ದೇವತೆಗಳ ದ್ವೀಪದಲ್ಲಿ ಭಾಗ -2
ದೇವತೆಗಳ ದ್ವೀಪದಲ್ಲಿ ಭಾಗ 1
ಮೊದಲ ದಿನ ನಾವು ಉಳಿದುಕೊಂಡ ಹೋಟೆಲ್ ಗೆ ಹತ್ತಿರವಿದ್ದ ಸ್ಥಳಗಳನ್ನು ನೋಡುವುದಾಗಿತ್ತು. ಬೆಳಗಿನ ಉಪಹಾರವನ್ನು ಮುಗಿಸಿ ಉಬುಡು ಅರಮನೆಯನ್ನು ನೋಡಿದೆವು. ಅಲ್ಲಿ ಜಾತ್ರೆಯೋ, ಹಬ್ಬವೋ ಇದ್ದುದರಿಂದ ಎಲ್ಲಾ ಕಡೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಕೆಲವು ಕಡೆ ತೆಂಗಿನ ಗರಿಗಳನ್ನು ನೇಯ್ದು, ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಅಲ್ಲಿಂದ ಅಂದಾಜು 300m ಅಂತರದಲ್ಲಿದ್ದ ಸರಸ್ವತಿ ದೇವಸ್ಥಾನಕ್ಕೆ ಹೋದೆವು. ದೇವಾಲಯದ ಮಧ್ಯ ಭಾಗದಲ್ಲಿ ತಾವರೆ ಕೊಳವಿದ್ದು , ಸುತ್ತಲೂ ದೇವಾಲಯದ ಪ್ರಾಕಾರವಿದ್ದು ವಿವಿಧ ಪ್ರತಿಮೆಗಳಿಂದ ಆವೃತವಾಗಿದೆ. ನಾವು ಹೋದ ಬಾಲಿಯ ಎಲ್ಲಾ ದೇವಾಲಯಗಳಲ್ಲೂ ಒಳಗಿನ ಆವರಣಕ್ಕೆ ಬಾಲಿಯ ಸ್ಥಳೀಯರನ್ನು ಬಿಟ್ಟು ಉಳಿದವರಿಗೆ ಪ್ರವೇಶವಿರಲಿಲ್ಲ. ಈ ದೇವಸ್ಥಾನಕ್ಕೆ ಬಂದವರೆಲ್ಲರೂ ಅವರು ಕೊಟ್ಟ ಒಂದು ಬಟ್ಟೆಯನ್ನು ಧರಿಸಿಕೊಳ್ಳಬೇಕಿತ್ತು. ಇಷ್ಟು ನೋಡುವ ವೇಳೆಗೆ ಮಧ್ಯಾಹ್ನವಾಗಿತ್ತು. ಅಲ್ಲೇ ಹತ್ತಿರವಿದ್ದ ಆರ್ಟ್ ಗ್ಯಾಲರಿ ಹಾಗೂ ಕೆಲವು ಅಂಗಡಿಗಳಲ್ಲಿ ಶಾಪಿಂಗ್ ನಡೆಸಿ ಊಟಕ್ಕಾಗಿ ಭಾರತೀಯ ಹೊಟೇಲ್ ಅನ್ನು ಹುಡುಕತೊಡಗಿದೆವು. ಬಾಲಿಯಲ್ಲಿ ಭಾರತೀಯ ಹೊಟೇಲ್ ಗಳಿಗೆ ಹಾಗೂ ಭಾರತೀಯ ಶೈಲಿಯ ಊಟಕ್ಕೆ ಏನೂ ಕೊರತೆ ಇರಲಿಲ್ಲ. ಹತ್ತಿರದಲ್ಲೇ ಪಂಜಾಬಿ ಹೊಟೇಲ್ ಸಿಕ್ಕಿ ಅಲ್ಲೇ ಮಧ್ಯಾಹ್ನದ ಊಟವನ್ನು ಮಾಡಿದೆವು. ಮುಂದೆ ನಮ್ಮ ಪಯಣ ಬಾಲಿ ಜೋಕಾಲಿಯ ಕಡೆಗೆ ಸಾಗಿತು. ಬಾಲಿಯ ಜೋಕಾಲಿಗಳು ಇರುವುದು ಹಳ್ಳಿಗಳಲ್ಲಿ. ಹಾಗಾಗಿ ನಾವು ಸಾಗುತ್ತಿದ್ದ ಹಾದಿಯ ಸುತ್ತಲೂ ಭತ್ತದ ಗದ್ದೆಗಳು ಹಾಗೂ ಗಿಡ ಮರಗಳಿದ್ದು, ಆಕಾಶವೂ ಸಹ ಮೋಡದಿಂದ ಆವೃತವಾಗಿದ್ದು ಇನ್ನೇನು ಮಳೆ ಬರುವ ಹಾಗಿದ್ದ ವಾತಾವರಣ.. ಅಂತೂ ಸೇರುವ ಗಮ್ಯ ಹೇಗಿರುತ್ತದೋ ಗೊತ್ತಿರಲಿಲ್ಲ, ಸಾಗುವ ದಾರಿಯಂತೂ ಅತ್ಯಂತ ಮನಮೋಹಕವಾಗಿತ್ತು.
