ದೇವತೆಗಳ ದ್ವೀಪದಲ್ಲಿ ಭಾಗ -4
ದೇವತೆಗಳ ದ್ವೀಪದಲ್ಲಿ ಭಾಗ - 3
ಉಬುಡುವನ್ನು ನಮ್ಮ ಮಲೆನಾಡು ಅಥವಾ ಅರೆ ಮಲೆನಾಡಿಗೆ ಹೋಲಿಸಿದರೆ, ಉಲುವಾಟುವನ್ನು ಕರಾವಳಿಗೆ ಹೋಲಿಸಬಹುದು. ಉಬುಡು ಹಸಿರು ಕಾಡುಗಳಿಂದ ಹಾಗೂ ಹೆಚ್ಚು ಹಳ್ಳಿಗಳಿಂದ ಕೂಡಿದ್ದು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೆ, ಉಲುವಾಟು ಕಡಲತೀರವನ್ನು ಹೊಂದಿದ್ದು ನಗರ ಪ್ರದೇಶವಾಗಿದೆ. ಹಾಗಾಗಿ ಉಬುಡುವಿಗೆ ಹೋಲಿಸಿದರೆ ಉಲುವಾಟು ಸ್ವಲ್ಪ ದುಬಾರಿ.
ಕೆಳಗೆ ಸಮುದ್ರ, ಕಲ್ಲಿನ ಬೆಟ್ಟದ ಮೇಲೆ ದೇವಾಲಯ
ವಿಶಾಲವಾದ ಮರದ ನೆರಳಿನಲ್ಲಿ
ದೇವಾಲಯದಿಂದ ಕೆಳಗೆ ಕಾಣುವ ದೃಶ್ಯ
ನಮ್ಮ ಪ್ರವಾಸದ ಮೂರನೆಯ ದಿನ ಪೂರ್ತಿ ಉಲುವಾಟುವಿನಲ್ಲಿ ಎಂದು ಮೊದಲೇ ನಿರ್ಧಾರವಾಗಿತ್ತು. ಬೆಳಿಗ್ಗೆ ಎದ್ದು ನಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ನಮ್ಮ ಬೆಳಗಿನ ಉಪಹಾರವು ನಾವು ಪಾವತಿಸುವ ಬಿಲ್ ನಲ್ಲೇ ಸೇರಿದ್ದರಿಂದ ಹೆಚ್ಚು ಯೋಚಿಸದೆ ಅಲ್ಲಿಯೇ ತಿಂಡಿ ತಿನ್ನೋಣ ಎಂದು ನಿರ್ಧರಿಸಿ ಊಟದ ಹಾಲ್ ನತ್ತ ಹೆಜ್ಜೆ ಹಾಕಿದೆವು. ಅಲ್ಲಿ ಇದ್ದುದು ಬಫೆ ವ್ಯವಸ್ಥೆ. ಬಫೆ ಇಡೀ ಸುತ್ತಾಡಿ ನಮಗೆ ತಿನ್ನಲು ಯೋಗ್ಯವಾದಂತಹದ್ದನ್ನು ಹುಡುಕಿ ತಟ್ಟೆಗೆ ಬಡಿಸಿಕೊಂಡಾಗ ಕಂಡದ್ದು ಎರಡು ತುಂಡು ಬ್ರೆಡ್, ಬಟರ್ ಬನ್, ನಾಲ್ಕೈದು ಹಣ್ಣಿನ ಹೋಳು ಮತ್ತು ಜ್ಯೂಸ್ !! ದೋಸೆ, ಇಡ್ಲಿಯಂತಹ ತಿಂಡಿಯಿಲ್ಲದೆ ಐದು ದಿನಗಳು ಕಳೆದದ್ದರಿಂದ ನಮ್ಮ ನಾಲಿಗೆಯೂ ಸಹ ಜಡ್ಡುಗಟ್ಟಿದ್ದವು. ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡು ನಾವು ತಿನ್ನುತ್ತಿದ್ದರೆ ನನ್ನ ಗಂಡ ವೇಗನ್ ಆಹಾರವೆಂದು ಫಲಕ ಹಾಕಿದ ಸೊಪ್ಪು ಸದೆಗಳನ್ನು, ತುರಿದ ಕ್ಯಾರೆಟ್ ಹಾಗೂ ಕ್ಯಾಬೇಜ್ ಅನ್ನು ತಿನ್ನುತ್ತಿದ್ದರು. "ಇದನ್ನೇ ನಾನು ನಿಮಗೆ ಮನೆಯಲ್ಲಿ ಕೊಟ್ಟಿದ್ದರೆ...." ಎಂದು ನಾನು ರಾಗವೆಳೆದಾಗ "ಇನ್ನೇನು ಮಾಡುವುದು. ಬೇರೆ ವಿಧಿಯಿಲ್ಲ" ಎಂದು ಹೇಳಿದಾಗ "ನಾಳೆಯಿಂದ ನಿನ್ನೆ ಹೋದ ಹೋಟೆಲ್ ಉತ್ಸವ್ ಗೆ ಹೋಗೋಣ" ಎಂದು ಎಲ್ಲರೂ ನಿರ್ಧರಿಸಿದೆವು. ತಿನ್ನುವುದಕ್ಕೂ ತನಗೂ ಸಂಬಂಧವಿಲ್ಲವೆಂಬಂತೆ ಮಗಳು ಮಾತ್ರ ಹೊರಗಡೆ ಉದ್ಯಾವನದಲ್ಲಿದ್ದ ಚಿಕ್ಕ ಮರವನ್ನು ಹತ್ತಿ ಆಟವಾಡುತ್ತಿದ್ದಳು. ಹೊಟ್ಟೆ ತುಂಬದಿದ್ದರೂ ನಮ್ಮ ಬೆಳಗಿನ ತಿಂಡಿಯ ಗೌಜಿಗೆ ಒಂದು ಗಂಟೆ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಅವಸರದಲ್ಲಿ ಹೊರ ಬಂದು ನಮ್ಮಿಂದಾಗಿ ಒಂದು ಗಂಟೆ ನಮಗಾಗಿ ಕಾದ ಡ್ರೈವರ್ ಬಳಿ ಕ್ಷಮೆ ಕೇಳಿ ಕಾರನ್ನು ಏರಿದೆವು.
ಅಂದು ನಾವು ಮೊದಲು ನೋಡಿದ ಸ್ಥಳ 'ಉಲುವಾಟು ದೇವಾಲಯ'. ಇದು ಎತ್ತರದ ಕಲ್ಲಿನ ಮೇಲೆ ಸಮುದ್ರಕ್ಕೆ ಅಭಿಮುಖವಾಗಿದ್ದು, ಸುತ್ತಲೂ ಕಾಡಿನಿಂದ ಆವೃತವಾಗಿದ್ದು ಶಿವನನ್ನು ಆರಾಧಿಸುವ ದೇವಾಲಯ. ಉಲುವಾಟು ದೇವಾಲಯವನ್ನು ತಲುಪುವ ಮೊದಲೇ ನಮ್ಮ ಡ್ರೈವರ್ "ಇಲ್ಲಿ ಮಂಗಗಳಿವೆ. ಹಾಗಾಗಿ ಜಾಗ್ರತೆ ವಹಿಸಿ. ನಿಮ್ಮ ಮೊಬೈಲ್, ಬ್ಯಾಗ್ ಹಾಗೂ ಕನ್ನಡಕದ ಬಗ್ಗೆ ಎಚ್ಚರ ವಹಿಸಿ" ಎಂದು ಹೇಳಿದ್ದರು. ಇದನ್ನು ಕೇಳಿದ್ದೇ, ಮಗಳು ಮಾತ್ರ ಅಲ್ಲಿರುವಷ್ಟು ಹೊತ್ತು ನೆಲದ ಮೇಲೆ ಕಾಲಿಡಲಿಲ್ಲ. ನಾವು ಕೇವಲ ಒಂದು ನೀರಿನ ಬಾಟಲ್ ಹಾಗೂ ಬಿಸಿಲು ಇದ್ದುದರಿಂದ ತಲೆಗೆ ಹ್ಯಾಟ್ ಇಷ್ಟನ್ನು ಮಾತ್ರ ತೆಗೆದುಕೊಂಡು ಹೊರಟೆವು. ಒಳಗೆ ಪ್ರವೇಶಿಸುತ್ತಿದ್ದಂತೆಯೇ ದಟ್ಟ ಮರಗಳಿಂದ ಕೂಡಿದ ಕಾಡು. ಈಗ ಮಂಗಗಳು ಕಾಣಬಹುದು. ಎಲ್ಲಿಂದ ಬರುತ್ತವೋ ಎಂಬ ಆತಂಕದಿಂದಲೇ ನಡೆಯುತ್ತಾ ಕಲ್ಲಿನ ಬುಡವನ್ನು ತಲುಪಿದರೂ ಒಂದೇ ಒಂದು ಮಂಗ ಕಾಣಲಿಲ್ಲ. ಹಾಗಾದರೆ ಮಂಗಗಳೇ ಇಲ್ಲವೇನೋ ಎಂದು ಯೋಚಿಸಿ ಕಲ್ಲಿಗೆ ಅಪ್ಪಳಿಸುತ್ತಿದ್ದ ಸಾಗರದ ಅಲೆಗಳನ್ನು, ಅನಂತದವರೆಗೂ ಹಬ್ಬಿದ ನೀಲ ಸಾಗರದ ಗಂಭೀರತೆಯನ್ನು ನೋಡುತ್ತಾ ಕಾಡಿಗೆ ಸುತ್ತು ಹಾಕುತ್ತಾ ಕಲ್ಲಿನ ಬುಡದಲ್ಲಿದ್ದ ದೊಡ್ಡ ಮರದ ಕೆಳಗೆ ಕುಳಿಕೊಂಡೆವು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಕೆಳಗೆ ಭೋರ್ಗರೆಯುವ ಸಮುದ್ರವನ್ನೂ ನೋಡುತ್ತಾ, ಮೆಟ್ಟಿಲುಗಳನ್ನು ಹತ್ತುತ್ತಾ ಮೇಲೇರಿದಂತೆ ದೇವಾಲಯದ ಪ್ರಾಂಗಣವನ್ನು ತಲುಪಿದಾಗ ದೊಡ್ಡ ಕಲ್ಲಿನ ಮೇಲೆ, ಮರಗಳ ಮೇಲೆಲ್ಲಾ ಮಂಗಗಳು!! ಇನ್ನು ಬಹಳ ಎಚ್ಚರಿಕೆಯಿಂದಿರಬೇಕೆಂದು ಹೆಚ್ಚು ಸದ್ದು ಮಾಡದೇ, ಅವುಗಳನ್ನೂ ಸಹ ನೋಡದೇ ನಮ್ಮಷ್ಟಕ್ಕೆ ನಾವು ನಡೆಯುತ್ತಿದ್ದರೆ ನನ್ನ ಕೈಯಲ್ಲಿದ್ದ ಬಾಟಲಿಯನ್ನು ಯಾರೋ ಜಗ್ಗಿದ ಹಾಗಾಯಿತು. ನೋಡಿದರೆ ಒಂದು ಮಂಗ ನೀರಿನ ಬಾಟಲಿಯನ್ನು ಕಸಿದುಕೊಳ್ಳಲು ಎಳೆಯುತ್ತಿದೆ!! ನಾನು ಭಯದಿಂದ ಕೂಗಿದಾಗ ಮಂಗವೇನೋ ಓಡಿ ಹೋಯಿತು. ಆದರೆ ಅಲ್ಲಿದ್ದ ಪ್ರವಾಸಿಗರೆಲ್ಲರೂ ನಮ್ಮನ್ನೇ ನೋಡತೊಡಗಿದರು. ನಮ್ಮ ಜೊತೆ ಮಗಳೂ ಇದ್ದುದರಿಂದ ಮತ್ತಷ್ಟು ಜಾಗ್ರತೆಯಿಂದ ಮಂಗಗಳಿಲ್ಲದ ಜಾಗವೆಂದು ಸ್ವಲ್ಪ ಎತ್ತರಕ್ಕೆ ಹೋಗಿ ಅಲ್ಲಿಂದ ಎದುರಿಗಿರುವ ಕಾಡನ್ನೂ, ಬದಿಯಲ್ಲಿರುವ ಸಮುದ್ರವನ್ನು ನೋಡುತ್ತಾ ನಿಂತಾಗ, ಅದೆಲ್ಲಿತ್ತೋ ಮಂಗ! ಥಟ್ಟನೆ ಹಾರಿ ಬಂದು ನನ್ನ ಗಂಡನ ತಲೆಯ ಮೇಲಿದ್ದ ಹ್ಯಾಟನ್ನು ಎಳೆದುಕೊಂಡು ಮರದ ಮೇಲೆ ಕುಳಿತು, ನಾವು ನೋಡುತ್ತಿರುವಂತೆಯೇ ಅದನ್ನು ಕಚ್ಚಿ ತುಂಡು ಮಾಡಿತು!!😂😂 ಮಗಳಿಗಂತೂ, ದಿನಾ ರಾತ್ರಿ ಮಲಗುವಾಗ ಹೇಳುತ್ತಿದ್ದ 'ಮಂಗ ಮತ್ತು ಟೊಪ್ಪಿ' ಕಥೆಯನ್ನು ಲೈವ್ ನೋಡಿದ ಅನುಭವ. ಹಾಗಾಗಿ ಅವಳು ನಕ್ಕೂ ನಕ್ಕೂ ನಿಮಿಷಕ್ಕೊಮ್ಮೆ ಅಪ್ಪನ ತಲೆ ಸವರುತ್ತಾ ತಮಾಷೆಯನ್ನು ಅನುಭವಿಸಿದಳು. ಈ ಮಂಗಗಳ ಸಹವಾಸವಲ್ಲ ಎಂದು ನಾವು ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಮೆಟ್ಟಿಲುಗಳನ್ನು ಇಳಿಯುತ್ತಾ ವಿಶಾಲವಾದ ಮರದ ಬುಡವನ್ನು ತಲುಪಿದೆವು. ತಂಪಾದ ಗಾಳಿ ಬೀಸುತ್ತಿದ್ದರಿಂದ ಮರದ ಕೆಳಗೆ ಕುಳಿತು, ಮೇಲೆ ಹತ್ತಿದ ಆಯಾಸವನ್ನು ಪರಿಹರಿಸಿಕೊಂಡೆವು.
ಅಲ್ಲಿಂದ ಹೊರಟು ಮಧ್ಯಾಹ್ನದ ಊಟವನ್ನು ಮುಗಿಸಿ ಮುಂದೆ ಹೋಗಿದ್ದು 'ಪಾಂಡವ ಬೀಚ್' ಗೆ. ನಮ್ಮ ಮಂಗಳೂರಿನ ಬೀಚಿಗೂ ಇಲ್ಲಿಯ ಬೀಚಿಗೂ ಇರುವ ವ್ಯತ್ಯಾಸವೆಂದರೆ ನಮ್ಮಲ್ಲಿ ಕಡಲ ತೀರ ನೆಲಕ್ಕೆ ಸಮಾನಾಂತರವಾಗಿದ್ದರೆ, ಇಲ್ಲಿನ ಕಡಲ ತೀರವನ್ನು ನೋಡಲು ಕಡಿದಾದ ಕಲ್ಲಿನ ಬೆಟ್ಟದಲ್ಲಿ ಇಳಿದು ಇಲ್ಲವೇ ದಟ್ಟ ಕಾಡಿನ ನಡುವೆ ಸಾಗಬೇಕು. ಪಾಂಡವ ಬೀಚ್ ನಲ್ಲಿ ಸಹ ಕಲ್ಲಿನ ಬೆಟ್ಟವನ್ನು ಕಡಿದು ರಸ್ತೆಯನ್ನು ನಿರ್ಮಿಸಿ, ಬೆಟ್ಟದ ಗೋಡೆಯಲ್ಲಿ ಪಂಚ ಪಾಂಡವರ ಹಾಗೂ ಅವರ ತಾಯಿ ಕುಂತಿಯ ಎತ್ತರದ ಮೂರ್ತಿಯನ್ನು ಕೆತ್ತಿದ್ದಾರೆ. ಬೀಚ್ ಅನ್ನು ನೋಡುತ್ತಿದ್ದಂತೆಯೇ ಮಗಳ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಒಂದೇ ಸಮನೆ "ನೀರಿನಲ್ಲಿ ಆಡೋಣ" ಎಂದು ಹೇಳಿದ್ದರಿಂದ, ಸೂರ್ಯನ ಬಿಸಿಲಿನ ತಾಪ ನೆತ್ತಿಯನ್ನು ಸುಡುತ್ತಿದ್ದರೂ ಅಪ್ಪ ಮಗಳು ನೀರಿನಲ್ಲಿ ಆಟವಾಡಿದರು. ಅಲ್ಲದೇ ನೀರು ಬಹಳ ತಂಪಾಗಿಯೂ ಇತ್ತು. ಪಾಂಡವ ಬೀಚ್ ನಲ್ಲಿ ನೀರಿಗಿಳಿಯುವಷ್ಟು ದೂರ ನೈಸರ್ಗಿಕವಾಗಿಯೇ ಸಿಮೆಂಟ್ ಹಾಕಿದಂತೆ ಕಲ್ಲಿನ ಹಾಸು ಇದ್ದುದರಿಂದ ಸಮುದ್ರದ ತೆರೆ ಮರಳಿ ಹೋಗುವಾಗ ಕಾಲಿನ ಅಡಿಯಿರುವ ಮರಳು ಕುಸಿಯುವ ಭಯವಿಲ್ಲದೆ ನಿಂತು ಅಥವಾ ಕುಳಿತು ಆಡಬಹುದಾಗಿತ್ತು. ನಾವು ನೋಡಿದ ಉಳಿದ ಬೀಚ್ ಗಳಿಗೆ ಹೋಲಿಸಿದರೆ ಈ ಬೀಚ್ ನೀರಿನಲ್ಲಿ ಇಳಿದು ಆಟವಾಡಲು ಹೆಚ್ಚು ಆಳವಿಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಬಹಳ ಯೋಗ್ಯವಾಗಿತ್ತು. ಸ್ವಚ್ಛತೆಯ ದೃಷ್ಟಿಯಿಂದ ನೋಡಿದರೆ ನಾವು ನೋಡಿದ ಎಲ್ಲಾ ಬೀಚ್ ಗಳೂ ಸಹ ಅತ್ಯುತ್ತಮವಾಗಿದ್ದವು. ಎಷ್ಟು ಆಟವಾಡಿದರೂ ಸಹ ಮಗಳಿಗೆ ಸಮಾಧಾನವಾಗಲಿಲ್ಲ. ಕಾರಿನಲ್ಲಿ ಕುಳಿತು "ನನಗೆ ಇನ್ನೂ ನೀರಿನಲ್ಲಿ ಆಡಬೇಕಿತ್ತು" ಎಂದು ಹೇಳತೊಡಗಿದಳು.
ಪಾಂಡವ ಬೀಚ್ ನಿಂದ ನಾವು ಹೋಗಿದ್ದು 'ಗ್ರೀನ್ ಬೌಲ್' ಬೀಚ್ ಗೆ. ಅಲ್ಲಿ ಹೆಚ್ಚು ಜನರೂ ಸಹ ಇರಲಿಲ್ಲ. ದಟ್ಟ ಮರಗಿಡಗಳ ಮಧ್ಯೆ ಇದ್ದ ಮೆಟ್ಟಿಲುಗಳನ್ನು ತೋರಿಸಿ "ಇಲ್ಲಿ ಇಳಿದು ಹೋಗಿ" ಎಂದು ಅಲ್ಲಿದ್ದವರೊಬ್ಬರು ಹೇಳಿದರು. ಸ್ವಲ್ಪ ಮೆಟ್ಟಿಲುಗಳು ಎಂದು ತಿಳಿದು ನಾವು ಇಳಿಯತೊಡಗಿದೆವು. ಇಪ್ಪತ್ತು ಮೆಟ್ಟಿಲುಗಳನ್ನು ಇಳಿದರೂ ಬೀಚ್ ಕಾಣಿಸುತ್ತಿಲ್ಲ! ಅತ್ತೆ ಮಾವನಿಗೆ ಸುಸ್ತಾಗಿ "ನೀವು ಹೋಗಿ ಬನ್ನಿ. ನಾವು ವಾಪಾಸು ಮೇಲೆ ಹೋಗಿ ಅಲ್ಲಿ ಕುಳಿತಿರುತ್ತೇವೆ" ಎಂದು ಹೇಳಿ ಅವರು ಹಿಂತಿರುಗಿದರು. ನಾವು ಮತ್ತೆ ಮೆಟ್ಟಿಲುಗಳನ್ನು ಇಳಿಯಲು ಪ್ರಾರಂಭಿಸಿದೆವು. ಅಲ್ಲೊಬ್ಬರು ಇಲ್ಲೊಬ್ಬರು ಸರ್ಫ್ ಮಾಡಿದ ಯುವಕರು ವಾಪಾಸಾಗುತ್ತಿದ್ದರಷ್ಟೇ ಹೊರಟು ಪ್ರವಾಸಿ ಜನರ ಸುಳಿವೇ ಇರಲಿಲ್ಲ. ಬೀಚ್ ಅನ್ನು ತಲುಪಲು ಎಷ್ಟು ಮೆಟ್ಟಿಲುಗಳನ್ನು ಇಳಿಯಬೇಕೆಂದು ಯಾರನ್ನಾದರೂ ಕೇಳೋಣವೆಂದರೆ ಒಬ್ಬನೇ ಒಬ್ಬ ಮನುಷ್ಯನ ಸುಳಿವಿಲ್ಲ. "ಇಳಿತಾ ಇರಿ... ಇಳಿತಾ ಇರಿ"( ತೊಳಿತ ಇರಿ... ತೊಳಿತ ಇರಿ ಎಂಬ ಜಾಹೀರಾತಿನ ಟ್ಯೂನ್ ನಲ್ಲಿ) ಎಂದು ಹೇಳುತ್ತಾ 😂 ಮತ್ತಷ್ಟು ಮೆಟ್ಟಿಲುಗಳನ್ನು ಇಳಿದೆವು. ಸುಮಾರು 80 ಮೆಟ್ಟಿಲುಗಳನ್ನು ಇಳಿದಾಗ ಕಾಲುಗಳು ನಡುಗಲು ಶುರುವಾಗಿ ಇನ್ನು ಒಂದು ಮೆಟ್ಟಿಲು ಸಹ ಇಳಿಯದಂತೆ ಮುಷ್ಕರ ಹೂಡತೊಡಗಿದವು. ಅಂತೂ ಇಂತೂ ಅಂದಾಜು 100 ಮೆಟ್ಟಿಲುಗಳನ್ನು ಇಳಿದಾಗ ಸಮುದ್ರ ಕಾಣಿಸಿತು. ಅಬ್ಬ!! ಎಂದು ಮರಳ ಮೇಲೆ ಕೂತೆವು. ಈ ಕಡಲ ತೀರ ಹೆಚ್ಚು ಆಳವಾಗಿತ್ತು. ಅಲ್ಲದೇ ಇದು ಸರ್ಫ್ ಮಾಡಲು ಯೋಗ್ಯವಾದಂತಹ ಬೀಚ್. ಹಾಗಾಗಿ ಹೆಚ್ಚಿನ ಯುವಕರು ಇಲ್ಲಿ ಸರ್ಫ್ ಆಡುತ್ತಿದ್ದರು. ಕ್ಷಣಕ್ಕೊಮ್ಮೆ ರಕ್ಷಣೆಗಾಗಿ ಹೆಲಿಕಾಪ್ಟರ್ ಆಗಸದಲ್ಲಿ ಹಾರಾಡುತ್ತಲೇ ಇತ್ತು. ನಮ್ಮಂತಹವರು ನೀರಿನಲ್ಲಿ ಇಳಿದು ಆಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಇದೆಲ್ಲಾ ತಿಳಿದದ್ದು ಅಲ್ಲಿಗೆ ಹೋದ ಮೇಲೆಯೇ. ಅಂತರ್ಜಾಲದಲ್ಲಿ ನೋಡಿದಾಗ ಚೆನ್ನಾಗಿ ಕಂಡಿತೆಂದು ಆಯ್ದ ಜಾಗದ ಕಥೆ ಹೀಗಾಗಿತ್ತು. ಅಲೆಗಳು ಸತತವಾಗಿ ಅಪ್ಪಳಿಸಿ ಕಲ್ಲುಗಳು ಗುಹೆಯಂತಹ ವಿನ್ಯಾಸದಲ್ಲಿದ್ದು ನೋಡಲು ಆಕರ್ಷಕವಾಗಿತ್ತು. ಮಗಳು ಅಲ್ಲಿದ್ದ ಆಕರ್ಷಕ ಕಲ್ಲುಗಳನ್ನು ಆರಿಸಿ ತೆಗೆದುಕೊಂಡಳು. ಹೀಗೆ ಸ್ವಲ್ಪ ಸಮಯ ಕಳೆದು ಪುನಃ ಮೆಟ್ಟಿಲುಗಳನ್ನು ಹತ್ತಬೇಕು ಎಂಬುದನ್ನು ನೆನೆಸಿಕೊಂಡಾಗ ಇಲ್ಲಿಯೇ ಇನ್ನಷ್ಟು ಹೊತ್ತು ಕುಳಿತುಕೊಳ್ಳೋಣ ಎಂದು ಅನಿಸುತ್ತಿತ್ತು. ಸಂಜೆಯಾಗುತ್ತಾ ಬಂದುದರಿಂದ ಹೆಚ್ಚು ಹೊತ್ತು ನಿಲ್ಲದೆ ಮೇಲೇರಲು ಪ್ರಾರಂಭಿಸಿದೆವು. 'ಮೇಲೇರಿದವನು ಕೆಳಗಿಳಿಯಲೇಬೇಕು' ಎಂಬ ಕವಿವಾಣಿ ನಮ್ಮ ಮಟ್ಟಿಗೆ ಆ ದಿನ ಸುಳ್ಳಾಗಿ ಕೆಳಗಿಳಿದವರು ಮೇಲೇರಬೇಕಾಗಿ ಬಂತು! ಅಂತೂ ಇಂತೂ ಮೆಟ್ಟಿಲುಗಳನ್ನು ಹತ್ತಿ ಉಸ್ಸಪ್ಪ ಎಂದು ಏದುಸಿರು ಬಿಡುತ್ತಾ "ನಾಳೆಯಿಂದ.... ಅಲ್ಲಲ್ಲ.... ಬಾಲಿಯಿಂದ ಊರಿಗೆ ಹೋದ ಮೇಲೆ ಪ್ರದಿನವೂ ತಪ್ಪದೇ ವಾಕಿಂಗ್ ಮಾಡುತ್ತೇನೆ" ಎಂದು ನಾನು ಸಾವಿರದ ಒಂದನೆಯ ಸಲ ನಿರ್ಧರಿಸಿದೆ.
