ಓದಿನ ಸುಖ " ಸಾವೇ ಬರುವುದಿದ್ದರೆ ನಾಳೆ ಬಾ!"



ಪುಸ್ತಕದ ಹೆಸರು: ಸಾವೇ ಬರುವುದಿದ್ದರೆ ನಾಳೆ ಬಾ!
ಲೇಖಕರು : ನೇಮಿಚಂದ್ರ
  
        ಪುಸ್ತಕದ ಶೀರ್ಷಿಕೆಯಾದ 'ಸಾವೇ ಬರುವುದಿದ್ದರೆ ನಾಳೆ ಬಾ!' ಮೊದಲ ಲೇಖನ. ಸಾವು 'ಒಳಗೆ ಬರಲೇ?' ಎಂದಾಗ 'ಸ್ಪಲ್ಪ ಕೆಲಸವಿದೆ' ಎಂದ ಅನುಪಮ ನಿರಂಜನ 13 ವರ್ಷಗಳಷ್ಟು ಕಾಲ ಬತ್ತದ ಜೀವನೋತ್ಸಾಹದೊಂದಿಗೆ ಬದುಕಿದ ಬಗ್ಗೆ, 1970 ದಶಕದಲ್ಲಿ 'ಟಾಪ್ ಅಮೆರಿಕನ್ ಫ್ಯಾಷನ್ ಡಿಸೈನರ್' ಎಂದು ಗುರುತಿಸಲ್ಪಟ್ಟ ಮಾಯಾ ತಿವಾರಿ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲಿ ಕೊನೆಗೆ ಯೋಗ, ಪ್ರಾಣಾಯಾಮ, ಧ್ಯಾನ, ಪೌಷ್ಟಿಕ ಆಹಾರದ ಮೂಲಕ ತಮ್ಮ ಜೀವನ ವಿಧಾನವನ್ನು ಬದಲಿಸಿ ಮರಳಿ ಬದುಕಿಗೆ ಬಂದ ಬಗ್ಗೆ ಈ ಬರಹದಲ್ಲಿ ಬರೆದಿದ್ದಾರೆ.

         ಇಡೀ ದೇಹ ಸ್ವಾಧೀನವಿಲ್ಲದ, ಮಾತನಾಡಲಾರದ, ತುತ್ತು ಕೂಡ ನುಂಗಲಾರದ ಫೀಡಿಂಗ್ ಟ್ಯೂಬ್ ನ ಮೂಲಕ ಬದುಕುಳಿದಿದ್ದ ವಿಜ್ಞಾನಿ ಸ್ಪೀಫನ್ ಹಾಕಿಂಗ್ ನ ಜೀವನ ಕಥನ, ತಾವು ಪೈಲೆಟ್ ಆಗಿದ್ದ ಅನಿಲ್ ಕುಮಾರ್ ತಮ್ಮ ಜೀವನದಲ್ಲಿ ನಡೆದ ಅಪಘಾತದಿಂದಾಗಿ, ಕುತ್ತಿಗೆ ಕಳಗಿನ ಯಾವೊಂದು ಭಾಗಗಳೂ ಸಹ ಸ್ವಾಧೀನವಿಲ್ಲವಾಗಿ, ಗಾಲಿ ಕುರ್ಚಿಗೆ ಬಂಧಿತರಾದಾಗಲೂ ಸಹಾ ತಮ್ಮ ಜಿವನವನ್ನು ಹೇಗೆ ನಡೆಸಿದರು ಎಂಬ ಸ್ಫೂರ್ತಿಯ ಬರಹವನ್ನು 'ಬದುಕು ನಿಲ್ಲಲಿಲ್ಲ ಅಲ್ಲಿಗೇ' ಯಲ್ಲಿ ಬರೆದಿದ್ದಾರೆ.

              'ಮಿದುಳು ಮತ್ತೆ ಕಲಿಯಬಲ್ಲುದು' ಎಂಬ ಬರಹದಲ್ಲಿ ಮಿದುಳಿನ ವಿಜ್ಞಾನಿ ಜಿಲ್ ಬೋಲ್ಟೆ " ಲಕ್ವಾ ಹೊಡೆಯಿತು ಎಂದರೆ ಅಲ್ಲಿಗೆ ಬದುಕು ಮುಗಿಯಿತು" ಎಂಬಂತಹ ಕಲ್ಪನೆಯನ್ನು ಹೇಗೆ ಸುಳ್ಳು ಮಾಡಿದರು ಎಂಬುದನ್ನು ವಿವರಿಸಿದ್ದಾರೆ. ಲಕ್ವಾ ಹೊಡೆದ ಮೇಲೆ ಹಂತ ಹಂತವಾಗಿ ಸಣ್ಣ ಮಗುವಿನಂತೆ ಕಲಿಯುತ್ತ ಬಂದು ತಾನು ಕಲಿತ ಜೀವನದ ಬಹುಮುಖ್ಯ ಪಾಠವೆಂದರೆ ಶಾಂತಿ, ನೆಮ್ಮದಿ, ಸಂತಸ ಮುಂತಾದ ಸಕಾರಾತ್ಮಕ ಭಾವನೆಗಳು ನಮ್ಮ ದೇಹದಲ್ಲಿ ಯಾವ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತರುತ್ತವೆ ಎಂಬುದನ್ನು ಗಮನಿಸುತ್ತ ತನ್ನ ಆರೋಗ್ಯಕರ ಸ್ಥಿತಿಯನ್ನು ಮರಳಿ ಪಡೆದುಕೊಂಡಿದ್ದನ್ನು ವಿವರಿಸಿದ್ದಾರೆ.

