ಓದಿನ ಸುಖ "ಉಚಲ್ಯಾ"
ಪುಸ್ತಕದ ಹೆಸರು: ಉಚಲ್ಯಾ
ಲೇಖಕರು: ಲಕ್ಷ್ಮಣ ಗಾಯಕವಾಡ
ಅನುವಾದಕರು: ಚಂದ್ರಕಾಂತ ಪೋಕಳೆ
ಇಡೀ ಪುಸ್ತಕವನ್ನು ಓದಿ ಒಮ್ಮೆ ಸ್ತಬ್ಧಳಾದೆ. ಹೀಗಿರುವ ಒಂದು ಜನಾಂಗವಿದೆ ಎಂಬ ಅರಿವೇ ನನಗಿರಲಿಲ್ಲ. ಬ್ರಿಟಿಷರಿಂದ 'criminal tribes' ಎಂದು ಕರೆಸಿಕೊಂಡ ಅಲೆಮಾರಿ ಜನಾಂಗ 'ಉಚಲ್ಯಾ'. ಅವರ ಬಡತನ, ಕಳ್ಳತನವನ್ನ ಮಾಡಿಯೇ ಜೀವನ ಸಾಗಿಸಬೇಕಾದ ಅನಿವಾರ್ಯತೆ, ಜೀವನ ಪೂರ್ತಿ 'ಅಪರಾಧಿಗಳು' ಎಂಬ ಹಣೆ ಪಟ್ಟಿಯಲ್ಲಿ ಓಡಾಡಬೇಕಾದ ಸಂಕಷ್ಟ ಹೀಗೆ ಹೊರ ಜಗತ್ತಿಗೆ ತೀರಾ ಅಪರಿಚಿತವಾಗಿರುವ ಹಲವಾರು ವಿಷಯಗಳನ್ನು ಲೇಖಕರು ತಮ್ಮ ಈ ಆತ್ಮಕಥೆಯಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ.
ಉಚಲ್ಯಾವು ಅತ್ಯಂತ ಹಿಂದುಳಿದ ವರ್ಗವಾಗಿದ್ದು ಹುಟ್ಟಿದಾರಭ್ಯ ತಮ್ಮ ಕುಲಕಸುಬಾದ ಕಳ್ಳತನವೇ ಅವರ ವೃತ್ತಿ. ಹೆಂಗಸರು,ಗಂಡಸರು, ಮಕ್ಕಳು ಎಂಬ ಬೇಧವಿಲ್ಲದೆ ಎಲ್ಲರೂ ಕಳ್ಳತನದಲ್ಲಿ ನಿಸ್ಸೀಮರು. ಹಾಗಾಗಿ ಶಿಕ್ಷಣವೆನ್ನುವುದು ಇವರಿಗೆ ಮರೀಚಿಕೆ. ಯಾರಾದರೂ ಕಳ್ಳತನವನ್ನು ಬಿಟ್ಟು ಲೇಖಕರಂತೆ ಶಾಲೆಗೆ ಹೋದರೋ ಅವರನ್ನು ಸಮಾಜವೂ ಹೀಯಾಳಿಸುತ್ತಿತ್ತು. ಹಾಗಾಗಿ ಕಳ್ಳತನವು ಇವರಿಗೆ ಅನಿವಾರ್ಯವಾಗಿತ್ತು. ಹೀಗೆ ಕಳ್ಳತನ ಮಾಡಿ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದು ವಿವಿಧ ರೀತಿಯ ಶಿಕ್ಷೆಗಳನ್ನು ಅನುಭವಿಸಿ ತಾವು ಕದ್ದ ಮಾಲನ್ನು ವಾಪಾಸು ಪೊಲೀಸರಿಂದ ಪಡೆದುಕೊಳ್ಳಲು ಸಾಲ ಮಾಡಿ, ಅದನ್ನು ಲಂಚ ರೂಪದಲ್ಲಿ ಪೊಲೀಸರಿಗೆ ಕೊಡಬೇಕಿತ್ತು. ಮಾಡಿದ ಸಾಲವನ್ನು ತೀರಿಸಲು ಪುನಃ ಕಳ್ಳತನ. ಹೀಗೆ ಇಂದೊಂದು ರೀತಿಯ ಸುಳಿಯಲ್ಲಿ ಸಿಲುಕಿ ಹೊರಬರಲಾರದೇ ಒದ್ದಾಡುವ ಜೀವನ ಉಚಲ್ಯಾ ಜನಾಂಗದ್ದಾಗಿತ್ತು.
ಪುಸ್ತಕದ ಮೊದಲಾರ್ಧ ಉಚಲ್ಯಾ ಜನಾಂಗದ ಅಲೆಮಾರಿ ಬದುಕು, ಬವಣೆ, ಕಳ್ಳತನ, ಪೊಲೀಸರ ಕಿರುಕುಳ, ಸಮಾಜದಿಂದ ಬಹಿಷ್ಕಾರ ಮುಂತಾದ ವಿಷಯಗಳಿದ್ದರೆ, ನಂತರದ ಭಾಗದಲ್ಲಿ ಲಕ್ಷ್ಮಣ ಗಾಯಕವಾಡರ ಸಾಮಾಜಿಕ ರಾಜಕೀಯ ಹೋರಾಟದ ಕಥನವಿದೆ.
"ಒಂದೆಡೆ ಹಸಿವು, ಆಶ್ರಯಕ್ಕಾಗಿ ನ್ಯಾಯ ಸಮ್ಮತವಾದ ಮಾರ್ಗಗಳೆಲ್ಲ ಮುಚ್ಚಲ್ಪಟ್ಟಾಗ ಕಳ್ಳತನ ಮಾಡಿಯೇ ಬದುಕಬೇಕಾದ ಸಂದರ್ಭ ಈ ಜಾತಿಗಿದ್ದರೆ; ಇನ್ನೊಂದೆಡೆ ಕೋಟ್ಯಂತರ ರೂಪಾಯಿಗಳನ್ನು ಕಳ್ಳತನ ಮಾಡುವ ಸುಶಿಕ್ಷಿತ, ಪ್ರತಿಷ್ಠಿತ ಸಮಾಜವೂ ಇದೆ. ಲಂಚ, ಭ್ರಷ್ಟಾಚಾರಗಳ ಮೂಲಕ ಲಕ್ಷಗಟ್ಟಲೆ ಗಳಿಸುವ ಜನ ಅಪರಾಧಿಗಳೆಂದು ಪರಿಗಣಿಸಲ್ಪಡಿಸುವುದಿಲ್ಲ. ಆದರೆ ಹೊಟ್ಟೆಪಾಡಿಗಾಗಿ ಹತ್ತಿಪ್ಪತ್ತು ರೂಪಾಯಿ ಕಳ್ಳತನ ಮಾಡುವ ಜನ ಅಪರಾಧಿಗಳಾಗುತ್ತಾರೆ." ಎಂಬ ಲೇಖಕರ ಮಾತು ನಮ್ಮನ್ನು ಬಹಳ ಕಾಡುತ್ತದೆ.
ಮೂಲ ಮರಾಠಿಯ ಪುಸ್ತಕವನ್ನು ಕನ್ನಡದ ಪುಸ್ತಕವೋ ಎಂಬಂತೆ ಸಹಜ ಸರಳವಾಗಿ ಚಂದ್ರಕಾಂತ ಪೋಕಳೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
Comments
Post a Comment