ಉಬುಡು ಅರಮನೆಯ ಮುಂಭಾಗದಲ್ಲಿ

ಮೇಲಿನಿಂದ ಗೋವಾ ಗಝದ ದೃಶ್ಯ ಹಾಗೂ ಅಲ್ಲಿದ್ದ ಅತ್ಯಂತ ಪುರಾತನ ಮರ
ದ್ವಾರದ ಮುಂದೆ ಅಪ್ಪ ಮಗಳು
ನಮಗೆಲ್ಲರಿಗೂ ಧರಿಸಲು ಅವರ ಗೌನ್ ನಂತಹ ದಿರಿಸನ್ನು ಕೊಟ್ಟಾಗ, ಇವಳು ತನಗೂ ಅಂತಹ ಬಟ್ಟೆ ಕೊಡಿ ಎಂದು ಕೇಳಿದಾಗ ಶಾಲಿನಂತಹ ಬಟ್ಟೆಯನ್ನು ಅವಳ ಸೊಂಟಕ್ಕೆ ಕಟ್ಟಿದರು. ಸ್ವಲ್ಪ ಹೊತ್ತಿನಲ್ಲಿ ಅದನ್ನು ಸೊಂಟದಿಂದ ಬಿಚ್ಚಿ ಹೆಗಲಿಗೆ ಹಾಕಿಕೊಂಡಳು.
ನಮ್ಮಲ್ಲಿ ವಿವಿಧ ಚಟುವಟಿಕೆಗಳಿಂದ ಕೂಡಿರುವ ರೆಸಾರ್ಟ್ ಗಳು ಇರುವಂತೆ ಇಲ್ಲೂ ಸಹ ಬೇರೆ ಬೇರೆ ಜನರ ಒಡೆತನದ ಜಾಗಗಳಲ್ಲಿ , ಭತ್ತದ ಗದ್ದೆಗಳಲ್ಲಿ ವಿವಿಧ ಚಟುವಟಿಕೆಗಳಿಂದ ಹಾಗೂ ಸಾಹಸ ಕ್ರೀಡೆಗಳಿಂದ ಕೂಡಿದ ಸ್ಥಳಗಳಿರುತ್ತವೆ. ನಾವು ಮೊದಲೇ ನಮ್ಮ ಡ್ರೈವರ್ ಬಳಿ ನಮಗೆ ಜೋಕಾಲಿ ಮಾತ್ರ ಇರುವಂತಹ ಸ್ಥಳಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದೆವು. ಅದರಂತೆಯೇ ಅವರು ವಿವಿಧ ಬಗೆಯ ಜೋಕಾಲಿಗಳಿರುವ ಒಂದು ಜಾಗಕ್ಕೆ ಕರೆದುಕೊಂಡು ಹೋದರು. ಬಾಲಿಯ ಬೇರೆ ಎಲ್ಲಾ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿಯ ಪ್ರವೇಶ ದರ ಸ್ವಲ್ಪ ದುಬಾರಿಯೇ. ಅಲ್ಲದೇ ಆರೋಗ್ಯ ಸಮಸ್ಯೆಗಳಿರುವವರಿಗೆ, ವಯಸ್ಸಾದವರಿಗೆ, ಮಕ್ಕಳಿಗೆ ಜೋಕಾಲಿಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ. ಬಾಲಿಗೆ ಹೋಗಬೇಕೆಂದು ನಿರ್ಧರಿಸಿದ ದಿನದಿಂದಲೂ ಬಾಲಿ ಜೋಕಾಲಿಯಲ್ಲಿ ಕೂರುವುದು ನನ್ನ ಕನಸಾಗಿತ್ತು. ಕೆಳಗೆ ಹಸಿರು ಗಿಡ ಮರಗಳ ಸಾಲಿನ ಮಧ್ಯದಲ್ಲಿ ಹರಿಯುತ್ತಿದ್ದ ತೊರೆ, ತಲೆ ಎತ್ತಿದರೆ ನೀಲ ಆಗಸದಲ್ಲಿ ಮಳೆ ಸುರಿಸಲು ಸಿದ್ಧವಾಗಿರುವ ಮೋಡಗಳು, ನಡುವೆ ಮರದಿಂದ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಜೀಕಿದಾಗ.... ವಾಹ್!!! ಎಂತಹ ಸುಂದರ ಅನುಭವ!! ಇನ್ನೇನು ಮೋಡಗಳನ್ನು ಮುಟ್ಟಿ ಬಿಟ್ಟೆನೋ ಎಂಬ ಭಾವನೆ ಮೂಡಿದ್ದು ಸುಳ್ಳಲ್ಲ. ಅಲ್ಲಿದ್ದ ವಿವಿಧ ಬಗೆಯ ಜೋಕಾಲಿಯಲ್ಲಿ ಕುಳಿತು ಸುಂದರ ಅನುಭವದೊಂದಿಗೆ ಅಲ್ಲಿಂದ ಹೊರಟು 'ಗೋವಾ ಗಜಾ' ಎಂಬ ದೇವಸ್ಥಾನಕ್ಕೆ ಹೋದೆವು.
'ಗೋವಾ ಗಝ'ಕ್ಕೆ ಹೋಗುವ ದಾರಿ ಥೇಟ್ ನಮ್ಮ ಮಲೆನಾಡಿನಲ್ಲಿ ಸಾಗುವ ದಾರಿಯಂತೆಯೇ ಇತ್ತು. ಸುತ್ತಲೂ ಹಸಿರು ಮರಗಳ ಸಾಲಿನ ನಡುವೆ ಅಲ್ಲಲ್ಲಿ ತಿರುವಿನಿಂದ ಕೂಡಿದ ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಪ್ರಕೃತಿಯ ಮಧ್ಯದಲ್ಲಿ ಗುಹೆಯೊಳಗೆ ಈ ದೇವಾಲಯವಿದೆ. ಸುಮಾರು ಐವತ್ತು ಮೆಟ್ಟಿಲುಗಳನ್ನು ಇಳಿದು ಸಾಗಿದಾಗ ಕೆತ್ತನೆಯಿಂದ ಕೂಡಿದ ಗುಹೆಯಿದೆ. ಇದು ಗಣೇಶನ ದೇವಸ್ಥಾನ. ಗುಹೆಯ ಒಳಗಡೆ ಗಣೇಶನ ವಿಗ್ರದ ಜೊತೆಗೆ ಶಿವಲಿಂಗ ಇತ್ತು. ಅಲ್ಲದೇ ಪೂಜೆ ಮಾಡಿದ ಕುರುಹಾಗಿ ಹೂಗಳು, ನೈವೇದ್ಯಕ್ಕಾಗಿ ಇಟ್ಟ ಚಾಕಲೇಟ್, ಬಿಸ್ಕತ್ ಗಳಿದ್ದವು. ದೇವಾಲಯದ ಹೊರಗಡೆ ತುಂಬಾ ಹಳೆಯ ಮರ ಹಾಗೂ ಪುಷ್ಕರಿಣಿ ಆಕರ್ಷಣೀಯವಾಗಿತ್ತು.
ಗೋವಾ ಗಝ ಎಂಬ ಗುಹಾಂತರ ದೇವಾಲಯ
ಅಷ್ಟು ಹೊತ್ತಿಗೆ ನಿಧಾನವಾಗಿ ಕತ್ತಲು ಆವರಿಸುತ್ತಿತ್ತು. ರಾತ್ರಿಯ ಊಟವನ್ನು ಭಾರತೀಯ ರೆಸ್ಟೋರೆಂಟ್ ನಲ್ಲಿ ಮಾಡಿ ಮತ್ತೊಮ್ಮೆ ಉಬುಡುವಿನ ರಸ್ತೆಯಲ್ಲಿ ಅಡ್ಡಾಡಿ ನಮ್ಮ ಹೊಟೇಲ್ ಗೆ ವಾಪಾಸ್ಸಾದೆವು.
Comments
Post a Comment