಿ ಸಾವಿರಾರು ಮೈಲಿಗಳ ಕಾರ್ ರ್ಯಾಲಿಯಲ್ಲಿ ಭಾಗವಹಿಸಿದ ಮೊದಲ ಪ್ಯಾರಪ್ಲೇಜಿಕ್ ಸಾಹಸಿ ಮಹಿಳೆ ದೀಪಾ ಮಲ್ಲಿಕ್ ಬಗ್ಗೆ ಬರೆದಿದ್ದಾರೆ ಲೇಖಕಿ. 

            ಹರಿಯಾಣ ಮೂಲದ ದೀಪಾ ಅವರು ತಮ್ಮ ಮೂವತ್ತನೇ ವಯಸ್ಸಿನವರೆಗೂ ಸಾಧಾರಣ ಗೃಹಿಣಿಯಾಗಿದ್ದವರು. ಪತಿ ಕರ್ನಲ್ ವಿಕ್ರಮ್ ಸಿಂಗ್ ಮಲ್ಲಿಕ್ ಭೂಸೇನೆಯಲ್ಲಿ ಅಧಿಕಾರಿ. 1999 ನೇ ಇಸವಿಯಲ್ಲಿ ದೀಪ ಅವರ ಬೆನ್ನಿನ ಹುರಿಯಲ್ಲಿ ಗಡ್ಡೆಯೊಂದು ಬೆಳೆದು ಅವರ ಬದುಕಿನ ತಿರುವನ್ನೇ ಬದಲಿಸಿತು.ಇತ್ತ ಪತಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡುತ್ತಿದ್ದರೆ, ದೀಪ ಅವರು ತಮ್ಮ ಅನಾರೋಗ್ಯದೊಂದಿಗೆ ಹೋರಾಡುತ್ತಿದ್ದರು. ಈ ಗಡ್ಡೆಯನ್ನು ತೆಗೆಯುವುದರಿಂದ ಮಿದುಳು ಮತ್ತು ಸೊಂಟದ ಕೆಳಗಿನ ದೇಹದ ನಡುವೆ ಕೊಂಡಿ ಕಡಿದು ಹೋಗುವುದರಿಂದ ಮಲ ಮೂತ್ರಗಳ ಸಹಜ ವಿಸರ್ಜನೆ ಸಾಧ್ಯವಿಲ್ಲದೆ, ಗಾಲಿ ಕುರ್ಚಿಗೆ ಅಂಟಬೇಕಾದ ಅನಿವಾರ್ಯತೆ ದೀಪಾ ಅವರಿಗೆ ಎದುರಾಗುತ್ತದೆ. ಆದರೆ ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಆಘಾತಗೊಂಡರೂ ಚೇತರಿಸಿಕೊಳ್ಳುವ ದೀಪ ಈ ಪ್ರತಿಕೂಲ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುತ್ತಾರೆ. ಹೀಗಾಗಿ ತಮ್ಮ ಆಸಕ್ತಿಯ ಕ್ಷೇತ್ರವಾಗಿದ್ದ ಸಾಹಸಮಯ ಹೊರಾಂಗಣ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಾರತದಲ್ಲಿ ಕ್ರೀಡಾಲೋಕಕ್ಕೆ ಸೇರ್ಪಡೆಯಾದ ಮೊಟ್ಟಮೊದಲ ಪ್ಯಾರಪ್ಲೇಜಿಕ್ ಮಹಿಳೆ ಎಂದು ಗುರುತಿಸಿ ಕೊಳ್ಳುತ್ತಾರೆ.

