ಸೋತು ಗೆದ್ದವರು

ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2)
ಲೇಖಕರು : ನೇಮಿಚಂದ್ರ

             ಪುಸ್ತಕದ ಶೀರ್ಷಿಕೆಯೇ ಅಂಕಣವಾಗಿರುವ ಬರಹದಲ್ಲಿ ತೀವ್ರತರವಾದ ಕ್ಯಾನ್ಸರ್ ನಿಂದ ಬಳಲಿ, ಸಾವಿನ ಕದ ತಟ್ಟಿ ಬಂದು ಮತ್ತೆ ಎದ್ದು ನಿಂತವರ ಕಥೆಯಿದೆ. ನಮ್ಮ ಕನ್ನಡದವರಾದ ಅನುಪಮಾ ನಿರಂಜನ ಅವರು ಸಾವನ್ನು ತಡೆದು ನಿಲ್ಲಿಸಿ, ಶಸ್ತ್ರಚಿಕಿತ್ಸೆ, ರೇಡಿಯೇಶನ್ ಹಾಗೂ ಕಿಮೋಥೆರಪಿಗಳ ನಡುವೆಯೂ ಜೀವನೋತ್ಸಾಹ ಕುಗ್ಗದೇ 
ಹದಿಮೂರು ವರ್ಷಗಳ ಕಾಲ ಬದುಕಿದ್ದನ್ನು ಉಲ್ಲೇಖಿಸುತ್ತಾ ಮಾಯಾ ತಿವಾರಿಯ ಕಾನ್ಸರ್ ಹೋರಾಟದ ಸೋಲು ಗೆಲುವನ್ನು ದಾಖಲಿಸಿದ್ದಾರೆ. 
    
            ಮೂಲತಃ ಭಾರತೀಯರಾದ ಮಾಯಾ ತಿವಾರಿಯವರ ಪೂರ್ವಜರನ್ನು ಬ್ರಿಟಿಷರು, ಭಾರತದಿಂದ ದಕ್ಷಿಣ ಅಮೆರಿಕದ ಪುಟ್ಟ ದೇಶವಾದ 'ಗುಯಾನಾ' ಕ್ಕೆ ಗಂಟು ಮೂಟೆಗಳಂತೆ ಸಮುದ್ರದ ಮೂಲಕ ಸಾಗಿಸಿದ್ದರು. ಆ ದಾರಿಯಲ್ಲಿ ಎಷ್ಟೋ ಮಹಿಳೆಯರ ಮಾನಭಂಗವನ್ನು ಮಾಡಿದ್ದರು. ಎಷ್ಟೋ ಗಂಡಸರನ್ನು ಹೊಡೆದು ಬಡಿದಿದ್ದರು. ಇನ್ನು ಕೆಲವರನ್ನು ಸಮುದ್ರಕ್ಕೆ ಎಸೆದಿದ್ದರು. ಈ ಭೀಕರ ಇತಿಹಾಸದ ನೋವಿನ ನೆನಪನ್ನು ಮುಂದಿನ ಪೀಳಿಗೆಯವರಾದ ಮಾಯಾ ತಿವಾರಿ ಪಿತ್ರಾರ್ಜಿತವಾಗಿ ಪಡೆದಿದ್ದರು. ಅದರಿಂದ ಪಾರಾಗಲು ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಮುಂದೆ ಗುಯಾನಾ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದರೂ, ಆಫ್ರಿಕಾ ಮತ್ತು ಭಾರತ ಸಂಜಾತರಾದ ಗುಯಾನಿಯರ ನಡುವೆ ಕಲಹ ಆರಂಭವಾಗಿ ಮತ್ತೊಮ್ಮೆ ಮಾಯಾ ಅವರ ಕುಟುಂಬ ದೇಶಭ್ರಷ್ಟವಾಗುವ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಮಾಯಾ ಅವರು ತಮ್ಮ ಬದುಕನ್ನು ಕಟ್ಟಲು ಪ್ರೀತಿಯ ಕುಟುಂಬವನ್ನು ಬಿಟ್ಟು ನ್ಯೂಯಾರ್ಕ್ ಗೆ ಏಕಾಂಗಿಯಾಗಿ ಹೊರಟರು.

              ನ್ಯೂಯಾರ್ಕಿನಲ್ಲಿ ಮಾಯಾ ಅವರ ಪ್ರತಿಷ್ಠಿತ ಬೋಟಿಕ್ 'ಮಾಯಾ' ಆರಂಭವಾಯಿತು. ಮಾಯಾ ತಿವಾರಿ ಅವರು ' ಟಾಪ್ ಅಮೆರಿಕನ್ ಫ್ಯಾಶನ್ ಡಿಸೈನರ್ ' ಎಂದು ಗುರುತಿಸಲ್ಪಟ್ಟರು. 'ಮಾಯಾ' ಹಾಲಿವುಡ್ ನ ಪ್ರಸಿದ್ಧರಿಗೆ, ರಾಕ್ ಸಂಗೀತಗಾರರಿಗೆ ಹೈ ಫ್ಯಾಶನ್ ಉಡುಪುಗಳನ್ನು ಒದಗಿಸುವ ಸ್ಥಳವಾಯಿತು. ಹೀಗಾಗಿ ಪ್ರತಿಷ್ಠಿತ 'ನ್ಯೂಯಾರ್ಕ್ ಪತ್ರಿಕೆ'ಯ ಮುಖಪುಟವನ್ನು ಮಾಯಾ ಅಲಂಕರಿಸಿದರು.

