ಓದಿನ ಸುಖ "ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)"



ಪುಸ್ತಕದ ಹೆಸರು: ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)

      ಮಗಳಿಗೆ ಸುಮಾರು ಎರಡು - ಎರಡೂವರೆ ವರ್ಷವಾದಾಗ ಮನೆಯ ಹತ್ತಿರದ ಗ್ರಂಥಾಲಯಕ್ಕೆ ನಾನು ಹೋಗುವಾಗ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಮುಂಭಾಗದಲ್ಲಿ ವಿವಿಧ ಪತ್ರಿಕೆಗಳನ್ನು ಜೋಡಿಸಿರುತ್ತಿದ್ದರು. ಅವುಗಳ ಮಧ್ಯೆ ಮ್ಯಾಜಿಕ್ ಪಾಟ್ ಪುಸ್ತಕವೂ ಇತ್ತು. ಅದನ್ನು ನೋಡಿದ್ದೇ ತಡ ಮಗಳು ಕೈಗೆತ್ತಿಕೊಂಡಿದ್ದಳು. ಅಷ್ಟು ಆಕರ್ಷಣೀಯವಾಗಿತ್ತು ಆ ಪತ್ರಿಕೆ. ಆದರೆ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲದುದರಿಂದ ಮನೆಗೆ ಬಂದು ಈ ಪತ್ರಿಕೆಯ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ಚಂದಾದಾರರರಾದೆವು. ಅಮೇಲಿನಿಂದ ಪ್ರತಿ ಬುಧವಾರ ಮ್ಯಾಜಿಕ್ ಪಾಟ್ ಗೋಸ್ಕರ ಕಾಯುವುದೇ ನಮ್ಮ ಕೆಲಸವಾಯಿತು. ಒಮ್ಮೆ ಕೈಗೆ ಬಂದೊಡನೆಯೇ ಅದರಲ್ಲಿರುವ ಚಟುವಟಿಕೆ ಗಳನ್ನೆಲ್ಲ ಮಾಡಿ ಮುಗಿಸಿದರೆ ಸಮಾಧಾನ. ಚಿತ್ರಕಥೆಗಳು, ದಾರಿ ತೋರಿಸುವುದು, ಚುಕ್ಕಿ ಜೋಡಿಸುವುದು, ಸಾಹಸಕಥೆ, ನೀತಿಕಥೆ, ಬಣ್ಣ ತುಂಬುವುದು, ಅಕ್ಷರಗಳನ್ನು ಬರೆಯುವುದು, ಸಂಖ್ಯೆಗಳ ಗಣನೆ, ಚಿಕ್ಕ ಪುಟ್ಟ ಕವನಗಳು ಹೀಗೆ ಪುಟ ಪುಟವೂ ಮಕ್ಕಳನ್ನು ಆಕರ್ಷಿಸುವಂತೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳು ಸ್ವತಃ ಮಾಡಲು ಸುಲಭವಾಗಿರುವಂತಹ ಪೇಪರ್ ಕ್ರಾಫ್ಟ್ ಕೂಡ ಇದೆ. ಇದನ್ನು ನೋಡಿ ಮಗಳು ಬಹಳ ಪೇಪರ್ ಕ್ರಾಫ್ಟ್ ಅನ್ನು ತಯಾರಿಸಿದ್ದಾಳೆ. ಅದಲ್ಲದೇ ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳೇ ತಯಾರಿಸಬಹುದಾದ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸುವ ಆಕರ್ಷಕ ವಿಧಾನವನ್ನು ನೀಡುತ್ತಾರೆ. ಮಕ್ಕಳಿಗಷ್ಟೇ ಅಲ್ಲದೆ ಪಾಲಕರಿಗೆ, ಮಕ್ಕಳಲ್ಲಿ ಕಂಡುಬರುವ ಕೆಲವು ಅಸಹಜ ವರ್ತನೆಗಳಿಗೆ ಕಿವಿಮಾತು, ಸಲಹೆ ಸೂಚನೆಗಳನ್ನೂ ನೀಡಿ ಒಟ್ಟಾರೆ ಮಕ್ಕಳೊಂದಿಗೆ ಪಾಲಕರು ಸಹ ಗುಣಮಟ್ಟದ ಸಮಯವನ್ನು ಕಳೆಯಲು ಇದೊಂದು ಉತ್ತಮ ಸಾಧನವಾಗಿದೆ. ಸುಮಾರು 2.5-5 ವರ್ಷದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಲು ಮ್ಯಾಜಿಕ್ ಪಾಟ್ ಅತ್ಯುತ್ತಮ ಆಯ್ಕೆಯಾಗಿದೆ.



Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"