ಓದಿನ ಸುಖ "ಪುರಸ್ಕಾರ"
ಪುಸ್ತಕದ ಹೆಸರು: ಪುರಸ್ಕಾರ ಲೇಖಕರು: ಚಿತ್ರಲೇಖ ಪುರಸ್ಕಾರವು ಎರಡು ಕಿರು ಕಾದಂಬರಿಗಳಾದ 'ಪುರಸ್ಕಾರ' ಹಾಗೂ 'ಪ್ರತೀಕಾರ' ಗಳ ಗುಚ್ಛ. ಎರಡು ಕಥೆಗಳಲ್ಲಿ ವಿಭಿನ್ನ ಕಾಲಮಾನಕ್ಕೆ ಸೇರಿದ ಇಬ್ಬರು ಹೆಣ್ಣು ಮಕ್ಕಳ ಜೀವನದ ಕಥೆಯನ್ನು ನಿರೂಪಿಸಿದ್ದಾರೆ ಲೇಖಕಿ. ಹೆಣ್ಣು ಅಕ್ಷರಸ್ಥಳಾಗಿರಲಿ ಅಥವಾ ಅನಕ್ಷರಸ್ಥಳಾಗಿರಲಿ ಆಂತರ್ಯದಲ್ಲಿ ಅವಳು ಸ್ವಾಭಿಮಾನಿಯಾಗಿರುತ್ತಾಳೆ. ಅಂತಹ ಒಬ್ಬ ಅನಕ್ಷರಸ್ಥ ಸ್ವಾಭಿಮಾನೀ ಹೆಣ್ಣೊಬ್ಬಳ ಕಥೆಯೇ 'ಪುರಸ್ಕಾರ'. ಈ ಕಥೆಯ ಪ್ರಮುಖ ಪಾತ್ರ ಸುಂದರಮ್ಮ. ಹುಟ್ಟಿದಾಗ ಸರಸ್ವತಿ ಎಂಬ ಹೆಸರನ್ನು ಹೊತ್ತ ಸುಂದರಮ್ಮ ಹತ್ತನೇ ವಯಸ್ಸಿಗೇ ಮದುವೆಯಾಗಿ ಗಂಡನ ಮನೆಯನ್ನು ಸೇರಿದಳು. ಮದುವೆಯಾಗಿದ್ದು ಹಳ್ಳಿಯಲ್ಲಿದ್ದ ವಿಜ್ಞಾನಿಯನ್ನು. ಸದಾ ಆಕಾಶ,ನಕ್ಷತ್ರ ಎಂದು ಅಧ್ಯಯನದಲ್ಲೇ ಮುಳುಗಿದ್ದ ಆದಿಕೇಶವನನ್ನು. ಅತ್ಯಂತ ವಿಕ್ಷಿಪ್ತವಾದ ಪಾತ್ರ ಆದಿಕೇಶವನದ್ದು. ಆತನದ್ದು ವಿಚಿತ್ರ ಸ್ವಭಾವ. ಹೆಂಡತಿಯ ಮೇಲೆ ಸ್ವಲ್ಪವೂ ಪ್ರೀತಿಯಿಲ್ಲ. ಪ್ರೀತಿಯಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಆತನಿಗೆ ತನ್ನ ಹೆಂಡತಿಯ ಮೇಲೆ ಕರುಣೆಯಿಲ್ಲ, ಜೊತೆಗೆ ಕುರೂಪಿಯಾಗಿದ್ದ, ಕಲಾವತಿಯಾಗಿದ್ದ ತನ್ನ ಹೆಂಡತಿಯು ರಚಿಸುತ್ತಿದ್ದ ರಂಗೋಲಿಯನ್ನಾಗಲೀ, ಹೂ ಮಾಲೆಯನ್...