ಓದಿನ ಸುಖ "ಧೀರೆ"

ಪುಸ್ತಕದ ಹೆಸರು: ಧೀರೆ (ಕೇತ್ಕರ್ ವಹಿನಿ)

ಲೇಖಕರು : ಉಮಾ ಕುಲಕರ್ಣಿ(ಮರಾಠಿ ಮೂಲ)

ಅನುವಾದಕರು : ವಿರೂಪಾಕ್ಷ ಕುಲಕರ್ಣಿ 


        ಕಳೆದ ವರ್ಷದ ಮಂಗಳೂರು ಲಿಟ್ ಫೆಸ್ಟ್ ನಲ್ಲಿದ್ದ ಸಾಹಿತ್ಯ ಭಂಡಾರದ ಸ್ಟಾಲ್ ನಲ್ಲಿ ಪುಸ್ತಕವನ್ನು ನೋಡುತ್ತಿದ್ದಾಗ "ಧೀರೆ" ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕವಾಗಿತ್ತು. ಪುಸ್ತಕದ ಎರಡು ಪುಟ ಓದುತ್ತಿದ್ದಂತೆ ನನಗೆ ಇಷ್ಟವಾಗಿ ಕೊಳ್ಳಲು ಇತರ ಪುಸ್ತಕಗಳ ಜೊತೆ ಸೇರಿಸಿದೆ. ನಾನು ಪುಸ್ತಕವನ್ನು ಓದುತ್ತಿದ್ದನ್ನು ಕಂಡು ಅಲ್ಲಿದ್ದ ವ್ಯಕ್ತಿಯೊಬ್ಬರು "ಪುಸ್ತಕ ತುಂಬಾ ಚೆನ್ನಾಗಿದೆ. ಮಹಾರಾಷ್ಟ್ರದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ದುಡಿದವರೊಬ್ಬರ ಕಥೆ" ಎಂದು ಹೇಳಿದಾಗ ಇನ್ನಷ್ಟು ಆಸಕ್ತಿ ಮೂಡಿಸಿತು.

           ಸ್ವಾತಂತ್ರ್ಯಾ ಪೂರ್ವದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ಶ್ರಮಿಸಿದ ಹಾಗು ತಮ್ಮೆಲ್ಲ ಹೆಣ್ಣುಮಕ್ಕಳನ್ನು ಓದಿಸಿದ ಮಹಾರಾಷ್ಟ್ರದ ಕುಟುಂಬಕ್ಕೆ ಸೊಸೆಯಾಗಿ ಹೋದ ಮಾಲತಿಬಾಯಿ ಕೇತ್ಕರ್ ಅವರ ಜೀವನ ಚರಿತ್ರೆಯೇ "ಧೀರೆ".

             ಮುಂಬಯಿಯ ಮಲಾಡದಲ್ಲಿ ಹುಟ್ಟಿದ ಮಾಲತಿಬಾಯಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಏಳನೇ ಕ್ಲಾಸ್ ನವರೆಗೆ ಓದಿದ ಇವರು ಮುಂದೆ ಓದುವ ಇಚ್ಛೆಯಿದ್ದರೂ ಸಹ ಹೆಚ್ಚಿನ ಖರ್ಚು ಅಮ್ಮನ ಮೇಲೆ ಬೀಳುವುದರಿಂದ ಓದುವುದನ್ನು ನಿಲ್ಲಿಸಬೇಕಾಯಿತು. ಮುಂದೆ 1938 ರಲ್ಲಿ ಮಾಧವರಾಯರನ್ನು ಮದುವೆಯಾಗಿ ಕೊಂಕಣದ ಕರಂಬವಣೆ ಎಂಬ ಊರಿನ ಜಮೀನ್ದಾರರಾದ ಕೇತಕ್ ಮನೆತನದ ಸೊಸೆಯಾಗಿ ಹೊಸ ಜೀವನವನ್ನು ಆರಂಭಿಸುತ್ತಾರೆ.

            ಸ್ವಾತಂತ್ರ್ಯ ಪೂರ್ವದಲ್ಲಿ ಭಯಗೊಳಿಸುವಂತಹ  ಕೊಂಕಣದ ಹಳ್ಳಿಯ ಜೀವನ, ಸುತ್ತಲೂ ಕಾಡುಗಳಿದ್ದು, ವಿಷ ಜಂತುಗಳು ಸಾಮಾನ್ಯವಾಗಿದ್ದ, ಜನರ ಮುಖ ಕಾಣಲು ಎಷ್ಟೋ ದೂರವನ್ನು ಕಾಲ್ನಡಿಗೆಯಲ್ಲೇ ಸವೆಸಬೇಕಾದ ಅನಿವಾರ್ಯತೆಯಿದ್ದ ಹಳ್ಳಿಗೆ ಸೊಸೆಯಾಗಿ ಹೋದ ಮಾಲತಿಗೆ ಆಕರ್ಷಕವಾಗಿ ಕಂಡಿದ್ದು ಕೇತಕ್ ಮನೆತನದ ಕಂದಾಯ ವಸೂಲಿಯ ಅಧಿಕಾರ, ದುಡ್ಡು - ಚಿನ್ನ ಮತ್ತು ಭೂಮಿಗಳಲ್ಲ. ಬದಲಿಗೆ ಆ ಮನೆಯ ಹೆಣ್ಣು ಮಕ್ಕಳ ಓದು. ಅಂದಿನ ಕಾಲದಲ್ಲಿ ಮಧ್ಯಮವರ್ಗದ ಮನೆಗಳ ಹೆಣ್ಣು ಮಕ್ಕಳಷ್ಟೇ ಏಕೆ ಗಂಡು ಮಕ್ಕಳಿಗೆ ಕೂಡ ಓದು ಕಲಿಸುವ ಪರಿಪಾಠ ಇರಲಿಲ್ಲ. ಹೀಗಿರುವಾಗ ಕೇತಕ್ ಮನೆತನದವರು ತಮ್ಮ ಹೆಣ್ಣು ಮಕ್ಕಳನ್ನು ಪರವೂರಿನಲ್ಲಿ ಇರಿಸಿ ಓದನ್ನು ಮುಂದುವರಿಸಿದರು. ಆದರೆ ಶಿಕ್ಷಣಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆಯನ್ನು ನೀಡುವ ಈ ಕುಟುಂಬಕ್ಕೆ ಸೊಸೆಯಾಗಿ ಹೋದ ಮಾಲತಿಗೆ ಅರ್ಥವಾದ್ದೇನೆಂದರೆ ಈ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಬೇರೆ ಕಾನೂನುಗಳು, ಸೊಸೆಯಂದಿರಿಗೆ ಬೇರೆ ಕಾನೂನುಗಳು! ಕೇತಕರ ಸೋದರಿಯರು ಎಷ್ಟೇ ಕಲಿತವರಾದರೂ ತಾನು ಅವರ ಅತ್ತಿಗೆ, ಅವರು ತನ್ನ ನಾದಿನಿಯರಷ್ಟೇ. ತನ್ನ ಅತ್ತೆ 12 ಮಕ್ಕಳ ತಾಯಿ. ಅವಳೊಬ್ಬ ಮಹಾಮಾತೆಯೇ ಸರಿ! ಆದರೆ ಸೊಸೆಯಾಗಿ ಬಂದ ತನಗೆ ಅವಳ ಮಡಿಲಲ್ಲಿ ಜಾಗವಿರಲಿಲ್ಲ ಎಂಬುದು. 

           ನಾಲ್ಕು ಮಕ್ಕಳ ತಾಯಿಯಾದ ಬಳಿಕ ಒಂದು ಭೀಕರ ಸನ್ನಿವೇಶದಲ್ಲಿ ತಮ್ಮ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಜೀವನದಲ್ಲಿ ಹೋರಾಡುವ ಕಥೆಯೇ "ಧೀರೆ". ತಮ್ಮ ಮಾವನವನ ನಂತರ ಏಕಾಂಗಿಯಾಗಿ ತಮ್ಮ ಗಂಡ ಹಾಗೂ ಹೊಲ ಗದ್ದೆಗಳ ನ್ಯಾಯಾಲಯದ ಮೊಕದ್ದಮೆಗಳನ್ನು ಸಮರ್ಥವಾಗಿ ಹೇಗೆ ನಿಭಾಯಿಸಿದರು, ತಮ್ಮ ನಾಲ್ಕೂ ಮಕ್ಕಳ ಶಿಕ್ಷಣ ಹಾಗೂ ಹೊಣೆಯನ್ನು ಹೇಗೆ ಸಮರ್ಥವಾಗಿ ನಿಭಾಯಿಸಿದರು, ಇವೆಲ್ಲವನ್ನೂ ಕೈಗೊಳ್ಳುವಾಗಲೂ ಹೇಗೆ ಸ್ವಾಭಿಮಾನದಿಂದ ಬಾಳಿದರು ಕೊನೆಗೆ 'ಕೇತಕರ ವಹಿನಿ' ಎಂದು ಜನರಿಂದ ಗುರುತಿಸಲ್ಪಟ್ಟರು ಎಂಬುದನ್ನು ಪುಸ್ತಕ ಓದಿ ತಿಳಿದುಕೊಳ್ಳಬೇಕು. ಹೀಗೆ "ಧೀರೆ" ಪುಸ್ತಕವು ಏಕಾಂಗಿ ಸ್ವಾಭಿಮಾನಿ ಮಹಿಳೆಯ ದಿಟ್ಟ ಪಯಣದ ಕಥನವಾಗಿದೆ.

ಪುಸ್ತಕದಲ್ಲಿ ನನಗಿಷ್ಟವಾದ ಕೆಲವು ಸಾಲುಗಳು.

*ನಾವು ಕೇವಲ ಸರಿಯಾಗಿದ್ದರೆ ಸಾಲದು. ಬೇರೆಯವರಿಗೆ ಹಾಗೆಂದು ತೋರಿಸಲೂ ಬೇಕು.

*ಯಾರೋ ಕೆಣಕುತ್ತಾರೆಂದು ನಾವು ಸ್ಪಂದಿಸಬೇಕಿಲ್ಲ. ಭಾವನೆಯ ಭರದಲ್ಲಿ ಯಾವುದೇ ತೀರ್ಮಾನ, ಯಾವುದೇ ಕೃತಿ ಸಲ್ಲದು. ಇಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವುದಿದ್ದರೆ ಮೊದಲು ನಮ್ಮ ಇತಿಮಿತಿಗಳನ್ನು ಅರಿತುಕೊಳ್ಳಬೇಕು.


Comments

Popular posts from this blog

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "Illustrated Ramayana"

ಓದಿನ ಸುಖ - "ಅಮೇರಿಕದಲ್ಲಿ ನಾನು"