ಓದಿನ ಸುಖ 'ಸೆಕೆಂಡ್ ಇನ್ನಿಂಗ್ಸ್'
ಪುಸ್ತಕದ ಹೆಸರು: ಸೆಕೆಂಡ್ ಇನ್ನಿಂಗ್ಸ್
ಲೇಖಕರು : ಗೀತಾ ಬಿ.ಯು.
'ಸೆಕೆಂಡ್ ಇನ್ನಿಂಗ್ಸ್' ಸುಮಾರು ಹದಿನೇಳು ಸಣ್ಣ ಕಥೆಗಳ ಸಂಗ್ರಹ. ಲೇಖಕಿಯೇ ಹೇಳಿದಂತೆ ವೃದ್ಧಾಪ್ಯ, ಸಂಬಂಧಗಳು, ಸ್ವಾರ್ಥ, ಆಸ್ತಿ, ಹಕ್ಕು ಬಾಧ್ಯತೆಗಳು ಇಲ್ಲಿರುವ ಕಥೆಗಳ ಕೇಂದ್ರ. ಕಥೆಯೊಂದನ್ನು ಬರೆಯಲು ಪ್ರೇರಣೆಯಾದ ಘಟನೆ, ಕಾಡಿದ ಅಂಶ, ತನ್ನ ಸಂಬಂಧದೊಳಗೂ ಲೆಕ್ಕಾಚಾರ ಹಾಕುವ ಮನುಷ್ಯನ ಸ್ವಭಾವ, ತಲೆಮಾರುಗಳ ನಡುವಿನ ಅಂತರ, ಕಥೆ ಪ್ರಕಟವಾದ ಪತ್ರಿಕೆ, ಕಥೆಗೆ ಓದುಗರ ಪ್ರತಿಸ್ಪಂದನೆ ಹೀಗೆ ಲೇಖಕಿಗೆ ಕಾಡಿದ ಅಂಶ ಇವೆಲ್ಲವನ್ನೂ ಪ್ರತಿ ಕಥೆಯ ಮೊದಲು ಬರೆದಿದ್ದಾರೆ. ಹಾಗಾಗಿ ಕಥೆಯೊಂದನ್ನು ಓದುವ ಮೊದಲು ಕಥೆಯ ಹೂರಣ, ಕಥೆಯ ಆಶಯ ಓದುಗರಿಗೆ ಮನದಟ್ಟಾಗುವುದು ಈ ಪುಸ್ತಕದ ಧನಾತ್ಮಕ ಅಂಶ. ಸರಳ, ಸುಂದರ ಭಾಷೆ, ಓದಿಸಿಕೊಂಡು ಹೋಗುವ ಭಾಷಾ ಶೈಲಿಯಿಂದಾಗಿ ಪುಸ್ತಕ ಬಹಳ ಇಷ್ಟವಾಗುತ್ತದೆ.
ಆತ್ಮೀಯರಿಗೆ ಕೊಡುವ ಉಡುಗೊರೆಯಲ್ಲೂ ಲೆಕ್ಕಾಚಾರ ಹಾಕುವ ಮನುಷ್ಯನನ್ನು ಪ್ರೀತಿ, ವಿಶ್ವಾಸ ಮುಂತಾದ ಗುಣಗಳು ಆಳದೆ ಸ್ವಾರ್ಥ, ತಿರಸ್ಕಾರಗಳು ಆಳುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾ ಲೇಖಕಿ 'ಆಸೆ' ಎಂಬ ಕಥೆಯಲ್ಲಿ ನಾಯಕಿಯ ಮೂಲಕ "ಆಸೆ ಅಂದ್ರೆ ನಾನೇ ಮಾಡಿಸ್ಕೋಬೇಕು, ತೊಟ್ಕೋಬೇಕು, ಉಟ್ಕೋಬೇಕು ಅನ್ನೋದಷ್ಟೇ ಅಲ್ಲ. ತನ್ನವರಿಗೆ ಕೊಡಬೇಕು. ಅವರು ಉಟ್ಟು, ತೊಟ್ಟು ಮಾಡಿದ್ರೆ ನೋಡಿ ಸಂತೋಷ ಪಡಬೇಕು" ಎಂದು ಹೇಳಿಸುವ ಮಾತುಗಳು ನಮ್ಮನ್ನೇ ಅವಲೋಕಿಸುವಂತೆ ಮಾಡುತ್ತದೆ.
ತಾಯಿ, ಗಂಡ, ಸಹೋದ್ಯೋಗಿ ಎಲ್ಲರಿಂದಲೂ ಶೋಷಣೆಗೆ ಒಳಗಾಗುವ ಹೆಣ್ಣು ಈ ಕಥೆಯ ನಾಯಕಿ. ಕಛೇರಿಯಲ್ಲಿ ಕಿರುಕುಳ ಕೊಡುವ ಸಹೋದ್ಯೋಗಿಯ ಬಗ್ಗೆ ಮನೆಯಲ್ಲಿ ಹೇಳಿದಾಗ ಪರಿಹಾರ ಸೂಚಿಸದೇ ಅವಳನ್ನೇ ಮೂದಲಿಸಿದಾಗ ಅವಳು ತೆಗೆದುಕೊಳ್ಳುವ ದೃಢ ನಿರ್ಧಾರವೇ 'ಹೆದರೋರನ್ನ ಕಂಡ್ರೆ....' ಎಂಬ ಕಥೆಯಲ್ಲಿ ನಾವು ಓದಬಹುದು.