            ವೃತ್ತಿಯ ಯಶಸ್ಸಿನ ಉತ್ತುಂಗದಲ್ಲಿದ್ದ ಮಾಯಾ ಅವರಿಗೆ ತಮ್ಮೊಳಗಿನ ಅನಾರೋಗ್ಯವನ್ನು ಗಮನಿಸುವ ಸಮಯವೂ ಇರಲಿಲ್ಲ. ವ್ಯವಧಾನವೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ದೇಹದಲ್ಲಿ ನಿಶ್ಶಕ್ತಿ, ನಾಲಿಗೆಗೆ ರುಚಿ ಇಲ್ಲ. ಸದಾ ಆಯಾಸ. ಹೀಗಾಗಿ ವೈದ್ಯರನ್ನು ಕಂಡರು. ಬಯಾಪ್ಸಿಯ ಫಲಿತಾಂಶದಂತೆ ಮಾಯಾ ಅವರಿಗೆ ಅಂಡಾಶಯದ ಕ್ಯಾನ್ಸರ್ ಹರಡಿ ಗರ್ಭಕೋಶವನ್ನು ಆವರಿಸಿತ್ತು. ಹಾಗಾಗಿ ಗರ್ಭಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕಿದರು. ಆರು ತಿಂಗಳ ಕಾಲ ರೇಡಿಯೇಶನ್ ಥೆರಪಿಯನ್ನು ಪಡೆದು ಮತ್ತೊಮ್ಮೆ ಪರೀಕ್ಷಿಸಿದಾಗ ಕ್ಯಾನ್ಸರ್ ಗಡ್ಡೆಗಳು ಕಂಡು ಬಂದವು. ಒಂದು ಗಡ್ಡೆ ಶ್ವಾಸಕೋಶಕ್ಕೆ, ಇನ್ನೆರಡು ಗಡ್ಡೆಗಳು ಮೂತ್ರಪಿಂಡಕ್ಕೆ ಅಂಟಿಕೊಂಡಿದ್ದವು. ಮುಂದಿನ ಒಂದೂವರೆ ವರ್ಷಗಳಲ್ಲಿ ಒಟ್ಟು ಎಂಟು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ಮಾಯಾ ಅವರಿಗೆ ವೈದ್ಯರು ಹೇಳಿದ್ದು "ನಿಮಗಿರುವುದು ಎರಡೇ ತಿಂಗಳು" ಎಂದು. ಸಾಮಾನ್ಯರಾಗಿದ್ದಲ್ಲಿ ಇಷ್ಟು ಹೊತ್ತಿಗಾಗಲೇ ದೇಹದ ಮೇಲಾಗಿದ್ದ ಇಷ್ಟೊಂದು ಶಸ್ತ್ರಚಿಕಿತ್ಸೆಗಳಿಂದ ಸೋತು ಹೋಗಿರುತ್ತಿದ್ದರು. ಆದರೆ ಮಾಯಾ ಅವರ ಇಚ್ಛಾಶಕ್ತಿ ಅಪಾರವಾಗಿತ್ತು.

               ವೈದ್ಯರ ಮಾತನ್ನು ಕೇಳಿದ ಮಾಯಾ ಅವರು ತಮ್ಮ ಉಳಿದ ಬದುಕನ್ನು ಏಕಾಂತದಲ್ಲಿ ಧ್ಯಾನದಲ್ಲಿ ಕಳೆಯಲು ಬಯಸಿದರು. ಹಾಗಾಗಿ ವೆರ್ ಮೌಂಟ್ ಬೆಟ್ಟಗಳ ಹಿಮಶಿಖರದ ನಡುವೆ ಧ್ಯಾನಸ್ಥರಾದರು. ಹೀಗೆ ಧ್ಯಾನ, ಅಂತರಂಗದ ಶೋಧನೆ ಹಾಗೂ ಸರಳ ಸಾತ್ವಿಕ ಆಹಾರದ ಮೂಲಕ ಬದುಕಿನ ಆರು ತಿಂಗಳುಗಳನ್ನೇ ಕಳೆದಿದ್ದರು. ಮತ್ತೊಮ್ಮೆ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಅವರ ದೇಹದಲ್ಲಿ ಕ್ಯಾನ್ಸರ್ ನ ಸುಳಿವಿರಲಿಲ್ಲ. ಹೀಗೆ ತೀವ್ರತರವಾದ ರೋಗಕ್ಕೆ ತುತ್ತಾಗಿ ಆರೋಗ್ಯವಂತರಾದ ತಮ್ಮ ಯಾತ್ರೆಯನ್ನು , ಇತರರಿಗೆ ಬದುಕುವ ವಿಧಾನವನ್ನು ತಿಳಿಸಲು ಮಾಯಾ ಅವರು ಅನೇಕ ಪುಸ್ತಕಗಳನ್ನು ಬರೆದರು. ಹಾಗೆಯೇ ಭಾರತಕ್ಕೆ ಹಿಂತಿರುಗಿ 'ದಯಾನಂದ ಆಶ್ರಮ'ವನ್ನು ಸೇರಿ ಸನ್ಯಾಸ ದೀಕ್ಷೆಯನ್ನು ಪಡೆದರು.

            ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಕಾಡಿದ ತೀವ್ರತರವಾದ ರೋಗದಿಂದ ಸಂಪೂರ್ಣಾಗಿ ಗುಣಮುಖರಾಗಿ, ಆ ಜೀವನ ವಿಧಾನವನ್ನು ಇತರರಿಗೂ ತಿಳಿಸಿ ಮಾದರಿಯಾಗಿದ್ದಾರೆ ಮಾಯಾ ತಿವಾರಿ.


            

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"