ಕಾರಲ್ಲಿ ಕುಳಿತು "ಕಾಲು ನೋವಿನಲ್ಲಿ ಇನ್ನು ನಾಳೆ ಬೆಳಗ್ಗೆ ಏಳಲು ಸಾಧ್ಯವಾಗುತ್ತದೋ ಇಲ್ಲವೋ" ಎಂಬ ಆತಂಕದಲ್ಲಿ ನಾವು ಮಾತನಾಡಿಕೊಳ್ಳುತ್ತಾ ಸಾಗಬೇಕಾದರೆ 'ಮಲಸ್ತಿ ಬೀಚ್' ಅನ್ನು ತಲುಪಿದೆವು. ಗ್ರೀನ್ ಬೌಲ್ ಬೀಚ್ ನಿಂದ ಮಲಸ್ತಿ ಬೀಚ್ ಗೆ ಹೆಚ್ಚು ಅಂತರವಿರಲಿಲ್ಲ. 'ಮಲಸ್ತಿ ಬೀಚ್' ಆ ದಿನದ ಕೊನೆಯ ಬೀಚ್ ಆದುದರಿಂದ ನೀರಿನಲ್ಲಿ ಆಡೋಣವೆಂದು ನಮ್ಮ ಬಟ್ಟೆಯನ್ನು ಬದಲಾಯಿಸಿ ಕಡಲ ತೀರಕ್ಕೆ ಬಂದಾಗ ತೀರದಲ್ಲೇ ಆಳವಾಗಿದ್ದು, ಅಪಾಯದ ಸೂಚನೆಯನ್ನು ತೋರಿಸುವ ಕೆಂಪು ಬಾವುಟ ತೀರದಲ್ಲೇ ಹಾರಾಡುತ್ತಿತ್ತು. ಹಾಗಾಗಿ ನೀರಿಗಿಳಿಯುವ ಸಾಹಸವನ್ನು ಮಾಡಲಿಲ್ಲ. ನೀರಿಗಿಳಿಯದಿದ್ದರೇನಂತೆ
ನಾವು ತಲುಪುವುದರೊಳಗೆ ಸೂರ್ಯಾಸ್ತವೂ ಆಗಿದ್ದರಿಂದ ಓಕುಳಿಯಾಡಿದಂತೆ ಕೆಂಪು ಬಣ್ಣದ ಚಿತ್ತಾರ ಬಾನಿನಲ್ಲಿ ಮೂಡಿತ್ತು. ಹಿತವಾದ ಗಾಳಿ, ಕಲಾವಿದನ ಪೇಂಟಿಂಗ್ ನಂತೆ ಭಾಸವಾದ ಬಾನು ಸುತ್ತಲಿನ ದೃಶ್ಯ ಮನಮೋಹಕವಾಗಿತ್ತು. ಸ್ವಲ್ಪ ದೂರದಲ್ಲಿ ಹಡಗುಗಿನಂತಹದ್ದೇನನ್ನೋ ನಿರ್ಮಾಣ ಮಾಡುತ್ತಿದ್ದರು. ಹಾಗಾಗಿ ಅದೇನೆಂದು ನೋಡೋಣವೆಂದು ಅತ್ತ ಹೋದೆವು. ಅಲ್ಲಿ ಹೆಲಿಪ್ಯಾಡ್ ಇದ್ದು, ಬಾನಿನಲ್ಲಿ ಹರಡಿದ ಕೆಂಬಣ್ಣ ಸಮುದ್ರದಲ್ಲಿ ಪ್ರತಿಫಲಿಸಿ ಅದ್ಭುತ ದೃಶ್ಯ ವೈಭವವನ್ನೇ ಕಟ್ಟಿಕೊಟ್ಟಿತು. ಹಾಗಾಗಿ ನಾವು ಸಾಧ್ಯವಾದಷ್ಟು ಫೋಟೋ ಹಾಗೂ ವೀಡಿಯೋಗಳನ್ನು ತೆಗೆದುಕೊಳ್ಳುತ್ತಾ, ಹೀಗೆ ಕಣ್ಣು ಹಾಯಿಸಿದಾಗ
ವಿದೇಶೀ ಮಾಡೆಲ್ ಗಳು ಸಹ ಬೀಚ್ ನಲ್ಲಿ ತಮ್ಮ ಫೋಟೋಶೂಟ್ ನಡೆಸುತ್ತಿದ್ದರು.
ಕತ್ತಲಾವರಿಸುತ್ತಿದ್ದಂತೆಯೇ ಸುತ್ತಲಿದ್ದ ಹೋಟೇಲ್ ಹಾಗೂ ಪಬ್ ಗಳಲ್ಲಿ ಕಿವಿಗಡಚಿಕ್ಕುವ ಪಾಶ್ಚಾತ್ಯ ಸಂಗೀತ ಆರಂಭವಾಗಿ ವಿದೇಶಿಯರಿಂದ ತುಂಬತೊಡಗಿತು.
ಬೀಚ್ ನಲ್ಲಿ ಜನ ಸಂಚಾರ ವಿರಳವಾದದ್ದರಿಂದ ನಾವು ನಮ್ಮ ಹೋಟೇಲ್ ಗೆ ಹಿಂತಿರುಗಿದೆವು.
Comments
Post a Comment