ಜವಾಬ್ದಾರಿಗಳಿಲ್ಲದ ಜೀವನ ಶೈಲಿಯನ್ನು ಅಪ್ಪುಕೊಳ್ಳುತ್ತಿರುವ ಯುವಜನರು ಮದುವೆ ಎಂಬ ಬಂಧನಕ್ಕೆ ಒಳಗಾಗದೆ ಒಟ್ಟಿಗೆ ಜೀವನ ನಡೆಸುತ್ತಿದ್ದಾಗ ಧುತ್ತನೆ ಎದುರಾದ ಪರಿಸ್ಥಿತಿಯಲ್ಲಿ ಪ್ರೀತಿ ಹಾಗೂ ಸ್ವಾರ್ಥದ ನಡುವೆ ಸ್ವಾರ್ಥದ ಕೈಯೇ ಮೇಲಾಗುವ ಕಥೆ 'ಕತ್ತಲ ಗರ್ಭದಲ್ಲಿ'ದೆ.
ತನ್ನ ಇಡೀ ಜೀವನವನ್ನು ತಂದೆ-ತಾಯಿ ಹಾಗೂ ಒಡಹುಟ್ಟಿದವರಿಗೋಸ್ಕರ ಕಳೆದು ಯೌವನದಲ್ಲಿ ಮದುವೆಯೂ ಆಗದೆ ಬಹಳ ತಡವಾಗಿ ಜೀವನ ಸಂಗಾತಿಯನ್ನು ಹುಡುಕಿಕೊಳ್ಳುತ್ತಿರುವ ಶರ್ಮಿಳಾಳ ಬಗ್ಗೆ 'ಒಂಟಿ' ಕಥೆಯಲ್ಲಿ ವಿವರಿಸುತ್ತಾ, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಸಿಗುತ್ತಿದೆ. ಆದರೆ ವ್ಯಕ್ತಿತ್ವ ವಿಕಸಿಸುವ ಕಾರ್ಯ ಆಗುತ್ತಿಲ್ಲ. ಲಕ್ಷಗಟ್ಟಲೆ ಸಂಪಾದಿಸಿದರೂ ಸಣ್ಣ ಸಣ್ಣ ವಿಚಾರಕ್ಕೂ ತಂದೆ ಅಥವಾ ಗಂಡನ ಒಪ್ಪಿಗೆಯನ್ನು ಕೇಳುವ, ಆತ್ಮಾಭಿಮಾನ ಬೆಳೆಸಿಕೊಳ್ಳದ ಹೆಣ್ಣು ಮಕ್ಕಳು ನಮ್ಮ ಸುತ್ತಲೂ ಇದ್ದಾರೆ ಎಂದು ಲೇಖಕಿ ಬೇಸರಿಸಿಕೊಳ್ಳುತ್ತಾರೆ.
ಪ್ರೀತಿ ವಿಶ್ವಾಸ ತೋರಲು ಮಕ್ಕಳು ಸಿದ್ಧರಿದ್ದಾಗಲೂ ಸಹ ಬೇರೆಯವರ ಅನುಕಂಪಕ್ಕೆ ಹಾತೊರೆಯುವ ವೃದ್ಧರು, ಮಕ್ಕಳನ್ನು ಹುಟ್ಟಿಸಿ, ಸಾಕಿ ಬೆಳೆಸಿದ್ದರಿಂದ ಅವರ ಬದುಕಿನ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ನಮ್ಮದು ಎಂದು ಭಾವಿಸುವ ತಂದೆ ತಾಯಂದಿರ ಬಗ್ಗೆ, ಮನುಷ್ಯನ ಸೂಕ್ಷ್ಮ ಮನಸ್ಸಿನ ಬಗ್ಗೆ 'ಹಕ್ಕು ಬಾಧ್ಯತೆ' ಎಂಬ ಕಥೆಯಲ್ಲಿ ಬರೆದಿದ್ದಾರೆ.
ಭಾರತವನ್ನೇ ನೋಡಿರದ ಮೊಮ್ಮಕ್ಕಳು ತಾತನ ಆಸ್ತಿಯಲ್ಲಿ ಪಾಲು ಕೇಳಲು ಬರುವ ಕಥೆ 'ಉಪ್ಪಿನ ಋಣ'ದಲ್ಲಿದೆ.ಒಂಟಿಯಾದ ತಂದೆಯನ್ನು ನೋಡಿಕೊಳ್ಳುವ ಮಗಳು ತನ್ನ ಸಹೋದರಿಯರಿಂದಲೇ ಅಸೂಯೆಗೆ ಒಳಗಾಗಿ, ಅದಕ್ಕೆ ಅವರು ಕಂಡುಕೊಳ್ಳುವ ಪರಿಹಾರ, ಇದರ ನಡುವೆ ಅಸಹಾಯಕರಾಗಿರುವ ವೃದ್ಧರ ಕಥೆಯೇ 'ಸೆಕೆಂಡ್ ಇನ್ನಿಂಗ್ಸ್'.
ಹೀಗೆ ಎಲ್ಲಾ ಕಥೆಗಳ ಕೇಂದ್ರ ವಸ್ತು ನಮ್ಮ ಸುತ್ತ ಮುತ್ತ, ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳೇ ಆದ್ದರಿಂದ ಈ ಕಥೆಗಳು ಬಹಳ ದಿನ ನಮ್ಮನ್ನು ಕಾಡುವುದಷ್ಟೇ ಅಲ್ಲದೇ ನಮ್ಮನ್ನೇ ನಾವು ಆವಲೋಕಿಸುವಂತೆ ಮಾಡುತ್ತವೆ.
Comments
Post a Comment