              ಸಿಂಗಾಪುರ ಪ್ರವಾಸಕ್ಕೆ ಹೋದಾಗ ಅಲ್ಲಿನ ಅನುಭವಗಳನ್ನು ಹೇಳುತ್ತಾ ಸಿಂಗಾಪುರದ ಗೀಳಾದ ಸ್ವಚ್ಛತೆಯ ಹಿನ್ನಲೆಯಲ್ಲಿದ್ದ ಸಣ್ಣನೆಯ ಕ್ರೌರ್ಯವನ್ನು ವಿವರಿಸುತ್ತಾ ಸಿಂಗಾಪುರದ ಜನರಿಗೂ, ಕಾಂಬೋಡಿಯಾದ ಜನರಿಗೂ ಇರುವ ವ್ಯತ್ಯಾಸವನ್ನು ತಿಳಿಸುತ್ತಾ, ಸಣ್ಣ ಸಣ್ಣ ಖುಷಿಗಳಲ್ಲಿ, ಪುಟ್ಟ ಪುಟ್ಟ ಕನಸುಗಳಲ್ಲಿ ಏನಿಲ್ಲದೆಯೂ ನಗಬಲ್ಲ ಸಾಮರ್ಥ್ಯವನ್ನು ಸಾಧಿಸಿದ ಪುಟ್ಟ ದೇಶದ ಬಗ್ಗೆ ಹೇಳಿದ್ದಾರೆ, 'ದೇವರು ನಗುವ ನಾಡಿನಲ್ಲಿ' ಎಂಬ ಲೇಖನದಲ್ಲಿ.

           'ಮಾತೆಂಬ ದಿವ್ಯ ಔಷಧಿ' ಎಂಬ ಬರಹದಲ್ಲಿ ನಮ್ಮ ಮನಸ್ಸು ಆತಂಕಗೊಂಡಾಗ, ವ್ಯಗ್ರವಾದಾಗ, ಖಿನ್ನವಾದಾಗ, ನಮ್ಮ ಯೋಚಿಸುವ ಶಕ್ತಿ ಕುಂದಿ ಹೋಗಿರುವ ಸಂದರ್ಭದಲ್ಲಿ, ಮಾತನಾ ಡಿದಾಗ ಹೇಗೆ ನೆಮ್ಮದಿ ಮೂಡುತ್ತದೆ ಎಂಬುದನ್ನು ಸ್ವತಹ ತಮ್ಮ ಅನುಭವದ ಮೂಲಕ್ಕ ಹೇಳುತ್ತಾ, 'ಮಾತು ಎಂಬುದು ಆಡುವ ಮಾತೇ ಆಗಿರಬೇಕಿಲ್ಲ ಬರೆಯುವ ಮಾತು' ಕೂಡ ಆಗಬಹುದು ಎನ್ನುತ್ತಾ ನೆಹರು ಜೈಲಿನಲ್ಲಿದ್ದಾಗ ತಮ್ಮ ಮಗಳು ಇಂದಿರಾಗೆ ಬರೆದ ಪತ್ರ ಹೇಗೆ ತಂದೆ ಮಗಳ ಪ್ರೀತಿಯ ಅಭಿವ್ಯಕ್ತಿಗೆ ಮಾಧ್ಯಮವಾಗಿದೆ ಎಂದು ವಿವರಿಸಿದ್ದಾರೆ.

           'ಅಮ್ಮಂದಿರ ಕಷಾಯ'ದಲ್ಲಿ ಪ್ರಕೃತಿಯಲ್ಲಿ ಸಿಗುವ ತುಳಸಿ, ಚಕ್ಕೆ, ಲವಂಗ, ಶುಂಠಿ, ಮುಂತಾದ ಗಿಡಮೂಲಿಕೆಗಳನ್ನು ಬಳಸಿ ಮಾಡುವ ಕಷಾಯದ ಅದ್ಭುತ ಪರಿಣಾಮವನ್ನು ಲೇಖಕಿ ಸ್ವತಃ ತಮ್ಮ ಅನುಭವದ ಮೂಲಕ ವಿವರಿಸಿದ್ದಾರೆ.
 
           ಪುಸ್ತಕದ ತುಂಬಾ ಸ್ಫೂರ್ತಿಯ ಬರೆಹ, ತಮ್ಮ ಅನುಭವಗಳನ್ನು ಚಿತ್ರಗಳ ಸಮೇತ ದಾಖಲಿಸಿದ್ದಾರೆ ಲೇಖಕಿ.
ಲೇಖಕಿಯ ಪ್ರಕೃತಿ ಪ್ರೀತಿ, ಜೀವನ ಪ್ರೀತಿ, ಜತೆಗೆ ಆರೋಗ್ಯದ ಬಗ್ಗೆ ಕಾಳಜಿ, ಹಲವು ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ, ಜೊತೆಗೆ ತಾನು ತಿಳಿದುಕೊಂಡ ಮಾಹಿತಿಯನ್ನು ಹಂಚಿಕೊಳ್ಳುವ ಮನಸ್ಸು ಈ ರೀತಿಯ ವಿಷಯ ವೈವಿಧ್ಯತೆಯಿಂದ ಪುಸ್ತಕವು ಬಹಳ ಇಷ್ಟವಾಗುತ್ತದೆ.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"