ಓದಿನ ಸುಖ - "ಅಮೇರಿಕದಲ್ಲಿ ನಾನು"
ಪುಸ್ತಕದ ಹೆಸರು : ಅಮೇರಿಕಾದಲ್ಲಿ ನಾನು ಲೇಖಕರು : ಬಿ ಜಿ ಎಲ್ ಸ್ವಾಮಿ ಕಾಲೇಜಿನಲ್ಲಿದ್ದಾಗ ಬಿ ಜಿ ಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ, ಹಸಿರು ಹೊನ್ನು ಮುಂತಾದ ಕೃತಿಗಳನ್ನು ಓದಿದ್ದರಿಂದ ಅವರ ಹಾಸ್ಯ ಭರಿತ ಶೈಲಿ ಪರಿಚಿತವೇ ಆಗಿತ್ತು. ಆದರೆ ಈ ಪುಸ್ತಕದ ಬಗ್ಗೆ ಎಲ್ಲಿಯೂ ವಿಮರ್ಶೆ, ಅನಿಸಿಕೆಯನ್ನು ಓದಿಲ್ಲದಿದ್ದರಿಂದ ಕುತೂಹಲದಿಂದ ಕೈಗೆತ್ತಿಕೊಂಡೆ. ಈ ಪುಸ್ತಕವನ್ನು ಪ್ರವಾಸ ಕಥನ ಎನ್ನುವುದಕ್ಕಿಂತ ಅಮೇರಿಕಾದಲ್ಲಿ ಅನುಭವಿಸಿದ ಲೇಖಕರ ಅನುಭವ ಕಥನ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ಲೇಖಕರ ಹಾಗೂ ಸಹ ಪ್ರಯಾಣಿಕರ ಪರದಾಟದ ಹಾಸ್ಯ ಪ್ರಸಂಗಗಳು ನಮ್ಮನ್ನು ನಗಿಸುತ್ತವೆ. ಮೊದಲ ಬರಹ 'ಹಡಗಿನಲ್ಲಿ'. 2ನೇ ಮಹಾಯುದ್ಧ ದಿಂದ ಹಿಂತಿರುಗುತ್ತಿದ್ದ ಸೈನಿಕರೊಂದಿಗೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಒಂದೇ ಆವರಣದಲ್ಲಿ ಸುಮಾರು 300 ಜನರ ಉಪಯೋಗಕ್ಕಿರುವ, ಎದುರು ಸಾಲಿನಲ್ಲಿ ಕೂತವರನ್ನು, ಬಂದು ಹೋಗುವವರನ್ನು ಕಾಣುವಂತೆ ನಿರ್ಮಿಸಿದ ಶೌಚಾಲಯಗಳಲ್ಲಿ ಭಾರತೀಯರ ಪರದಾಟ, ಅದನ್ನು ಕಂಡು ಹಡಗಿನ ಕ್ಯಾಪ್ಟನ್ ಸೂಚಿಸಿದ ಪರಿಹಾರ ಎಲ್ಲವೂ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. 'ನನ್ನ ಟೋಪಿ' ಎಂಬ ಶೀರ್ಷಿಕೆಯ ಬರಹ...