              ಮುಂದಿನದ್ದೆಲ್ಲ ದೀಪಾ ಅವರದ್ದು ಹೋರಾಟದ ಬದುಕು. ಏಕೆಂದರೆ ಭಾರತದಂತಹ ದೇಶದಲ್ಲಿ ಅಂಗವಿಕಲತೆಯ ಕುರಿತು ಬಹಳಷ್ಟು ಕೆಲಸ ಇನ್ನೂ ಆಗಬೇಕಾಗಿದೆ. ಹಾಗಾಗಿ ಅವರ ಮೊದಲ ಹೋರಾಟ  ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವುದಾಗಿತ್ತು. 19 ತಿಂಗಳು ಹೋರಾಡಿ, ತಮ್ಮ ಕಾರಿಗೆ ಅಗತ್ಯದ ಮಾರ್ಪಾಡುಗಳನ್ನು ಮಾಡಿ ಕಡೆಗೂ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದರು. ನಂತರ ದೀಪಾ ಹಿಂತಿರುಗಿ ನೋಡಲೇ ಇಲ್ಲ. ಎಲ್ಲಾ ಮೊದಲುಗಳನ್ನು ತಮ್ಮ ಹೆಸರಿಗೆ ದಕ್ಕಿಸಿಕೊಂಡರು. 

                2006ರಲ್ಲಿ ಕೌಲಾಲಂಪುರದಲ್ಲಿ ನಡೆದ 'ಫಾರ್ ಈಸ್ಟ್ ಅಂಡ್ ಸೌತ್ ಪೆಸಿಫಿಕ್ ಗೇಮ್ಸ್ 'ನಲ್ಲಿ ಈಜಿ ಬೆಳ್ಳಿಯ ಪದಕವನ್ನು ಪಡೆದರು. 2008 ರಲ್ಲಿ ಯಮುನಾ ನದಿಯ ಹರಿವಿಗೆ ವಿರುದ್ಧವಾಗಿ, ಒಂದು ಕಿಲೋಮೀಟರ್ ಈಜಿ 'ಲಿಮ್ಕಾ ಬುಕ್ ಆಫ್ ರೆಕಾರ್ಡ'ನಲ್ಲಿ ಸ್ಥಾನ ಪಡೆದರು. ದೀಪಾ ಅವರು 'ಡೆಸರ್ಟ್ ಸ್ಟಾರ್ಮ್ ಕಾರ್ ರ್ಯಾಲಿಯಲ್ಲಿ ಭಾಗಿಯಾದ ಮೊಟ್ಟ ಮೊದಲ ಅಂಗವಿಕಲರು. 2009 ರಲ್ಲಿ ' ರೈಡ್ ದಿ ಹಿಮಾಲಯ ' ಎಂಬ ಜಗತ್ತಿನ ಅತ್ಯಂತ ಎತ್ತರದ ಕಠಿಣ ಮೋಟಾರ್ ರ್ಯಾಲಿಯಲ್ಲಿ ಭಾಗವಹಿಸಿದ ಏಕೈಕ ಅಂಗವಿಕಲ ವ್ಯಕ್ತಿ ದೀಪಾ. ಹೀಗೆ ದೀಪಾ ಅವರು ಭಾರತದಲ್ಲಿ ಅಂಗವಿಕಲರಿಗೆ ಮೋಟಾರು ಕ್ರೀಡಾಲೋಕದಲ್ಲಿ ಅವಕಾಶದ ಬಾಗಿಲನ್ನು ತೆರೆದರು. 2010 ರಲ್ಲಿ ದಿಲ್ಲಿಯಲ್ಲಿ ನಡೆದ ' ಕಾಮನ್ ವೆಲ್ತ್ ' ಕ್ರೀಡಾ ಕೂಟದಲ್ಲೂ ಭಾಗವಹಿಸಿದರು. ಹೀಗೆ ದೀಪಾ ಅವರು ಅಸಾಧ್ಯವನ್ನೂ ಸಹ ಸಾಧ್ಯವಾಗಿಸಿ, ವಿಧಿಯನ್ನೇ ಮಣಿಸಿ, ಎಲ್ಲವೂ ಸರಿಯಿದ್ದು ಸಣ್ಣ ಪುಟ್ಟ ವಿಷಯಕ್ಕೆ ತಲೆಯ ಮೇಲೆ ಕೈ ಹೊತ್ತು ಕುಳಿತು ಚಿಂತಿಸುವ ನಮ್ಮಂತಹವರಿಗೆ ಮಾದರಿಯಾಗಿದ್ದಾರೆ.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"